ಸುರೇಶ ಗುದಗನವರ
ಬಡತನ ಇದ್ದರೂ, ಕಷ್ಟಪಟ್ಟು ಓದಿದರೆ, ಯಶಸ್ಸು ದೊರೆಯುತ್ತದೆ ಎಂಬುದಕ್ಕೆ ಇವರು ಉತ್ತಮ ಉದಾಹರಣೆ. ಕುಟುಂಬದ ಆರ್ಥಿಕ ಸಂಕಷ್ಟವನ್ನು ಕಂಡು ಕಾವಲುಗಾರನ ಕೆಲಸ ಮಾಡುತ್ತಾ, ಅಧ್ಯಯನ ಮುಗಿಸಿದ ರಂಜಿತ್, ಈಗ ಐಐಎಂನಲ್ಲಿ ಸಹಾಯಕ ಪ್ರಾಧ್ಯಾಪಕರು!
ಬಡತನದಲ್ಲಿ ಹುಟ್ಟಿ, ರಾತ್ರಿಯ ಪಾಳಿಯಲ್ಲಿ ಕಾವಲುಗಾರನಾಗಿ ಕೆಲಸ ನಿರ್ವಹಿಸುತ್ತಾ, ಹಗಲಿನಲ್ಲಿ ಕಾಲೇಜಿನಲ್ಲಿ ಓದುತ್ತಾ ಯಶಸ್ಸಿನ ಮೆಟ್ಟಿಲೇರಿ ದವರು ರಂಜಿತ್ ರಾಮಚಂದ್ರನ್. ಕಪ್ಪು ಟಾರ್ಪಲಿನ್ ಹೊದ್ದ ಪುಟ್ಟ ಗುಡಿಸಲಿ ನಲ್ಲಿ ಜೀವಿಸಿ, ಕನಸನ್ನು ನನಸಾಗಿಸಿಕೊಂಡು ಐ.ಐ.ಎಂ.ನಲ್ಲಿ ಸಹಾಯಕ ಪ್ರಾಧ್ಯಾಪಕರಾದರು ರಂಜಿತ್.
ನಿಷ್ಠೆಯಿಂದ ಅಧ್ಯಯನ ನಡೆಸಿದರೆ, ಗುರಿಯನ್ನು ಬೆಂಬತ್ತಿದರೆ ಯಶಸ್ಸು ದೊರಕುತ್ತದೆ ಎಂಬುದಕ್ಕೆ ರಂಜಿತ್ ಅವರು ಒಂದು ಉತ್ತಮ ಉದಾಹರಣೆ. ಕೇರಳದ ಕಾಸರಗೋಡು ಜಿಲ್ಲೆಯವರಾದ ರಂಜಿತ್ ಅವರದು ಬಡ ಕುಟುಂಬ. ಅವರ ತಂದೆ ರಾಮ ಚಂದ್ರನ್ ನಾಯ್ಕ, ವೃತ್ತಿಯಲ್ಲಿ ಟೈಲರ್ ಆಗಿದ್ದಾರೆ. ಅವರ ತಾಯಿ ಬೇಬಿ ಆರ್. ಅವರು ಪಣತ್ತೂರಿನ ಕೇಲಪಂಕಯಂ ನಲ್ಲಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.
ಆ ಕಡುಬಡತನದಲ್ಲಿಯೇ ರಂಜಿತ್ ಅವರು ಪಿಲಿಕೋಡ್ ಪಂಚಾಯತ್‌ನ ವೆಲ್ಲಾಚಲ್ ನಲ್ಲಿರುವ ಬುಡಕಟ್ಟು ಸಮುದಾಯದ ಬಾಲಕರ ಸರ್ಕಾರಿ ಮಾದರಿ ವಸತಿ ಶಾಲೆಯಲ್ಲಿ ಹತ್ತನೆಯ ತರಗತಿ ಪೂರೈಸಿದರು. ಮುಂದಿನ ಓದು ಸುಲಭವಿರಲಿಲ್ಲ. ಕುಟುಂಬದ ಪರಿಸ್ಥಿತಿ ಕಷ್ಟದಲ್ಲಿತ್ತು. ಪ್ರತಿ ದಿನವೂ ಕಷ್ಟ ಎಂಬ ಸ್ಥಿತಿ. ತನ್ನ ಕುಟುಂಬದ ಆರ್ಥಿಕ ಸಂಕಷ್ಟವನ್ನು ಸರಿದೂಗಿಸಲು ರಂಜಿತ್ ಅವರು, ಪಣತ್ತೂರಿನ ಬಿ.ಎಸ್.ಎನ್.ಎಲ್. ದೂರವಾಣಿ ವಿನಿಮಯ ಕೇಂದ್ರದಲ್ಲಿ ತಾತ್ಕಾಲಿಕ ಉದ್ಯೋಗವನ್ನು ಪಡೆದು, ಅಲ್ಲಿ ರಾತ್ರಿ ಕಾವಲುಗಾರ ಕೆಲಸಕ್ಕೆ ಸೇರಿದರು.
ರಾತ್ರಿಯ ಹೊತ್ತಿನಲ್ಲಿ ಕಾವಲುಗಾರನ ಕೆಲಸ ಮಾಡಿದರೂ, ಅವರಿಗೆ ಓದನ್ನು ಮುಂದುವರಿಸುವ ಹಂಬಲ. ಇನ್ನಷ್ಟು ಅಧ್ಯಯನ ಮಾಡಬೇಕೆಂಬ ಕನಸನ್ನು ಸದಾ ಮನದಲ್ಲಿ ಹೊತ್ತು ತಿರುಗಿದರು. ಹಗಲಿನಲ್ಲಿ ಕಾಲೇಜು ಅಭ್ಯಾಸ ಹಗಲು ಹೊತ್ತಿ ನಲ್ಲಿ ಓದುತ್ತ ಸೇಂಟ್ ಪಿಯುಸ್ ಕಾಲೇಜಿನಿಂದ ಅರ್ಥಶಾಸದಲ್ಲಿ ಪದವಿಯನ್ನು ಮುಗಿಸಿದರು. ನಂತರ ಕಾಸರಗೋಡಿನ ಕೇರಳ ಕೇಂದ್ರ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದರು. ವಿಶೇಷವೆಂದರೆ ಈ ಐದು ವರ್ಷಗಳ ಕಾಲ ಅವರು ಪದವಿ ಮತ್ತು ಸಾತ್ನಕೋತ್ತರ ಪದವಿಗಳನ್ನು ಪಡೆ
ಯುವ ಸಮಯದಲ್ಲಿ, ದೂರವಾಣಿ ವಿನಿಮಯ ಕೇಂದ್ರದಲ್ಲಿಯೇ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಲೇ ಇದ್ದರು. ಸ್ನಾತಕೋ ತ್ತರ ಪದವಿ ಮುಗಿಸಿದ ನಂತರ ಪಿಹೆಚ್.ಡಿ. ಗಾಗಿ ಐ.ಐ.ಟಿ. ಮದ್ರಾಸ್‌ಗೆ ಸೇರಿದರು. ಈ ನಡುವೆ ಸರಕಾರದಿಂದ ದೊರೆಯುವ ಸವಲತ್ತುಗಳನ್ನು ಸದುಪಯೋಗ ಮಾಡಿಕೊಂಡಿದ್ದರಿಂದ, ಅವರಿಗೆ ಓದಿನಲ್ಲಿ ಮುಂದುವರಿಯಲು ಅನುಕೂಲ ವಾಯಿತು.
ಆದರೆ ಪಿಹೆಚ್. ಡಿ. ಪದವಿ ಮಾಡುವಾಗ, ಜ್ಞಾನದ ಕೊರತೆಯಿಂದಾಗಿ ತೊಡಕುಗಳು ಎದುರಾದವು. ಅವರಿಗೆ ಮಲಯಾಳಂ ಭಾಷೆಯ ಮೇಲೆ ಮಾತ್ರ ಹಿಡಿತವಿತ್ತು. ಹೀಗಾಗಿ ಅವರು ಪಿಹೆಚ್.ಡಿ. ಪದವಿ ತೊರೆಯಲು ನಿರ್ಧರಿಸಿದರು. ಆದರೆ ಮಾರ್ಗದರ್ಶಕ ರಾದ ಡಾ.ಸುಭಾಷ ಶಶಿಧರನ್ ಮತ್ತು ವೈದೇಹಿ ದಂಪತಿಗಳು ಧೈರ್ಯವನ್ನು ತುಂಬಿದರು. ಅವರ ಪ್ರೇರಣೆಯಿಂದ ಅರ್ಥ ಶಾಸ್ತ್ರದಲ್ಲಿ ಪಿಹೆಚ್.ಡಿ. ಯನ್ನು ಸಂಪೂರ್ಣಗೊಳಿಸಿದರು.
ನಂತರ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇರಿಕೊಂಡು ಎರಡು ತಿಂಗಳು ಕೆಲಸ ನಿರ್ವಹಿಸಿದರು. ಈ ನಡುವೆ ವಿವಿಧ ಸಂಸ್ಥೆಗಳಲ್ಲಿ ಕೆಲಸಕ್ಕಾಗಿ ಅರ್ಜಿ ಹಾಕುತ್ತಲೇ ಇದ್ದರು. ಈಗ ರಾಂಚಿಯ ಐ.ಐ.ಎಂ. ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ರಂಜಿತ್ ಅವರ ತಂದೆ, ತಾಯಿ ಮತ್ತು ಒಡಹುಟ್ಟಿ ದವರಿಗಾಗಿ ಮನೆ ಕಟ್ಟಲು ಯೋಜಿಸುತ್ತಿದ್ದು, ಶಿಕ್ಷಣದ ಮೂಲಕ ಆರ್ಥಿಕ ಮತ್ತು ಸಾಮಾಜಿಕ ಸ್ವಾವಲಂಬನೆಯನ್ನು ಸಾಧಿಸಿದ್ದಾರೆ. ರಂಜಿತ್ ಅವರು ಮದ್ರಾಸ್‌ನ ಐ.ಐ.ಟಿಯಲ್ಲಿ ಸ್ಟೈಪಂಡ್‌ನೊಂದಿಗೆ 2020ರಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆಯುವದರೊಂದಿಗೆ, ಸ್ಟೈಪಂಡ್ ಹಣದಲ್ಲಿ ಉಳಿಸಿ ಒಡಹುಟ್ಟಿದವರಾದ ರಂಜಿತಾ ಮತ್ತು ರಾಹುಲ್‌ಗೆ ಕಳುಹಿಸುತ್ತಿದ್ದರು. ಅವರಿಬ್ಬರೂ ವೃತ್ತಿಪರ ಕೋರ್ಸಗಳನ್ನು ಕಲಿಯುತ್ತಿದ್ದಾರೆ.
ಕಥೆ ವೈರಲ್
ರಂಜಿತ್ ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಎಪ್ರಿಲ್ 9ರಂದು, ಟಾರ್ಪಲಿನ್ ಶೀಟ್‌ನಿಂದ ಮುಚ್ಚಿದ ಶಿಥಿಲವಾದ ಹೆಂಚುಗಳ ಗುಡಿಸಲಿನ ಚಿತ್ರವನ್ನು ಹಂಚಿಕೊಂಡಿದ್ದರು. ಅದು ಅವರು ಜನಿಸಿದ ಮನೆ! ಅವರ ಈ ಜೀವನ ಗಾಥೆಯು ಈಗ ಎಲ್ಲೆಡೆ ವೈರಲ್ ಆಗಿದ್ದು, ನಾಲ್ವತ್ತು ಸಾವಿರಕ್ಕೂ ಹೆಚ್ಚು ಜನರು ಸ್ಪಂದಿಸಿದ್ದಾರೆ.
ಪುಟ್ಟ ಗುಡಿಸಿಲಿನಲ್ಲಿ ಜನಿಸಿ, ಕಷ್ಟಪಟ್ಟು ಓದಿದ ತನ್ನ ಯಶೋಗಾಥೆಯು ಇತರ ಬಡ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬ ಬೇಕೆಂಬುದೇ ಅವರ ಆಸೆ. ಇಂದು ಹಲವು ಬಡ ವಿದ್ಯಾರ್ಥಿಗಳಿಗೆ ರಂಜಿತ್ ರಾಮಚಂದ್ರನ್ ಒಂದು ಸ್ಪೂರ್ತಿ ಯಾಗಿದ್ದಾರೆ. 28 ವರ್ಷದ ರಂಜಿತ್ ಅವರು ಕನಸು ಕಟ್ಟುವ ಪ್ರತಿಯೊಬ್ಬರಿಗೂ ಸಕಾರಾತ್ಮಕತೆಗೆ ಸಾಕ್ಷಿಪ್ರಜ್ಞೆಯಾಗಿದ್ದಾರೆ. ಕಪ್ಪು ಟಾರ್ಪಲಿನ್ ಹೊದ್ದ ಗುಡಿಸಲೇ ಅವರ ಪಾಲಿಗೆ ಸ್ವರ್ಗವಾಗಿತ್ತು. ಗುಡಿಸಲಿ ನಿಂದಲೇ ಐ.ಐ.ಎಂ. ನಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ಉದ್ಯೋಗ ಪಡೆದ ರಂಜಿತ್ ರಾಮಚಂದ್ರನ್ ಯುವ ಸಮುದಾಯಕ್ಕೆ ಸ್ಪೂರ್ತಿಯಾಗಿದ್ದಾರೆ.
***
ನಾನು ನನ್ನ ಜೀವನದ ಕಥೆಯನ್ನು, ಕಷ್ಟಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದೇನೆ. ಅದು ಕೆಲವರಿಗಾದರೂ ಸ್ಪೂರ್ತಿ ನೀಡುತ್ತದೆ ಎಂದು ವಿಶ್ವಾಸದಲ್ಲಿದ್ದೇನೆ. ಪ್ರತಿಯೊಬ್ಬರು ಒಳ್ಳೆಯ ಕನಸು ಕಾಣಬೇಕು ಮತ್ತು ಕನಸುಗಳ್ನು ನನಸಾಗಿ ಮಾಡಿ ಕೊಳ್ಳಲು ಹೋರಾಟ ಮಾಡಬೇಕು ಮತ್ತು ಆ ಮೂಲಕ ಯಶಸ್ಸನ್ನು ಕಂಡುಕೊಳ್ಳಬೇಕೆಂದು ನಾನು ಇಚ್ಛಿಸುತ್ತೇನೆ.
– ರಂಜಿತ್ ರಾಮಚಂದ್ರನ್.