Friday, 18th October 2024

ಅಗತ್ಯ ವಸ್ತುಗಳ ಬೆಲೆ ಏರಿಕೆ ಸಾಮಾನ್ಯ ಸಂಗತಿಯಲ್ಲ

ರಾಜ್ಯದಲ್ಲಿ ಲಾಕ್‌ಡೌನ್ ಆರಂಭಗೊಂಡಿರುವುದಿಂದ ಸರಕಾರ ಹಾಗೂ ಜನರ ಆರ್ಥಿಕ ಸ್ಥಿತಿಗತಿ ಹದಗೆಟ್ಟಿದೆ. ಇದೇ ವೇಳೆ ಅಗತ್ಯ
ವಸ್ತುಗಳ ಬೆಲೆ ಏರಿಕೆ ಕಂಗೆಟ್ಟಿರುವ ಜನಜೀವನಕ್ಕೆ ಮತ್ತುಷ್ಟು ಹೊರೆಯಾಗಿ

ಪರಿಣಮಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾಗಿದೆ. ಇದರಿಂದ ಕೇವಲ ವಾಹನ ಸವಾರರಿಗೆ ಮಾತ್ರವಲ್ಲದೆ, ಪ್ರತಿಯೊಬ್ಬರ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಪೆಟ್ರೋಲ್ – ಡೀಸೆಲ್ ಬೆಲೆ ಹೆಚ್ಚಳದಿಂದ ಸರಕು ಸಾಗಾಣಿಕೆ ವಾಹನಗಳ ದರದಲ್ಲಿ ವ್ಯತ್ಯಾಸ ವಾಗಿರುವುದರಿಂದ ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆ ಆಗತೊಡಗಿದೆ.

ಲಾಕ್‌ಡೌನ್‌ನಿಂದಾಗಿ ಆದಾಯ ಮೂಲಗಳೇ ಸ್ಥಗಿತಗೊಂಡಿರುವಂಥ ವೇಳೆಯಲ್ಲಿ ಬೆಲೆ ಏರಿಕೆ ಎಂಬುದು ಜನಜೀವನಕ್ಕೆ ಅನನುಕೂಲತೆ ಉಂಟುಮಾಡಿದೆ. ಕೋವಿಡ್ ಸಂಕಷ್ಟ ಸಮಯದಲ್ಲಿ ತೈಲದ ಮೇಲೆ ತೆರಿಗೆ ವಿಧಿಸಿ ಬೆಲೆ ಹೆಚ್ಚಳಕ್ಕೆ ಕಾರಣ ವಾಗಿರುವುದು ಸರಿಯಲ್ಲ. ಜನತೆಯಿಂದ ಸರಕಾರಗಳಿಗೆ ಮನವರಿಕೆ ಮಾಡುವ ಪ್ರಯತ್ನ ಗಳಾಗಬೇಕು. ಆದರೆ ಇದೊಂದು ರಾಜಕೀಯ ವಿಷಯವಾಗಿ ಮಾರ್ಪಟ್ಟಿರುವುದು ವಿಪರ್ಯಾಸ.

ಕರೋನಾದ ಸಂದರ್ಭದಲ್ಲಿ ಕಾಳಜಿಯ ಪ್ರಯತ್ನ ಗಳಾಗಬೇಕಿದ್ದ ಅನೇಕ ಸಂಗತಿಗಳು ರಾಜಕೀಯ ವಿಷಯವಾಗಿ ಬಳಕೆ ಯಾದದ್ದು, ದುರಂತದ ಸಂಗತಿ. ಸರಕಾರದ ನ್ಯೂನತೆಗಳನ್ನು ಎತ್ತಿಹಿಡಿಯಬೇಕಾದ ಪ್ರತಿಪಕ್ಷಗಳು ಸರಕಾರಿ ವಿರೋಧಿ
ದೋರಣೆಗೆ ಸೀಮಿತವಾದಂತೆ ಕಂಡುಬರುತ್ತಿದೆ.

ಇನ್ನು ಆಡಳಿತ ಪಕ್ಷದ ಅನೇಕ ಸಚಿವರಿಗೆ ಜನತೆಯ ಪ್ರಾಣ ರಕ್ಷಣೆಯ ಆದ್ಯತೆಗಿಂತಲೂ, ಸಿಎಂ ಬದಲಾವಣೆಯ ವಿಚಾರವೇ ಮುಖ್ಯವಾದಂತಿದೆ. ಈ ಬೆಳವಣಿಗೆಯಿಂದ ಮೊದಲೇ ಸಂಕಷ್ಟಕ್ಕೆ ಸಿಲುಕಿರುವ ಜನತೆಗೆ ಮತ್ತಷ್ಟು ಸಂಕಷ್ಟ ಎದುರಾಗುತ್ತಿದೆ. ಅನೇಕರು ಆರ್ಥಿಕ ಸಂಕಷ್ಟದಿಂದ ಖಿನ್ನತೆಗೆ ಒಳಗಾಗುತ್ತಿದ್ದರೆ, ಮತ್ತೆ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ
ದುರ್ಘಟನೆಗಳಿಗೆ ಹೊಣೆ ಯಾರು ಎಂಬುದು ಪ್ರಸ್ತುತ ಅವಲೋಕಿಸಬೇಕಿರುವ ಪ್ರಮುಖ ಸಂಗತಿ.