ಒಂದು ಒಳ್ಳೆಯ ಕೆಲಸ ಆರಂಭಿಸಲು ಹಿಂದೆ ಮುಂದೆ ನೋಡುತ್ತಾ, ವಿಳಂಬಿಸಬಾರದು.
ಮಹಾದೇವ ಬಸರಕೋಡ
ನಾವು ಒಂದು ಕೆಲಸವನ್ನು ಪ್ರಾರಂಭಿಸುವಾಗ ಹಲವು ಬಾರಿ ಲೆಕ್ಕಾಚಾರಕ್ಕೆ ಮುಂದಾಗುತ್ತೇವೆ. ನಿರ್ಧಾರ ತೆಗೆದುಕೊಳ್ಳುವಲ್ಲಿ ಕಾಲಹರಣ ಮಾಡುತ್ತೇವೆ. ನಾಳೆ ಮಾಡಿದರಾಯಿತು, ಅದಕ್ಕೇಕೆ ಅವರಸರ ಎಂದು ನಮ್ಮನ್ನು ನಾವು ಸಮರ್ಥಿಸಿಕೊಳ್ಳುತ್ತೇವೆ. ಆಮೇಲೆ ಮಾಡಿದರಾಯಿತು ಎಂಬ ನಮ್ಮ ಉದಾಸೀನ ತೋರುತ್ತೇವೆ. ಇಂತಹ ಮನೋಧೋರಣೆಯಿಂದಲೇ ನಾವು ಜಡಗೊಳ್ಳು ತ್ತೇವೆ. ಅವಕಾಶ ವಂಚಿತರಾಗುತ್ತೇವೆ.
ವಿಳಂಬ ಪ್ರವೃತ್ತಿಯ ಮೂಲ ಸ್ವರೂಪವೇ ಹಾಗೆ. ಅದು ಯಾವಾಗಲೂ ನಮಗೆ ಒದಗಿ ಬಂದ ಅವಕಾಶಗಳನ್ನೆಲ್ಲ ಲಕ್ಷ್ಮಣ ರೇಖೆ ಹಾಕಿ ಬಂಧಿಸಿ ಬಿಡುತ್ತದೆ. ನಮಗೆ ಸೋಲುಂಟಾಗುತ್ತದೆ. ಮುಂದೂಡುವ ನಮ್ಮ ಪ್ರವೃತ್ತಿ ಕಾಲಹರಣ ಮಾಡುತ್ತದೆ. ಅದೆಂದೂ ಯಶವನ್ನು ತಂದು ಕೊಡಲು ಸಾಧ್ಯವೇ ಇಲ್ಲ ಎಂಬ ಅರಿವು ನಮ್ಮಲ್ಲಿ ಇಲ್ಲದಿರುವುದು ಇದಕ್ಕೆ ಕಾರಣ. ನಿರ್ಣಯ ತೆಗೆದು ಕೊಂಡು ನಾವು ಸೋತರೂ ನಮಗೆ ಅನುಭವದ ಜತೆಗೆ ಹಲವು ಕೌಶಲ್ಯಗಳು ಸಿದ್ಧಿಸುವ ಸಾಧ್ಯತೆ ಹೇರಳ. ನಿರ್ಣಯ ತೆಗೆದು ಕೊಳ್ಳದೇ ಹೋದರೆ ನಾವು ನಿಜಕ್ಕೂ ಪೂರ್ತಿ ವಿಫಲರಾದಂತೆ.
ಅಮೇರಿಕದ ಫಿಲೆಡೆಲಿಯಾದ ಬೆನ್ ಫ್ರಾಂಕ್ಲಿನ್ ಎಂಬುದು ಪರಿಚಿತ ಹೆಸರು. ಆ ಕಾಲದಲ್ಲಿ ರಾತ್ರಿ ರಸ್ತೆಗಳೆಲ್ಲವೂ ಕತ್ತಲೆಯಿಂದ ತುಂಬಿರುತ್ತಿದ್ದವು. ಅದರಿಂದ ನಾಗರಿಕರಿಗೆ ತೊಂದರೆಯಾಗುತ್ತಿದೆ ಎಂದು ಗಮನಿಸಿದರು. ಅದಕ್ಕೊಂದು ಪರಿಹಾರ ಕಂಡು ಹಿಡಿಯಬೇಕೆಂದು ನಿರ್ಧರಿಸಿ ಆ ದಿಸೆಯಲ್ಲಿ ಯೋಚಿಸತೊಡಗಿದರು. ಅದಕ್ಕಾಗಿ ನಗರಸಭೆಗೆ ಅರ್ಜಿ ಹಾಕಲಿಲ್ಲ. ಹಿಂದು-ಮುಂದೆ ನೊಡಲಿಲ್ಲ. ಅದೇ ದಿನ ರಾತ್ರಿ ಒಂದು ಉದ್ದನೆಯ ಕಂಬವನ್ನು ತಮ್ಮ ಮನೆಯ ಹತ್ತಿರ ನೆಟ್ಟರು. ಅದಕ್ಕೊಂದು ಲಾಟೀನ್ ಕಟ್ಟಿದರು. ಎಣ್ಣೆ ತುಂಬಿ ಅದನ್ನು ಬೆಳಗಿಸಿದರು.
ಮರುದಿನ ಮತ್ತೆ ಸಂಜೆ ಅದಕ್ಕೆ ಎಣ್ಣೆ ತುಂಬಿದರು. ಮತ್ತೆ ಲಾಟೀನ್ ಬೆಳಗಿಸಿದರು. ಮೊದಮೊದಲು ಜನರು ಅಪಹಾಸ್ಯ ಮಾಡಿದರೂ, ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ನಿತ್ಯವೂ ತಮ್ಮ ಕಾಯಕವನ್ನು ಮಾಡುತ್ತಲೇ ಹೋದರು. ಅದರ ಬೆಳಕಿನಲ್ಲಿ ಜನರು ನಿರಾಂತಕವಾಗಿ ನಡೆದು ಹೋಗುವುದು ಅನುಭವಕ್ಕೆ ಬಂದಿತು. ದಿನಗಳದಂತೆ ಸುತ್ತಲಿನ ಜನರಿಗೂ ಅವರ ಉಪಯುಕ್ತ ಕಾರ್ಯದ ಅರಿವಾಯಿತು. ಕ್ರಮೇಣ ನೆರೆಹೊರೆಯವರು ತಮ್ಮ ಮನೆಯ ಮುಂದೆ ಲಾಟೀನ್ ಹಚ್ಚುವ ಕಾರ್ಯದಲ್ಲಿ ತೊಡಗಿದರು. ಇಡೀ ಬೀದಿ ಬೆಳಕಿನಿಂದ ಕೂಡಿತು. ಇದನ್ನು ಗಮನಿಸಿದ ಪಕ್ಕದ ಬೀದಿಯವರೂ ಅದೇ ಕೆಲಸ ವನ್ನು ಮಾಡತೊಡಗಿದರು.
ಮುಂದೊಂದು ದಿನ ಇಡೀ ನಗರವೇ ರಾತ್ರಿಯೆಲ್ಲ ಬೆಳಕಿನಿಂದ ಕಂಗೊಳಿಸತೊಡಗಿತು. ನಮ್ಮ ಬದುಕು ಯಶಸ್ಸಿನತ್ತ ಸಾಗ
ಬೇಕಾದರೆ, ಕನಸುಗಳು ಧನ್ಯತೆಯನ್ನು ಕಾಣಬೇಕಾದರೆ ಅವುಗಳು ಕೇವಲ ಕಲ್ಪನೆಯಿಲ್ಲದ್ದರೆ ಸಾಕಾಗದು. ಅದಕ್ಕೊಂದು
ರೂಪವನ್ನು ಕೊಡಬೇಕು. ಇದು ಸಾಧ್ಯವಾಗುವುದು ನಾವು ತೆಗೆದುಕೊಳ್ಳುವ ನಿರ್ಧಾರದ ಮೇಲೆ. ನಾವು ಎಲ್ಲಿಯವರೆಗೂ ನಿಶ್ಚಿತ
ನಿರ್ಧಾರವನ್ನು ತಗೆದುಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ಕಾರ್ಯಪ್ರವೃತ್ತರಾಗಲು ಸಾಧ್ಯವಾಗುವುದೇ ಇಲ್ಲ.
ನಿರ್ಧಾರ ತಗೆದುಕೊಂಡ ಕ್ಷಣದಿಂದಲೇ ನಾವು ಚಲನಶೀಲತೆ ಪ್ರಾರಂಭವಾಗಲು ಸಾಧ್ಯ. ತಿರ್ಮಾನ ತಗೆದುಕೊಂಡು ಅದಕ್ಕೆ
ಬದ್ಧರಾಗಿರಬೇಕು. ನಮಗಿರುವ ವಿವಿಧ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಅನಿಶ್ಚಿತತೆ ಸಮೀಪಕ್ಕೆ ಸುಳಿಯ ದಂತೆ ದೂರಕ್ಕೆ ಸರಿಸಿ ನಿಶ್ಚಿತ ತಿರ್ಮಾನ ತಗೆದುಕೊಳ್ಳುವ ನಮ್ಮ ನಿಲುವು ಮಾತ್ರ ನಮ್ಮ ಬದುಕನ್ನು ಎತ್ತರಕ್ಕೇರಿಸಲು ಪೂರಕ ವಾಗಬಲ್ಲದು.