Sunday, 15th December 2024

ಝೆನ್ ಕಥೆಗಳ ಸರಳ ಜಗತ್ತು

ಡಾ. ಕೆ.ಎಸ್. ಪವಿತ್ರ

ಧ್ಯಾನ ಎಂಬ ಪದವೇ ಝೆನ್ ಆಯಿತಂತೆ. ಪುಟ್ಟ ಝೆನ್ ಕಥೆಗಳು ನೋಡಲು ಸರಳ ಎನಿಸಿದರೂ, ತಮ್ಮಲ್ಲಿ ಅಡಗಿಸಿ ಕೊಂಡಿರುವ ಭಾವ, ಅರ್ಥ, ಪಾಠ ಬಹು ದೊಡ್ಡದು.

ಹಾಂಕಾಂಗ್‌ನ ಸಮ್ಮೇಳನಕ್ಕೆತೆರಳಿದ್ದ ಸಮಯ. ಮನೋ ವೈದ್ಯಕೀಯ ಔಷಧಿಗಳ ಸಮ್ಮೇಳನದ ಉದ್ಘಾಟನೆಗೆ ಬಂದಿದ್ದವರು ಅಲ್ಲಿನ ವಿಶ್ವವಿದ್ಯಾಲಯದ ತತ್ತ್ವಶಾಸ್ತ್ರದ ಪ್ರೊಫೆಸರ್! ಅವರು ಸಮ್ಮೇಳನವನ್ನು ಉದ್ಘಾಟಿಸುವಾಗ ಮಾತನಾಡಿದ್ದು ಝೆನ್ ಕಥೆಗಳ ಬಗ್ಗೆ! ‘ಅರೆರೆ! ಇವರು ಸಾಹಿತ್ಯವನ್ನೂ, ವಿಜ್ಞಾನವನ್ನೂ ಹೇಗೆ ಬೆಸೆದುಬಿಟ್ಟರಲ್ಲ’ ಎಂದು ಅಚ್ಚರಿಗೊಂಡಿದ್ದರು ವೈದ್ಯ ಪ್ರೇಕ್ಷಕರು.

ಇದು ‘ಝೆನ್’ ಕಥೆಗಳಿಗೆ ನನ್ನ ಮೊದಲ ಪರಿಚಯ. ಅದಾದ ಮೇಲೆ ಅಕ್ಷರ ಪ್ರಕಾಶನದ ‘ಝೆನ್’ ಎಂಬ ಪುಸ್ತಕ (ಕೆ.ವಿ.ಸುಬ್ಬಣ್ಣ ನವರು ಬರೆದದ್ದು) ದ ಪುಟ್ಟ ಗಾತ್ರ ನೋಡಿ ಬೇಗ ಓದಬಹುದೆಂದು ತಿರುವಿ ಹಾಕಲು ಹೋದರೆ ಗಂಟೆಗಟ್ಟಲೆ ಓದಬೇಕಾಗಿ ಬಂದ
ಅನುಭವ! ಪುಟ್ಟ ಪುಟ್ಟ ಕಥೆಗಳು, ಓದಿ ಏನೋ ‘ಆಕರ್ಷಣೆ, ನಿಗೂಢತೆ’, ಆದರೆ ಅರ್ಥವಾಗದ ಅಂತ್ಯ! ಪುಟ್ಟ ಗಾತ್ರದಲ್ಲಿಅಗಾಧ ಜ್ಞಾನ.

ಬೌದ್ಧ ಸಂಪ್ರದಾಯದ ಝೆನ್ ಪದ್ಧತಿಯ ಪ್ರಕಾರ ‘ಜ್ಞಾನ’ ಬರುವುದು ಕಾರಣ ಅಥವಾ ಬೌದ್ಧಿಕ ಚಿಂತನೆಯಿಂದಲ್ಲ. ಪ್ರತಿ ಮನಸ್ಸಿನಲ್ಲಿಯೂ ಜ್ಞಾನವಿದ್ದೇ ಇದೆ. ಅದು ಭ್ರಮೆಗಳಿಂದ ಆವೃತ. ಇದ್ದಕ್ಕಿದ್ದಂತೆ ಹೊಳೆಯುವುದು, ಅರಿವಾಗುವುದೇ ‘ಜ್ಞಾನ’ ಗೋಚರವಾಗುವ ರೀತಿ. ಅದನ್ನು ಕಲಿಸುವ ರೀತಿ ಒಂದು ಪುಟ್ಟ ಕಥೆ!

ಮರ ಸವರುವ ಕಥೆ
ಈಗಿನ ಕರೋನಾ ಪ್ಯಾಂಡೆಮಿಕ್‌ನ್ನೇ ತೆಗೆದುಕೊಳ್ಳಿ. ಅದಕ್ಕೊಂದು ಝೆನ್ ಕಥೆಯನ್ನು ಹೇಳಬಹುದು. ಒಬ್ಬ  ವಿದ್ಯಾರ್ಥಿ ಮರ ಸವರುವ ವಿದ್ಯೆ ಕಲಿಯಲು ಗುರುವನ್ನು ಹುಡುಕುತ್ತಿದ್ದ. ಝೆನ್ ಗುರುವೊಬ್ಬ ಮರ ಹತ್ತುವ, ಅವುಗಳನ್ನು ಸರಿಯಾಗಿ ಸವರುವ ಕಲೆಯಲ್ಲಿ ನಿಷ್ಣಾತನಾಗಿದ್ದ. ಸರಿ, ಈ ವಿದ್ಯಾರ್ಥಿ ಆತನ ಬಳಿ ಶಿಷ್ಯನಾದ. ಗುರು, ಶಿಷ್ಯನನ್ನು ಎತ್ತರವಾದ ಮರದ ಬಳಿ ಕರೆದೊ ಯ್ದ. ಈತ ಪಾಠ ಕಲಿಸುವುದನ್ನು ನೋಡಲು ಹಳ್ಳಿಯವರೆಲ್ಲ ಬಂದು ನಿಂತರು.

ಶಿಷ್ಯ ಮರ ಹತ್ತಿದ, ಮೇಲಿನವರೆಗೆ ಹೋದ, ಅಲ್ಲಿ ಇಲ್ಲಿ ಕೊಂಬೆಗಳನ್ನು ಸವರಿದ. ಗುರು ಮೌನವಾಗಿ ನಿಂತೇ ಇದ್ದ. ಶಿಷ್ಯ ಪಾಪ, ಗುರುವಿನ ಸೂಚನೆಗೆಂದು ಕಾದ. ಗುರು ಏನೂ ಹೇಳಲಿಲ್ಲ. ಸರಿ, ಕೆಳಗಿಳಿಯಲು ಆರಂಭಿಸಿದ, ಅಲ್ಲಲ್ಲಿ ಮತ್ತೆ ಕೊಂಬೆ ಸವರಿದ. ಇನ್ನೇನು ಕೊನೆಯ ಕೊಂಬೆ ಸವರಬೇಕು, ಆಗ ಗುರು ಜೋರಾಗಿ ‘ನಿಧಾನ, ನೋಡಿಕೋ’ ಎಂದು ಕೂಗಿದ. ಕಥೆ ಅಲ್ಲಿಗೇ ಮುಗಿಯಿತು!

ಕಥೆ ಕೇಳಿದ ಎಲ್ಲರಿಗೂ ಸಾಮಾನ್ಯವಾಗಿ ಒಂಥರಾ ಹತಾಶೆ ಉಂಟಾಗುತ್ತದೆ. ‘ನೇರವಾಗಿ ಪಾಠ ಹೇಳಿಕೊಡುವ ಹಾಗೆ ಆ ಗುರು ಏಕೆ ಮೊದಲೇ ಕೂಗಲಿಲ್ಲ, ಕೊನೆಯಲ್ಲಿ ಮಾತ್ರ ಯಾಕೆ ಕೂಗಿದ, ಹಾಗೆ ಕೊನೆಯಲ್ಲಿ ಕೂಗಿದ್ದೇ ಪಾಠ ಅಂತಾದರೆ ಅದರರ್ಥ ಏನು’ ಈ ರೀತಿ ಸಿಡಿಮಿಡಿಗೊಳ್ಳುವ ಹಾಗಾಗುತ್ತದೆ.

ಕರೋನಾ ದೃಷ್ಟಿಯಿಂದಲೇ ಈ ಕಥೆ ನೋಡಿ. ಒಂದೆಡೆ ವೈರಸ್ ತನ್ನ ಕಪಿಮುಷ್ಟಿ ಸಡಿಲಿಸಿದರೆ, ಇನ್ನೊಂದೆಡೆ ಬಿಗಿಯಾಗಿ  ಸುತ್ತದೆ. ನಾವು ಹೊಸ -ಅಪಾಯಕಾರಿ ಸನ್ನಿವೇಶದಲ್ಲಿ ಎಚ್ಚರದಿಂದಿರುತ್ತೇವೆ. ಇನ್ನೇನು ಹಿಡಿದ ಕೆಲಸ ಮುಗಿಯುತ್ತಾ ಬಂತು, ಅಂದರೆ ಮರ ಇಳಿಯುತ್ತಾ ಬಂದೆವು ಎನ್ನುವಾಗ ಎಚ್ಚರ ತಪ್ಪುತ್ತೇವೆ! ಕೊನೆಯ ಕೊಂಬೆಯ ಬಳಿ ಬಂದಾಗ, ಶಿಷ್ಯ ತನ್ನ ಸಮತೋಲನ ಕಳೆದುಕೊಳ್ಳುವ, ಆಯ ತಪ್ಪುವ, ಬೀಳುವ ಸಾಧ್ಯತೆ ಹೆಚ್ಚು. ಅತಿ ಆತ್ಮವಿಶ್ವಾಸದಿಂದ ಆತ ಎಚ್ಚರ ತಪ್ಪುವುದು ಈ ಕೊನೇ ಹಂತದಲ್ಲಿಯೇ. ಹಾಗಾಗಿಯೇ ಗುರು ಎಚ್ಚರಿಸಬೇಕಾದ್ದು ಇಲ್ಲಿಯೇ!

ಕರೋನಾ ಸಂದರ್ಭ ದಲ್ಲಿಯೂ ನಮಗೆ ಇದೇ ಎಚ್ಚರ ಬೇಕು ಎನ್ನುವುದನ್ನು ಈ ಕಥೆಯಿಂದಲೇ ಕಲಿಯಬಹುದು. ಯಾವುದೇ ಮನಃಸ್ಥಿತಿಯಲ್ಲಿದ್ದಾಗಲೂ ಝೆನ್ ಕಥೆಗಳನ್ನು ಸುಮ್ಮನೆ ಓದುವುದು, ಮನಸ್ಸಿಗೆ ಒಂದು ತರಹದ ವಿಸ್ಮಯ- ನಗು-ಹಠಾತ್ ಪರಿಹಾರ, ಒಪ್ಪಿಕೊಳ್ಳುವಿಕೆ ಮೂಡಿಸಲು ಸಾಧ್ಯವಿದೆ. ಹತ್ತಿರವಿದ್ದೂ ನೋಡಲು ಸಾಧ್ಯವಾಗಿರದ ಕಾಡನ್ನು ನೋಡಲು ಸಾಧ್ಯವಾಗಿಸಬಹುದು.

ಒತ್ತಡವನ್ನು ಅಲ್ಲಲ್ಲಿಯೇ ಬಿಡಬೇಕು ಎಂಬ ಬಗ್ಗೆ ಒಂದು ಸ್ವಾರಸ್ಯಕಾರಿ ಝೆನ್ ಕಥೆಯನ್ನು ನಾನು ಉಪನ್ಯಾಸಗಳಲ್ಲಿ ಆಗಾಗ್ಗೆ ಉದಾಹರಿಸುವುದುಂಟು. ಒಬ್ಬ ಝೆನ್ ಗುರು ಮತ್ತು ಅವರ ಹಲವು ಶಿಷ್ಯಂದಿರು ಬುದ್ಧ ಮಂದಿರಕ್ಕೆ ಪ್ರಾರ್ಥನೆಗಾಗಿ ತೆರಳು ತ್ತಿದ್ದರು. ಮಳೆ ಬಂದು ಅಲ್ಲಲ್ಲಿ ಚಿಕ್ಕಚಿಕ್ಕ ಕೆಸರಿನ ಕೊಳಗಳಾಗಿದ್ದವು. ಸುಂದರ ಯುವತಿಯೊಬ್ಬಳು ಅವುಗಳನ್ನು ದಾಟಿ ರಸ್ತೆಯ ಇನ್ನೊಂದು ಬದಿಗೆ ಹೋಗಲು ಕಷ್ಟ ಪಡುತ್ತಿದ್ದಳು. ಝೆನ್ ಗುರು ಆಕೆಯನ್ನು ಎತ್ತಿ ರಸ್ತೆಯ ಆಕಡೆಗೆ ಬಿಟ್ಟು ತನ್ನ ದಾರಿ ಹಿಡಿದ. ಹಿಂಬಾಲಿಸುತ್ತಿದ್ದ ಶಿಷ್ಯರಲ್ಲಿ ಗೊಂದಲವೋ ಗೊಂದಲ. ದಾರಿ ಪೂರ್ತಿ ಗುಜುಗುಜು ಮಾಡುತ್ತಲೇ ಬಂದರು. ಕಾಲ್ನಡಿಗೆಯ ಹಾದಿ ಸುಮಾರು 2 ಗಂಟೆಗಳದು.

ಚೈತ್ಯಾಲಯದ ಕೊನೆಯ ಮೆಟ್ಟಿಲು ಹತ್ತುವಾಗ ಒಬ್ಬ ಶಿಷ್ಯ ಧೈರ್ಯ ದಿಂದ ಕೇಳಿಯೇ ಬಿಟ್ಟ. ‘ಗುರುಗಳೆ! ಇದು ಅಪಚಾರ ತಾನೆ? ಹೆಣ್ಣು-ಹೆಂಡವನ್ನು ಮುಟ್ಟಿದರೆ ನಮ್ಮ ವೃತ ಮುರಿದಂತಲ್ಲವೆ. ನಮಗೆಲ್ಲ ಗುರು ನೀವು! ಎಲ್ಲ ಶಿಷ್ಯರಿಗೆ ಮಾದರಿಯಾಗಿರ ಬೇಕಾದ ನೀವೇ ಹೀಗೆ ಸುಂದರ ಹುಡುಗಿಯನ್ನು ಎತ್ತಿದರೆ, ಅದೆಂತಹ ಮಾದರಿ?’. ಮುಗುಳ್ನಗುತ್ತ ಗುರುವೆಂದ, ‘ಶಿಷ್ಯಾ! ರಸ್ತೆಯ ಈ ಪಕ್ಕಕ್ಕೆ ನಾನು ಆಗಲೇ ಆಕೆಯನ್ನು ಇಳಿಸಿದ್ದಾಯಿತು! ನೀವೇಕೆ ಇಷ್ಟು ಹೊತ್ತು ಆಕೆಯನ್ನು ಹೊತ್ತುಕೊಂಡೇ ಇದ್ದೀರಿ?’ ಅಂದರೆ ಶಿಷ್ಯರು ಹೊತ್ತುಕೊಂಡು, ತಲೆಯ ಭಾರ ಮಾಡಿಕೊಂಡದ್ದು ಮೋಹ -ಹೀಗಾಯಿತಲ್ಲ ಎಂಬ ಚಿಂತೆಯನ್ನು!

ಕೈ ಇಲ್ಲದೆಯೂ ಗೆದ್ದ
ನಮ್ಮ ಅಸಮರ್ಥತೆಯನ್ನು ಹೇಗೆ ನಮ್ಮ ಸಾಮರ್ಥ್ಯವಾಗಿಸಿಕೊಳ್ಳಬಹುದು ಎಂಬುದಕ್ಕೆ ನಾನು ಮಕ್ಕಳಿಗೆ ಹೇಳುವ ಝೆನ್
ಕಥೆಯೊಂದಿದೆ. ಒಬ್ಬ ಬಾಲಕ, ಆತನಿಗಿದ್ದದ್ದು ಒಂದೇ ಕೈ – ಎಡಗೈ. ಆತನಿಗೆ ಕರಾಟೆ ಕಲಿಯುವ ಆಸೆ. ಸರಿ, ಗುರುವೊಬ್ಬ
ಕಲಿಸಲಾರಂಭಿಸಿದ. ಒಂದೇ ರೀತಿಯ ಪಟ್ಟು, ತುಂಬಾ ಅಭ್ಯಾಸ ಮಾಡಿಸಿ, ಬಾಲಕನನ್ನು ಸ್ಪರ್ಧೆಗೆ ಕರೆದೊಯ್ದ. ಎದುರಾಳಿ ಗಳೆಲ್ಲ ಪರಿಣತರು. ಮೊದಲ ಹಂತದಲ್ಲಿ ಬಾಲಕ ಗೆದ್ದ!

ಎರಡನೆಯದನ್ನೂ ಗೆದ್ದ! ಕೊನೆಯ ಸುತ್ತು, ಅಂಗವಿಕಲ ಬಾಲಕನ ಬಗ್ಗೆ ಎಲ್ಲರಿಗೂ ‘ಸೋತರೆ’ ಎಂಬ ಕನಿಕರ. ಕೆಲವು ಬಾರಿ ಎದುರಾಳಿಯ ಪಟ್ಟಿನಿಂದ ಇವನಿಗೆ ಪೆಟ್ಟು. ಗುರು ಮಾತ್ರ ಶಾಂತವಾಗಿ ನಿಂತೇ ಇದ್ದ. ‘ಪಂದ್ಯ ನಿಲ್ಲಿಸಬೇಕೆ?’ ಎಂದು ತೀರ್ಪುಗಾರ ಕೇಳಿದರೆ, ಗುರು ‘ಬೇಡ, ಬೇಡ, ಅವಶ್ಯಕತೆಯಿಲ್ಲ’ ಎಂದ! ಅಂತೂ ಕೊನೆಗೆ ಬಾಲಕ ಗೆದ್ದೇ ಬಿಟ್ಟ. ಮನೆಗೆ ಗುರುವಿ ನೊಡನೆ ಹಿಂದಿರುಗುವಾಗ ಬಾಲಕ ಕೇಳಿದ ‘ಮಾಸ್ಟರ್ ಮಾಸ್ಟರ್| ನಾನು ಗೆದ್ದಿದ್ದು ಹೇಗೆ? ನಾನು ಕಲಿತಿದ್ದದ್ದು ಒಂದೇ ಪಟ್ಟು!’ ಗುರು ಹೇಳಿದ, ‘ಮಗೂ, ನಿನಗೆ ಕಲಿಸಿದ್ದು ನಾನು ಒಂದೇ ಪಟ್ಟು, ಆದರೆ ಅದು ಅತಿ ಕಷ್ಟದ ಪಟ್ಟು! ಎದುರಾಳಿ ಪರಿಣತ ನಿಜ. ಆದರೆ ಈ ಪಟ್ಟಿನಲ್ಲಿ ಸೋಲಿಸಲು ಇರುವ ಉಪಾಯ ಒಂದೇ. ಅದು ನಿನ್ನ ಬಲಗೈ ಹಿಡಿಯುವುದು! ನಿನಗೆ ಬಲಗೈಯೇ ಇಲ್ಲ! ಅದೇ ನಿನ್ನ ಅತಿ ದೊಡ್ಡ ಸಾಮರ್ಥ್ಯ!’.

ಜೀವನದಲ್ಲಿ ಸರಳತೆ ಎಂಬುದು ಸರಳವಲ್ಲ! ಅದಕ್ಕೊಂದು ಝೆನ್ ಕತೆಯಿದೆ. ಒಬ್ಬ ಶಿಷ್ಯ ಝೆನ್ ಗುರುವನ್ನು ಕೇಳಿದ
‘ಜ್ಞಾನೋದಯ ಎಂದರೇನು ಗುರುವೇ?’ ಕೇಳಿದವನ ಪ್ರಶ್ನೆಯನ್ನು ಗುರುತಿಸದೆ /ತಿರಸ್ಕರಿಸದೆ ಗುರು ಸ್ವಲ್ಪ ಹೊತ್ತು ಸುಮ್ಮನಿದ್ದ. ಇನ್ನೇನು ಶಿಷ್ಯ ಬೇಸರಿಸಿ ಹೊರಡಬೇಕು, ಆಗ ಗುರುವೆಂದ ‘ನಾನು ಹಸಿವಾದಾಗ ತಿನ್ನುತ್ತೇನೆ, ದಣಿವಾದಾಗ ಮಲಗುತ್ತೇನೆ’. ಶಿಷ್ಯ ಅಚ್ಚರಿಯಿಂದ ಕೇಳಿದ ‘ಎಲ್ಲರೂ ಮಾಡುವುದೂ ಇದೇ ತಾನೆ?’.

ಗುರು ಮುಗುಳ್ನಕ್ಕ ‘ನಿನಗೆ ಹಾಗೆನಿಸುತ್ತದೆಯೇ? ಇಲ್ಲ, ಬೇರೆಯವರು ತಿನ್ನಬೇಕಾದರೆ ಸಾವಿರ ಯೋಚನೆಗಳು ಅವರ ತಲೆಯಲ್ಲಿರು ತ್ತವೆ. ಮಲಗಿರುವಾಗ ಚಿಂತೆಗಳು-ಕಲ್ಪನೆಗಳು ಅವರ ಮನದ ತುಂಬಾ ಹರಿದಾಡುತ್ತಿರುತ್ತವೆ’. ಒಂದು ನಿಮಿಷ ನಿಲ್ಲಿಸಿ, ‘ನಾನು ತಿನ್ನುವಾಗ ಬರೀ ತಿನ್ನುತ್ತೇನೆ, ನಿದ್ರೆ ಮಾಡುವಾಗ ಕೇವಲ ನಿದ್ರಿಸುತ್ತೇನೆ. ತುಂಬಾ ಸರಳ!’ ಈ ಕಥೆಯನ್ನು ಓದುವಾಗ ಹಲವು ವಿಜ್ಞಾನಿಗಳು, ವೈಜ್ಞಾನಿಕ ನಿಯಮಗಳು ನೆನಪಾಗುತ್ತವೆ.

ಓಕ್ಕಾಮ್‌ನ ರೇಜರ್ ಸಿದ್ಧಾಂತದ ಪ್ರಕಾರ ‘ಎಲ್ಲವೂ ಸಮಾನವಾದ್ದರಿಂದ ಅತಿ ಸರಳ ಪರಿಹಾರ ಎನ್ನುವುದೇ ಅತಿ ಉತ್ತಮ ಪರಿಹಾರ’. ಐನ್‌ಸ್ಟೀನ್‌ನ ಪ್ರಕಾರ ಬುದ್ಧಿವಂತಿಕೆಯ ಐದು ಕ್ರಮಬದ್ಧ ಹಂತಗಳು Smart, intelligent, Brilliant, Genius, Simple – ಬೌದ್ಧಿಕತೆಯ ಅತಿ ಉನ್ನತ ಹಂತ ‘ಸರಳತೆ’!

ಝೆನ್ ಕಥೆಗಳನ್ನು ಹಲವು ದೃಷ್ಟಿಕೋನಗಳಿಂದ ನೋಡುವುದು ಸಾಧ್ಯವಿದೆ. ಆಯಾ ಮನಃಸ್ಥಿತಿ-ಪರಿಸ್ಥಿತಿಗಳಿಗನುಗುಣವಾಗಿ, ಪ್ರತಿ ಕಥೆಯೂ ಪರಿಹಾರ-ಸಮಾಧಾನ- ವಿಸ್ಮಯದ ಭಾವಗಳನ್ನು ಮೂಡಿಸಬಲ್ಲದು. ಸಾಹಿತ್ಯಕ್ಕೂ, ಮಾನಸಿಕ ಆರೋಗ್ಯಕ್ಕೂ ಇರುವ ನಂಟಿನ ಬಗ್ಗೆ ಶೋಧಿಸುವ ನಿಟ್ಟಿನಲ್ಲಿ ಝೆನ್ ಕಥೆಗಳು ಆಕರ್ಷಕ ಸಾಧನಗಳಾಗಿವೆ.

ಕಥೆಗಳೆಂಬ, ಅದರಲ್ಲಿಯೂ ‘ಪುಟ್ಟ ಕಥೆ’ಗಳು ಎಂಬ ಕಾರಣದಿಂದ ಅವು ಮತ್ತಷ್ಟು ಉಪಯುಕ್ತ. ಉಡ್ವಿಗ್ ವಿಟ್‌ಜೆನ್ ಸ್ಟೀನ್ ಎಂಬ ತತ್ತ್ವಶಾಸಜ್ಞ ಹೇಳಿದಂತೆ ‘ಕೇವಲ ಯೋಚಿಸಬೇಡ, ನೋಡು!’ ಕಣ್ಣಿನಿಂದ ಮನಸ್ಸಿನಾಳಕ್ಕೆ ತಲುಪಬಲ್ಲ ಶಕ್ತಿ ಈ ಕಥೆ ಗಳಲ್ಲಿದೆ. ಜೀವನ-ವಾಸ್ತವತೆ-ಸತ್ಯಗಳು ಬಹು ಸರಳ ಎಂದು ಬೋಧಿಸುವ ಝೆನ್ ಕಥೆಗಳನ್ನು ಸುಮ್ಮನೆ ರಂಜನೆಗೆಂದು, ಕುತೂಹಲಕ್ಕೆಂದು ಓದಿದರೂ ಸರಿಯೇ, ಓದಬೇಕು!

ಈಗನ್ನಿಸುತ್ತದೆ, ಹಾಂಕಾಂಗ್‌ನ ವೈದ್ಯಕೀಯ ಔಷಧಿ ಸಮ್ಮೇಳನದ ಉದ್ಘಾಟನೆಗೆಂದು ತತ್ತ್ವಶಾಸ್ತ್ರದ ಪ್ರೊಫೆಸರ್ ಬಂದದ್ದೂ, ಝೆನ್ ಕಥೆಗಳನ್ನು ಹೇಳಿದ್ದೂ ಸರಿಯಾಗಿಯೇ ಇತ್ತು!