Wednesday, 30th October 2024

ಎನ್’ಡಿಎ ಸರಕಾರಕ್ಕೆ 7 ವರ್ಷ: ರಾಜ್ಯದಲ್ಲಿ ’ಸೇವಾ ಹೀ ಸಂಘಟನ್‌” ಕಾರ್ಯಕ್ರಮ

ದಕ್ಷಿಣ ಕನ್ನಡ: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್’ಡಿಎ ಸರಕಾರ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದು ಬರುವ ಇದೇ ತಿಂಗಳ ಮೇ 30 ಕ್ಕೆ 7 ವರ್ಷಗಳಾಗುತ್ತಿದ್ದು, ಕರೋನಾ ಕಾರಣಕ್ಕಾಗಿ ಈ ಬಾರಿ ಸಂಭ್ರಮಾಚರಣೆ ಕೈಬಿಡಲು ಬಿಜೆಪಿ ಪಕ್ಷ ತೀರ್ಮಾ ನಿಸಿದೆ.

ಬದಲು ಈ ಬಾರಿ ಸೇವಾ ಹೀ ಸಂಘಟನ್ ಎನ್ನುವ ರೀತಿಯಲ್ಲಿ ವರ್ಷಾಚರಣೆ ನಡೆಸಲು ಎಲ್ಲಾ ಘಟಕಗಳಿಗೂ ಕೇಂದ್ರ ಬಿಜೆಪಿ ನಾಯಕರು ಸೂಚನೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕರೊನಾ ಸೋಂಕಿತರಿಗೆ ಹಾಗು ಕರೋನಾ ವಾರಿಯರ್ಸ್ ಗಳಿಗೆ ವಿವಿಧ ರೀತಿಯ ಕಿಟ್ ವಿತರಣೆ ಸೇರಿದಂತೆ ಗಿಡ ನೆಡುವ, ರಕ್ತದಾನ ಶಿಬಿರ ಮೊದಲಾದ ಕಾರ್ಯ ಕ್ರಮಗಳನ್ನು ಆಯೋಜಿಸಿದೆ.

ಏಳು ವರ್ಷಗಳು ತುಂಬುತ್ತಿರುವ ನಡುವೆ ಕರೋನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣಕ್ಕೆ ಕರೋನಾ ವಾರಿಯರ್ಸ್ ಗಳಾದ ವೈದ್ಯರು, ದಾದಿಯರು, ಪೌರಕಾರ್ಮಿಕರನ್ನು ಗೌರವಿಸುವ ಕಾರ್ಯಕ್ರಮದ ಜೊತೆಗೆ ಅಗತ್ಯವಿದ್ದವರಿಗೆ ಆಹಾರ ಕಿಟ್ ವಿತರಿಸುವ ಕಾರ್ಯವೂ ನಡೆಯಲಿದೆ. ಬಿಜೆಪಿಯ ಎಸ್.ಸಿ,ಎಸ್.ಟಿ ಮೋರ್ಚಾ, ಒಬಿಸಿ ಮೋರ್ಚಾ, ಯುವಮೋರ್ಚಾ,ಮಹಿಳಾ ಮೋರ್ಚಾ .ಮತ್ತು ರೈತ ಮೋರ್ಚಗಳ ಮೂಲಕವೂ ಸೇವಾ ಹಿ ಸಂಘಟನ್ ಕಾರ್ಯಕ್ರಮಗಳು ನಡೆಯಲಿದೆ.

ಮೇ 28 ರಿಂದ ಮೇ 31 ರ ವರೆಗೆ ಈ ಕಾರ್ಯಕ್ರಮಗಳು ರಾಜ್ಯದೆಲ್ಲೆಡೆ ನಡೆಯಲಿದ್ದು, ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಿ ಕೊಳ್ಳಲಾಗಿದೆ. ಬಿಜೆಪಿ ಪಕ್ಷದ ವತಿಯಿಂದ ಪ್ರತೀ ಬೂತ್ ಮಟ್ಟದಲ್ಲಿ ಈ ಕಾರ್ಯಕ್ರಮಗಳು ನಡೆಯಲಿದ್ದು, ಫಲಾನುಭವಿಗಳನ್ನು ಗುರುತಿಸುವ ಕೆಲಸವೂ ಆಯಾ ಬೂತ್ ಮಟ್ಟದಿಂದಲೇ ನಡೆಯಲಿದೆ. ಅದೇ ರೀತಿ ಮೋರ್ಚಾಗಳ ವತಿಯಿಂದ ನಡೆಯುವ ಕಾರ್ಯಕ್ರಮಗಳು ಮಂಡಲ ಮಟ್ಟದಲ್ಲಿ ನಡೆಯಲಿದೆ.