Sunday, 24th November 2024

ಸಂಪ್ರದಾಯ

ಹೊಸಕಥೆ

ಗೀತಾ ಕುಂದಾಪುರ

ಶಶಾಂಕ ಬೆಂಗಳೂರಿನಲ್ಲಿದ್ದರೂ ಅವರ ಆತ್ಮ ಇಲ್ಲೇ ಇದೆ. ಇದೇ ಊರಿನಲ್ಲಿ ಶಾಲೆ ತೆರೆದರಾಯಿತು. ಅದಕ್ಕಾಗಿ ಗದ್ದೆ, ತೋಟ ಮಾರಾಟ ಮಾಡುವುದು ಬೇಡ. ಶಶಾಂಕ ಸಂಪಾದಿಸಿದ್ದೇ ಸಾಕಷ್ಟಿದೆ. ನೀನೇನ್ನುತ್ತಿ ಶ್ಲೋಕ? – ಎಂದು ಮಗನನ್ನು ಕೇಳಿದ ಅವಳ ಮಾತಿನಲ್ಲಿ ದೃಢತೆ ಇತ್ತು, ಗುರಿ ಇತ್ತು, ಗುರಿ ತಲುಪುವ ಛಲ ಇತ್ತು.

ಅಮ್ಮೂ ಕರೆದಂತಾಯಿತು ಅಮೂಲ್ಯಾಳಿಗೆ, ತಿರುಗಿ ನೋಡಿದರೆ ಯಾರೂ ಇರಲಿಲ್ಲ, ಇನ್ನೂ ಯಾರೂ ಹಾಗೆ ಕರೆಯುವವರಿಲ್ಲ, ಕರೆಯುವವರು ಬರುವುದೂ ಇಲ್ಲ, ಶಶಾಂಕ್ ಬಾರದ ಲೋಕಕ್ಕೆ ಹೋಗಿ ಆಗಲೆ ಒಂಬತ್ತು ದಿನಗಳಾಗಿತ್ತು. ಬಯಸಿದ್ದೆಲ್ಲಾ ಜೀವನದಲ್ಲಿ ಸಿಕ್ಕಿತ್ತು, ಒಳ್ಳೆಯ ಗಂಡ, ಚುರುಕು ಬುದ್ಧಿಯ ಮಗ, ಶ್ರೀಮಂತಿಕೆಯ ಬದುಕು. ಶಶಾಂಕನಿಗೆ ಶಾಕ್ ಕೊಡುವುದೆಂದರೆ ಇಷ್ಟ, ನೆಟ್ಟುವಂತೆತಮಾಷೆಗಾಗಿ ಶಾಕ್ ಕೊಡುವ ಸಂಗತಿಗಳನ್ನು ಸೃಷ್ಟಿಸುತ್ತಿದ್ದ, ಈ ವಿಷಯದಲ್ಲೂ ಶಾಕ್ ಕೊಟ್ಟ, ಆದರೆ ತಮಾಷೆಯಾಗಿರಲಿಲ್ಲ.

ಶಟ್ಲ್ ಆಡಲು ಬೆಳಿಗ್ಗೆ ಹೋದವನು ಮತ್ತೆ ಜೀವಂತವಾಗಿ ಬರಲಿಲ್ಲ, 62 ಸಾಯುವ ವಯಸ್ಸಲ್ಲ. ಎಲ್ಲವೂ ಕಣ್ಣು ಮುಚ್ಚಿ
ತೆರೆಯುವದರೊಳಗೆ ನಡೆದುಹೋಯಿತು. ಅವಳಿಗೀಗ ಇನ್ನೂ 56, ಅವರಿಬ್ಬರೂ ಸೇರಿ ಕಟ್ಟಿದ ಸಾಮ್ರಾಜ್ಯವನ್ನು ನಡೆಸಿ ಕೊಂಡುವ ಹೋಗುವ ಭಾರ ಅವಳ ಹೆಗಲ ಮೇಲಿದೆ.

ಶಶಾಂಕನ ತಂದೆ, ತಾಯಿ ಇನ್ನೂ ಬದುಕಿದ್ದರು, ಹಳ್ಳಿಯಲ್ಲಿದ್ದರು. ಅವನ ವೈದಿಕದ ಕೆಲಸವನ್ನು ಹಳ್ಳಿಯಲ್ಲೇ ಮಾಡುವುದೆಂದು ತೀರ್ಮಾನವಾಯಿತು. ಅದಕ್ಕಾಗಿ ಮಗ ಶ್ಲೋಕ ಡೆಲ್ಲಿಯಿಂದ ಬಂದಾಗಿತ್ತು. ತಾಯಿ, ಮಗ ಇಬ್ಬರೂ ಹಳ್ಳಿಗೆ ಬಂದರು. ಕಣ್ಣು ಹಾಯಿಸಿದಷ್ಟೂ ಉದ್ದಕ್ಕೆ ಕಾಣುವ ಭತ್ತದ ಗದ್ದೆಗಳು, ಮಧ್ಯೆ ಮಧ್ಯೆ ತೆಂಗಿನ ಮರಗಳು. ಆಗಷ್ಟೇ ಮಳೆಗಾಲ ಮುಗಿದು ತೆನೆಗಳು ಚಿಗುರೊಡೆದು ಗಾಳಿಗೆ ತೇಲಾಡುತ್ತಿದ್ದವು.

ಮನೆಯ ಹತ್ತಿರ ಬರುತ್ತಿದ್ದಂತೆ ಹಸುವಿನ ಸಗಣಿಯ ವಾಸನೆ ಮೂಗಿಗೆ ಬಂತು. 32 ವರ್ಷಗಳ ಕೆಳಗೆ ಮದುವೆಯಾಗಿ ತಾನು
ಈ ಊರಿಗೆ ಬಂದದ್ದು ನೆನಪಾಯಿತು ಅವಳಿಗೆ. ಅದೇ ಮನೆ, ತೋಟ ಎಲ್ಲವೂ ಹಾಗೆಯೇ ಇತ್ತು. ಆದರೂ ಮನೆಯ ಜನರಂತೆ
ಪ್ರಾಯ ಎಲ್ಲೆಲ್ಲೂ ಎದ್ದು ಕಾಣುತ್ತಿತ್ತು. ‘ಬಹಳ ಫೀಸ್ ಫುಲ್ ಆಗಿದ್ಯಲ್ಲಮ್ಮ, ಎಲ್ಲಾ ಬಿಟ್ಟು ಇಲ್ಲೇ ಬಂದ್ಬಿಡೋಣ ಅಂತ ಅನಿಸುತ್ತೆ, ಸಿಟಿಯಲ್ಲಿ ಎಲ್ಲಾ ಇದೆ, ಅದ್ರೊಟ್ಟಿಗೆ ಟೆನ್ಶನ್ನೂ ಇದೆ. ಸಾಧಿಸಬೇಕೆಂದರೆ ಹಳ್ಳಿಯಲ್ಲಿದ್ದು ಬೇಸಾಯ ಮಾಡುತ್ತಾ ಕ್ರಾಂತಿಯನ್ನೇ ಮಾಡಬಹುದು’ ಕೈ ಕಟ್ಟಿ ನಿಂತು ಎದುರಿಗಿರುವ ಹಸಿರನ್ನು ನೋಡುತ್ತಾ ಶ್ಲೋಕ ಗಂಭೀರವಾಗಿ ಹೇಳಿದ.

ಹಿಂದಿನಿಂದ ನೋಡಿದರೆ ತೇಟ್ ತಂದೆಯಂತೆಯೇ ಕಾಣುತ್ತಿದ್ದ. ‘ದೂರದ ಬೆಟ್ಟ ನುಣ್ಣಗೆ ಕಣೋ, ಎಲ್ಲವೂ ಚೆಂದ, ಆದರೆ ಹಳ್ಳಿಯ ಸಂಪ್ರದಾಯ, ಪಾಲಿಟಿಕ್ಸ್ ಎಲ್ಲವೂ ಉಸಿರು ಕಟ್ಟುತ್ತೆ. ಅದೇ ದೊಡ್ಡ ಊರಿನಲ್ಲಿ ಅಪೊರ್ಚುನಿಟೀಸ್ ಜಾಸ್ತಿ, ಯಾರೂ ಯಾರ ಬಗ್ಗೆಯೂ ತಲೆ ಕೆಡಿಸ್ಕೊಳಲ್ಲ’ ಅಮ್ಮನ ಮಾತಿಗೆ ಶ್ಲೋಕ ಉತ್ತರಿಸಲಿಲ್ಲ.

ಶಶಾಂಕನೂ ಹೀಗೆಯೇ ಇದ್ದ, ಹಳ್ಳಿಯನ್ನು ಪ್ರೀತಿಸುತ್ತಿದ್ದ, ಆದರೂ ಅವಳ ಒತ್ತಾಯಕ್ಕೆ ಸಿಟಿ ಸೇರಿದ್ದ. ಹಳ್ಳಿಯ ಮಡಿ, ಮೈಲಿಗೆ, ಉಸಿರು ಕಟ್ಟಿತ್ತು ಅವಳಿಗೆ. ಅದರಿಂದ ಬಿಡುಗಡೆ ಬೇಕಿತ್ತು. ಪೂನಾದಲ್ಲಿ ಹುಟ್ಟಿ ಬೆಳೆದವಳು ಅಮೂಲ್ಯ. ತಾಯಿ ಇಲ್ಲ, ಅವಳಿಗೆ ಹತ್ತು ವರ್ಷವಿರುವಾಗ ತೀರಿಹೋಗಿದ್ದರು. ಅಕ್ಕ, ತಂಗಿಯರೂ ಇಲ್ಲ. ಒಬ್ಬ ಅಣ್ಣ ಮಾತ್ರ. ತಂದೆ ಜಡ್ಜ್. ಹಾಸ್ಟಲಿ ನಲ್ಲಿ ಓದಿ, ಬೆಳೆದ ಅಮೂಲ್ಯ ಸಂಪ್ರದಾಯ, ಸಂಸ್ಕೃತಿಯಿಂದ ದೂರವೇ ಉಳಿದಿದ್ದಳು. ಶಶಾಂಕ ನೋಡಲು ಆಕರ್ಷಕವಾಗಿದ್ದ.

ಒಳ್ಳೆಯ ಲಾಯರ್ ಎಂದು ಆಗಲೇ ಹೆಸರು ಮಾಡಿದ್ದ.  ಳ್ಳಿಯಲ್ಲಿರುವ ಶಶಾಂಕನ ಮದುವೆಯ ಸಂಬಂಧ ಬಂದಾಗ
ಹಳ್ಳಿಯ ಹಸಿರನ್ನು ನೆನೆದು ಮದುವೆಗೆ ಒಪ್ಪಿದ್ದಳು. ಹಳ್ಳಿಯ ಹಸುರಿನ ಕನಸು ಒಣಗಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಅತ್ತೆ, ಮಾವ ಒಳ್ಳೆಯವರೇ ಆದರೆ ವರ್ಷಗಳಿಂದ ನಡೆದುಕೊಂಡು ಬಂದ ಆಚಾರಗಳನ್ನು ಬದಿಗೆ ಸರಿಸಲೂ ಆಗದಷ್ಟು ಮುಳುಗಿದ್ದರು. ಅನ್ನದ ಪಾತ್ರೆ ಮುಟ್ಟಿದರೂ ಮುಸುರೆ ಎಂದು ಕೈ ತೊಳೆಯ ಬೇಕು. ಮುಟ್ಟಾದಾಗ ಮೂರು ದಿನ ಒಳಗೆ ಬರುವಂತಿಲ್ಲ, ಹೊರಗಿನ ಕೋಣೆಯಲ್ಲೇ ಇರಬೇಕು. ನೀರು ಬೇಕಾದರೂ ಕೇಳಿ ಕುಡಿಯಬೇಕು. ಆಗಾಗ ಮನೆಯಲ್ಲಿ ನಡೆಯುವ ಪೂಜೆ, ಪುನಸ್ಕಾರಗಳು, ಇದಂತೂ ಕಾಲಿಗೆ ಹಾಕಿದ ಬೇಡಿಯಂತೆಯೇ.

ಹಳ್ಳಿಯಲ್ಲಿ ಸಿಗುವ ದಪ್ಪ ನೊರೆ ಹಾಲನ್ನು ಬಯಸಿದವಳಿಗೆ ಹಾಲೇನೋ ಸಿಕ್ಕಿತು, ಸಗಣಿ ವಾಸನೆ ಸಹಿಸದಾದಳು. ಹಳ್ಳಿಯ ಜನರ ಚಿತ್ರವಿಚಿತ್ರ ಪ್ರಶ್ನೆಗಳು. ಅಲ್ಪಸ್ವಲ್ಪ ಬದಲಾವಣೆ ಮಾಡಹೊರಟರೂ ಎಲ್ಲರ ವಿರೋಧ ಕಟ್ಟಿಕೊಳ್ಳಬೇಕು. ಒಮ್ಮೆ ಮನೆಯಲ್ಲಿ ಸತ್ಯನಾರಾಯಣ ಪೂಜೆ. ಸುಮಾರು ಜನರು ಸೇರಿದ್ದರು. ಸೀರೆ ಉಡುವ ಬದಲು ಚೂಡಿದಾರ ಹಾಕಿಕೊಂಡು ಹಾಡು ಕೇಳುತ್ತಿದ್ದಳು. ಮಾವ ಅಂತೂ ಎಲ್ಲರ ಎದುರು ಗದರಿಸಿಯೇ ಬಿಟ್ಟರು.

ಇನ್ನೊಂದು ಸಲ ಮಾವನ ತಂದೆಯ ಶ್ರಾದ್ಧ. ಶ್ರಾದ್ಧ ಮಾಡಿದ ಮಾವ ಎಲೆ ಮತ್ತು ಪಿಂಡದನ್ನವನ್ನು ಅಂಗಳದಲ್ಲಿ ಇಟ್ಟಿದ್ದರು. ತೀರಿಕೊಂಡವರು ಕಾಗೆಯಾಗಿ ಬಂದು ತಿನ್ನುತ್ತಾರೆಂದು ನಂಬಿಕೆಯಂತೆ. ಇದನ್ನು ಅರಿಯದ ಅವಳು ನಾಯಿಯನ್ನು ಕರೆದು ತಿನ್ನಿಸಿದಳು. ಮಾವ ಕೆಂಡಮಂಡಲವಾಗಿ ಗಲಾಟೆ ಮಾಡಿದರು. ಆ ಘಟನೆ ಅವಳನ್ನು ಹಳ್ಳಿಯಿಂದ ದೂರ ಓಡುವಂತೆ ಮಾಡಿತು.

ಅಮೂಲ್ಯಾಳ ಮಹತ್ವಾಕಾಂಕ್ಷೆಯೂ ಅವಳನ್ನಾಗಲೇ ದೊಡ್ಡ ಊರಿಗೆ ಹೋಗುವಂತೆ ಪ್ರೇರೇಪಿಸುತ್ತಿತ್ತು. ಇಷ್ಟವಿಲ್ಲದಿದ್ದರೂ
ಕಡೆಗೆ ಮುದ್ದಿನ ಹೆಂಡತಿಯ ಮೋಹದ ಮಾತಿಗೆ ಮರುಳಾಗಿ ಬೆಂಗಳೂರಿನಲ್ಲಿ ಬ್ಯುಸಿನೆಸ್ ಶುರು ಮಾಡಿದ ಶಶಾಂಕ.
ಅಮೂಲ್ಯಾಳೂ ಗಂಡನಿಗೆ ವ್ಯವಹಾರದಲ್ಲಿ ಹೆಗಲು ಕೊಟ್ಟಳು. ಇಬ್ಬರೂ ಮುಟ್ಟಿದ್ದೆಲ್ಲಾ ಚಿನ್ನವಾಯಿತು, ಬಯಸ್ಸಿದ್ದೆಲ್ಲಾ ಕೈಗೆ
ಬಂತು. ಪ್ರತಿಷ್ಠಿತ ಬಡಾವಣೆಯಲ್ಲಿ ದೊಡ್ಡ ಮನೆ, ಕಾರು. ಗಂಡನೊಡನೆ ಊರು ಬಿಟ್ಟವಳು ಮತ್ತೆ ಊರಿಗೆ ಬಂದದ್ದು
ಬೆರಳೆಣಿಕೆಯಷ್ಟು ಸಲ. ಶಶಾಂಕ ಮಾತ್ರ ಆಗಾಗ ಅಪ್ಪ, ಅಮ್ಮ ನನ್ನು ನೋಡಲು ಊರಿಗೆ ಬರುತ್ತಿದ್ದ.

ಎಷ್ಟು ಬೇಗ ದಿನಗಳು ವರ್ಷಗಳಾದವು, ವರ್ಷಗಳು ಹೇಗೆ ಉರುಳಿ ಹೋದವು ಎಂದು ಲೆಕ್ಕ ಹಾಕಲೂ ಸಮಯವಿರಲಿಲ್ಲ. ನಾಳೆಯಿಂದ ಶಶಾಂಕನ ವೈದಿಕದ ಕೆಲಸಗಳು ಶುರುವಾಗುತ್ತೆ ಎನ್ನುವ ವಿಷಯ ಮನಸ್ಸಿಗೆ ಬಂದಾಗ ನಿಟ್ಟುಸಿರೊಂದು ಬಂತು ಅವಳಿಗೆ.
***

ಎಲ್ಲರೂ ಧರ್ಮೋದಕದ ತರ್ಪಣ ಬಿಡಲು ಜಂಬೂ ನದಿಗೆ ಇಳಿದರು. ಪುರೋಹಿತರು, ಅಕ್ಕಪಕ್ಕದ ಮನೆಯವರೆಲ್ಲಾ ಸೇರಿದ್ದರು. ನೀಲಿ ನೈಲಾನ್ ಸೀರೆಯ ಮೇಲೆ ಉದ್ದದ ಕರಿಮಣಿ ಜೋತಾಡುತ್ತಿತ್ತು. ಬಾಬ್ ಕೂದಲನ್ನು ರಬ್ಬರ್ ಬ್ಯಾಂಡ್ ಹಾಕಿ ಜುಟ್ಟು ಕಟ್ಟಿದ್ದರೂ ಗಾಳಿಯ ರಭಸಕ್ಕೆ ಬಿಚ್ಚಿ ಸ್ವತಂತ್ರವಾಗಿ ಹಾರಾಡುತ್ತಿತ್ತು. ಎಲ್ಲರೂ ಅವಳನ್ನು ಮತ್ತು ಅವಳ ಕುತ್ತಿಗೆಯ ಲ್ಲಿರುವ
ಕರಿಮಣಿಯನ್ನೇ ದುರುಗುಟ್ಟಿ ನೋಡಿದಂತಾಯಿತು. ಮೆಲ್ಲನೆ ಸೆರಗಿನಿಂದ ಕುತ್ತಿಗೆಯನ್ನು ಮುಚ್ಚಿಕೊಂಡಳು. ಬಂದವರಲ್ಲಿ
ಕೆಲವರು ಅವಳನ್ನು ಮಾತನಾಡಿಸಲು ಬಂದಾಗ ಕಣ್ಣಲ್ಲಿ ಕಣ್ಣಿಟ್ಟು ಏನನ್ನೋ ಹುಡುಕಿದಂತಾಯಿತು.

ಅರ್ಥವಾಯಿತು ಅವಳಿಗೆ, ಅಕಾಲವಾಗಿ ಗಂಡನನ್ನು ಕಳೆದುಕೊಂಡ ಅವಳ ಕಣ್ಣಲ್ಲಿ ಕಣ್ಣೀರನ್ನು ಹುಡುಕುತ್ತಿದ್ದಿರಬೇಕು. ಸ್ನೇಹಿತನಂತಿರುವ ಗಂಡನನ್ನು ಕಳೆದುಕೊಂಡಾಗ ಅವಳಿಗೆ ದುಃಖವಾಗಿತ್ತು. ಆದರೆ ಎಲ್ಲರ ಎದುರಿನಲ್ಲಿ ದೊಡ್ಡದಾಗಿ ಅಳಲು ಅಥವ ಅಳುವ ನಾಟಕ ಮಾಡಲು ಸಾಧ್ಯವಾಗಲಿಲ್ಲ. ಎಲ್ಲರಿಗಿಂತ ಮುಂದೆ ನಿಂತು ಮಾವ ಮತ್ತು ಶ್ಲೋಕ ತರ್ಪಣ ಕೊಡುತ್ತಿದ್ದರೆ ಹಿಂದೆ ಶಶಾಂಕನ ಅಕ್ಕ, ತಂಗಿಯರು ಕಾಣಿಸಿದರು, ಶ್ಲೋಕ ಸಿಟಿಯಲ್ಲೇ ಬೆಳೆದ ಹುಡುಗ.

ವಯಸ್ಸಿನ್ನೂ 26. ಇಂತಹದ್ದೆಲ್ಲಾ ನೋಡಿದ್ದೂ ಇಲ್ಲ, ಕೇಳಿದ್ದೂ ಇಲ್ಲ. ಇಷ್ಟವಿಲ್ಲದಿದ್ದರೂ, ನಂಬಿಕೆ ಇರದಿದ್ದರೂ ಅವಳೂ
ನದಿಯ ನೀರಿನಲ್ಲಿ ಮುಳುಗಿ ಎದ್ದಳು. ಹಾಗೆ ಮಾಡದಿದ್ದರೆ ಊರಿನವರ ದೃಷ್ಟಿಯಲ್ಲಿ ವಿಲ್ಲನ್. ಸದ್ಯಕ್ಕೆ ಹಾಗಾಗುವುದು ಬೇಕಿರ ಲಿಲ್ಲ ಅವಳಿಗೆ. ಧರ್ಮೋದಕದ ಕೆಲಸ ಮುಗಿಸಿ ವಾಪಸು ಮನೆಗೆ ಬಂದಾಗ ಆಗಲೇ 12 ಗಂಟೆ. ಅತ್ತೆಯ ಕೆಮ್ಮು ರೂಮಿ ನಿಂದ ಕೇಳಿ ಬಂತು.

ಮಗನ ಧರ್ಮೋದಕಕ್ಕೆ ಬಂದಿರಲಿಲ್ಲ. ಮಾತಾಡಬೇಕು ಅನಿಸಿತು, ರೂಮಿನೊಳಗೆ ಹೊಕ್ಕಳು. ಹಾಗೆ ನೋಡಿದರೆ ಅತ್ತೆ ಕೆಟ್ಟವರಲ್ಲ, ಅವಳೂ ಅಲ್ಲ. ಎಲ್ಲರೂ ಅವರವರ ಮಟ್ಟಿಗೆ ಸರಿಯೇ. ಆದರೆ ಇಬ್ಬರೂ ಸಮಾನಾಂತರ ರೇಖೆಯಲ್ಲಿ ನಿಂತವರು. ಗಂಡು ಮಗ ಬೇಕೆಂದು ಕಂಡ, ಕಂಡ ದೇವರಿಗೆ ಹರಕೆ ಹೊತ್ತು ಹುಟ್ಟಿದ ಮಗ ಶಶಾಂಕ. ಈಗ ಮಗನ ಆಯಸ್ಸು ತಮ್ಮ ಕಣ್ಣೆದುರಿಗೇ ಮುಗಿದದ್ದು ನೋಡಿದ ವಯಸ್ಸಾದ ತಾಯಿ ಮತ್ತೂ ಹಣ್ಣಾದಂತೆ ಕಾಣಿಸಿತು.

ಆದರೂ ಅವಳನ್ನು ನೋಡಿ ತನ್ನನ್ನು ತಾನೇ ಸಂಭಾಳಿಸಿಕೊಂಡವರು ‘ಸ್ವಲ್ಪ ಇಳಿದು ಹೋದ ಹಾಗಿದೆಯಲ್ಲಾ ಅಮೂಲ್ಯ?’
ಎನ್ನುತ್ತಾ ಅವಳ ಕೈ ಹಿಡಿದುಕೊಂಡರು. ಅಳು ಬಂತು ಅವಳಿಗೆ. ‘ಅತ್ತೇ..’ ಎನ್ನುತ್ತಾ ಅವರ ಹೆಗಲ ಮೇಲೆ ತಲೆ ಇಟ್ಟು ಬಿಕ್ಕಿದಳು.
ಇಷ್ಟು ಹೊತ್ತು ಕಟ್ಟಿ ಹಿಡಿದುಕೊಂಡಿದ್ದ ಕಣ್ಣೀರು ಯಾರನ್ನೂ ಕೇಳದೆ ಹರಿಯಿತು.

‘ಸಮಾಧಾನ ತಂದುಕೋ, ನಿನ್ನ ದುಃಖ ಸಹಜ, ನೀನೇ ಧೈರ್ಯ ಕುಸಿದರೆ ಹೇಗೆ? ಅಷ್ಟು ದೊಡ್ಡ ಬ್ಯುಸಿನೆಸ್ ನೀನೇ ತಾನೇ ಮುಂದುವರಿಸಿಕೊಂಡು ಹೋಗಬೇಕಾದವಳು’ ಎಂದರು. ಹೌದೆನ್ನುವಂತೆ ತಲೆಯಲ್ಲಾಡಿಸಿದಳು. ಅಮ್ಮನಿಲ್ಲದ ಅಮೂಲ್ಯಾಗೆ ಅತ್ತೆ ಅಮ್ಮನೂ ಆಗಿದ್ದರು, ಅತ್ತೆಯೂ ಆಗಿದ್ದರು. ಮದುವೆಯಾಗಿ ಎರಡು ವರ್ಷವಾದರೂ ಬಸಿರಾಗದಿದ್ದಾಗ ಊರಿನವ ರೊಂದಿಗೆ ಆಡಿಕೊಂಡರು. ಎಲ್ಲಿಂದಲೋ ಮಂತ್ರಿಸಿದ ತಾಯತ ತಂದು ಕೊಟ್ಟು ಕಟ್ಟಿಕೊಳ್ಳಲು ಹೇಳಿದರು. ಕಡೆಗೆ ಮದುವೆ ಯಾಗಿ 5 ವರ್ಷದ ನಂತರ ಶ್ಲೋಕನನ್ನು ಹೆತ್ತಾಗ ಎಲ್ಲಿಗೂ ಹೋಗದ ಅತ್ತೆ ಬೆಂಗಳೂರಿಗೆ ಬಂದು ಬಾಣಂತನ ಮಾಡಿದ್ದರು.

ಮಗುವಿನ ಸ್ನಾನ, ಬಾಣಂತಿಯ ಸ್ನಾನ, ತರ ತರಹದ ಕಷಾಯ ಎನ್ನುತ್ತಾ ಎಲ್ಲವನ್ನೂ ಮಾಡಿದ್ದರು. ಹೀಗೆ ಏನೇನೋ ಆಲೋಚಿಸುತ್ತಿದ್ದವಳಿಗೆ ಅವರ ಮಾತು ಇಹಲೋಕಕ್ಕೆ ಕರೆ ತಂದಿತು ‘ನಾಳೆ ಪುರೋಹಿತರು ಪವಮಾನ ಶಾಂತಿ ಮಾಡುತ್ತಾರೆ, ಶಶಾಂಕನಆತ್ಮಕ್ಕೆ ಶಾಂತಿ ಸಿಗುತ್ತದೆ’. ಅವಳಿಗೆ ಒಮ್ಮೆಲೆ ಸಿಟ್ಟು ಬಂತು, ಇನ್ನೂ ಇವರು ಹಳೆಯ ಸಂಪ್ರದಾಯವನ್ನು ಮರೆಯಲಿಲ್ಲ. ಹೋದವರು ಹೋದರು ಇನ್ನು ಶಾಂತಿ ಏಕೆ ಬೇಕು? ಹೋದವರಿಗೆ ತಲುಪುವುದುಂಟೇ? ಮೈ ಪರಚಿಕೊಳ್ಳುವಂತೆ ಆಯಿತು. ತಟ್ಟನೆ ಎದ್ದು ಹೊರಗೆ ಬಂದಳು.
***

12ನೆಯ ದಿನದ ಹೋಮವೂ ದೊಡ್ಡದೇ. ಹೊಗೆಯಿಂದ ಗಂಟಲು, ಮೂಗು ಕಟ್ಟಿ ಸತತವಾಗಿ ಕೆಮ್ಮ ಬಂತು. ಸೀರೆಯ ಸೆರಗನ್ನೇ ಬಾಯಿಗೆ ತುಂಬಿಕೊಂಡು ಕೆಮ್ಮ ಹೊರಬರದಂತೆ ತಡೆಯಲು ಪ್ರಯತ್ನಿಸಿದಳು. ಜನರ ದೃಷ್ಟಿಯನ್ನು ತಪ್ಪಿಸಲು ಕಾಟನ್ ಸೀರೆಯುಟ್ಟು ಕರಿಮಣಿಯನ್ನು ಬಿಚ್ಚಿಟ್ಟು ಬಂದಿದ್ದಳು.

ಹಣೆಯಲ್ಲಿ ಕಂಡೂ ಕಾಣದಂತೆ ಪುಟ್ಟ ಬೊಟ್ಟು. ಎಳ್ಳು ದಾನ, ಎಣ್ಣೆ ದಾನ, ಗೋದಾನ, ಭೂದಾನ, ಹೀಗೆ ದಾನಗಳು ಒಂದೊಂದಾಗಿ ಸಾಗಿದವು. ಶ್ಲೋಕನಿಗೆ ಇದರಲ್ಲೆಲ್ಲಾ ಎಷ್ಟು ನಂಬಿಕೆ ಇದೆಯೋ ಗೊತ್ತಿಲ್ಲ, ಆದರೆ ಗಂಭೀರವಾಗಿ ಅಜ್ಜ
ಹೇಳಿದಂತೆ ಶೃದ್ಧೆಯಿಂದ ತಂದೆಯ ಕೆಲಸವನ್ನು ಮಾಡುತ್ತಿದ್ದ. ತನಗೆ ಮಾತ್ರ ಯಾವುದರಲ್ಲಿಯೂ ನಂಬಿಕೆ ಬರುತ್ತಿಲ್ಲ. ಎಲ್ಲಾ
ವಿಽ, ವಿಧಾನಗಳು ಮನುಷ್ಯ ತನಗೆ ಸರಿ ಕಂಡಂತೆ ಮಾಡಿದ್ದು, ತಾನೇ ನಿರ್ಮಿಸಿಕೊಂಡ ಗೋಡೆಗಳು. ತನಗೇನೂ ಗಂಡನ ಮೇಲೆ
ಪ್ರೀತಿ ಕಡಿಮೆ ಇಲ್ಲ, ಪ್ರಾಕ್ಟಿಕಲ್ ಆಗಿ ಆಲೋಚಿಸುತ್ತಿದ್ದೇನೆ, ತೀರಿಕೊಂಡವರ ಹೆಸರಿನಲ್ಲಿ ಏನಾದರೂ ಒಳ್ಳೆಯ ಕೆಲಸ ಮಾಡಿ
ಅವರ ಹೆಸರು ಉಳಿಯುವಂತೆ ಮಾಡಬೇಕೇ ಹೊರತು ಈ ತರಹದ ಪೂಜೆ, ಪುನಸ್ಕಾರವಲ್ಲ.

ಬೆಂಗಳೂರಿಗೆ ಹೋದ ಮೇಲೆ ಹಣ ಡೊನೆಟ್ ಮಾಡಿ ಶಶಾಂಕನ ಹೆಸರು ಚಿರಸ್ಥಾಯಿ ಯಾಗುವಂತೆ ಮಾಡಬೇಕು. ಅವಳ ದೃಷ್ಟಿ ಮಾವನತ್ತ ತಿರುಗಿತು, ಪುತ್ರ ಶೋಕ ಸಣ್ಣದಲ್ಲ. ಆದರೂ ಎಲ್ಲವನ್ನೂ ನುಂಗಿಕೊಂಡು ಮಗನ ವೈದಿಕ ಕಾರ್ಯದ ವ್ಯವಸ್ಥೆ ಮಾಡಿದ್ದರು. ಜೀವನವಿಡೀ ಕರ್ತವ್ಯ, ದಾನ, ಧರ್ಮ, ಪಾಪ, ಪುಣ್ಯ, ದೇವರು ಎನ್ನುತ್ತಾ ಕಳೆದವರು. ಗುರಿ ಸಾಧಿಸುವ ಛಲ, ಶ್ರೀಮಂತಿಕೆಯ ಬಗ್ಗೆ ತಲೆ ಕೆಡಿಸಿಕೊಂಡವರೇ ಅಲ್ಲ. ತಾವೇ ಕಟ್ಟಿಕೊಂಡ ಪರಿಧಿಯ ಮೇರೆ ಮೀರಿ ಹೊರಬರಲೂ ಪ್ರಯತ್ನಿಸಿ
ದವರಲ್ಲ. ಶುದ್ಧ ಕೂಪ ಮಂಡೂಕಗಳು ಅನ್ನಿಸಿತು. ವೈಕುಂಠದ ದಿನ ಊರಿನವರು, ನೆಂಟರೆಲ್ಲಾ ಸೇರಿದ್ದರು.

ಬಂದವರಿಗೆಲ್ಲಾ ಬಟ್ಟೆ ದಾನ ನಡೆಯಿತು. ಕೆಲವರು ಹತ್ತಿರ ಬಂದು ಅವಳನ್ನು ಮಾತಾಡಿಸಿದರು. ಇನ್ನು ಕೆಲವರು ವಿಚಿತ್ರ ಪ್ರಾಣಿ
ಯನ್ನು ನೋಡುವಂತೆ ದೂರವೇ ನಿಂತು ನೋಡುತ್ತಿದ್ದರು. ಅವಳು ಎಲ್ಲದಕ್ಕೂ ಸ್ಥಿತಪ್ರಜ್ಞಳಾಗಿದ್ದಳು. ಬೆಂಗಳೂರಿಗೆ ಹೋಗಿ
ಮಾಡಬೇಕಾದ ಕೆಲಸದ ಹೊರೆಯನ್ನು ನೆನೆಸಿಕೊಂಡು ತಲೆಬಿಸಿಯಾಯಿತು. ಟೆಂಡರಿಗೆ ಕೊಟೇಷನ್ ಕಳಿಸಬೇಕು, ಡೆಡ್‌ಲೈನಿಗೆ
ಎರಡು ದಿನ ಬಾಕಿ ಇದೆ. ಇನ್ನು ಎಲ್ಲಾ ನಿರ್ಧಾರವನ್ನು ಒಂಟಿ ಯಾಗಿ ತೆಗೆದುಕೊಳ್ಳಬೇಕು.

ಅದು ಕಷ್ಟವಲ್ಲ. ಆದರೂ ಅಷ್ಟು ದೊಡ್ಡ ಮನೆಯಲ್ಲಿ ಒಬ್ಬಳೇ… ಅಲ್ಲದೆ ಅಷ್ಟು ದೊಡ್ಡ ವ್ಯವಹಾರ ಯಾರಿಗಾಗಿ? ಶ್ಲೋಕ ನಿಗೂ ಏನಾದರೂ ಸಾಧಿಸುವ ಹುಚ್ಚು. ಆಗಲೇ ದೆಹಲಿಯಲ್ಲಿ ಸ್ವಂತ ಕಂಪೆನಿಯನ್ನು ಹುಟ್ಟು ಹಾಕಿದ್ದ. ಇನ್ನೊಂದೆರಡಾದರೂ ಮಕ್ಕಳಿದ್ದಿದ್ದರೆ! ‘ಅಮೂಲ್ಯ ಇನ್ನೊಂದೆರಡು ಹೆತ್ತು ಬಿಡು, ನನ್ನ ಕೈ ಕಾಲು ಗಟ್ಟಿ ಇರುವಾಗ ಬಾಣಂತನ ಮಾಡುತ್ತೇನೆ ನೋಡು’ ಅತ್ತೆಯ ಬುದ್ಧಿವಾದ ನೆನಪಿಗೆ ಬಂತು. ಏನೋ ಸಾಧಿಸುವ ಹುಚ್ಚಿನಲ್ಲಿದ್ದ ತನಗೆ ಮತ್ತೊಂದು ಮಗು ಬೇಡವಾಗಿತ್ತು. ಹೆಣ್ಣೆಂದರೆ ಹೆರುವ ಮೆಷಿನ್ ಎಂದು ತಿಳಿದುಕೊಂಡಿದ್ದಾರೆ ಎಂದು ಸಿಟ್ಟೂ ಬಂದಿತ್ತು. ಆಗ ಅತ್ತೆಯ ಮಾತು ಕೇಳಿದ್ದರೆ ಚೆನ್ನಿತ್ತು ಅನಿಸಿತು.

ಎಲ್ಲಾ ಮುಗಿಸಿ ಬೆಳಿಗ್ಗೆ ಮಗ ಶ್ಲೋಕನೊಡನೆ ಬೆಂಗಳೂರಿಗೆ ಹೊರಟು ನಿಂತಳು. ಇಷ್ಟು ದಿನ ದೂರವೇ ಇದ್ದ ಅತ್ತೆ, ಮಾವ,
ಮನೆ ಎಲ್ಲವೂ ಹತ್ತಿರವಾದಂತೆ, ಹತ್ತಿರದವರನ್ನು ಬಿಟ್ಟು ಹೋಗಬೇಕಲ್ಲ ಎನ್ನುವ ಭಾವನೆ ಮೂಡಿ ಗಂಟಲು ಕಟ್ಟಿದಂತಾ ಯಿತು. ಮುಂದೆ ಹೆಜ್ಜೆ ಇಡಲು ಕಷ್ಟವಾಯಿತು. ದೂರದಲ್ಲಿ ಅತ್ತೆ ಶ್ಲೋಕನನ್ನು ಹಿಡಿದುಕೊಂಡು ಕಣ್ಣು ಒರೆಸಿಕೊಳ್ಳುವುದು ಕಾಣಿಸಿತು.

‘ಅಮೂಲ್ಯ ಬಾ ಇಲ್ಲಿ’ ಹತ್ತಿರ ಕರೆದ ಮಾವ ‘ಶಶಾಂಕನ ಹೆಸರಿನಲ್ಲಿ ಅಂಗವಿಕಲ ಮಕ್ಕಳಿಗಾಗಿ ವಸತಿ ಶಾಲೆ ತೆಗೆಯಬೇಕಂತ ಇದ್ದೇನೆ. ಎಲ್ಲಿ ಶಾಲೆ ತೆರೆಯೋಣ ಹೇಳು? ಗೊತ್ತು ಅದಕ್ಕೆಲ್ಲಾ ಲಕ್ಷಗಟ್ಟಲೆ ಹಣ ಬೇಕಂತ, ಅದಕ್ಕಾಗಿ ಊರಿನಲ್ಲಿರುವ ಗದ್ದೆ, ತೋಟ ಎಲ್ಲಾ ಮಾರಾಟ ಮಾಡಬೇಕಂತ ಇದ್ದೇನೆ. ನನಗೂ ವಯಸ್ಸಾಯಿತು, ನೀನೇ ಇದನ್ನೆಲ್ಲಾ ಮುಂದೆ ನಿಂತು ಮಾಡಿಸಬೇಕು’. ಮಾವನ ಮಾತು ಕೇಳುತ್ತಿದ್ದಂತೆ ಹೆಜ್ಜೆ ದೃಢವಾಯಿತು ಮುಂದೇನು? ಎನ್ನುತ್ತಾ ದಾರಿ ಹುಡುಕುತ್ತಿದ್ದವಳಿಗೆ ದಾರಿ ಕಂಡಂತಾಯಿತು.

ಹೆಚ್ಚು ಆಲೋಚಿಸದೆ ತಟ್ಟನೆ ‘ಮಾವ ಶಶಾಂಕ ಬೆಂಗಳೂರಿನಲ್ಲಿದ್ದರೂ ಅವರ ಆತ್ಮ ಇಲ್ಲೇ ಇದೆ. ಇದೇ ಊರಿನಲ್ಲಿ ಶಾಲೆ ತೆರೆದರಾಯಿತು. ಅದಕ್ಕಾಗಿ ಗದ್ದೆ, ತೋಟ ಮಾರಾಟ ಮಾಡುವುದು ಬೇಡ. ಶಶಾಂಕ ಸಂಪಾದಿಸಿದ್ದೇ ಸಾಕಷ್ಟಿದೆ. ನೀನೇನ್ನುತ್ತಿ ಶ್ಲೋಕ?’. ‘ಮಮ್ಮಿ, ನೀವು ಹೇಳಿದ ಹಾಗೆ’ ಎಂದ ಶ್ಲೋಕ. ‘ಮಾವ ಅದಕ್ಕೆಲ್ಲಾ ವ್ಯವಸ್ಥೆ ಮಾಡೋಣ, ನಾನು ಬರುವ ತಿಂಗಳು ಪುನಃ ಇಲ್ಲಿಗೆ ಬರುತ್ತೇನೆ’ ಎನ್ನುತ್ತಾ ಕಾರಿನತ್ತ ನಡೆದವಳಲ್ಲಿ ದೃಢ ನಿರ್ಧಾರವಿತ್ತು, ಗುರಿ ಇತ್ತು, ಗುರಿ ತಲಪುವ ಛಲವಿತ್ತು.