Saturday, 23rd November 2024

ನೂತನ ಮಾಹಿತಿ ತಂತ್ರಜ್ಞಾನ ನಿಯಮ ಪಾಲಿಸಲು ಸಮಯ ಕೇಳಿದ ಟ್ವಿಟ್ಟರ್‌

ನವದೆಹಲಿ: ಸಾಮಾಜಿಕ ಜಾಲತಾಣ ಟ್ವಿಟರ್‌ ಭಾರತದ ನೂತನ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಪಾಲಿಸಲು ಸಮಯಾವಕಾಶ ಕೋರಿದೆ ಎಂಬುದು ವರದಿಯಾಗಿದೆ.

ಮೈಕ್ರೋ-ಬ್ಲಾಗಿಂಗ್ ಸೈಟ್ ನಿಯಮಗಳನ್ನು ಪಾಲಿಸಲು ಉದ್ದೇಶಿಸಿದೆ. ಆದರೆ ಭಾರತದಲ್ಲಿನ ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಹೇಳಿದೆ.

ಐಟಿ ನಿಯಮಗಳನ್ನು ಅನುಸರಿಸಲು ಹೆಚ್ಚಿನ ಸಮಯವನ್ನು ಕೋರಿ ಟ್ವಿಟ್ಟರ್ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಮ್‌ಇಐಟಿವೈ) ಪತ್ರ ಬರೆದಿದೆ. ಟ್ವಿಟ್ಟರ್ ನಿಯಮಗಳನ್ನು ಪಾಲಿಸುವ ಉದ್ದೇಶವನ್ನು ವ್ಯಕ್ತಪಡಿಸಿದೆ.

ಇನ್ನು ಟ್ವಿಟರ್‌ನ ವಕ್ತಾರರು, “ಟ್ವಿಟರ್ ಭಾರತದ ನಿಯಮಗಳಿಗೆ ಬದ್ಧವಾಗಿದೆ. ಹೊಸ ಮಾರ್ಗಸೂಚಿಗಳನ್ನು ಅನುಸರಿಸಲು ಟ್ವಿಟರ್ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ನಾವು ಭಾರತ ಸರ್ಕಾರಕ್ಕೆ ಭರವಸೆ ನೀಡಿದ್ದೇವೆ. ನಮ್ಮ ಪ್ರಗತಿಯ ಬಗ್ಗೆ ಒಂದು ಅವಲೋಕನವನ್ನು ಶೀಘ್ರವೇ ಹಂಚಿಕೊಳ್ಳುತ್ತೇವೆ. ನಾವು ಭಾರತ ಸರ್ಕಾರದೊಂದಿಗೆ ನಮ್ಮ ರಚನಾತ್ಮಕ ಚರ್ಚೆ ಮುಂದುವರೆಸುತ್ತೇವೆ” ಎಂದು ಹೇಳಿದ್ದಾರೆ.

ಕಳೆದ ತಿಂಗಳು ಜಾರಿಗೆ ಬಂದ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಹೊಸ ಐಟಿ ನಿಯಮಗಳು ಫೇಸ್‌ಬುಕ್ ಮತ್ತು ಟ್ವಿಟರ್‌ ನಂತಹ ದೊಡ್ಡ ಪ್ಲ್ಯಾಟ್‌ಫಾರ್ಮ್‌ಗಳು ಕೆಲವು ನಿಯಮಗಳನ್ನು ಪಾಲಿಸುವಂತೆ ಆದೇಶಿಸುತ್ತದೆ. ಈ ವಿಚಾರದಲ್ಲಿ ಸರ್ಕಾರ ಸಂಸ್ಥೆಗಳಿಗೆ ನೊಟೀಸ್‌ ನೀಡಿದೆ. ಇನ್ನು ಈಗಾಗಲೇ ವಾಟ್ಸಾಪ್‌ ಈ ನೂತನ ನಿಯಮದಿಂದ ಜನರ ಗೌಪ್ಯತೆಗೆ ಧಕ್ಕೆ ಉಂಟಾಗುತ್ತದೆ ಎಂದು ಕೋರ್ಟ್ ಮೆಟ್ಟಿಲೇರಿದೆ.

ನಿಯಮಗಳ ಪ್ರಕಾರ, 50 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವವರು ಕುಂದುಕೊರತೆ ನಿವಾರಿಸುವ ಓರ್ವ ಅಧಿಕಾರಿ, ನೋಡಲ್ ಅಧಿಕಾರಿ ಮತ್ತು ಮುಖ್ಯ ಅನುಸರಣೆ ಅಧಿಕಾರಿಯನ್ನು ನೇಮಿಸಬೇಕಿದೆ. ಅಷ್ಟೇ ಅಲ್ಲದೇ ಈ ಮೂವರು ಅಧಿಕಾರಿ ಗಳು ಭಾರತದ ನಿವಾಸಿಗಳಾಗಿರಬೇಕು. ಸಾಮಾಜಿಕ ಮಾಧ್ಯಮ ಕಂಪನಿಗಳು ಫ್ಲ್ಯಾಗ್ ಮಾಡಿದ ವಿಷಯವನ್ನು 36 ಗಂಟೆಗಳಲ್ಲಿ ತೆಗೆದುಹಾಕಬೇಕಾಗುತ್ತದೆ.

ಸಚಿವಾಲಯದ ಸೂಚನೆಯ ಪ್ರಕಾರ, ಮೇ 26, 2021 ರಿಂದ ಈ ನಿಯಮ ಜಾರಿಗೆ ಬಂದರೂ, ಟ್ವಿಟ್ಟರ್ ನಿಯಮಗಳನ್ನು ಪಾಲಿಸದ ಕಾರಣ ಪರಿಣಾಮಗಳು ಎದುರಿಸಬೇಕಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿತ್ತು.