Thursday, 19th September 2024

ಅನ್ಯ ದೇಶಗಳ ನೆರವು ಪ್ರಮಾಣಕ್ಕಿಂತ ಮನೋಭಾವ ಮುಖ್ಯ

ಸಂಕಷ್ಟಕ್ಕೆ ಒಳಗಾಗಿದ್ದ ಕೆಲವು ದೇಶಗಳಿಗೆ ಭಾರತ ಲಸಿಕೆ ಒದಗಿಸುವ ಮೂಲಕ ಸೇವಾ ಮನೋಭಾವ ಪ್ರದರ್ಶಿಸಿತ್ತು. ಇತ್ತೀಚೆಗೆ ಕೆಲವು ದೇಶಗಳು ಭಾರತಕ್ಕೂ ನೆರವು ನೀಡುವ ಮೂಲಕ ಬೆಂಬಲಕ್ಕೆ ನಿಂತಿವೆ.

ಚಿಕ್ಕ ದೇಶ – ದೊಡ್ಡ ದೇಶ, ಶ್ರೀಮಂತರಾಷ್ಟ್ರ – ಬಡರಾಷ್ಟ್ರ ಎಂಬ ತಾರತಮ್ಯವಿಲ್ಲದ ಅವುಗಳ ಮಾನವೀಯತೆಯೇ ಇದೀಗ ಮುಖ್ಯವಾಗಿದೆ. ಇದೀಗ ಎದುರಾಗಿರುವ ಕೋವಿಡ್ ಕರಾಳ ದಿನಗಳಲ್ಲಿ ಪ್ರತಿಯೊಂದು ದೇಶಗಳ ಒಗ್ಗೂಡುವಿಕೆ ಹಾಗೂ ನೆರವು ಅಗತ್ಯ. ಇಂಥ ಸನ್ನಿವೇಶದಲ್ಲಿ ಪೂರ್ವ ಆಫ್ರಿಕಾದ ಪುಟ್ಟ ದೇಶ ಕಿನ್ಯಾ ತನ್ನ ಸೇವಾ ಮನೋಭಾವದ ಮಹಾತ್ಕಾರ್ಯದಿಂದ ಮೆಚ್ಚುಗೆಗೆ ಕಾರಣವಾಗಿದೆ. ಪ್ರಸ್ತುತದ ಕೋವಿಡ್ ಸಂಕಷ್ಟದಲ್ಲಿ ಭಾರತೀಯರು ಹಾಗೂ ಭಾರತದೊಂದಿಗೆ ಒಗ್ಗಟ್ಟಿನಿಂದ
ಸಹಕಾರ ನೀಡಲು ಕೀನ್ಯಾ ಸರಕಾರ ಸಿದ್ಧವಿರುವುದಾಗಿ ಆಫ್ರಿಕನ್ ಹೈ ಕಮಿಷನರ್ ವಿಲ್ಲಿಬೆಟ್ ಘೋಷಿಸಿದ್ದಾರೆ.

ಇವರಿಂದ ಭಾರತ ಬೆಂಬಲ ಪಡೆಯುವುದೋ, ಇಲ್ಲವೋ ಎಂಬುದು ಮುಖ್ಯವಲ್ಲ. ಆದರೆ ಪುಟ್ಟದೇಶವೊಂದು ಭಾರತಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿರುವುದು ಮಾನವೀಯತೆಗೆ ದೊರೆತ ಗೆಲುವು. ಈ ಘೋಷಣೆ ಜತೆಗೆ ಸ್ಥಳೀಯವಾಗಿ ಬೆಳೆದ 12 ಟನ್ ಆಹಾರ ಸಾಮಗ್ರಿಗಳನ್ನು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಗೆ ಕಳುಹಿಸುವ ಮೂಲಕ ಭಾರತದೊಂದಿಗೆ ಕೈಜೋಡಿಸಿದೆ. ಕೆಲವು ರಾಷ್ಟ್ರಗಳು ಇದೇ ರೀತಿಯಲ್ಲಿ ಭಾರತದೊಂದಿಗೆ  ಸಹಕಾರ ನೀಡುತ್ತಿವೆ. ಈ ರೀತಿ ಅನ್ಯದೇಶಗಳಿಂದ ಸಣ್ಣಪುಟ್ಟ ಸಹಾಯ
ಪಡೆಯುವಷ್ಟು ಭಾರತ ಹೀನಾಯ ಸ್ಥಿತಿಗೆ ತಲುಪಿಲ್ಲದಿರಬಹುದು.

ಆದರೆ ಮಾನವೀಯತೆಯಿಂದ ತಮ್ಮ ದೇಶದಲ್ಲಿ ಬೆಳೆದ ಉತ್ಪನ್ನಗಳನ್ನು, ಔಷಧಗಳನ್ನು, ಆಕ್ಸಿಜನ್ ಟ್ಯಾಂಕರ್‌ಗಳನ್ನು ಮಾನವೀಯ ನೆಲೆಯಲ್ಲಿ ಕಳುಹಿಸಿಕೊಡುತ್ತಿರುವಾಗ ಈ ದೇಶಗಳ ಸೇವಾ ಮನೋಭಾವನೆಗೆ ಗೌರವ ಸಲ್ಲಿಸಬೇಕಿದೆ.

Leave a Reply

Your email address will not be published. Required fields are marked *