Friday, 22nd November 2024

ಯೋಗೇಶ್ವರ ಒಬ್ಬ 420, ಆತನನ್ನು ಬಂಧಿಸಿ: ಎಂ.ಪಿ.ರೇಣುಕಾಚಾರ್ಯ ಆಕ್ರೋಶ

ಹೊನ್ನಾಳಿ: ಸಚಿವ ಸಿ.ಪಿ. ಯೋಗೇಶ್ವರ ಒಬ್ಬ 420, ಕಳ್ಳನಂತೆ ಕಾರ್ಯ ಮಾಡುತ್ತಿದ್ದಾನೆ ಎಂದು ಸಿಎಂ ರಾಜಕೀಯ ಕಾರ್ಯ ದರ್ಶಿ ಎಂ.ಪಿ.ರೇಣುಕಾಚಾರ್ಯ ಏಕವಚನದಲ್ಲಿ ಯೋಗೇಶ್ವರ ವಿರುದ್ಧ ಹರಿಹಾಯ್ದಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿಪಿ ಯೋಗೇಶ್ವರ್‌ಗೆ ಲೂಟಿ ಮಾಡುವ ಖಾತೆ ಬೇಕಂತೆ. ಬ್ಲಾಕ್ ಮೇಲ್ ಮಾಡಲು ಬಂದರೆ, ನಾವು ಸುಮ್ಮನಿರಲ್ಲ. ಇಂಥವರಿಂದಲೇ ಪಕ್ಷಕ್ಕೆ ಧಕ್ಕೆಯಾಗುತ್ತದೆ. ಯಡಿಯೂರಪ್ಪನವರು ನಿನಗೆ ಸಚಿವನನ್ನಾಗಿ ಮಾಡಿದ್ದೇ ದೊಡ್ಡ ತಪ್ಪು ಎಂದರು.

ಬಿಜೆಪಿ ಮೂರು ಭಾಗವಾಗಿದೆ ಎಂದು ಹೇಳಲು, ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಎಂದು ಹೇಳಲು ಸಿ.ಪಿ.ಯೋಗೇಶ್ವರ್‌ಗೆ ಯಾವ ನೈತಿಕತೆಯೂ ಇಲ್ಲ. ಮೆಗಾಸಿಟಿ ಹಗರಣದಲ್ಲಿ ಕೂಡಲೇ ಅವರನ್ನು ಬಂಧಿಸಬೇಕು ಎಂದು ಗೃಹಸಚಿವ ಬೊಮ್ಮಾಯಿ ಅವರನ್ನು ಒತ್ತಾಯಿಸುತ್ತೇನೆ ಎಂದರು. ಅವರನ್ನು ಮಂತ್ರಿ ಮಂಡಲದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.

ಸಿಪಿ ಯೋಗೇಶ್ವರ್ ಹಿಂಬಾಗಿಲಿನಿಂದ ವಿಧಾನಸೌಧ ಪ್ರವೇಶಿಸಿ ಮಂತ್ರಿಗಿರಿ ಗಿಟ್ಟಿಸಿಕೊಂಡಿದ್ದಾನೆ. ಕರೋನಾದಿಂದ ಜನರು ನೊಂದು, ಬೆಂದು ಹೋಗಿದ್ದಾರೆ. ಈ ಸಮಯದಲ್ಲಿ ದೆಹಲಿಗೇಕೆ ಹೋಗಬೇಕಿತ್ತು. ಯೋಗೇಶ್ವರ್ ದೆಹಲಿಯಲ್ಲಿ ಯಾವ ನಾಯಕ ರನ್ನು ಭೇಟಿ ಮಾಡಿಲ್ಲ. ಅವರ ಗೇಟು ಮುಟ್ಟಿ ಬಂದು ಪೋಟೋ ತೆಗೆಸಿಕೊಂಡಿದ್ದಾನೆ. ಒಣ ರಾಜಕೀಯ ಬಿಟ್ಟು ಕ್ಷೇತ್ರದಲ್ಲಿ ಸಂಚರಿಸಿ ಕರೊನಾ ಜಾಗೃತಿ ಮಾಡಲಿ ಎಂದು ತಾಕೀತು ಮಾಡಿದರು.