ಕಾಬುಲ್: ಅಫ್ಘಾನಿಸ್ತಾನದ ಐದು ಪ್ರಾಂತ್ಯಗಳಲ್ಲಿ ವಿವಿಧ ರೀತಿಯ ಹಿಂಸಾ ತ್ಮಕ ದಾಳಿಗಳು ನಡೆದಿದ್ದು 20ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟು, 34 ಮಂದಿ ಗಾಯಗೊಂಡಿದ್ದಾರೆ.
ನಂಗರ್ಹಾರ್ ಪ್ರಾಂತ್ಯದ ಶಿರ್ಜಾದ್ ಜಿಲ್ಲೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ನಾಗರಿಕರು ಮೃತಪಟ್ಟು, ಒಬ್ಬರು ಗಾಯಗೊಂಡಿದ್ದಾರೆ. ಈ ನಡುವೆ ಕಪಿಸಾದಲ್ಲಿ ಮನೆಯೊಂದರಲ್ಲಿ ವಿವಾಹ ಸಮಾರಂಭ ನಡೆಯುತ್ತಿದ್ದ ವೇಳೆ ಶೆಲ್ ದಾಳಿ ನಡೆಸಲಾಗಿದೆ. ಕನಿಷ್ಠ 10 ಜನರು ಮೃತಪಟ್ಟು, 15 ಮಂದಿ ಗಾಯಗೊಂಡಿದ್ದಾರೆ.
ಪರ್ವಾನ್ ಪ್ರಾಂತ್ಯದ ವಿಶ್ವವಿದ್ಯಾಲಯವೊಂದರ ಉಪನ್ಯಾಸಕರು ಮತ್ತು ನೌಕರರನ್ನು ಕರೆದೊಯ್ಯುವ ಬಸ್ ಅನ್ನು ಗುರಿ ಯಾಗಿಸಿಕೊಂಡು ನಡೆಸಿದ ಐಇಡಿ ಸ್ಫೋಟದಲ್ಲಿ ವಿಶ್ವವಿದ್ಯಾಲಯದ ಅಧ್ಯಾಪಕ -ಉಪನ್ಯಾಸಕ ಮೈವಾಂಡ್ ಫಾರೂಕ್ ನಿಜ್ರಾಬಿ, ಮೂವರು ಸಹೋದ್ಯೋಗಿಗಳು ಮೃತಪಟ್ಟು, 17 ಜನರು ಗಾಯಗೊಂಡಿದ್ದರು.
ಮೂಲಗಳ ಪ್ರಕಾರ, ಹೆಲ್ಮಂಡ್, ಹೆರಾತ್, ಬಡ್ಗಿಸ್ ಮತ್ತು ಪಕ್ತಿಯಾ ಪ್ರಾಂತ್ಯ ಗಳಲ್ಲಿ ನಡೆದ ಘರ್ಷಣೆಯಲ್ಲಿ 12 ಭದ್ರತಾ ಪಡೆ ಸದಸ್ಯರು ಮೃತಪಟ್ಟು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಯುಎಸ್ ಅಧ್ಯಕ್ಷ ಜೋ ಬಿಡನ್ ಕಳೆದ ತಿಂಗಳು ಸೆಪ್ಟೆಂಬರ್ 11 ರೊಳಗೆ ಎಲ್ಲಾ ಸೈನಿಕರನ್ನು ಅಫ್ಘಾನಿಸ್ತಾನದಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ್ದರು.