ನವದೆಹಲಿ: ದೇಶದಲ್ಲಿ 5ಜಿ ನೆಟ್ವರ್ಕ್ನ್ನು ಜಾರಿಗೊಳಿಸಬಾರದು ಎಂಬ ನಿಟ್ಟಿನಲ್ಲಿ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ನಟಿ ಜೂಹಿ ಚಾವ್ಲಾ ಅವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದ್ದು, ₹20 ಲಕ್ಷ ದಂಡ ವಿಧಿಸಿ ಆದೇಶಿಸಿದೆ.
‘ಈ ಅರ್ಜಿ ದೋಷಯುಕ್ತವಾಗಿದೆ ಹಾಗೂ ಮಾಧ್ಯಮಗಳಲ್ಲಿ ಪ್ರಚಾರ ಪಡೆಯಬೇಕು ಎಂಬ ಉದ್ದೇಶ ಹೊಂದಿದೆ. ನ್ಯಾಯಾಲ ಯದ ಸಮಯವನ್ನು ವ್ಯರ್ಥ ಮಾಡಿದ್ದಕ್ಕೆ ದಂಡ ವಿಧಿಸಲಾಗಿದೆ’ ಎಂದು ನ್ಯಾಯಮೂರ್ತಿ ಜೆಆರ್ ಮಿಧಾ ಹೇಳಿದ್ದಾರೆ.
‘ಈ ಅರ್ಜಿಯ ವಿಚಾರಣೆ ನಡೆಯುವ ವೇಳೆ ವಿಚಾರಣೆಯ ವಿಡಿಯೋ ಕಾನ್ಪರೆನ್ಸ್ನ ಲಿಂಕ್ನ್ನು ಜೂಹಿ ಅವರು, ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗಪಡಿಸಿದ್ದಾರೆ. ಅಲ್ಲದೇ ವಿಚಾರಣೆ ವೇಳೆ ಹಿಂದಿ ಹಾಡುಗಳನ್ನು ಕೇಳಿಸಲಾಗಿದೆ. ಇದನ್ನೆಲ್ಲ ನೋಡಿ ದರೆ ಪ್ರಚಾರಕ್ಕೆ’ ಈ ಕೆಲಸ ಮಾಡಲಾಗಿದೆ ಎಂದು ನ್ಯಾಯಮೂರ್ತಿ ಮಿಧಾ ಹೇಳಿದ್ದಾರೆ.
‘ಅರ್ಜಿದಾರರು ತಮ್ಮ ಹಕ್ಕುಗಳಿಗಾಗಿ ಮೊದಲು ಸರ್ಕಾರವನ್ನು ಸಂಪರ್ಕಿಸಬೇಕಿತ್ತು ಮತ್ತು ಒಂದು ವೇಳೆ ಸರ್ಕಾರ ನಿರಾಕರಿಸಿ ದರೆ ಮಾತ್ರ ಅವರು ನ್ಯಾಯಾಲಯಕ್ಕೆ ಬರಬೇಕಿತ್ತು’ ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೂಹಿ ಚಾವ್ಲಾ, ‘ದೆಹಲಿ ಹೈಕೋರ್ಟ್ನ ಈ ಆದೇಶವನ್ನು ಪ್ರಶ್ನಿಸಿ ತಡೆಗಾಗಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗುವುದು’ ಎಂದು ಹೇಳಿದ್ದಾರೆ.