Sunday, 24th November 2024

ನನ್ನ ನೆನಪಿನಲ್ಲಿ ಪೃಥ್ವಿ ಸದಾ ಹಸಿರು

ಬದುಕು-ಜಟಕಾಬಂಡಿ

ವಿರಾಜ್ ಕೆ.ಅಣಜಿ

ಸಾರಿ ಹೇಳಲು ಅಥವಾ ಕ್ಷಮೆ ಕೇಳಲು ಮತ್ತೆ ಅವಕಾಶ ಸಿಗದಿರಬಹುದು, ಹೇಳಬೇಕು ಅನಿಸಿದ್ದನ್ನು ಈಗಲೇ ಹೇಳಿ ಬಿಡಿ.

ಅಂದು ಮೇ 26, 2019, ಭಾನುವಾರ. ಬೆಳಗ್ಗೆ 9 ಗಂಟೆ. ಗಾಢ ನಿದ್ರೆಯಲ್ಲಿದ್ದೆ. ಫೋನ್ ರಿಂಗಾಯಿತು, ಕಣ್ಣನ್ನು ಪೂರ್ಣ ತೆರೆಯ ದಿದ್ದರೂ ಕಂಡ ಅನ್‌ನೋನ್ ನಂಬರ್‌ಗೆ ಹಲೋ ಎಂದೆ. ಆ ಕಡೆಯಿಂದ ಬಂದ ಧ್ವನಿ, ‘ಸಾರ್, ನಾನು ಶಕ್ತಿ ಮಾತಾಡೋದು, ಪೃಥ್ವಿ ಹೋಗಿಬಿಟ್ನಂತೆ’ ಎಂದಿತು.

ಎದೆಯೇ ಕಂಪಿಸಿದಂತಾಯ್ತು. ಧಕ್ಕನೇ ಎದ್ದು ಕೂತು, ‘ಶಕ್ತಿ ಏನ್ ಹೇಳ್ತಿದೀರ? ಪ್ಲೀಸ್ ಡೋಂಟ್ ಸೇ ದಿಸ್’ ಅಂದೆ. ‘ಇಲ್ಲಾ
ಸರ್, ಈಗ ಮುಕ್ಕಾಲು ಗಂಟೆ ಮುಂಚೆ ಹಾರ್ಟ್ ಅಟ್ಯಾಕ್ ಆಯ್ತಂತೆ, ಐದೇ ನಿಮಿಷದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದ್ರೂ ಬ್ರಾಟ್ ಡೆಡ್ ಅಂತ ಹೇಳಿದ್ರಂತೆ, ವಿಲ್ಸನ್ ಗಾರ್ಡನ್ ಹಾಸ್ಪಿಟಲ್ ಅಲ್ಲಿ ಬಾಡಿ ಇದೆ, ಹೋಗ್ತಿದೀನಿ, ಬನ್ನಿ ಬೇಗ’ ಎಂದು ಹೇಳಿ ಶಕ್ತಿ ಫೋನ್ ಇಟ್ಟಿದ್ದರು. ಎರಡು ನಿಮಿಷ ನನ್ನ ದೇಹವೂ ತಣ್ಣಗಾಗಿತ್ತು.

ಕಳೆದ ಹತ್ತು ವರ್ಷಗಳಿಂದ ಈಚೆಗೆ ನನ್ನ ಪಾಲಿಗೆ ಬಂದಿದ್ದನ್ನು ತುಂಬ ಪ್ರೀತಿಯಿಂದ ಒಪ್ಪಿಕೊಂಡು, ಅಪ್ಪಿಕೊಂಡು ಬಂದವನು
ನಾನು. ಜೀವನದಲ್ಲಿ ಮಹತ್ವಾಕಾಂಕ್ಷೆಗಳನ್ನು ಹುಟ್ಟುಹಾಕಿದ್ದು ನನ್ನ ಜೀವನದಲ್ಲಿ ಮೇಲಿಂದ ಮೇಲೆ ಬಂದ ನಪಾಸು ಮತ್ತು
ಅವಮಾನಗಳೇ. ನನ್ನ ಡಿಗ್ರಿ ಬಿಬಿಎಂ ಆದರೂ ಪಿಜಿಗೆ ಪತ್ರಿಕೋದ್ಯಮ ಆಯ್ಕೆ ಮಾಡಿಕೊಂಡಿದ್ದಕ್ಕೂ ಬದುಕಿನ ಏರಿಳಿತಗಳೇ ಕಾರಣ. ಪಿಜಿ ಮೂರನೇ ಸೆಮಿಸ್ಟರ್ ಮಧ್ಯದಲ್ಲೇ, ಪತ್ರಿಕೆಯೊಂದರಲ್ಲಿ ಎಳೆ ನಿಂಬೆಕಾಯಿಯಾಗಿ ಆಯ್ಕೆಯಾಗಿದ್ದೆ.

ಪಿಯುಸಿ ಫೇಲಾದ ಸಮಯದಲ್ಲಿ, ಸೂರ್ತಿ ತುಂಬುವ ಅಂಕಣದ ಮೂಲಕ ನನ್ನ ಬದುಕಿಗೆ ತಿರುವು ಕೊಟ್ಟಿದ್ದ, ನಾನು
ಆರಾಧಿಸುತ್ತಿದ್ದ ಪ್ರಧಾನ ಸಂಪಾದಕರ ಜತೆಗೇ ನಾನಿರುವ ಸಂಭ್ರಮಕ್ಕೆ ಕುಣಿದು ಕುಪ್ಪಳಿಸಿದ್ದೆ. ಮೊದಲ ಎರಡು ವರ್ಷಗಳಲ್ಲಿ ಕಲಿಕೆ, ಕನಸು, ತರಲೆ, ಹುಡುಗಾಟದ ನೆನಪು, ಹೇಳಿಕೊಳ್ಳದೇ ಉಳಿದ ಪ್ರೀತಿ.. ಹೀಗೆ ಎಲ್ಲವನ್ನೂ ಪತ್ರಿಕೆ ನೀಡಿತ್ತು. ಎಂದೋ ಮನಸ್ಸಿನ ಮೂಲೆಯಲ್ಲಿ ಹೂತಿದ್ದ ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕು ಎಂಬ ಬೀಜ ಮತ್ತೆ ಚಿಗುರಿತ್ತು. ಆಗ ನನ್ನ ಪಾಲಿಗೆ ದೇವರಾದವ್ರು ಸಹೋದ್ಯೋಗಿ ಮೇಡಂ.

‘ದೊಡ್ಡ ಕನಸು ಇಟ್ಟುಕೊಂಡಿದ್ದೀಯ, ಈಗ ಇಲ್ಲಿಂದ ಬ್ರೇಕ್ ತೆಗೆದುಕೊಂಡು ಓದು. ನಿನ್ನ ಸ್ಥಾನವನ್ನು ನಾನು ತುಂಬಲಾಗ ದಿದ್ದರೂ, ನಿನ್ನ ಮನೆಯಲ್ಲಿ ನೀನು ಮಾಡಬೇಕಾದ ಕರ್ತವ್ಯವನ್ನೂ ನಾನು ನಿಭಾಯಿಸುವೆ’ ಎಂದು ಹುರಿದುಂಬಿಸಿದ್ದರು. ಎಷ್ಟು ಜನರಿಗೆ ದೇವರಿಗಿಂಥ ಒಳ್ಳೆಯ ಮನಸ್ಸಿರಲು ಸಾಧ್ಯ? ಯುಪಿಎಸ್‌ಸಿ ಪರೀಕ್ಷೆ ಬರೆಯೋಣ ಎಂದು ಗಟ್ಟಿ ನಿರ್ಧಾರ
ಮಾಡಿದ ಕ್ಷಣವೇ ಹೋಗಿ ಪ್ರಧಾನ ಸಂಪಾದಕರ ಮುಂದೆ ನಿಂತಿದ್ದೆ. ಈ ರಾಜೀನಾಮೆ ತಗೊಳ್ಳಿ ಎಂದು ಗಟ್ಟಿ ಮನಸ್ಸು ಮಾಡಿ ಕೊಂಡು ಹೇಳಿದ್ದೆ. ನನ್ನ ಬಗ್ಗೆ ಸರ್‌ಗೆ ಅದೇನು ಪ್ರೀತಿಯೋ ಗೊತ್ತಿಲ್ಲ, ‘ಹೀಗೆ ಪದೇ ಪದೇ ನಮ್ಮ ಕ್ಷೇತ್ರ ಬದಲಿಸಬಾರದು, ಇಲ್ಲೇ ಗಟ್ಟಿಯಾಗಿ ನೆಲೆ ನಿಲ್ಲಿ.

ಇಲ್ಲಿಂದ ಐದು ವರ್ಷದಲ್ಲಿ ಇದಕ್ಕಿಂತ ಬೆಟರ್ ಸ್ಥಾನದಲ್ಲಿ ನೀವಿರುವಂತೆ ನಾನು ಗೈಡ್ ಮಾಡ್ತೀನಿ’ ಅಂದರು. ನಾವು ಆರಾಧಿಸು ವವರೇ ಹೀಗೆ ಹೇಳುವ ಸುದೈವ ಎಷ್ಟು ಜನರಿಗೆ ಸಿಕ್ಕಿತು? ಆದರೂ ನಾನು, ‘ಸರ್, ರಿಸ್ಕ್ ತಗೊಳ್ಳಿ ಅಂತ ನೀವೇ ಅಂಕಣದಲ್ಲಿ
ಬರೆದಿದೀರ, ತುಂಬಾ ಕಾಡ್ತಿದೆ ನಾನು ಹೋಗ್ತೀನಿ, ಪ್ಲೀಸ್’ ಅಂದೆ. ಅದಕ್ಕವರು, ‘ಫೈನ್, ರಿಸೈನ್ ಬೇಡ. ನೀವೇನು ಮಾಡಬೇಕೋ ಮಾಡಿ, ಅಂದುಕೊಂಡದ್ದು ಆದ್ರೆ ಸಂತೋಷ.

ಒಂದೊಮ್ಮೆ ಆಗದಿದ್ದರೆ ಯೂ ಆರ್ ಮೋಸ್ಟ್ ವೆಲ್‌ಕಂ ಬ್ಯಾಕ್’ ಅಂದ್ರು. ದೊಡ್ಡ ವ್ಯಕ್ತಿಯ ಗುಣ ಅವರಿಗಿಂತ ದೊಡ್ಡದಿತ್ತು.
ಜನವರಿ ಆರಂಭವದು, ಡೆಲ್ಲಿಗೆ ಹಾರಿದ್ದೆ. ದೆಹಲಿಯ ದ್ವಾರಕಾ ಸೆಕ್ಟರ್‌ನಲ್ಲಿರುವ ಕರ್ನಾಟಕ ಮೂಲದ ಮಠ (ಆಶ್ರಮ)ದಲ್ಲಿ ನನ್ನ ವಾಸ್ತವ್ಯ.ಅಲ್ಲಿ ನನಗೆ ಭೇಟಿಯಾಗಿದ್ದೇ ಪೃಥ್ವಿ. ಅಜಾನುಬಾಹು ದೇಹದ, ಗಡಸು ಧ್ವನಿಯ, ಸೂಕ್ಷ್ಮ ಸಂವೇದನೆ ಹೊಂದಿದ್ದ ಪೃಥ್ವಿ.

ಹಾಯ್ ಎಂದು ಸಹಜವಾಗಿ ಆದ ಪರಿಚಯವು, ಇಬ್ಬರ ವಿಚಾರಗಳು, ಚಿಂತನೆಗಳು ಮತ್ತು ದೆಹಲಿಗೆ ನಾವು ಬಂದ ಉದ್ದೇಶದ ಹೊಂದಾಣಿಕೆಯಿಂದ ಸ್ನೇಹವಾಯಿತು. ಹೀಗೇ ಜತೆಯಾಗಿದ್ದು ಶಕ್ತಿ ಪ್ರಸಾದ್. ಹಾಗೆ ನೋಡಿದರೆ, ಪೃಥ್ವಿ-ಶಕ್ತಿ ಇಬ್ಬರೂ ಚೆನ್ನಾಗಿಯೇ ಪರೀಕ್ಷೆಗೆ ತಯಾರಿ ನಡೆಸಿದ್ದರು.

ವಾಜಿರಾಂನಲ್ಲಿ ಕ್ಲಾಸ್ ಮುಗಿಸಿ, ಡೆಲ್ಲಿ ಕರ್ನಾಟಕ ಸಂಘದ ಲೈಬ್ರರಿಯಲ್ಲಿ ಓದಿಕೊಂಡು, ಡೆಲ್ಲಿ ಖಾದ್ಯಗಳನ್ನು ಸವಿದು, ಸಿಟಿ ಬಸ್, ಡೆಲ್ಲಿ ಮೆಟ್ರೋದಲ್ಲಿ ಸುತ್ತುಹಾಕುತ್ತಿದ್ದೆವು. ಆ ವರ್ಷ ಬರೆದ ಪರೀಕ್ಷೆಯಲ್ಲಿ ಶಕ್ತಿಯದ್ದು ಪ್ರಿಲಿಮ್ಸ್ ಕ್ಲಿಯರ್ ಆಗಿತ್ತು. ಪೃಥ್ವಿ ಸ್ವಲ್ಪದರಲ್ಲಿ ಕಟ್ ಆಫ್ ಮಿಸ್ ಮಾಡಿಕೊಂಡಿದ್ದು, ನನ್ನ ಬಾರ್ಡರ್ ಸ್ವಲ್ಪ ದೂರವೇ ಇತ್ತು. ಆದರೆ, ಇಷ್ಟೆಲ್ಲ ಶ್ರಮ ಹಾಕಿ, ಅರ್ಧಕ್ಕೆ ಬಿಡುವುದು ಬೇಡ ಎಂದು ಮನಸ್ಸು ಹೇಳುತ್ತಿತ್ತು.

ಆದರೆ, ಡೆಲ್ಲಿ ಬದುಕು ತುಟ್ಟಿಯಾದ್ದರಿಂದ ವಾಪಸ್ ಬೆಂಗಳೂರಿಗೆ ಹೋಗೋಣ ಎಂದು ನಿರ್ಧರಿಸಿದ್ದೆವು. ‘ಈ ವರ್ಷ ಇನ್ನಷ್ಟು ಶ್ರಮ ಹಾಕು ಪಾಸ್ ಆಗ್ತೀಯ’ ಎಂದು ಸಹೋದ್ಯೋಗಿ ಮೇಡಂ ಮತ್ತೆ ಹುರಿದುಂಬಿಸಿದರು, ಮನೆಯಲ್ಲೂ ಕೂಡ ನಂಬಿಕೆ ಕೊಟ್ಟರು. ಇದೆಲ್ಲದರ ಫಲವಾಗಿ ಪೃಥ್ವಿ ಮತ್ತು ನಾನು ಬೆಂಗಳೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡು, ಕ್ಲಾಸ್‌ಗಳಿಗೆ ಸೇರಿ ಕೊಂಡೆವು.

ಪೃಥ್ವಿಯ ತಂದೆ ಕಾರ್ಗಿಲ್ ವಾರ್‌ನಲ್ಲಿ ಹುತಾತ್ಮರು. ಮಗನೂ ಕೂಡ ದೇಶಕ್ಕೆ ಏನಾದರೂ ಆಗಬೇಕು ಎಂದು ಪೃಥ್ವಿಯ ತಾಯಿ
ಕನಸು ಹೊತ್ತಿದ್ದರು. -ಜರ್ ಟೌನ್‌ನಲ್ಲಿನ ಮಿಲಿಟಿರಿ ಕ್ಯಾಂಟೀನ್‌ಗೆ ನಮ್ಮನ್ನೆಲ್ಲ ಆಗಾಗ ಕರೆದುಕೊಂಡು ಹೋಗುತ್ತಿದ್ದರು. ದಿನಕ್ಕೆರೆಡು ಬಾರಿ ಫೋನ್ ಮಾಡಿ, ಏನಕ್ಕೂ ಸಂಕೋಚ ಮಾಡ್ಕೋಬೇಡ, ಏನೇ ಬೇಕಿದ್ದರೂ ನನಗೆ ಹೇಳು, ನೀನು ಕೂಡ ಮಗ ನಂತೆ ಎನ್ನುತ್ತಿದ್ದರು. ಒಬ್ಬರನ್ನೊಬ್ಬರು ಹುರಿದುಂಬಿಸಿಕೊಂಡು ನಮ್ಮ ಗುರಿಯತ್ತ ಹೆಜ್ಜೆ ಹಾಕುವಾಗ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಪೃಥ್ವಿ ಮತ್ತು ನನ್ನ ನಡುವೆ ಡಿಫರೆನ್ಸ್ ಆಫ್ ಒಪೀನಿಯನ್ ಮೂಡಿಬಿಡ್ತು.

ಅದಕ್ಕೆ ಕಾರಣವಿಷ್ಟೇ, ಮೇನ್ಸ್ ಪರೀಕ್ಷೆ ಪಾಸಾಗಲಿಲ್ಲ ಎಂದು ಶಕ್ತಿ ಕೂಡ ಬೆಂಗಳೂರಿಗೆ ನಮ್ಮ ಜತೆಗೆ ಶಿಫ್ಟ್ ಆಗುತ್ತೇನೆ ಎಂದು
ಪೃಥ್ವಿಗೆ ತಿಳಿಸಿದ್ದರು. ಇತ್ತ ನನ್ನೊಬ್ಬ ಸ್ನೇಹಿತ ‘ನಾನು ಪರೀಕ್ಷೆಗೆ ಓದುತ್ತಿದ್ದೇನೆ, ಹಾಗಾಗಿ ನಿಮ್ಮ ಮನೆಗೆ ನಾನೂ ಶಿಫ್ಟ್
ಆಗುತ್ತೇನೆ’ ಎಂದು ಹೇಳಿದ್ದರು. ನಾನದನ್ನು ಪೃಥ್ವಿಗೆ ತಿಳಿಸಿದ್ದೆ. ಈ ವಿಚಾರ ಶಕ್ತಿಗೆ ಗೊತ್ತಾಗಿದ್ದು, ‘ಹಾಗಿದ್ದರೆ ನಾನು ಬೇರೆಡೆ
ರೂಂ ಮಾಡಿಕೊಂಡಿರುತ್ತೇನೆ’ ಎಂದಿದ್ದಾರೆ. ಇತ್ತ ನನ್ನ ಸ್ನೇಹಿತ ಕೂಡ ಯಾವ್ದೋ ಕಾರಣದಿಂದ ನಮ್ಮ ಮನೆಗೆ ಶಿಫ್ಟ್ ಆಗಲಿಲ್ಲ.
ಇತ್ತ ನನ್ನ ಫ್ರೆಂಡ್ ಕೂಡ ಇಲ್ಲ, ಅತ್ತ ಶಕ್ತಿಯೂ ನಮ್ಮ ಜತೆ ಸೇರಲಿಲ್ಲ.

ಇಷ್ಟೇ ಕಾರಣ, ‘ಏನ್ ಸಾರ್ ಹೀಗ್ಮಾಡಿದ್ರಿ, ನಿಮ್ಮಿಂದ ಈಗ ಶಕ್ತಿನೂ ಕೂಡ ಬೇಜಾರು ಮಾಡ್ಕೊಂಡು ನಮ್ಮ ಮನೆಗೇ ಬರಲಿಲ್ಲ ನೋಡಿ’ ಅಂದಿದ್ರು ಪೃಥ್ವಿ. ಆ ಕ್ಷಣ ನಾನೇ ಸುಮ್ಮನಿರಬೇಕಿತ್ತೇನೋ, ‘ನಾನೇನು ಬೇಕಂತ ಮಾಡಿದ್ದಾ? ನಾನೇನು ಬರಬೇಡಿ ಅಂದಿದ್ನಾ’ ಎಂದು ಧ್ವನಿಯನ್ನು ಸ್ವಲ್ಪ ಏರಿಸಿದ್ದೆ. ಎರಡು ದಿನ ಗಾಢ ಮೌನ. ಹೀಗಿದ್ದರೆ ಓದಿಗೂ ತೊಂದರೆ, ಒಬ್ಬರಲ್ಲಿ ಒಬ್ಬರು ಬೇರೆ ಕಡೆ ಶಿಫ್ಟ್ ಆಗೋಣ ಎಂದು ಮಾತು ಬಂತು. ನಾನೇ ಬೇರೆ ಕಡೆ ಇರ‍್ತೀನಿ ಎಂದು, ಅದೇ ದಿನ ರಾತ್ರಿ ಪಿಜಿಯೊಂದಕ್ಕೆ ಶಿಫ್ಟ್ ಆಗಿದ್ದೆ.

ಮನಸ್ಸು ಡಿಸ್ಟರ್ಬ್ ಆಗಿತ್ತು, ಇದರ ನಡುವೆ ಓದಲೇ ಬೇಕಿತ್ತು. ಬೇರೆ ಕಡೆ ಇರೋಕೆ ಶುರು ಮಾಡಿ ಎರಡು ತಿಂಗಳು ಕಳೆದೋಯ್ತು. ಮನಸ್ಸು ಹಳೆಯದನ್ನೇ ಮರಿಯೋಕೆ ಆಗದೇ ಬಿಕ್ಕಳಿಸ್ತನೇ ಇತ್ತು. ನಾನೇ ಹೋಗಿ ಸಾರಿ ಕೇಳಿ, ಜತೆಗಿರೋಣ ಎಂದು ಮೇ 23ನೇ ತಾರೀಖು ಬೆಳಿಗ್ಗೆ ಹೋಗಿ ಬಾಗಿಲು ಬಡಿದಿದ್ದೆ. ರಾತ್ರಿಯೆಲ್ಲ ಓದಿ, ಬೆಳಗ್ಗೆ ಮಲಗುತ್ತಿದ್ದ ಪೃಥ್ವಿ ಅಂದೂ ಕೂಡ ನಿದ್ದೆ ಕಣ್ಣಲ್ಲೇ ಬಂದು ಬಾಗಿಲು ತೆರೆದಿದ್ದರು.

‘ಬನ್ನಿ ಸಾರ್’ ಅಂದ್ರೂ, ಖುಷಿ ಕಾಣಲಿಲ್ಲ. ‘ಬುಕ್ ಬಿಟ್ಟಿದ್ದೆ ತಗೋತಿನೀ’ ಅಂದು ಒಳಗೆ ಹೋಗಿ, ಸುಮ್ನೆ ಎರಡು ಪುಸ್ತಕ
ತಗೊಂಡು ಆಚೆ ಬಂದೆ. ಗೇಟಿನ ತನಕ ಜತೆಗೆ ನಿದ್ದೆ ಕಣ್ಣಲ್ಲೇ ಪೃಥ್ವಿಯೂ ಬಂದಿದ್ದರು. ನನ್ನನ್ನ ಕಳಿಸಿ ಮಲಗೋ ಅವಸರದ ಲ್ಲಿದ್ದಾರೆ ಅಂತ ಅನಿಸ್ತಿತ್ತು, ಐ ಆಮ್ ಸಾರಿ ಮೈ ಫ್ರೆಂಡ್ ಅಂತ ಮನಸ್ಸು ಹೇಳ್ತಿದ್ರು, ಪದಗಳು ಆಚೆ ಬರಲಿಲ್ಲ. ಇನ್ನು ಹತ್ತು ದಿನಕ್ಕೆ (ಜೂನ್2) ಪ್ರಿಲಿಮ್ಸ್ ಬಂತು, ಆಲ್ ದ ಬೆಸ್ಟ್ ಅಂದೆ. ‘ಥ್ಯಾಂಕ್ಯೂ ನೀವು ಚೆನ್ನಾಗಿ ಬರೀರಿ’ ಅಂತ ಹ್ಯಾಂಡ್ ಶೇಕ್ ಮಾಡಿ ಅಲ್ಲಿಂದ ಹೊರಟಿದ್ದೇ ಕೊನೆ.

ಅಲ್ಲಿಂದ ಮೂರೇ ದಿನ ಪೃಥ್ವಿ ಎಂಬ ಸ್ನೇಹಪರ್ವ ಶವವಾಗಿ ಮಲಗಿದ್ದ. ಶಕ್ತಿ ಫೋನಲ್ಲಿ ಹೇಳಿದ್ದು ಕೇಳಿ, ಶಾಕ್‌ನಲ್ಲೇ ಆಸ್ಪತ್ರೆಗೆ
ಓಡಿದ್ದೆ. ಬಿಳಿ ಬಟ್ಟೆ ಮುಚ್ಚಿಸಿ ಪೃಥ್ವಿಯನ್ನು ಮಲಗಿಸಲಾಗಿತ್ತು. ‘ಯಾಕಿಷ್ಟು ಅವಸರ ಮಾಡಿದ್ರಿ, ಮೂರು ದಿನದ ಹಿಂದಷ್ಟೇ
ಸಾರಿ ಕೇಳೊಕೆ ಬಂದ್ರೂ ಯಾಕೆ ಅವಕಾಶ ಕೊಡಲಿಲ್ಲ. ಐ ಆಮ್ ರಿಯಲಿ ಸಾರಿ ಮೈ ಫ್ರೆಂಡ್’ ಎಂದು ಬಿಕ್ಕಿದೆ. ಮನಸಲ್ಲಿ
ಇದ್ದದ್ದನ್ನೆಲ್ಲ ಹೇಳಿಕೊಂಡರೂ ಪೃಥ್ವಿ ಮಾತನಾಡಲಿಲ್ಲ, ಕೊನೆ ಬಾರಿ ಪೃಥ್ವಿಯ ಕೈಗಳನ್ನು ಬಿಡಿಸಿಕೊಂಡಿದ್ದು ಪ್ರಾಣ
ಹೋದಂತಾಗಿತ್ತು.

ಆ ಭಾನುವಾರಕ್ಕೆ ಸರಿಯಾಗಿ ಮುಂದಿನ ವಾರವೇ ಪ್ರಿಲಿಮ್ಸ್ ಪರೀಕ್ಷೆ. ಆ ವಾರ ಪೂರ್ತಿ ಏನೆಲ್ಲ ಭಾವನೆಗಳ ಹೊಯ್ದಾಟವಾಗಿತ್ತು ಹೇಳಲು ಪದಗಳಿಲ್ಲ. ಪೃಥ್ವಿಯನ್ನು ಭೂಮಿಯೊಡಲಿಗೆ ಸೇರಿಸಿ ಬಂದಿದ್ದು, ಆ ವಿಚಾರ ನಮ್ಮ ಮನೆಯಲ್ಲಿ ಕೇಳಿ ಕಂಗಾಲಾ ಗಿದ್ದು, ಹೇಳದೇ ಉಳಿದ ಮಾತನ್ನೀಗ ಕೊನೆತನಕ ಇಟ್ಟುಕೊಂಡೇ ಬದುಕಬೇಕೆಂಬ ಸತ್ಯಕ್ಕೆ ಒಗ್ಗಿಕೊಳ್ಳದೇ ಕುಸಿದುಹೋಗಿದ್ದೆ. ಮೈಮೇಲೆ ಪ್ರಜ್ಞೆಯೇ ಇಲ್ಲದವನಂತೆ ಪರೀಕ್ಷೆ ಬರೆದೆದ್ದೆ.

ಒಎಂಆರ್ ಶೀಟ್ ಮೇಲೆ ಹನಿಗಳು ಬೀಳುತ್ತಲೇ ಇದ್ದವು. ವಾರದ ಹಿಂದಷ್ಟೇ ನಡೆದು ಹೋದ ಘಟನೆಗಳ ಸುನಾಮಿ ನನ್ನನ್ನು ಕೊಚ್ಚಿಕೊಂಡು ಹೋಗುತ್ತಲೇ ಇದ್ದವು. ಆ ಪರೀಕ್ಷೆಯೂ ಕೂಡ ಕೈತಪ್ಪಿಹೋಗಿತ್ತು, ಅದಕ್ಕಿಂತ ಮುಖ್ಯವಾಗಿ ಪವಿತ್ರವಾಗಿ ಅರಳಿದ್ದ ಸ್ನೇಹದ ಹೂ ಬಾಡಿ ಹೋಗಿತ್ತು. ಪೃಥ್ವಿಯ ಬಗ್ಗೆ ಮಾತನಾಡುವಾಗ ಧ್ವನಿ ನಡುಗುತ್ತದೆ. ಈಗಲೂ ಕೈ ನಡುಗುತ್ತಿವೆ, ಕಣ್ಣು ತುಂಬಿವೆ, ಇದು ಶಾಶ್ವತ. ಒಂದೂವರೆ ವರ್ಷ ಅಸಂಖ್ಯ ನೆನಪುಗಳ ಬುತ್ತಿ ಕೊಟ್ಟು ಮನದಲ್ಲೇ ಉಳಿದು ಹೋದ ಪೃಥ್ವಿ ಈಗಲೂ ನನ್ನೊಳಗೆ ಜೀವಂತ. ಪೃಥ್ವಿ, ಇನ್ನೊಮ್ಮೆ ಹೇಳುವೆ ಲವ್ ಯು.