Sunday, 15th December 2024

ಖಾಲಿ ಕನಸುಗಳು

ಲಕ್ಷ್ಮೀಕಾಂತ್ ಎಲ್.ವಿ

ಗೆಳತಿ, ಕಾದಿಹೆ ನಿನಗಾಗಿ, ನೀ ಬಂದು ನುಡಿಯುವ ಆ ಒಂದು ಸಿಹಿ ಮಾತಿಗಾಗಿ, ನೀಡುವ ಒಂದು ಸಿಹಿ ಮುತ್ತಿಗಾಗಿ.

ಕಡಲ ತೀರದಲ್ಲಿ ನೀನಿಟ್ಟ ಹೆಜ್ಜೆ ಗುರುತು ಅಳಿಸಿ ಹೋಗಿದೆ. ಆದರೂ ನೆನಪು ಮಾತ್ರ ಇನ್ನೂ ಮಾಸಿಲ್ಲ. ಜಗದ ನಾಟಕದಲ್ಲಿ ನಾವಿಬ್ಬರೂ ಪಾತ್ರಧಾರಿಗಳೇ, ಆದರೂ ನಿನ್ನ ಪಾತ್ರದ ಅವಧಿ ಮುಕ್ತಾಯವಾದದ್ದು ನನ್ನರಿವಿಗೆ ಬಾರಲೇ ಇಲ್ಲ. ಒಮ್ಮೊಮ್ಮೆ ನೀ ಬಿಟ್ಟು ಹೋದ ನೆನಪಿನ ಹೆಜ್ಜೆಗುರುತನ್ನು ಕೆದಕಿದರೆ ಅಲ್ಲಿ ಸಿಗುವುದು ಬರೀ ಖಾಲಿ ಖಾಲಿ ಕನಸುಗಳು.

ಮುಂಗಾರಲ್ಲಿ ಸುರಿವ ಮಳೆಯಂತೆ ಸುಮ್ಮನೆ ಸುರಿದ ನೆನಪುಗಳು ಇಂದೇಕೋ ಬಿಡದ ಸೋನೆಯಂತೆ ಕಾಡುತ್ತಿದೆ ಗೆಳತಿ. ನನ್ನದೆಯ ಕಾರ್ಮೋಡ ಕರಗಿ ಮುತ್ತಿನ ಹನಿಗಳಾಗಿ ಧುಮ್ಮಿಕ್ಕುವ ಮುನ್ನವೇ ಬಾಳಲ್ಲಿ ಪ್ರೇಮದ ಹೂ ಬಾಡಿದ್ದು ತಿಳಿಯಲಿಲ್ಲ. ಜಗದ ನೋವಿಗೆ ಸ್ಪಂದಿಸುವವನು ಆ ಒಂದು ಕ್ಷಣ ನನಗೇನಾಗಿತ್ತು? ಒಮ್ಮೆಲೆ ಬರಸಿಡಿಲು ಬಡಿದಂತಾಗಿತ್ತು. ಜೀವದ ಮಿಡಿತ ವಾಗಿದ್ದ ಹೃದಯದ ಬಡಿತ ನಿಂತಿದೆ ಎಂಬ ಅರಿವೇ ಆಗಲಿಲ್ಲ. ಬಹುಶಃ ಜೀವನವೆಂಬುದೇ ಹೀಗೆ; ನಿನ್ನೆ ಹುಟ್ಟಿ ಭೂಮಿಯ ವಾಸ್ತವ್ಯ ಪಡೆದು ಇಂದು ಸಿಕ್ಕಂತಹ ಸುಖವನ್ನು ಅನುಭವಿಸಿ ನಾಳೆ ಮತ್ತೆ ಮಸಣಕೆ ಪಯಣ ಸಾಗುತ್ತದೆ.

ನೆನಪಾಗುತಿವೆ ಗೆಳತಿ ಆ ದಿನಗಳು ನಾನು ನಿನ್ನೊಡನೆ ಕಳೆದ ಆ ಕ್ಷಣಗಳು ಜೊತೆಯಲ್ಲಿ ಕಂಡ ಸವಿಗನಸುಗಳು ಇದೀಗ ನನಸಾ ಗದೆ ಹೋದ ಬರಿ ನೆನಪುಗಳು ಅಷ್ಟೆ. ಕಾಣದ ಕಡಲಿನ ಕೊನೆ ಯನ್ನು ಅರಸಿ ಹೊರಟಿದ್ದೇನೆ. ದಿಗಂತದಾಚೆಗಿನ ದಾರಿ ಹುಡುಕುತ್ತಾ ಹೊರಟಿರುವೆ. ಇಲ್ಲಿ ಕಾಣುವ ಕವಲುಗಳೆಷ್ಟೋ; ಸಿಗುವ ಸುಳಿವುಗಳೆಷ್ಟೋ; ಒಂದೂ ಅರಿಯದೆ ಸಾಗುತ್ತಿರುವೆ.

ಮರೆಯಾದ ಹೃದಯದ ಹೂವನ್ನು ಮತ್ತೆ ಮುಂದಿನ ಜನ್ಮದಲ್ಲಿ ಪಡೆಯುವಾಸೆ. ಆದರೆ, ಯಾವ ಕವಲುಗಳಾಚೆ ಯಾವ ಕಹಿನೆರಳು ಕುಳಿತಿದೆಯೋ, ಯಾವ ಸುಳಿವುಗಳಾಚೆ ಅದ್ಯಾವ ಸಿಹಿಸ್ವಪ್ನದ ಸುರಿಮಳೆಯಿದೆಯೋ; ದಿಗಂತ ದಾಚೆಗಿನ ಮಧುರ ಮೌನಕ್ಕೆ ಶರಣಾಗಲು ಖಾಲಿ ಕನಸಿನ ಜೋಳಿಗೆಯನ್ನು ಹಿಡಿದು ಹೊರಟಿರುವೆ. ಕವಲಲ್ಲಿ ಕಣ್ತಪ್ಪಿ ಒಮ್ಮೊಮ್ಮೆ ಸುಳಿವಲ್ಲಿ ಸೆರೆಸಿಕ್ಕಿ ನಿನ್ನ ಗೆಲುವಿನ ನಗೆಯಿಲ್ಲದೆ ಸೋಲುತ್ತಿರುವೆ.

ಬದುಕಲ್ಲಿ ಕವಿದ ಕಹಿನೆರಳ ಕವಲುಗಳ ಕಳೆದು ಸಿಹಿಸ್ವಪ್ನದ ಸುಳಿವುಗಳನ್ನೆಲ್ಲಾ ಸರಿಸಿ ಮೌನವೇ ಮನೆ ಮಾಡಿದ ದಾರಿಯಲ್ಲಿ ಒಬ್ಬೊಂಟಿಗನಾಗಿ ನಿಂತಿರುವೆ. ಪೂರ್ಣ ವಿರಾಮವೊಂದು ಮುಕ್ತಾಯಕ್ಕೆ ಕಾದಿರುವಂತೆ ನನ್ನ ಬದುಕಿನ ಕಡಲು ಮತ್ತದೇ ಅಲೆಗೆ ಕಾಯುತ್ತಿದೆ. ಜಾತಕ ಪಕ್ಷಿಯಂತೆ ಅಳಿಸಿ ಹೋದ ಮರಳಿನ ಮನೆಯ ಮೂಲೆಯ ನಮ್ಮಿಬ್ಬರ ಹೆಸರಿನ ಗುರುತನ್ನು ಮನ ಮತ್ತೆ ಮತ್ತೆ ಬಯಸುತ್ತಿದೆ. ಮನದ ಕದ ತೆರೆವ ತಂಗಾಳಿಯೊಡನೆ ಮತ್ತೆ ಬರುವೆಯೋ ಎಂಬ ಸುಳ್ಳಿನ ಆಶಾವಾದ ಮಡುಗಟ್ಟಿದೆ.

ಏಕೆಂದರೆ ಸುಳ್ಳು ಒಮ್ಮೊಮ್ಮೆ ನಿಜವಾಗಬಹುದೆಂದು. ಭರವಸೆಯ ಬೆಳಕಿನೆಡೆಗೆ ಬರಿಗೈಲಿ ಪಯಣಿಸುತಲಿರುವ ಬಡಪಾಯಿ ನಾನು ಗೆಳತಿ. ಖಾಲಿಯಾಗಿದ್ದ ಹೃದಯದಲ್ಲಿ ಈಗೀಗ ಎತ್ತ ನೋಡಿದರೂ ಬರಿಯ ನೆನಪುಗಳ ಸಾಲು ಸಾಲೇ ಕಾಣುತ್ತಿದೆ. ಕಾರ್ಮೋಡ ಕವಿದ ಮನದ ಮರೆಯಲ್ಲಿ ಮಿರಮಿರನೆ ಮಿನುಗುತಿದ್ದ ತಾರೆಯೊಂದು ಮರೆಯಾದ ಹಸಿ ನೆನಪು ಮನದಲ್ಲಿ ಪಿಸು ಗುಡುತಿದೆ. ಮರೆಯಬೇಕೆಂದರೂ ಕೂಡ ಮರೆಯಾಗದೆ ಕಾಡುವ ನೆನೆಪಿಗೊಂದು ವಿರಾಮ ಇಟ್ಟು ಮರೆಯಬೇಕೆಂದರೆ ಸಾಕು, ಕಣ್ಣಂಚಿನಿಂದ ಹನಿಯೊಂದು ಮೆಲ್ಲನೆ ಜಾರತೊಡಗುತ್ತದೆ.

ಗೆಳತಿ, ನಿನಗಾಗಿ ಕಟ್ಟಿದ ಈ ಪ್ರೇಮಲೋಕದಲ್ಲಿ ಒಬ್ಬೊಂಟಿಗನಾಗಿ ಕೈದಿಯಾಗಿಯೇ ಉಳಿದಿರುವೆ. ಹಿಂತಿರುಗಿ ಬಂದು ಬಂಧನವ
ಬಿಡಿಸು ನನ್ನೊಲವೆ. ಖಾಲಿ ಕನಸುಗಳು ಮತ್ತೆ ಬಣ್ಣ ಒಡೆಯುತ್ತವೆ ಎಂದು ಕಾಯುತ್ತಾ ನೀ ಬರುವ ಹಾದಿಗೆ ಹೂವನ್ನು ಹಾಸಿರುವೆ. ಬರುವೆಯಾ..?