Sunday, 24th November 2024

ಹೊಂಜಿನ ಹಗಲು

ಬೆಂ.ಶ್ರೀ.ರವೀಂದ್ರ

ದಾರಿ ಸ್ಪಷ್ಟವಾಗಿ ಕಾಣದಂತೆ ಹೊಂಜು ತುಂಬಿರಲು, ರಮಾಳ ಬದುಕಿನಲ್ಲಿ ಬೆಳಕು ತುಂಬಲು ಹೇಗೆ ಸಾಧ್ಯ?

ಇನ್ನು ಎತ್ತೋಣ, ಅಕ್ಕಿ ಹಾಕದವರು ಹಾಕಿ ಬಿಡಿ’ ದೊಡ್ಡಮಾವನ ಮಾತು. ಈಗ ಅಕ್ಕಿ ಹಾಕಲೇ ಬೇಕು. ಯಾಕೊ ಶಾಂತಮ್ಮನಿಗೆ ಏಳಲು ಸಂಕಟ. ಶಕ್ತಿ ಕುಸಿದಂತೆ ಅತ್ತಿತ್ತ ನೋಡಿದಳು. ಮೂಲೆಯಲ್ಲಿದ್ದ ಮಾಧು ಅಮ್ಮನ ರಟ್ಟೆ ಹಿಡಿದುಕೊಂಡ. ನಿಧಾನವಾಗಿ ಎದ್ದಳು. ಅಕ್ಕಿ ತೆಗೆದುಕೊಂಡ ಕೈಗಳು ಅದುರುತ್ತಿದ್ದವು. ಎದೆ ಹೊಡೆದುಕೊಂಡಂತೆ. ಮನಸ್ಸು ಎಲ್ಲಾ ತೇಲಿ ಹೋದಂತೆ.

ಮಾಧುವಿನೊಂದಿಗೆ ಹೆಜ್ಜೆ, ಬಾಯಿಗೆ ಅಕ್ಕಿ ಹಾಕುತ್ತಿದ್ದಂತೆ, ಸ್ವಲ್ಪ ಬೆವರಿದಂತಾಯ್ತು. ಬವಳಿ ಬಂತು. ಸಾವರಿಸಿಕೊಂಡಳು,
ನಿಧಾನವಾಗಿ ಕಾಲ ಬಳಿ ನಿಂತು ಎರಡೂ ಕೈ ಜೋಡಿಸುತ್ತಿರುವಂತೆ, ‘ಅತ್ತೇ’ ಅವಳೇ ಕೂಗಿದಂತಾಯ್ತು. ದಿಟ್ಟಿಸಿ ನೋಡಲು
ಯತ್ನಿಸಿದಳು. ಮತ್ತೆ ಅದೇ ಧ್ವನಿ, ‘ಅತ್ತೇ, ನೀವು ಹೀಗೆ ಮಾಡಬಹುದಿತ್ತಾ, ದೊಡ್ಡವರು, ನಿಜ ಹೇಳಬೇಕಿತ್ತಲ್ಲವಾ?’ ಈ ಮಾತು, ಹತ್ತಾರು ಬಾರಿ ಅವಳು ಹೇಳಿದ್ದಳು.

ಕೆಲವೊಮ್ಮೆ ಜೋರಾಗಿ, ಕೆಲವೊಮ್ಮೆ ಬೇಸರದಿಂದ, ‘ನಿಮ್ಮ ಬದುಕಿನ ಭಾರವನ್ನು ನನ್ನ ಹೆಗಲಮೇಲಿರಿಸಿ, ಯಾಮಾರಿಸಿ ಬಿಟ್ಟಿರಲ್ಲ.’ ಕಾಲ ಹೆಬ್ಬೆರಳುಗಳನ್ನು ಸೇರಿಸಿ ಕಟ್ಟಿದ್ದ ದಾರವನ್ನು ಬಿಚ್ಚಿ ಅವಳು ಎದ್ದುಕೂತಂತೆ ಅನಿಸಿ ಶಾಂತಮ್ಮನಿಗೆ ಸ್ಮೃಹೆ ತಪ್ಪಿದಂತಾಯ್ತು. ‘ಛೆ ಛೇ ಪಾಪ, ನೋಡ್ರಿ, ಸೊಸೆಯ ಸಾವನ್ನು ತಡೆದುಕೊಳ್ಳುವ ಶಕ್ತಿ ಅತ್ತೆಗಿಲ್ಲ. ಸೊಸೆಯನ್ನು ಎಷ್ಟೊಂದು ಪ್ರೀತಿಸುತ್ತಿ ದ್ದರು. ಪಕ್ಕಕ್ಕೆ ಮಲಗಿಸಿ, ಫ್ಯಾನ್ ಹಾಕಿ. ಮುತ್ತಿಕೊಳ್ಳಬೇಡಿ’ ಅನ್ನುವ ಮಾತುಗಳು ಕೇಳಿಸುತ್ತಿದ್ದವು. ಶಾಂತಮ್ಮನನ್ನು ಒಳರೂಮಿನಲ್ಲಿ ಮಲಗಿಸಿದರು. ನಿಧಾನವಾಗಿ ಕಣ್ಣು ಮುಚ್ಚಿಕೊಂಡಿತು…
***

ರಮಾ ಅಂತಹ ಸುಂದರಿಯೇನಲ್ಲ. ಎತ್ತರ, ಢಾಳು ಶರೀರ, ಬಣ್ಣ ಕೊಂಚ ಕಡಿಮೆ. ಮಾತು ಒರಟು. ಸರ್ಕಾರಿ ಕೆಲಸ. ಹುಡುಗರಿಗೆ ಬಣ್ಣವೆ ತಾನೇ ಮುಖ್ಯ. ಅವರು, ಪೀಚು, ಕಪ್ಪಗಿದ್ದರೂ ಹುಡುಗಿ ಬೆಳ್ಳಗಿರಬೇಕು. ಅವಳಿಗೆ ಗಂಡುಗಳು ಸಿಕ್ಕಲಿಲ್ಲ. ‘ಹ್ಞು..’ ಅನ್ನುವ ಅರೆಮನದವರಿಗೆ ಅವಳ ಸಂಬಳ, ಸೌಲಭ್ಯಗಳ ಬಗ್ಗೆ ಆಸಕ್ತಿ. ಮದುವೆಯಾದರೆ ಕೆಲಸ ಬಿಡುವಂತಿಲ್ಲವೆಂಬ ಶರತ್ತು. ಇನ್ನೂ ಕೆಲವರು ‘ಹುಡುಗಿ ಕಪ್ಪು, ಏನು ಒಡವೆ ಹಾಕುತ್ತೀರಿ?’ ಎನ್ನುವ ವ್ಯಾಪಾರದವರು.

ಆತ್ಮವಿಶ್ವಾಸದ ಪ್ರತೀಕ ಇವಳು. ‘ಅಪ್ಪಾ ಇಂತಹ ಹುಡುಗರು ಬೇಡವೇ ಬೇಡ’ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿ ಬಿಡುತ್ತಿದ್ದಳು. ಕಾಲ ಹೀಗೇ ಸರಿಯುತ್ತಾ, ಅವಳ ಕಪ್ಪುಕೂದಲ ನಡುವೆ, ಅಲ್ಲಲ್ಲಿ ಬಿಳಿಯ ಎಳೆಗಳು ಕಾಣಿಸತೊಡಗಿದವು.
ತಂದೆಯ ಹಣೆಯ ನೆರಿಗೆಗಳು ಹೆಚ್ಚಾಗತೊಡಗಿದವು. ‘ಪುಟ್ಟಿ, ನಾನು ಹೋಗಿಬಿಟ್ಟರೆ, ನಿನ್ನನ್ನು ನೋಡಿಕೊಳ್ಳೋರ್ಯಾರು,
ಏನಾದರೂ ಮಾಡಿ, ಈ ವರ್ಷ ನಿನ್ನ ಮದುವೆ ಆಗಬೇಕು’ ಎಂದು ಅಲವತ್ತುಕೊಂಡರು.

‘ಒಮ್ಮನಸ್ಸಿನಿಂದ ಒಪ್ಪಿಕೊಳ್ಳೋ ಹುಡುಗನ್ನ ನೋಡಿ; ಸುಮ್ಮನೆ ಕುತ್ತಿಗೆ ಕೊಡ್ತೀನಿ’ ಎಂದಳು ರಮಾ ವಿಧಿಯಿಲ್ಲದೆ.
***

ಒಳಕೋಣೆಯಲ್ಲಿ ಮಲಗಿದ್ದ ಶಾಂತಮ್ಮನಿಗೆ ಮಂಪರು. ನಿಧಾನವಾಗಿ ಚಿತ್ರ ಸುರಳಿ ಬಿಚ್ಚತೊಡಗಿತ್ತು. ನಾಕು ಗಂಡು ಮಕ್ಕಳು. ದೊಡ್ಡವ, ಪ್ರದೀಪನಿಗೆ ಮದುವೆಯಾಗಿತ್ತು. ತಾನಾಯಿತು, ತನ್ನದಾಯಿತು ಎಂದು ಮದುವೆಯಾದ ಎರಡು ತಿಂಗಳಿಗೆ ಬೇರೆ ಮನೆ ಮಾಡಿದ. ಹೆಂಡತಿಯ ಕೈಗೊಂಬೆ.

ಅವಳೂ ಕೆಲಸಕ್ಕೆ ಹೋಗುವವಳು. ಅವಳ ತಂದೆಯ ಮನೆಯ ಕಡೆ ಚೆನ್ನಾಗಿದ್ದಾರೆ. ‘ಅಪ್ಪ ಸಂಪಾದನೆ ಮಾಡ್ತಾಯಿದಾರಲ್ಲ.
ಹೆಚ್ಚಿಗೆ ಏನಾದರೂ ಬೇಕಾದರೆ’ ಕೇಳು ಮನೆಬಿಟ್ಟು ಹೊರಡುವಾಗ ಹೇಳಿದ್ದ. ಅದಾದ, ಸ್ವಲ್ಪದಿನಕ್ಕೆ ‘ಹೊಟ್ಟೆ ನೋವು’ ಎಂದು, ಆಸ್ಪತ್ರೆಗೆ ಸೇರಿದ ಗಂಡ, ಒಂದುವಾರದಲ್ಲಿ ತೀರಿಹೋದರು. ಪ್ರದೀಪ ಬಂದು ನಿಂತು, ಎಲ್ಲ ಕೆಲಸವನ್ನು ಸಾಂಗವಾಗಿ ಮಾಡಿ ‘ಅಮ್ಮ, ಏನಾದರೂ ಇದ್ದರೆ ಹೇಳು, ಸಹಾಯ ಮಾಡ್ತೀನಿ. ಅಪ್ಪನ ಪೆನ್ಷನ್ ಬರುತ್ತೆ. ಉಳಿದ ಮೂವರು ನಿನ್ನ ಜೊತೆಗಿರುತ್ತಾರೆ.

ಅವರೂ ಸಂಪಾದಿಸಬೇಕಲ್ಲವೇ?’ ಎಂದವನು ಸ್ಪಷ್ಟವಾಗಿ ಹೇಳಿದ್ದ, ‘ಮಾಧವನ ವಿಚಾರ ಚಿಂತೆ ಮಾಡಬೇಡ. ಇವತ್ತಲ್ಲ, ನಾಳೆ ಯಾವುದಾದರೂ ಕೆಲಸ ಸಿಕ್ಕತ್ತೆ. ಅವನ ಕಾಲ ಮೇಲೆ ಅವನು ನಿಲ್ತಾನೆ. ಒಳ್ಳೆ ಹುಡುಗಿ ನೋಡು, ಮದುವೆ ಮಾಡೋಣ. ನಾರಾಯಣ, ನಿನ್ನ ಜೊತೆಗಿರಲಿ. ಹೇಗಿದ್ದರೂ ಫ್ಯಾಮಿಲಿ ಪೆನ್ಷನ್ ಬರುತ್ತೆ. ನಾನೂ ಸ್ವಲ್ಪ ಸಹಾಯ ಬೇಕಾದಾಗ ಮಾಡ್ತೀನಿ. ಆದರೆ ಸೋಮಾರಿ ಗೋವಿಂದನ ವಿಷಯ ನನಗೆ ಬೇಡ.

ಬಿಟ್ಟಿ ಊಟ ಹಾಕೋಕೆ ಆಗಲ್ಲ. ನಾಳೆ ಯಾರ್ನಾದ್ರೂ ಕಟ್ಕೊಂಡ್ರೆ, ಅವಳ್ನ, ಅವಳ ಮಕ್ಕಳ್ನ ನಾನಂತೂ ನೋಡಿ ಕೊಳ್ಳಲ್ಲ, ಇಷ್ಟರ ಮೇಲೆ ನಿನ್ನಿಷ್ಟ. ನಾಳೆಯಿಂದ ಪಾಪುನ ಸ್ಕೂಲಿಗೆ ಕಳಿಸಬೇಕು. ನಾವು ಬರ್ತೀವಿ’ ಅಂದು ಹೋದವ ಈ ಕಡೆಗೆ ತಿರುಗಿ ನೋಡಿರಲಿಲ್ಲ. ಉಳಿದವರಲ್ಲಿ, ಮೂರನೆಯವನು, ಮಾಧವ ಡಿಗ್ರಿ ಮುಗಿಸಿ ಕೆಲಸಕ್ಕೆ ತಿಣುಕುತ್ತಿದ್ದ. ಎರಡನೆಯವ, ನಾರಾಯಣ ನಾಕನೆ ತರಗತಿ ದಾಟಲಿಲ್ಲ. ಯಾವುದೊ ಅಂಗಡಿಯಲ್ಲಿ ಕೆಲಸಕ್ಕೆ ಹೋಗುತ್ತಾನೆ.

ಅವನು ಸ್ಪಷ್ಟವಾಗಿ ಹೇಳಿದ್ದ ‘ಅಮ್ಮಾ, ನನಗೆ ವಿದ್ಯೆ ತಲೆಗೆ ಹತ್ತುವುದಿಲ್ಲ. ಸುಮ್ಮನೆ ಬಲವಂತ ಮಾಡಬೇಡ. ನನ್ನ ಅನ್ನ ನಾನು ಹುಟ್ಟಿಸಿಕೊಳ್ಳುವೆ. ನಿನಗೆ ಕೈಲಾಗುವರೆಗೂ ಬೇಯಿಸಿಹಾಕು. ನಂತರ ದೇವರಿದ್ದಾನೆ.’ ಅವನ ವಿಷಯದಲ್ಲಿ ಶಾಂತಮ್ಮನಿಗೆ ನಿಶ್ಚಿಂತೆ. ಅವನು ತನ್ನಪಾಡಿಗೆ ತಾನು. ಎಲ್ಲಿಗೂ ಬರುವುದಿಲ್ಲ, ಹೋಗುವುದಿಲ್ಲ.

ಕಡೆಯವನು, ಗೋವಿಂದ. ಹಡ ಸೋಮಾರಿ, ಬುದ್ಧಿಯೂ ಸ್ವಲ್ಪ ಮಂದ. ಅದರ ಮೇಲೆ ಸುಮ್ಮನೆ ಕೂತು ತಿನ್ನುವ ಅಭ್ಯಾಸ.
ನೋಡಲು ಸುಂದರ, ಯಾವಾಗಲೂ ಕನ್ನಡಿಯ ಮುಂದೆ ನಿಂತು ಕಾಲ ಕಳೆಯುತ್ತಾನೆ. ಸಿನಿಮಾ, ಹೋಟೆಲು ಹುಚ್ಚು.
ರಾಜಕುಮಾರನ ಸಿನಿಮಾ, ಮೊದಲ ಶೋಗೆ ಹಾಜರು. ಅಂತೂ ಇಂತೂ ಎಸ್.ಎಸ್.ಎಲ.ಸಿ. ವರೆಗೆ ಬಂದ. ನಾನು ಮುಂದೆ
ಓದುವುದಿಲ್ಲವೆಂದು ಘೋಷಿಸಿಬಿಟ್ಟ. ಕೆಲಸಕ್ಕೆ ಹೋಗೆಂದರೆ, ಅದೂ ಇದೂ ನೆಪ. ಬಲವಂತದಿಂದ ಯಾರಾದರೂ ಕೆಲಸ
ಕೊಡಿಸಿದರೆ, ನನಗೆ ಕೈ ನೋವು, ತುಂಬಾ ಕೆಲಸ ಅಂಗಡಿಯಲ್ಲಿ, ಅಂತ ಎರಡು ದಿನಕ್ಕೆ ತಕರಾರು ಎತ್ತಿ ಮನೆಗೆ ಬಂದು ಬಿಡುತ್ತಿದ್ದ.

ಹಾಕಿದ್ದು ತಿಂದುಕೊಂಡು, ಸಿನಿಮಾ ನೋಡಿಕೊಂಡು, ದುಡ್ಡು ಸಿಕ್ಕರೆ ಹೋಟೆಲು ತಿಂಡಿ ತಿಂದುಕೊಂಡು ಕಾಲಕ್ಷೇಪ
ಮಾಡುತ್ತಿದ್ದ. ಉಂಡಾಡಿ ಗುಂಡ. ‘ಅಂದವರು ಅಂದುಕೊಳ್ಳಲಿ, ನನಗೇನು’ ಅನ್ನುವ ಧಾರ್ಷ್ಟ್ಯ. ಅವಳು, ಮಗ್ಗಲು ಬದಲಾಯಿಸಿದಳು… ಮಾಧವನಿಗೆ, ಪ್ರೈವೆಟ್ ಕಂಪನಿಯಲ್ಲಿ ಕೆಲಸವಾಯಿತು. ಸಹೊದ್ಯೋಗಿ ಯನ್ನು ಪ್ರೀತಿಸಿ ಮದುವೆಯಾದ. ಸಣ್ಣ ಮನೆಯೊಂದನ್ನು ಬಾಡಿಗೆಗೆ ಹಿಡಿದ. ಗಂಡ ಹೆಂಡತಿ ಚೆನ್ನಾಗಿದ್ದಾರೆ.

ನಾರಾಯಣ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಮೂರೂ ಮನೆಗಳಲ್ಲಿ ಓಡಾಡುತ್ತಾ ಇರುತ್ತಾನೆ. ಸಾಧ್ಯವಾದಾಗ ದೊಡ್ಡಣ್ಣನ,
ಮಾಧವನ ಮಕ್ಕಳಿಗೆ ಸ್ವೀಟೋ, ಮತ್ತೊಂದೋ ತಂದು ಕೊಡುತ್ತಿರುತ್ತಾನೆ. ಅವನ ಜಗತ್ತೇ ಬೇರೆ. ಇವಳ ಚಿಂತೆಯಿದ್ದಿದ್ದು ಗೋವಿಂದನ ಬಗ್ಗೆ. ಕೆಲಸವಿಲ್ಲ, ಕಾರ್ಯವಿಲ್ಲ. ಉಂಡಾಡಿ ಗುಂಡ. ಅಂತಹ ಕೆಟ್ಟ ಚಟವೇನು ಇಲ್ಲದಿದ್ದರೂ, ಸಿನಿಮಾಕ್ಕೆ ಹೋಟೆಲಿನ ತಿಂಡಿಗೆ, ಅದಕ್ಕೆ ಇದಕ್ಕೆ ದುಡ್ಡು ಕೊಡುವವರು ಯಾರು. ಹೊಟ್ಟೆಯ ಗತಿ ಏನು.

ಹುಷಾರು ತಪ್ಪಿದರೆ ನೋಡುವರು ಯಾರು. ನಾನು ಸತ್ತ ನಂತರ, ಅವನೇನು ಮಾಡುತ್ತಾನೆ. ಈಗಾಗಲೆ, ವಯಸ್ಸು ಮೂವತ್ತೈದು. ನೋಡಕ್ಕೆ ಚಂದವಿದ್ದಾನೆ. ಯಾರಾದರು ಹುಡುಗಿ ಗಂಟು ಬಿದ್ದರೇನು ಮಾಡುವುದು. ದೊಡ್ಡವನು ಸಹಾಯ ಮಾಡುವುದಿಲ್ಲ, ಮಾಧವನ ಕೈಲಿ ಇವನನ್ನು ಸಾಕಲು ಆಗದು. ಏನು ಮಾಡಲಿ ಎನ್ನುವ ಚಿಂತೆ. ಚಿಂತೆ ಚಿತೆಗೆ ಸಮಾನವಂತೆ, ಶಾಂತಮ್ಮನ ಕೊರಗು ಹೆಚ್ಚತೊಡಗಿತು.

ಒಮ್ಮೆ ದೂರದ ನೆಂಟರು, ಮದುವೆ ಬ್ರೊಕರ್ ರಾಯರು ಮನೆಗೆ ಬಂದರು. ಕಾಫೀ ಕುಡಿಯುತ್ತಾ ‘ಅಂದ ಹಾಗೆ ಗೋವಿಂದನಿಗೆ ಮದುವೆ ಮಾಡೊಲ್ವೆ, ಮೂವತ್ತಾಗಿರಬೇಕಲ್ಲ. ಮೂವತ್ತಲ್ಲ, ಮೂವತ್ತೈದು. ಮತ್ಯಾಕೆ, ಸುಮ್ನೆ ಇದೀಯಾ.’ ‘ಅಯ್ಯೊ, ನಿಮಗೆ ಗೊತ್ತಿಲ್ಲವೇ. ಅವನಿಗೆ ಕೆಲಸ ಇಲ್ಲ, ಕಾರ್ಯ ಇಲ್ಲ. ಓದಿಲ್ಲ ಬರೆದಿಲ್ಲ, ಉಂಡಾಡಿ ಗುಂಡ, ಸಿನಿಮಾ ಗಿನಿಮಾ ಹೋಟೆಲ್ಲು ಗೀಟೆಲ್ಲು ಅಂತ ಕಾಲ ಕಳಿತಾಯಿದಾನೆ.’

‘ನಿಂಗಾಗ್ಲೆ ಎಪ್ಪಾತ್ತಾಯಿತು. ಇನ್ನು ಎಷ್ಟು ದಿನ ಇರ್ತೀಯಾ. ದೊಡ್ಡವರ್ಯಾರೂ ಅವ್ನ ನೋಡ್ಕೊಳಲ್ಲ. ಅವ್ನಿಗೆ ಮದುವೆ
ಮಾಡೋದೆ ವಾಸಿ. ಹುಡ್ಗಿ ಯಾರು ಕೊಡ್ತಾರೆ, ಅವ್ಳನ್ನೂ ನಾವು ನೋಡ್ಕೊಳಕ್ಕೆ ಆಗುತ್ತಾ? ಮದ್ವೆ ಮಾಡೋದೆ ಅವ್ನ ಪಾಡಿಗೆ
ಅವ್ನಿರಲಿ ಅಂತ, ಯಾರದರೂ ಕೆಲಸದಲ್ಲಿ ಇರೋ ಹುಡ್ಗಿನ ನೋಡೋಣ’ ಎನ್ನುತ್ತಾ ಮೇಲೆದ್ದು ‘ನನ್ನ ಕಡೆಯವರು
ಒಬ್ಬರಿದಾರೆ. ಅವರನ್ನ ವಿಚಾರಿಸುತ್ತೇನೆ. ಯಾವುದಕ್ಕೂ ಆಮೇಲೆ ಮಾತಾಡ್ತಿನಿ’ ಎಂದು ಹೇಳಿ ಹೋದವರು ಹದಿನೈದು
ದಿನ ಕಳೆದು ಬಂದರು.

‘ನೋಡು, ಒಂದು ಹುಡ್ಗೀನ ನೋಡಿದೀನಿ. ಸುಮಾರಾಗಿದಾಳೆ. ಕೆಲಸದಲ್ಲಿ ಇದಾಳೆ, ಪೆನ್ಷನಬಲ್ ಜಾಬ. ಸುಮಾರು ಮುವತ್ತೈದು ಮುವತ್ತಾರು ವಯಸ್ಸು. ಈ ಊರಿನವರಲ್ಲ. ಇವ್ನ ಬಗ್ಗೆ ಹೇಳಿದೀನಿ. ಗೋವಿಂದ, ಹೆಸರಿಗೆ ತಕ್ಕಹಾಗೆ ಸುಂದರ. ಬಿಎ ಪಾಸ್. ಖಾಸಗಿ ನೌಕರಿ. ಇಪ್ಪತ್ತೈದು ಸಾವಿರ ಸಂಬಳ. ಮದುವೆ ಆದ್ಮೇಲೆ ಅವಳಿಗೆ ಟ್ರಾನ್ಸಫರ್ ಸಿಕ್ಕರೆ ಇಲ್ಲಿಗೆ ಬರ್ತಾಳೆ. ಇಲ್ಲದಿದ್ರೆ ಇವ್ನೆ ಅಲ್ಲಿಗೆ ಹೋಗಬೇಕಾಗತ್ತೆ.’

ಇವಳಿಗೆ ಭೂಮಿ ಕುಸಿದಂತಾಯ್ತು. ‘ರಾಯರೆ, ಹೀಗೆಲ್ಲ ಹೇಳಕಾಗತ್ತಾ! ನಾಳೆ ಸಿಕ್ಕಿ ಹಾಕಿಕೊಂಡ್ರೆ?’ ‘ಮೊದಲು ಮದ್ವೆ ಆಗಲಿ, ಮಿಕ್ಕಿದ್ದು ಆಮೇಲೆ. ನೂರು ಸುಳ್ಳು ಹೇಳಿ, ಒಂದು ಮದ್ವೆ ಮಾಡಿ ಅನ್ನೊ ಗಾದೆ ಕೇಳಿಲ್ವೆ? ಯಾವ್ದಕ್ಕೂ ದೊಡ್ಡಮಗನ್ನ, ಒಂದ್ಮಾತು ಕೇಳ್ತೀನಿ’ ಎಂದವಳು ಪ್ರದೀಪನಲ್ಲಿ ಪ್ರಸ್ತಾಪವಿಟ್ಟಳು. ಅವನು ಒಪ್ಪಲೇ ಇಲ್ಲ. ‘ಅಮ್ಮಾ ಹುಡ್ಗಿಗೆ ಮೋಸ ಮಾಡಕ್ಕಾಗಲ್ಲ, ನಾನಂತೂ ಈ ಭಂಡ ವ್ಯಾಪಾರದಲ್ಲಿ ಇಲ್ಲ. ಜೈಲಿಗೆ ಹೋದ್ರೆ ನೀನೂ ರಾಯರು ಹೋಗಿ. ನಾನು ಮದ್ವೆಗೂ ಬರಲ್ಲ.’

ಮಾಧವನದು, ಏನೂ ಅಭಿಪ್ರಾಯವಿಲ್ಲ. ಱದೇವರು ಮಾಡಿಸಿದಂತಾಗಲಿ, ಸುಳ್ಳೊ ಪಳ್ಳೊ, ಮದ್ವೆ ಆಗ್ಲಿ. ನಾನು ಎಪ್ಪತ್ತು ವರ್ಷದ ಮುದುಕಿೞ ಅಂತ ವಿಚಾರ ಮಾಡಿ, ಗೋವಿಂದನೊಂದಿಗೆ ಮಾತಾಡಿದಳು. ಮದ್ವೆಗೆ ಅವ್ನು ರೆಡಿ. ಎಂತಹ ಸುಳ್ಳಿಗೂ ಸಿದ್ಧ. ತುಸು ದಡ್ಡ, ಆದರೇನು ಹುಡ್ಗಿ ಆಸೆಗೆ ಬಿದ್ದ. ರಾಯರು ‘ನೀನೇನೂ ಮಾತಾಡಕೂಡದು. ಸುಮ್ನೆ ಹೂಂ ಎನ್ನಿ’ ಎಂದು ಮೊದಲೇ ಆದೇಶವಿತ್ತರು.
***

ಊರಿಂದ, ರಮಾ, ಅವಳ ತಂದೆ, ತಾಯಿ ಬಂದರು. ಹುಡುಗನ ಮನೆಯ ನೋಡುವ ಶಾಸ್ತ್ರ. ಗೋವಿಂದ, ಸುಂದರವಾಗಿದ್ದ. ಕೆಲಸ, ಸಂಬಳ ಎಲ್ಲಾ ಗಿಳಿಮಾತು. ರಮಾ, ಒಂದೇ ಸಲಕ್ಕೆ ಸೆಳೆಯುವಂತಹ ಹುಡುಗಿ ಅಲ್ಲದೆ ಇದ್ದರೂ ಎತ್ತರ, ಗಾತ್ರ ಮಾತು ನೋಟ ಎ ಹಿಡಿಸಿತು ಗೋವಿಂದನಿಗೆ.

ರಮಾಗೆ, ಅಂತಹ ಒಪ್ಪಿಗೆ ಇಲ್ಲ. ಸ್ವಲ್ಪ ಪಿಚ್ಚೆನ್ನಿಸಿತು. ‘ಚಂದದ ಹುಡುಗ, ರಮಾಗೆ ಆಗಲೆ ಮೂವತ್ತಾರು, ಕೆಲಸವಂತೂ ಇದೆ.
ಸಂಸಾರ ಚೆಂದವಾಗುತ್ತದೆ’ ಎಂದು ರಾಯರದೇ ಒತ್ತಾಸೆ. ರಮಾಳ ಕನಸುಗಳು ಸೋಪಿನ ಗುಳ್ಳೆಯಂತೆ ಒಡೆದವು. ಅಪ್ಪ
ಅಮ್ಮನ ಮುಖ ನೋಡಿದಳು. ಬೇರೆ ದಾರಿಯಿರಲಿಲ್ಲ. ಮದುವೆಯಾಯಿತು. ಶಾಂತಮ್ಮ, ಖಡಕ್ಕಾಗಿ ಗೋವಿಂದನಿಗೆ ಹೇಳಿ ಬಿಟ್ಟಿದ್ದಳು. ಇನ್ನು ನೀನುಂಟು, ನಿನ್ನ ಹೆಂಡತಿಯುಂಟು.

ಎಂಟು ದಿನಗಳಲ್ಲಿ, ಗೋವಿಂದ, ರಮಾಳ ಊರಿಗೆ ಟ್ರಂಕು ಪೆಟ್ಟಿಗೆಯೊಂದಿಗೆ ಹಾಜರು. ‘ರಜಾ ಹಾಕಿದೀನಿ, ನಮ್ಮಾಫೀಸಿನವರು ಇ ಬ್ರಾಂಚ್ ತೆಗಿತಾರಂತೆ, ಟ್ರಾನ್ಸರ್ ಕೇಳಿದೀನಿ’ ಎಂದು ರಮಾಳ ಎದುರು ಡೋಂಗಿ ಬಿಟ್ಟ. ದಿನಗಳು ನಾಕಾಯಿತು, ಎಂಟಾಯಿತು. ತಿಂಗಳುಗಳು ಉರುಳಿತು. ಕೆಲಸದ ಸದ್ದೇಯಿಲ್ಲ. ಅಳಿಯನ ಕುರುಡು ಬೆಳಗಾದಂತೆ ತಿಳಿಯತೊಡಗಿತು. ತಾನೊಬ್ಬನೇ ಸಿನಿಮಾಕ್ಕೆ, ಹೋಟೆಲಿಗೆ ತಿರುಗಾಡತೊಡಗಿದ. ಹೆಂಡ್ತಿಯೊಂದಿಗೆ ಮಾತಿಲ್ಲ.

ಮಾವನೊಂದಿಗೆ, ಬೇರೆ ಬಂಧುಗಳೊಂದಿಗೆ ಮಾತಿಲ್ಲ. ವಿಷಯ ಗೊತ್ತಿದ್ರೆ ತಾನೆ, ಮುಖಯಿದ್ರೆ ತಾನೆ ಬಾಯಿ ಬಿಡೋದು. ರಾತ್ರಿ ಮಾತ್ರಾ, ರಾಕ್ಷಸ. ರಮಾ, ಒಮ್ಮೆ ಕೇಳಿದಳು, ‘ಯಾಕೆ, ನಿಮ್ಮಾಫೀಸಿನ ಬ್ರಾಂಚು ಇನ್ನೂ ಶುರು ಆಗಿಲ್ವಾ?’ ಉತ್ತರಿಸಲು ತಡಬಡಾಯಿಸಿದ. ‘ಸುಳ್ಳಾ ನಿಮ್ಮಾತು?’ ಮೌನವೇ ಉತ್ತರವಾಯಿತು. ಮುಖ ಬಿಳಚಿಕೊಂಡಿತು. ‘ಹೋಗ್ಲಿ, ನಿಮ್ಮ ಬಿ.ಎ. ಸರ್ಟಿಫಿಕೇಟ್ ಕೊಡಿ. ನಾನೆ ಯಾವುದಾದರೂ ಕೆಲಸ ಹುಡುಕ್ತೀನಿ.’ ಮೌನವೇ ಆಭರಣವಾಯ್ತು; ಮುಸುಕು ಹಾಕಿಕೊಂಡು ಮಲಗಿಬಿಟ್ಟ.

ಊಟಕ್ಕೂ ಏಳಲಿಲ್ಲ. ರಾತ್ರಿ, ರಮಾ ಸಾಂತ್ವನ ಮಾಡಿದ ಮೇಲೆ ಬಿಕ್ಕುತ್ತಾ, ಬಿಕ್ಕುತ್ತಾ ಬಾಯಿ ಬಿಟ್ಟ. ಅಸಲಿ ಬಂಡವಾಳ
ಹೊರಬಿದ್ದಿತ್ತು. ಸಿಟ್ಟಿನಿಂದ, ರಾತ್ರಿಯೇ ಕರೆ ಮಾಡಿದಳು. ಶಾಂತಮ್ಮನಿಗೆ, ನಿರೀಕ್ಷಿತವಾದ ಕರೆ. ಎಲ್ಲಾ ಕೇಳಿಸಿಕೊಂಡು ಅಸಡ್ಡೆಯಾಗಿ ಹೇಳಿದಳು, ‘ನಾನು ಎಲ್ಲಾ ವಿಚಾರ ರಾಯರಿಗೆ ಹೇಳಿದ್ದೆ. ಅವರು ನಿಮಗೆ ತಿಳಿಸದಿದ್ರೆ ನಾನೇನು ಮಾಡಕ್ಕಾಗತ್ತೆ?’.
ಅವರಿಗೆ ಕರೆಮಾಡಿದರೆ ರಾಯರು ಫೋನ್ ಸ್ವೀಕರಿಸಲೇಯಿಲ್ಲ. ಅವಮಾನ, ಮೋಸ, ವಂಚನೆ!

ರಮಾಗೆ, ಏನು ಕಡಿಮೆಯಿತ್ತು. ವಿದ್ಯೆ, ಕೆಲಸ, ಆರೋಗ್ಯ ಎಲ್ಲಾ ಇತ್ತು. ಚರ್ಮದ ಬಣ್ಣ ಮಾತ್ರ ಇರಲಿಲ್ಲ. ಏನು ಮಾಡಲಿ, ಹೊಟ್ಟೆ ಸವರಿಕೊಂಡಳು, ಅಂಕುರವಾಗಿರಬಹುದು. ‘ಬಿಟ್ಟುಬಿಡಲೆ’ ಎಂದು ಯೋಚಿಸಿ ಬೆಳಗ್ಗೆ, ಅಪ್ಪನಿಗೆ ಹೇಳಿದಳು. ‘ಕಷ್ಟಪಟ್ಟು ಮದುವೆ ಮಾಡಿದೀವಿ, ಸ್ವಲ್ಪ ಹೊಂದಿಕೊಂಡು ಹೋಗು. ಈಗ ದುಡುಕಿದರೆ ಹೋಗೋದು ನಮ್ಮ ಮಾನಾನೇ’ ಎಂದರು. ಆಕಾಶವೇ ಕಳಚಿಬಿದ್ದಂತಾಯ್ತು. ಅವಳಿಗೆ ಇನ್ನೆಲ್ಲಿಯ ಆಸರೆ? ಗೋವಿಂದನನ್ನು ಕರೆದುಕೊಂಡು, ಪ್ರದೀಪನ ಬಳಿಗೆ
ಹೋದಳು. ‘ನಾನು ಮದುವೆಗೆ ಬಂದಿರಲಿಲ್ಲ. ನನಗೆ ಈ ಮದುವೆ ಒಪ್ಪಿತವಾಗಿರಲಿಲ್ಲ.

ನೀನಾದ್ರು, ನಿಮ್ಮ ತಂದೆಯಾದ್ರೂ, ಒಂದು ಮಾತು ಕೇಳಿದ್ರೆ, ಸತ್ಯ ಹೇಳ್ತಿದ್ದೆ. ರಾಯರ ಮಾತು ನಂಬಿದ್ರಿ’ ಎಂದ. ಗೋವಿಂದ ನನ್ನು ಊರ ಬಿಟ್ಟು ಬಂದಳು. ಅವನ ಮುಖ ಕಪ್ಪಿಟ್ಟಿತ್ತು. ರಮಾಳ ಗರ್ಭನಿಂತಿತು. ಗೋವಿಂದನನ್ನು ಕಂಡರೆ ಹೇಸಿಗೆಯೆನಿಸಿ
ಅವನ -ನನ್ನೂ ಎತ್ತಲಿಲ್ಲ. ಒಂದು ದಿನ ಅಪ್ಪ ‘ಮಗೂ, ಗಂಡನ್ನ ಕರಿಸಿಕೊ, ಎಷ್ಟಾದರೂ ನಿನ್ನ ಮಗುವಿನ ತಂದೆ ಅವನು. ಬೇರೆ ದಾರಿಯಿಲ್ಲ. ಗಂಡನಾಗಿ ಒಪ್ಪಿಕೊಳ್ಳದಿದ್ದರೂ, ಮಗುವಿನ ತಂದೆಯಾಗಿಯಿರಲಿ. ಅವನಿಂದ ನಿನಗೊಂದು ಆಸರೆಯಾಯ್ತಲ್ಲ’ ಎಂದರು. ರಮಾ ಮತ್ತಷ್ಟು ಕುಸಿದಳು.

ಗೋವಿಂದ ಮರಳಿದ. ಶಾಂತಮ್ಮನಿಗೆ ತಪ್ಪಿತಸ್ಥ ಭಾವ ಒಮ್ಮೊಮ್ಮೆ ಕಾಡಿದರೂ, ಈಗ ನಿಶ್ಚಿಂತೆಯಾಯಿತು. ಕಾಲಚಕ್ರ ಉರುಳಿತು. ಗೋವಿಂದನಂತೆಯೇ ಮುzದ, ಹೆಣ್ಣು ಮಗು. ಆದರೆ ರಮಾ ಮಾತ್ರ ಉಳಿಯಲಿಲ್ಲ. ಉಳಿಯುವ ಆಸೆಯೇ
ಅವಳಿಗಿರಲಿಲ್ಲವೇ?! ವಿಷಯ ತಿಳಿದ ಶಾಂತಮ್ಮ ಓಡೋಡಿ ಬಂದಿದ್ದಾಳೆ.
***

ಸೊಸೆ ಹೆಣವಾಗಿದ್ದಾಳೆ. ಏನೂ ಅರಿಯದ ಮುದ್ದು ಮೊಮ್ಮಗಳು ಕಣ್ಮುಂದೆ ಕಾಣಿಸಿದಳು. ಅಯ್ಯೊ ಅವಳು.. ಸೊಸೆಯ ಪ್ರತಿರೂಪದಂತೆ. ಎದೆಯಲ್ಲಿ ಏನೋ ಛಳಕ್ ಅಂದಂತಾಯಿತು. ಮಗ್ಗುಲಾದಳೇ ಹೊರಳಿಕೊಂಡಳೇ ಹೆಣ ತೆಗೆದುಕೊಂಡು ಹೋದರು. ಮಾಧವ ಅಮ್ಮನನ್ನು ಕರೆದುಕೊಂಡು ಹೋಗಲು ಬಂದು ಎಬ್ಬಿಸಲು ಪ್ರಯತ್ನಿಸಿದ.

ನೀರು ಕುಡಿಸಿದರೆ ಕಟವಾಯಿಂದ ಹರಿದು ಹೋಯಿತು. ಸ್ವಲ್ಪ ಹೊತ್ತಿನ ಮನೆಯಿಂದ ಮತ್ತೊಂದು ಹೆಣ ಹೊರಟಿತು.
ಗೋವಿಂದ, ಮಗಳನ್ನು ಎತ್ತಿಕೊಂಡು ನಿಂತಿದ್ದ. ಅವನ ಕಣ್ಣಿಂದ ನೀರು ಧಾರಾಕಾರವಾಗಿ ಹರಿಯುತ್ತಿತ್ತು. ಕೈಲಿದ್ದ ರಮಾಳ
ಮಗು ನಗುತ್ತಿತ್ತು.
***
ರಮಾಳಿಗೆ ಸರ್ಕಾರದಿಂದ ಬರಬೇಕಾದ ಸವಲತ್ತುಗಳು, ಗೋವಿಂದನ ಖಾತೆಗೆ ಜಮೆಯಾಗಿದೆ.