Thursday, 28th November 2024

ಅಬ್ಬ ಕಚ್ಚಿದರೆ ಅಬ್ಬಬ್ಬ ಎನ್ನಲೂ ಸಮಯವಿಲ್ಲ !

ಶಶಾಂಕಣ

ಶಶಿಧರ ಹಾಲಾಡಿ

ಈ ವರ್ಷ ವಾಡಿಕೆಗಿಂತ ಮುಂಚಿತವಾಗಿ ಮಳೆ ಆರಂಭಗೊಂಡಿದ್ದರಿಂದಲೋ ಏನೋ, ಪ್ರಕೃತಿಯ ಕ್ಯಾಲೆಂಡರ್ ತುಸು ಹಿಂದು ಮುಂದಾಗಿರಬಹುದು. ಜೀವಿಗಳ ಮತ್ತು ಸಸ್ಯಗಳ ಲೋಕದಲ್ಲಿ ಅಪರೂಪವೆನಿಸುವ ವಿದ್ಯಮಾನಗಳು ಜರುಗುತ್ತಿವೆ ಎನಿಸುತ್ತಿದೆ. ಮೊನ್ನೆ ಫೇಸ್‌ಬುಕ್‌ನಲ್ಲಿ ಗೆಳೆಯರೊಬ್ಬರು ಅಚ್ಚರಿಯಿಂದ ಫೋಟೋ ಒಂದನ್ನು ಹಾಕಿ ಸಂಭ್ರಮಿಸಿದ್ದರು.

ಬೆನ್ನಿನ ತುಂಬಾ ಮೆದು ಮತ್ತು ಕೆಂಪನೆಯ ವೆಲ್ವೆಟ್ ಬಟ್ಟೆಯನ್ನು ಹೊದ್ದಂತೆ ಕಾಣಿಸುವ ಪುಟಾಣಿ ವೆಲ್ವೆಟ್ ಹುಳವನ್ನು ಕಂಡು, ಅವರು ಅಕ್ಷರಶಃ ನಿಬ್ಬೆಗಾಗಿದ್ದರು. ಅದೇ ಮೊದಲ ಬಾರಿ ಕಂಡಿದ್ದರಿಂದಲೋ ಏನೋ, ಕೀಟವೊಂದರ ಬೆನ್ನು ವೆಲ್ವೆಟ್ ಬಟ್ಟೆಯ ಸ್ವರೂಪ ಪಡೆದು, ಕೆಂಪು ಬಣ್ಣದಿಂದ ಹೊಳೆಯುವುದಾದರೂ ಹೇಗೆ ಎಂಬ ವಿಸ್ಮಯ ಅವರಿಗೆ! ಬಹುಷ ಕಣ್ಣಾರೆ
ಕಾಣದಿದ್ದಿದ್ದರೆ, ಅಂಹದೊಂದು ಸುಂದರ, ವರ್ಣರಂಜಿತ, ಮಿದು ದೇಹದ ಕೀಟ ಒಂದು ಇದೆ ಎಂದು ನಗರವಾಸಿಯಾದ ಅವರು ನಂಬುತ್ತಿರಲಿಲ್ಲವೇನೋ!

ನಾನೂ ಬಾಲ್ಯದಲ್ಲಿ ಇಂತಹ ವೆಲ್ವೆಟ್ ಕೀಟಗಳನ್ನು ಕಂಡು ಸಂಭ್ರಮಿಸಿದ್ದೆ; ಮೊದಲ ಮಳೆ ಬಿದ್ದಾಗ ಈ ಕೀಟಗಳು, ಕೆಂಪಗೆ ಹೊಳೆವ ಮುತ್ತುಗಳಂತೆ ನೆಲದ ಮೇಲೆ ಓಡಾಡುತ್ತಿದ್ದವು. ಈಗ ಅವು ತುಸು ಅಪರೂಪವಾಗಿವೆಯೆ? ಮನುಷ್ಯನು ಇನ್ನಿಲ್ಲದಂತೆ
ಪ್ರಕೃತಿಯ ಮೇಲೆ ನಡೆಸುತ್ತಿರುವ ಮತಿರಹಿತ ಹಸ್ತಕ್ಷೇಪದಿಂದಾಗಿ, ಇಂತಹ ಅಪರೂಪದ ಕೀಟಗಳು ಕ್ರಮೇಣ ಕಣ್ಮರೆಯಾಗು ತ್ತಿವೆಯೆ? ಕಳೆದ ಐವತ್ತು ವರ್ಷಗಳಲ್ಲಿ ಈ ಜಗತ್ತಿನ ಶೇ.80ಕ್ಕಿಂತಲೂ ಹೆಚ್ಚಿನ ಸಸ್ತನಿಗಳು ವಿನಾಶದ ಅಂಚನ್ನು ತಲುಪಿವೆ ಯಂತೆ ಅಥವಾ ನಾಮಾವಶೇಷವಾಗಿವೆಯಂತೆ.

ವೆಲ್ವೆಟ್ ಕೀಟವು ಅದೇ ರೀತಿ, ಹಿಂದಿರುಗಿ ಬರಲಾಗರ ಹಾದಿಯನ್ನು ಹಿಡಿಯುವಂತೆ ಮನುಷ್ಯ ಮಾಡಿದ್ದಾನೋ, ಹೇಗೆ? ಕೀಟ ತಜ್ಞರು ಇದಕ್ಕೆ ಉತ್ತರ ಹೇಳಿಯಾರು. ಕೆಂಪು ವೆಲ್ವೆಟ್ ಕೀಟದಂತಹ ವಿಸ್ಮಯಕಾರಿ ಜೀವಿಗಳು ಇಂದಿಗೂ ನಮ್ಮ ನಾಡಿನಲ್ಲಿ ಅಲ್ಲಲ್ಲಿ ಇರುವುದಂತೂ ನಿಜ. ನಗರವಾಸಿಗಳು ಆ ಮಟ್ಟಿಗೆ ವಂಚಿತರು; ಇಂತಹ ವಿಸ್ಮಯಗಳನ್ನು ನೋಡಲು, ಅವುಗಳ ಕಥೆ ಗಳನ್ನು ಕೇಳಲು ಹಳ್ಳಿ ಅಥವಾ ಸಣ್ಣ ಪಟ್ಟಣಗಳೇ ಪ್ರಶಸ್ತ.

ನಮ್ಮ ಹಳ್ಳಿಯ ಜನರು ಹೇಳುವ ಕೆಲವು ಕಥೆಗಳನ್ನು ಕೇಳುತ್ತಾ ಹೋದರೆ, ಸಹ್ಯಾದ್ರಿಯಲ್ಲಿ, ಬಯಲುಸೀಮೆಯಲ್ಲಿ, ಕರಾವಳಿ ಯಲ್ಲಿ, ಹಿಮಾಲಯದಲ್ಲಿ ಚಿತ್ರವಿಚಿತ್ರ ಜೀವಿಗಳು ಇವೆಯೇನೋ ಎಂಬ ಅನುಮಾನವೂ ಮೂಡಬಹುದು! ಜನಪದ ಕಥೆಗಳಲ್ಲಿ ಬರುವ ವಿಸ್ಮಯಕಾರಿ ಜೀವಿಗಳು ನಮ್ಮ ಕಾಡುಗಳಲ್ಲಿ, ಬೆಟ್ಟಗುಡ್ಡಗಳಲ್ಲಿ ಇದ್ದಾವೆಂದು ನಂಬುವ ಜನರು ಇಂದಿಗೂ ಇದ್ದಾರೆ. ಇಂತಹ ಅರ್ಧ ಸತ್ಯ, ಅರ್ಧ ಮಿಥ್ಯದ ಪ್ರಭಾವಲಯದಲ್ಲಿ ಸಿಲುಕಿ, ಪ್ರಖ್ಯಾತವಾದ ಜೀವಿಗಳಲ್ಲಿ ಯೇತಿಯೂ ಒಂದು.

ಹಿಮಾಲಯದ ಕಮರಿಗಳಲ್ಲಿ, ಟಿಬೆಟ್‌ನ ಪ್ರಸ್ಥಭೂಮಿಯಲ್ಲಿ, ಯೇತಿ ಎಂಬ ಎಂಟು ಅಡಿ ಎತ್ತರದ, ಕರಡಿಯನ್ನು ಮತ್ತು
ಮನುಷ್ಯನನ್ನು ಏಕಕಾಲದಲ್ಲಿ ಹೋಲುವ, ಅತೀಂದ್ರಿಯ ಶಕ್ತಿ ಹೊಂದಿರುವ ಜೀವಿ ಇದೆ ಎಂದು ಸ್ಥಳೀಯರು, ಕೆಲವು ಪರ್ವತಾ ರೋಹಿಗಳು ನಂಬುತ್ತಾರೆ; ಅದನ್ನು  ಪತ್ತೆಹಚ್ಚಲು ಸರಕಾರದ ಅಂಗಸಂಸ್ಥೆಗಳು ಪ್ರಯತ್ನಪಟ್ಟಿದ್ದೂ ಉಂಟು. ಆದರೆ ಯೇತಿ ಇದೆ ಎಂದು ವೈಜ್ಞಾನಿಕವಾಗಿ ಇಂದಿಗೂ ಋಜುವಾತಾಗಿಲ್ಲ. ಆದರೆ ಜನಸಾಮಾನ್ಯರಲ್ಲಿ ಅಚ್ಚರಿ ಹುಟ್ಟಿಸುವ ಹಲವು ಜೀವಿಗಳು ನಮ್ಮ ಕಾಡುಗಳಲ್ಲಿ, ಬಯಲುಸೀಮೆಯಲ್ಲಿ ಇರುವುದಂತೂ ನಿಜ.

ಸುಮಾರು ಮೂರು ದಶಕಗಳ ಹಿಂದಿನ ಮಾತು. ಮಳೆಗಾಲದ ಒಂದು ದಿನ. ಆಷಾಢ ಕಳೆದು ಶ್ರಾವಣ ಬಿದ್ದಿತ್ತೆಂದು ಕಾಣುತ್ತದೆ. ನಮ್ಮ ಹಳ್ಳಿಯ ತೋಡು, ಗುಮ್ಮಿ, ಕೊಳ, ಕೆರೆ, ಹೊಂಡ, ಗದ್ದೆ, ಉಜರು, ಬಾವಿ ಎಲ್ಲಾ ಕಡೆ ನೀರು. ನಮ್ಮ ಮನೆಯ ಎದುರಿದ್ದ ಬಗ್ಗು ಬಾವಿಯಲ್ಲಂತೂ, ನೀರು ತುಂಬಿ ಕೈಗೇ ಎಟಕುವಂತಿತ್ತು. ಬಾವಿಯ ಬಳಿ ಬಗ್ಗಿ, ಹಗ್ಗದ ಸಹಾಯವಿಲ್ಲದೇ ಕೊಡದಿಂದ ನೀರು ತುಂಬಿ ತಂದು ಕುಡಿಯಲು ಬಳಸುತ್ತಿದ್ದೆವು! ಆ ಸಮಯದಲ್ಲಿ ಊರಿಗೆ ಹೊಗಿದ್ದೆ.

ನಮ್ಮ ಮನೆಯೆದುರಿನ ಪುಟ್ಟ ಅಂಗಳದ ಮೇಲೆ ಹಾಸಿದ್ದ ಕಸ, ತರಗಲೆಗಳು ಸಣ್ಣಗೆ ಕೊಳೆಯಲು ಆರಂಭಿಸಿದ್ದವು. ದಿನದ ಅರ್ಧ ಭಾಗ ಮಳೆ; ಇನ್ನರ್ಧ ಬಾಗ ತುಸು ಹೊಳ. ಇದು ಪ್ರತಿದಿನದ ವಿದ್ಯಮಾನ. ಹೊಳವಾಗಿದ್ದ ಒಂದು ದಿನ ಮನೆ ಎದುರಿನ ಕೊಟ್ಟಿಗೆಯ ಹಿಂಭಾಗದಲ್ಲಿದ್ದ ಪುಟ್ಟ ತೋಟಕ್ಕೆ ಹೋಗಿದ್ದೆ. ಊರಿಗೆ ಬಂದಾಗಲೆಲ್ಲಾ, ಆ ತೋಟದಲ್ಲಿದ್ದ ಗಿಡ, ಮರ, ಬಳ್ಳಿಗಳನ್ನು ನೋಡುವ ಹವ್ಯಾಸ. ಅದೊಂದು ಪುಟ್ಟ ಸರಳ ತೋಟ. ಅಲ್ಲಿ ಒಂದಿಪ್ಪತ್ತು ಅಡಕೆ ಮರಗಳಿದ್ದರೂ, ಹೆಚ್ಚು ಮುತುವರ್ಜಿ ವಹಿಸಿ ಚೊಕ್ಕಟ ಮಾಡಿದ ತೋಟ ಅದಲ್ಲ.

ಅಲ್ಲಲ್ಲಿ ಹಳುಗಳು, ಹೂ ಗಿಡಗಳು, ಕಾಡುಗಿಡಗಳು, ಬಳ್ಳಿಗಳು ಬೆಳೆದಿದ್ದವು. ಬಾಳೆಗಿಡಗಳೂ  ದ್ದವು. ಒಂದೆರಡು ತಿಂಗಳುಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ, ನೆಲವೆಲ್ಲಾ ಪಿಚಿಪಿಚಿ ಎನ್ನುತ್ತಿತ್ತು. ಅಲ್ಲಲ್ಲಿ ಬಿದ್ದಿದ್ದ ಅಡಕೆ ಸೋಗೆಗಳು, ಮಳೆನೀರಿ ನಲ್ಲಿ ಬೆರೆತು ನಿಧಾನವಾಗಿ ಕೊಳೆತು ಮಣ್ಣಾಗುತ್ತಿದ್ದವು.

ಆ ಒದ್ದೆ ನೆಲದ ಮೇಲಿದ್ದ ಸೂಕ್ಷ್ಮಜೀವಿಯೊಂದು ಫಕ್ಕನೆ ಕಾಣಿಸಿತು. ತೋಟದಲ್ಲಿ ನಡೆಯುತ್ತಿದ್ದಾಗ, ನೆಲದಿಂದ ‘ಠಣ್’ ಎಂದು ಸುಮಾರು ಮೂರು ಅಡಿ ಎತ್ತರ ನೆಗೆದು, ಮತ್ತೆ ನೆಲದ ಮೇಲಿದ್ದ ಅಡಿಕೆ ಸೋಗೆಯ ಮೇಲೆ ಹೋಗಿ ಕುಳಿತಿತು, ಆ ಹುಳ. ನಾನು ಹತ್ತಿರ ಸಾಗಿದಾಗ ಮತ್ತೊಮ್ಮೆ ಮೂರು ಅಡಿ ಮೇಲಕ್ಕೆ ಚಿಮ್ಮಿ ನೆಗೆಯಿತು. ಗಮನವಿಟ್ಟು ನೋಡಿದೆ. ದಾರದ ರೀತಿಯ ಬಿಳಿ ಹುಳ; ಅಬ್ಬಬ್ಬಾ ಎಂದರೆ ಒಂದರಿಂದ ಎರಡು ಇಂಚು ಉದ್ದ ಇರಬಹುದು. ಅಡಕೆ ಹಾಳೆಯ ಮೇಲೆ ತನ್ನ ದೇಹವನ್ನು ಡೊಂಕಾಗಿ ಬಗ್ಗಿಸಿ, ತೆವಳಿಕೊಂಡು ಮುಂದಕ್ಕೆ ಚಲಿಸುತ್ತಿತ್ತು.

ಕಾಡಿನಲ್ಲಿರುವ ಇಂಬಳದ ಚಲನೆಯನ್ನು ಹೋಲುವ ನಡಿಗೆ. ಆದರೆ, ಅಪಾಯದ ಸುಳಿವು ಸಿಕ್ಕ ಕೂಡಲೆ, ನಿಂತ ಜಾಗದಿಂದಲೇ, ಸ್ಪ್ರಿಂಗಿನಂತೆ ನೇರವಾಗಿ ಮೂರು ಅಡಿ ಮೇಲಕ್ಕೆ ನೆಗೆಯುತ್ತಿತ್ತು ಆ ಬಿಳಿ ಹುಳ. ದಪ್ಪ ದಾರವನ್ನು ಹೋಲುವ ಅದರ ದೇಹದಲ್ಲಿ
ಎಷ್ಟು ಶಕ್ತಿ ಮನೆಮಾಡಿರಬಹುದು? ಮೂರು ಅಡಿ ಎತ್ತರಕ್ಕೆ ನೆಗೆಯಲು ಅದರ ಸಣಕಲು ದೇಹಕ್ಕೆ ಅದೆಷ್ಟು ಶಕ್ತಿ ಬೇಕಾದೀತು! ನಾಲ್ಕಾರು ಬಾರಿ ಅದರ ನೆಗೆತವನ್ನು ನೋಡಿ ಮುಂದೆ ಹೋದೆ. ಪುನಃ ಹಿಂತಿರುಗಿ ನೋಡಿದರೆ, ಆ ಬಿಳಿ ಹುಳ ನಾಪತ್ತೆ!

ನೆಲದ ಮೇಲೆ ಅಲ್ಲಲ್ಲಿ ಹರಡಿದ್ದ ಅಡಿಕೆ ಹಾಳೆಗಳ ಬಣ್ಣಕ್ಕೂ, ಅದರ ದೇಹದ ಬಣ್ಣಕ್ಕೂ ಹೊಂದಾಣಿಕೆಯಾಗುತ್ತಿದ್ದುದರಿಂದ,
ಮತ್ತೆ ಅದನ್ನು ಪತ್ತೆ ಮಾಡಲು ನನ್ನ ಕಣ್ಣಿಗೆ ಸಾಧ್ಯವಾಗಲೇ ಇಲ್ಲ! ಈ ಕೀಟದ ಹೆಸರು ಪತ್ತೆ ಮಾಡಲು ಅಂದು ನಾನು ನಡೆಸಿದ ಸಣ್ಣಮಟ್ಟದ ಪ್ರಯತ್ನ ವಿಫಲವಾಯಿತು. ಆಗ ಇಂಟರ್ನೆಟ್ ಇರಲಿಲ್ಲವಲ್ಲ. ಇಂದಿಗೂ ಜಗತ್ತಿನ ಅದೆಷ್ಟೋ ಕೀಟಗಳನ್ನು ಗುರುತಿಸಿ, ವೈಜ್ಞಾನಿಕವಾಗಿ ವಿಂಗಡಿಸಿ, ದಾಖಲಿಸುವ ಕೆಲಸ ಬಾಕಿ ಇದೆ. ಇದೂ ಸಹ ಅಂತಹದೇ ಒಂದು ಅಪರೂಪದ ಕೀಟ ಇರಬಹುದೆ? ನಮ್ಮ ಪುಟ್ಟ ತೋಟದಿಂದಾಚೆ, ಕಾಡಿನ ಸರಹದ್ದು ಆರಂಭವಾಗುತ್ತದೆ. ಅಲ್ಲಿಂದ ಬಂದ ನಿಗೂಢ ಜೀವಿ ಅದಿರ ಬಹುದೆ? ಒಂದಿಂಚು ಉದ್ದದ ಬಿಳಿ ಹುಳವೊಂದು ಮೂರು ಅಡಿ ಮೇಲಕ್ಕೆ ಲಂಬವಾಗಿ ನೆಗೆಯಬಲ್ಲದು ಎಂದು ಯಾರಾದರೂ ಹೇಳಿದರೆ, ತಕ್ಷಣ ನಂಬುವುದು ಕಷ್ಟ. ಆದರೆ ನಾನೇ ಇದನ್ನು ಸ್ವತಃ ನೋಡಿದ್ದು ಮಾತ್ರ ನಿಜ.

ನಮ್ಮ ಹಳ್ಳಿಯ ಅದೇ ಪುಟ್ಟ ತೋಟದಲ್ಲಿ ಹಾರುವ ಓತಿಯೂ ಇದೆ! ಒಂದು ಅಡಿಕೆ ಮರದಿಂದ ಇನ್ನೊಂದು ಅಡಿಕೆ ಮರಕ್ಕೆ ತೇಲುತ್ತಾ ಹಾರುವ ಅದರ ನೋಟ ಯಾರಿಗಾದರೂ ಅಚ್ಚರಿ ಹುಟ್ಟಿಸಬಲ್ಲದು. ಮೊದಲ ಬಾರಿ ಅದರ ಹಾರಾಟವನ್ನು ನೋಡಿದಾಗ, ಅದೊಂದು ಚಿಟ್ಟೆ ಇರಬಹುದು ಎಂದುಕೊಂಡಿದ್ದೆ! ಹತ್ತಿರ ಹೋಗಿ ಸೂಕ್ಷ್ಮವಾಗಿ ನೋಡಿದಾಗ ಗೊತ್ತಾಯಿತು, ಅದು ಓತಿಕ್ಯಾತನನ್ನು ಹೋಲುವ ಹಾರುವ ಓತಿ. ಹಾಗೆ ನೋಡಿದರೆ ಹಾರುವ ಓತಿಯ ನೋಟ ಇಂದಿಗೂ ನಮ್ಮೂರಿನಲ್ಲಿ, ಮಲೆನಾಡಿನ ಉದ್ದಕ್ಕೂ ಸಾಮಾನ್ಯ.

ತೇಜಸ್ವಿಯವರು ‘ಕರ್ವಾಲೊ’ ಕಾದಂಬರಿಯಲ್ಲಿ, ಅದರ ಹಾರುವ ಶಕ್ತಿಯನ್ನು ಒಂದು ರೂಪಕದಂತೆ ಬಳಸಿ, ನಿಗೂಢತೆಯ ಪ್ರಭಾವಳಿಯನ್ನು ತೊಡಿಸಿದ್ದರಿಂದಾಗಿ, ಅದು ಕನ್ನಡ ಸಾಹಿತ್ಯಪ್ರೇಮಿಗಳ ವಲಯದಲ್ಲಿ ಪ್ರಖ್ಯಾತ ಜೀವಿಯಾಗಿಬಿಟ್ಟಿದೆ! ತನ್ನ
ಚರ್ಮವನ್ನೇ ಅಗಲಿಸಿ, ಒಂದು ಮರದಿಂದ ಇನ್ನೊಂದು ಮರಕ್ಕೆ ಹಾರುವ ಆ ಹಾರುವ ಓತಿ ಸಹ, ನಮ್ಮ ನಾಡಿನ ವಿಸ್ಮಯ ಹುಟ್ಟಿಸುವ ಜೀವಿಗಳಲ್ಲಿ ಒಂದು. ಮಳೆಗಾಲದ ರಾತ್ರಿಯಲ್ಲಿ ನಮ್ಮ ಹಳ್ಳಿಯಲ್ಲಿ ಕಣ್ ಬಿಟ್ಟು ನೋಡಿದರೆ ಕಾಣಿಸುವ ವಿಚಿತ್ರ ಜೀವಿ ಎಂದರೆ ಮಿಣುಕುಹುಳಗಳು. ತಮ್ಮ ಬಾಲದಲ್ಲಿ ಬೆಳಕು ಬೀರುತ್ತಾ ಹಾರಾಡುವ ಮಿಣುಕು ಹುಳಗಳು, ವಿಕಾಸವಾದದ
ವಿಸ್ಮಯಕಾರಿ ಕೊಂಡಿಗಳು!

ಸ್ವಲ್ಪವೂ ಬಿಸಿಯನ್ನು ಹುಟ್ಟಿಸದೆ, ಬೆಳಕನ್ನು ಬೀರುವ ಆ ಶಕ್ತಿಯು ಆ ಪುಟಾಣಿ ಕೀಟಗಳಲ್ಲಿ ವಿಕಾಸಗೊಂಡಿದ್ದಾದರೂ ಹೇಗೆ! ನೂರಾರು ಮಿಣುಕು ಹುಳಗಳು, ಗದ್ದೆಯಂಚಿನ ಮರವೊಂದರ ಮೇಲೆ ಕುಳಿತು, ಸೀರಿಯಲ್ ಸೆಟ್‌ನ ದೀಪದಂತೆ ಬೆಳಗಿ,
ನಡೆಸುವ ‘ಮಿಣುಕುಹುಳಗಳ ಪರಿಷೆ’ಯಂತೂ ನಮ್ಮ ಹಳ್ಳಿಯ ವಿಸ್ಮಯ! ಇದೇ ರೀತಿ ನೆಲದ ಮೇಲೆ ಚಲಿಸುವ, ಬೆಳಕು ಬೀರುವ ಹುಳಗಳೂ ಇವೆ. ಆದರೇನು ಮಾಡುವುದು, ನಮ್ಮ ಕೃಷಿಕರು ಹೆಚ್ಚು ಬೆಳೆ ತೆಗೆಯಲೆಂದು ಗದ್ದೆಗೆ ಪ್ರತಿ ವರ್ಷ ಸಿಂಪಡಿಸುತ್ತಿರುವ
ಕೀಟನಾಶಕಗಳಿಂದಾಗಿ, ಮಿಣುಕು ಹುಳಗಳಂತಹ ಅದೆಷ್ಟೋ ಅಪರೂಪದ ಜೀವಿಗಳ ಸಂಖ್ಯೆ ಕಡಿಮೆಯಾಗುತ್ತಿದೆ.

ಆದರೂ, ಮಿಣುಕು ಹುಳಗಳು ಇಂದಿಗೂ ಸಾಕಷ್ಟು ಸಂಖ್ಯೆಯಲ್ಲಿ ಹಾರಾಡುತ್ತಿವೆ ಎಂಬುದೇ ಅಚ್ಚರಿಯ ವಿಷಯ. ಮೊನ್ನೆ ಮೊನ್ನೆ ಬೆಂಗಳೂರಿನಂತಹ ಮಹಾನಗರದಲ್ಲೂ ಒಂದೆರಡು ಮಿಣುಕು ಹುಳಗಳನ್ನು ಕಂಡು ನನಗಾದ ಅಚ್ಚರಿ ಅಷ್ಟಿಷ್ಟಲ್ಲ!
ನಮ್ಮ ಹಳ್ಳಿಯವರು ಮಿಣುಕುಹುಳವನ್ನು ಕಂಡು, ಅದು ಸತ್ತವರ ಪ್ರೇತಾತ್ಮ ಇರಬಹುದು ಎಂಬ ಜನಪದ ಕಥೆ ಕಟ್ಟಿದ್ದಾರೆ. ಹಿಂದಿನ ಜನಪದರು ಹಾಗೇ ತಾನೆ ಅವರ ಕಣ್ಣಿಗೆ ಕಂಡ, ಆದರೆ ಅರಿವಿಗೆ ಪೂರ್ತಿ ದಕ್ಕದ ವಿದ್ಯಮಾನಗಳನ್ನು ಚಿತ್ರವಿಚಿತ್ರ ಕಥೆಗಳ ಚೌಕಟ್ಟಿನಲ್ಲಿ ಜೋಡಿಸುವುದರಲ್ಲಿ ನಿಸ್ಸೀಮರು. ಹಳ್ಳಿಗಳಲ್ಲಿ ಪ್ರಚಲಿತವಿರುವ ಅಂತಹ ಕೆಲವು ಕಥೆಗಳು ಹುಟ್ಟಿದ್ದಾ ದರೂ ಹೇಗೆ ಎಂದು ಇಂದಿಗೂ ನನ್ನಲ್ಲೊಂದು ಕೌತುಕವಿದೆ.

ಅಂತಹ ಒಂದು ನಿಗೂಢ ಕಥೆ ಎಂದರೆ ಮಿಡಿನಾಗರದ್ದು. ಕೇವಲ ನಾಲ್ಕು ಅಥವಾ ಐದು ಇಂಚು (ಅಂಗೈಯಷ್ಟು) ಉದ್ದವಿರ ಬಹುದಾದ ಮಿಡಿನಾಗರ ಎಂಬ ಹಾವು (ಅಥವಾ ಕೀಟ?) ನೆಲದಿಂದ ನೆಗೆದು, ಮಹಿಳೆಯರ ಮುಡಿಯಲ್ಲಿರುವ ಹೂವಿನಲ್ಲಿ ಅಡಗಿ ಕುಳಿತುಕೊಳ್ಳಬಲ್ಲದಂತೆ! ತಲೆಗೆ ಮುಡಿದ ಹೂವಿನಲ್ಲಿ ಕುಳಿತು, ಮಹಿಳೆಯ ತಲೆಗೆ ಅದು ಕಚ್ಚಿದರೆ, ಆ ವ್ಯಕ್ತಿ ಕೆಲವೇ ನಿಮಿಷಗಳಲ್ಲಿ ಮರಣಹೊಂದುವರಂತೆ.

ಹಿಂದಿನ ಕಾಲದಲ್ಲಿ, ಮದುವೆಗೆ ಕುಳಿತ ಮದುಮಗಳೊಬ್ಬಳು, ಹೂವಿನಲ್ಲಿ ಅಡಗಿದ್ದ ಮಿಡಿನಾಗರ ಕಚ್ಚಿ ಆ ಕ್ಷಣದಲ್ಲೇ ಸತ್ತು ಹೋಗಿದ್ದಳಂತೆ! ಈ ಕಥೆಯ ಸತ್ಯಾಸತ್ಯತೆಯ ಕುರಿತು ಖಚಿತವಿಲ್ಲ, ಇದೊಂದು ಜನಪದ ಕಥೆಯೇ ಇರಬಹುದು. ಆದರೆ, ಒಂದು ಇಂಚು ಉದ್ದದ, ತೆಳ್ಳನೆಯ ಬಿಳಿ ಹುಳವೊಂದು ಮೂರು ಅಡಿ ನೆಗೆದದ್ದನ್ನು ನಾನೇ ಕಂಡಿದ್ದೆ; ಹಾಗಿರುವಾಗ ನಾಲ್ಕು ಇಂಚು ಉದ್ದದ ಜೀವಿಯೊಂದು ಐದು ಅಡಿ ನೆಗೆದು, ತಲೆಗೆ ಮುಡಿದ ಹೂವಿನಲ್ಲಿ ಅಡಗಿ ಕುಳಿತು ಕೂರಬಹುದು ಎಂಬ ಸಾಧ್ಯತೆಯನ್ನು ಹೇಗೆ ತಳ್ಳಿಹಾಕುವುದು. ಅಥವಾ ಅಂತಹದೊಂದು ಜೀವಿ ಹಿಂದೆ ನಮ್ಮ ಹಳ್ಳಿಗಳಲ್ಲಿ ಇದ್ದು, ಇಂದು ಕಣ್ಮರೆಯಾಗಿರಬಹುದೆ?
ಇನ್ನು ಆ ಜೀವಿ ಕಚ್ಚಿದ ತಕ್ಷಣ, ಒಂದೆರಡು ನಿಮಿಷಗಳಲ್ಲಿ ಸಾಯುವ ವಿಚಾರ ನಂಬಲು ಕಷ್ಟ ಎನಿಸಿದರೂ, ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನಲ್ಲಿರುವ ಒಂದು ನಂಬಿಕೆ ಇಲ್ಲಿ ನೆನಪಾಗುತ್ತದೆ.

ಅಲ್ಲಿನ ಬೆಟ್ಟಗುಡ್ಡಗಳಲ್ಲಿ ಇದ್ದಿರಬಹುದಾದ, ಒಂದೆರಡು ಇಂಚಿನ ಗಾತ್ರದ ಕಪ್ಪು ಬಣ್ಣದ ಜೇಡವೊಂದು ಕಚ್ಚಿದರೆ, ಕುರಿಗಳಾ ಗಲೀ, ಮನುಷ್ಯನಾಗಲೀ ಕೆಲವೇ ನಿಮಿಷಗಳಲ್ಲಿ ಸಾಯುತ್ತಾನಂತೆ. ಕಪ್ಪು ಬಣ್ಣದ ಭಯಹುಟ್ಟಿಸುವ ದೊಡ್ಡಗಾತ್ರದ ಆ ಜೇಡ ವನ್ನು ಅಲ್ಲಿನ ಕುರಿಗಾಹಿಗಳು ಅಬ್ಬ ಎಂದು ಹೆಸರಿಸಿದ್ದಾರೆ. ‘ಅಬ್ಬ ಕಚ್ಚಿದರೆ ಹೆಬ್ಬಾಗಿಲಿಗೆ ಬರುವಷ್ಟೂ ಸಮಯವಿಲ್ಲ’ ಎಂಬ ಗಾದೆಯೂ ಅಲ್ಲುಂಟು. ಆದರೆ ಅಬ್ಬ ಎಂಬ ಜೇಡವನ್ನು ನಾನಂತೂ ಕಂಡಿಲ್ಲ, ಕನ್ನಡದ ವಿಜ್ಞಾನ ಪುಸ್ತಕಗಳೂ ದಾಖಲಿಸಿಲ್ಲ.

ವಿದೇಶಗಳಲ್ಲಿ ಮನುಷ್ಯನನ್ನು ಸಾಯಿಸಬಲ್ಲ ಜೇಡಗಳಿವೆ; ಇದೂ ಅಂತಹದ್ದೊಂದಿರಬಹುದೆ? ಅಬ್ಬ ಎಂಬ ಅಪಾಯಕಾರಿ
ಜೇಡ ಇದೆ ಎಂಬ ನಂಬಿಕೆ ನಮ್ಮ ಬಯಲುಸೀಮೆಯಲ್ಲಿರುವುದಂತೂ ನಿಜ. ಇದಕ್ಕೂ ವಿಸ್ಮಯಕಾರಿ ಕಥೆಯೊಂದು ನಮ್ಮ ಕರಾವಳಿಯ ಕಾಡಂಚಿನ ಹಳ್ಳಿಗಳಲ್ಲಿದೆ. ಜನರನ್ನು ಸದಾ ಭಯದಲ್ಲಿಡುವ ಹಾವುಗಳ ಕುರಿತ ಈ ಕಥೆಯ ವೈಜ್ಞಾನಿಕ ನಿಖರತೆಯ ಕುರಿತು ನಾನು ಖಚಿತಪಡಿಸಲಾರೆ.

ಅದೊಂದು ಅಪರೂಪದ ಹೆಬ್ಬಾವಿನ ಪ್ರಭೇದವಿರಬಹುದು. ನಮ್ಮ ಹಳ್ಳಿಯ ಜನರು, ಪ್ರತಿನಿತ್ಯ ಹಕ್ಕಲು, ಕಾಡಿಗೆ ಸೊಪ್ಪು, ಸೌದೆ
ತರಲು ಹೋದಾಗ, ಕಾಡಿನಲ್ಲಿ ಅತ್ತಿತ್ತ ಚದುರಿದವರನ್ನು ‘ಕೂ’ ಎಂದು ಕೂಗಿ ಕರೆಯುವುದುಂಟು. ‘ಕೂ’ ಎಂಬ ಮಾರುತ್ತರ ಬಂದರೆ, ತಾವು ಅಲ್ಲೇ ಇದ್ದೇವೆ ಎಂಬ ಸೂಚನೆ. ಆದರೆ ದಟ್ಟ ಕಾಡು ಮತ್ತು ಬರೆಗಳ ಹತ್ತಿರ ಈ ರೀತಿ ‘ಕೂ’ ಹಾಕಬಾರದು ಎಂಬ ನಂಬಿಕೆ ಇದೆ. ಏಕೆಂದರೆ, ಮನುಷ್ಯನ ಕೂಗಿಗೆ ‘ಕೂ’ ಎಂದು ಮಾರುತ್ತರ ನೀಡಿ, ಹತ್ತರಕ್ಕೆ ಕರೆಯಿಸಿಕೊಳ್ಳುವ ಹೆಬ್ಬಾವೊಂದು, ಹತ್ತಿರ ಬಂದವರನ್ನು ನುಂಗಿ ಸ್ವಾಹಾ ಮಾಡುತ್ತದಂತೆ.

ನಮ್ಮ ಹಳ್ಳಿಯ ಅಂಚಿನಲ್ಲಿ ಕೆಲವೇ ದಶಕಗಳ ಹಿಂದೆ ಇದ್ದ ದಟ್ಟ ಕಾಡು ಕಣ್ಮರೆಯಾಗಿರುವ ಇಂದಿನ ದಿನಗಳಲ್ಲಿ, ಈ ಕಥೆಯುವ
ಮಾಂತ್ರಿಕಲೋಕದ ಕಟ್ಟುಕಥೆಯಂತೆ ಕಾಣಬಹುದು. ಆದರೆ ‘ಕೂ’ ಎಂದು ಸದ್ದು ಮಾಡುವ, ಕಾಡುತುಂಬಿದ ಕಣಿವೆಗಳಲ್ಲಿ ಇದ್ದಿರಬಹುದಾದ, ಇಂದು ನಾಮಾವಶೇಷವಾಗಿರುವ ದೊಡ್ಡ ಗಾತ್ರದ ಹಾವಿನ ನೆನಪುಗಳೇ ನಮ್ಮ ಜನಪದರಲ್ಲಿ ಇಂತಹ ದೊಂದು ಕಥೆಗೆ ಸ್ಫೂರ್ತಿ ನೀಡಿರಬಾರದೇಕೆ ಎಂಬ ಕುತೂಹಲ ನನ್ನಲ್ಲಿಂದಿಗೂ ಇದೆ!