ಜಾನ್ಸಿ
ನೀ ಕುಳ್ಳನಾ, ನಾ ಎತ್ತರವಾ? ಈ ಪ್ರೀತಿಯ ಹುಚ್ಚುಹೊಳೆಯಲ್ಲಿ ಅದಕ್ಕೆಲ್ಲಿ ತಾಣ, ಸಮಯ?
ಮುದ್ದಿನ ಕುಳ್ಳ, ನನಗೆ ಯಾವತ್ತೂ ಒಂದು ನಮೂನೆಯ ಜಂಭವಿತ್ತು, ನೀನು ನನಗಿಂತ ಕುಳ್ಳನಾಗಿ ಕಾಣುತ್ತಿದ್ದದ್ದಕ್ಕೆ.
ನಿನ್ನಲ್ಲಿರುವ ಅನಂತ ಪ್ರೀತಿಯ ಮುಂದೆ, ಬೆಟ್ಟದಷ್ಟು ಸಹನೆಯ ಮುಂದೆ ನಾನ್ಯಾವತ್ತೂ ಕುಳ್ಳಿಯೇ ಆಗಿದ್ದೆ. ನಿನ್ನ ದಿವ್ಯವಾದ ವ್ಯಕ್ತಿತ್ವವನ್ನು ಸರಿಗಟ್ಟುವುದಕ್ಕೆ ಈ ಜನ್ಮ ಅಷ್ಟೇ ಯಾಕೆ ಮುಂದಿನ ಆರು ಜನ್ಮ ಹುಟ್ಟಿ ಬಂದರೂ ನನಗೆ ಸಾಧ್ಯವಿಲ್ಲ. ಹೀಗಾಗಿ ಯೇ ಏನೋ ಗುಣದಲ್ಲಿ ಅಲ್ಲದಿದ್ದರೇನಂತೆ, ಸಹನೆಯಲ್ಲಿ ಅಲ್ಲದಿದ್ದರೇನಂತೆ ಭೌತಿಕ ಎತ್ತರದ ದರೂ ನಿನಗಿಂತ ಒಂದಿಂಚು ಎತ್ತರ ಎನ್ನುವ ಹಮ್ಮಿತ್ತು.
ಅದೆಷ್ಟು ಬಗೆಯಲ್ಲಿ ಆಡಿಕೊಂಡಿಲ್ಲ ಮಾರಾಯ ನಿನ್ನ. ಕುಳ್ಳಗಿರುವವರ ಬಗ್ಗೆ ಅದೇನೇ ಮೀಮ್ ಕಣ್ಣಿಗೆ ಬಿದ್ದರೂ ಮೊದಲು ನಿನಗೆ ಒಗಾಯಿಸಿ ಛೇಡಿಸುತ್ತಿದ್ದೆ. ನನ್ನ ಎತ್ತರದ ಬಗ್ಗೆ ಏನೆ ಸಮರ್ಥನೆಗಳನ್ನು ಕೊಟ್ಟುಕೊಳ್ಳುತ್ತಿದೆ. ಕೆಲವು ಸಲ ಇದೇ ಚರ್ಚೆಯಲ್ಲಿ ಇಡೀ ದಿನ ಕಳೆಯುತ್ತಿದ್ದೆ. ನಿನ್ನ ಬದಲಿಗೆ ಎಂಥಹ ಸಹನಾ ಮೂರ್ತಿ ನನ್ನೆದುರಿಗಿದ್ದಿದ್ದರೂ ರೇಗಿಯೇ ತೀರ ಬೇಕಿತ್ತು. ಅಂತಹ ರಾಕ್ಷಸ ಉಪಟಳ ನನ್ನದು. ನಾನು ಕೆನ್ನೆ ಗಿಂಡಿ ಕುಳ್ಳನ್ನ ತಂದು ಎಂದು ರೇಗಿಸುವಾಗಲೆಲ್ಲ ಒಂದಿನಿತು
ಬೇಸರವಿಲ್ಲದೇ ಮಗುವನ್ನೂ ಮೀರಿಸುವ ಮುಗ್ಧತೆಯಲ್ಲಿ ‘ಹೋಗಲೋ… ನಾನೇ ನಿನಗಿಂತ ಎತ್ತರ’ ಎನ್ನುತ್ತಾ ನೀನು
ನಗುತ್ತಿದ್ದರೆ ತಡೆಯಲಾಗದ ಹುಚ್ಚು ಸಂತೋಷ.
ಕೆಲವೊಮ್ಮೆ ಈ ಪಾಪಚ್ಚಿಯನ್ನು ಇಷ್ಟ್ಯಾಕೆ ಗೋಳೋಯ್ದುಕೊಳ್ಳುತ್ತೇನೋ ಎಂದು ಹಲುಬಿದ್ದಿದೆ. ಆದರೆ ನಿನ್ನ ರೇಗಿಸುವಲ್ಲಿ, ರೇಗಿಸಿ ಜೀವ ತಿನ್ನುವುದರಲ್ಲಿ ಎಂಥದ್ದೇ ಸುಖವಿದೆ ಎಂದು ಅರಿತಿದ್ದೇನೆ. ಹೀಗಾಗಿ ರೇಗಿಸುತ್ತಲೇ ಇರುತ್ತೇನೆ. ಆದರೆ ಸತ್ಯ ಗೊತ್ತಾ! ನನಗಿಂತ ನೀನೇ ಎತ್ತರ. ವ್ಯಕ್ತಿತ್ವದಲ್ಲಿ ಮಾತ್ರವಲ್ಲ. ದೈಹಿಕವಾಗಿಯೂ!
ಅದೊಂದು ದಿನ ನಮ್ಮ ಸಡಗರ ಕಂಡು ನಸು ನಾಚುತ್ತಾ ನಿಂತ ಕನ್ನಡಿ, ಏಕಕಾಲಕ್ಕೆ ಇಬ್ಬರ ಬಿಂಬವನ್ನೂ ಹಿಡಿದಪ್ಪಿ ನಿಂತಾಗ ನನಗೆ ಮೊದಲ ಬಾರಿ ಗೊತ್ತಾಯಿತು. ಪ್ರೇಮದ ಉನ್ಮಾದದ ಆ ಪ್ರವಾಹದಲ್ಲೂ ನನಗೆ ಭ್ರಮಾನಿರಸನವಾಗಿತ್ತು! ಅರೇ.. ನಿನ್ನನ್ನು ಯಾವುದರಲ್ಲೂ ಕಡಿಮೆಗೊಳಿಸಲಾಗದೇ? ಎಂಬ ಅಸಹಾಯಕತೆ ಕಾಡಿತ್ತು. ಎಲ್ಲದರಲ್ಲೂ ನನಗಿಂತ ಎತ್ತರದ ನಿಂತು ನನ್ನಲ್ಲಿ ವಿಚಿತ್ರ ಅಸೂಹೆಯಾಗುತ್ತಿದ್ದಾಗ ನಿನ್ನನ್ನು ಕುಳ್ಳ ಎಂದು ಛೇಡಿಸಿ ಸಮಾಧಾನಗೊಳ್ಳುತ್ತಿದ್ದೆ.
ಅಂತಹ ಒಂದು ಸಮಾಧಾನ ಕನ್ನಡಿಯ ಮುಂದೆ ಚೂರಾದಾಗ ಮೊದಲ ಬಾರಿ ನಿನ್ನ ಮೇಲೆ ಕೋಪಗೊಂಡಿದ್ದೆ. ಯಾವತ್ತೂ ನನ್ನ ಕುಬ್ಜವಾಗಿಸುವ ನಿನ್ನ ಹುನ್ನಾರದ ಬಗ್ಗೆ ರೇಗಿದ್ದೆ. ಸತ್ಯ ಕಣ್ಣಿಗೆ ಕಟ್ಟುವಂತಿದ್ದರೂ ಒಪ್ಪುವ ಮನಸೇ ಇರಲಿಲ್ಲ. ನನಗೆ ಗೊತ್ತು, ಆ ದಿನ ಕನ್ನಡಿಯ ಬಿಂಬದತ್ತ ನಿನ್ನ ಗಮನ ಸೆಳೆದಿದ್ದರೆ ನೀನು ಅದೆಷ್ಟು ಸಂಭ್ರಮಿಸುತ್ತಿದ್ದೆ ಎನ್ನುವುದು. ನನ್ನ ತಲೆಗೆ ಮೊಟಕಿ, ಗೊತ್ತಾಯ್ತೇನೇ ಕುಳ್ಳಿ, ನಾನೇ ಎತ್ತರ ಎಂದು ಬೀಗುತ್ತಿದ್ದೆ.
ಆಗ ನಿನ್ನ ಪುರುಷಾಹಂಕಾರ ತೃಪ್ತಗೊಳ್ಳುತ್ತಿತ್ತಾ? ಗೊತ್ತಿಲ್ಲ. ನಾನು ಹೇಳಲೇ ಇಲ್ಲ. ಹೀಗಾಗಿಯೇ ನೀನು ನನಗಿಂತ ಎತ್ತರವಾ ಗಿದ್ದರೂ ಕುಳ್ಳನೇ. ಜಗತ್ತಿನ ಪಾಲಿಗಲ್ಲದಿದ್ದರೂ ನನ್ನ ಪಾಲಿಗೆ ನೀನು ಕುಳ್ಳನೇ. ಇದು ನಿನಗೂ ಗೊತ್ತಿಲ್ಲದೇನಲ್ಲ. ಯಾರಿಗೆ ಗೊತ್ತು, ಅಂದು ನಾನು ಕಣ್ತುಂಬಿಕೊಂಡ ಬಿಂಬವನ್ನು ನೀನೂ ನೋಡಿರಲಿಕ್ಕಿಲ್ಲ ಎನ್ನುವುದು? ನೋಡಿ ಗೊತ್ತಿದ್ದರೂ ಸುಳ್ಳು ಸುಳ್ಳೇ ನನ್ನಿಂದ ಕುಳ್ಳ ಎನ್ನಿಸಿಕೊಳ್ಳುವ ಮೋದದಲ್ಲಿ ಮುಳುಗಿ ಹೋಗುವುದೇ ನಿನಗೆ ಸುಖ ಎನ್ನಿಸಿದರೆ? ಇದೇ ಹೌದಾದರೆ ನಿನ್ನ ಒಳ್ಳೆಯತನದ ಮುಂದೆ ಮತ್ತೂ ಸೋಲುತ್ತಲೇ ಇರುತ್ತೇನಲ್ಲ? ಈ ಸೋಲುವಿಕೆಯೂ ನನಗೆ ಸಂತೋಷ ಕೊಡುತ್ತದೆಂದಾರೆ ಸೋಲುವುದೇ ಪ್ರೀತಿಯಾ? ಪ್ರೀತಿಗಾಗಿ ಸೋಲುತ್ತಲೇ ಇರಬೇಕು ಎನ್ನುವುದೇ ಪ್ರೇಮದ ಮೊದಲ ನಿಯಮವಾ? ಹಾಗಿದ್ದರೆ ನಾನು ನಿನ್ನ ಪ್ರೀತಿಗೆ ಸೋತಿದ್ದೇನೆ ಕುಳ್ಳ. ಮತ್ತು ಯಾವತ್ತೂ ಸೋಲುತ್ತಲೇ ಇರುತ್ತೇನೆ.
ಇಂತಿ
ನಿನ್ನ ಕುಳ್ಳಿ