Thursday, 28th November 2024

ಅಂಬೇಡ್ಕರರ ದೃಷ್ಟಿಕೋನದಲ್ಲಿ ಸಾವರ್ಕರ್‌ ಸಾಮ್ರಾಜ್ಯದ ಆಯಾಮ

ವಿಶ್ಲೇಷಣೆ

ಡಾ.ಸುಧಾಕರ ಹೊಸಳ್ಳಿ

ಒಟ್ಟಾರೆ ಅಂಬೇಡ್ಕರರು, ಸ್ವಾತಂತ್ರ್ಯ ಹೋರಾಟದ ಸಾವರ್ಕರ್ ಯೋಜನೆಯಲ್ಲಿ ಸ್ಪಷ್ಟತೆ ಹಾಗೂ ದಕ್ಷತೆ ಇರುವು ದನ್ನು ಮತ್ತು ಇದೇ ವಿಷಯದಲ್ಲಿ ಕಾಂಗ್ರೆಸ್‌ನ ಕುತಂತ್ರತೆ ಅಡಕವಾಗಿರುವುದನ್ನು ಸೂಕ್ಷ್ಮವಾಗಿ ಗ್ರಹಿಸಿದ್ದಾರೆ. ಜತೆಗೆ ನಿರ್ಭೀತಿಯಿಂದ ತಮ್ಮ ಬರಹಗಳಲ್ಲಿ ದಾಖಲಿಸಿದ್ದಾರೆ.

ಹಿಂದೂಗಳ ರಾಷ್ಟ್ರ ಎಲ್ಲಾ ಕಾಲಕ್ಕೂ ಹಿಂದುಸ್ತಾನವಾಗುವಂತೆ ಭೂ ನಕ್ಷೆಯ ಮೇಲೆ ಅಳಿದು ಹೋಗದ ಹಾಗೆ ನಾವು
ನಮೂದಿಸಬೇಕು. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಅಂಬೇಡ್ಕರ್ ಅವರು ಸ್ವತಂತ್ರ ಪೂರ್ವ ಭಾರತದ ಅನೇಕ ಇತಿಹಾಸ
ಪುರುಷರ ಕುರಿತು ಅಧ್ಯಯನ ಮಾಡಿದರು. ಅವರಲ್ಲಿ ಬೆರಳೆಣಿಕೆಯಷ್ಟು ವ್ಯಕ್ತಿಗಳ ಕುರಿತು ಸೂಕ್ಷ್ಮ ಅಧ್ಯಯನ ಮಾಡಿದರು ಭಾರತದ ಇತಿಹಾಸವನ್ನು ದಾಖಲೀಕರಣ ಮಾಡಲು ಈ ರೀತಿಯ ಮಹಾಪುರುಷರ ಒಲವು ಮತ್ತು ನಿಲುವುಗಳು ಅಗತ್ಯ ಎಂಬುದನ್ನು ಅಂಬೇಡ್ಕರ್ ಮನಗಂಡಿದ್ದರು.

ಈ ಅಧ್ಯಯನದದಲ್ಲಿ ಅಗ್ರಪಂಕ್ತಿಯಲ್ಲಿ ಅಂಬೇಡ್ಕರರು ನಿಂತು ನೋಡಿದ ಮಹಾಪುರುಷರ ಸಾಲಿನಲ್ಲಿ ವಿನಾಯಕ ದಾಮೋದರ ಸಾವರ್ಕರ್ ಅವರು ಗಮ್ಯ ಸ್ಥಾನ ಹೊಂದಿದ್ದರು. ಅಂಬೇಡ್ಕರರು ತಮ್ಮ ಪರಿ ದೃಷ್ಟಿಯಲ್ಲಿ ಸಾವರ್ಕರ್ ಅವರ ಸ್ವಾತಂತ್ರ್ಯದ ಆಯಾಮಗಳನ್ನು ಸ್ವರಾಜ್ಯದ ಕಲ್ಪನೆಯನ್ನು ಹೆಮ್ಮೆಯಿಂದ ಮತ್ತು ವಸ್ತುನಿಷ್ಠತೆಯಿಂದ ವಿಶ್ಲೇಷಿಸುತ್ತಾರೆ.

ನೀವು ಬಂದರೆ ನಿಮ್ಮೊಡನೆ, ನೀವು ಬಾರದಿದ್ದರೆ ನಿಮ್ಮನ್ನು ಬಿಟ್ಟು, ನೀವು ವಿರೋಧಿಸಿದರೆ, ನಿಮ್ಮನ್ನು ಮೀರಿ ತಮ್ಮ ರಾಷ್ಟ್ರೀಯ ಸ್ವಾತಂತ್ರ್ಯಕ್ಕಾಗಿ ಶಕ್ತಿಮೀರಿ ಹೋರಾಡಲು ಹಿಂದುಗಳು ಸದಾ ಸಿದ್ಧರಿದ್ದಾರೆಂದೂ, ಸಾವರ್ಕರ ಅವರು ಮುಸ್ಲಿಮರಿಗೆ ಸ್ವಾತಂತ್ರ್ಯ
ಹೋರಾಟದ ಬಗ್ಗೆ ಸ್ಪಷ್ಟ ನಿಲುವು ರವಾನಿಸಿದ್ದಾರೆ ಎಂದು ಅಂಬೇಡ್ಕರರು ದಾಖಲಿಸುತ್ತಾರೆ. ಮುಂದುವರಿದು ಅವರ ದಾಖಲು ಸಾವರ್ಕರ್ ಅವರು ತಮ್ಮ ಯೋಜನೆಗೆ(ಸ್ವ್ಯಾತಂತ್ರ ಹೋರಾಟದ) ಮುಸ್ಲಿಮರ ಪ್ರತಿಕ್ರಿಯೆಯ ಬಗೆಗೆ ಏನು ಚಿಂತೆ ಮಾಡಿ
ದವರಲ್ಲ ಅವರು ತಮ್ಮ ಯೋಜನೆಯನ್ನು ರೂಪಿಸಿ ‘ಸ್ವೀಕರಿಸಿ ಇಲ್ಲವೇ ತ್ಯಜಿಸಿ’ ಎಂಬ ಸೂಚನೆಯೊಂದಿಗೆ ಮುಸ್ಲಿಮರ ಮುಖಕ್ಕೆ ಎಸೆದು ಬಿಡುತ್ತಾರೆ.

ಮುಸ್ಲಿಮರು ಸ್ವರಾಜ್ಯದ ಹೋರಾಟದಲ್ಲಿ ಪಾಲ್ಗೊಳ್ಳಲು ನಿರಾಕರಿಸಬಹುದು ಎಂಬುದರ ಬಗೆಗೆ ಅವರು ಗಲಿಬಿಲಿಗೊಳ್ಳಲಿಲ್ಲ.
ಹಿಂದೂಗಳ ಮತ್ತು ಹಿಂದೂ ಮಹಾಸಭೆಯ ತಾಕತ್ತನ್ನು ಚೆನ್ನಾಗಿ ಬಲ್ಲರು. ಹಿಂದುಗಳು ಏಕಾಂಗಿಯಾಗಿ ಯಾರ ಸಹಾಯವೂ ಇಲ್ಲದೆ, ಬ್ರಿಟಿಷರಿಂದ ಸ್ವರಾಜ್ಯವನ್ನು ಕಿತ್ತು ಕೊಳ್ಳಬಲ್ಲರು ಎಂಬ ಭರವಸೆಯಿಂದ ಹೋರಾಟವನ್ನು ಮುಂದುವರಿಸುವಂತೆ ಸಲಹೆ ಕೊಡುತ್ತಾರೆ. (ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಪುಟ ಸಂಖ್ಯೆ ೫೦೩, ಸಂಪುಟ ) .

ಅಂಬೇಡ್ಕರರು ಹೇಳುವಂತೆ ಸಾವರ್ಕರ್ ಅವರು ಸ್ವರಾಜ್ಯದ ಭಾಗವಾಗಿ ಎರಡು ವಿಷಯಗಳನ್ನು ಪ್ರಮುಖವಾಗಿ ಪ್ರತಿಪಾದಿಸು ತ್ತಾರೆ. ಮೊದಲನೆಯದು ಇಂಡಿಯಾಕ್ಕೆ ‘ಹಿಂದುಸ್ಥಾನ‘ ಎಂಬ ಅಂಕಿತ ನಾಮವನ್ನೇ ಉಳಿಸಿಕೊಳ್ಳಬೇಕು. ನಮ್ಮ ದೇಶಕ್ಕೆ ಹಿಂದುಸ್ಥಾನ ಎಂಬ ಹೆಸರು ಮುಂದುವರಿಯಬೇಕು, ಹಿಂದು ಜನಾಂಗದ ನೆಲೆಯಾಗಿರುವ ರಾಷ್ಟ್ರಕ್ಕೆ ,ಹಿಂದುಗಳ ದೇಶ ಎಂಬ
ಅರ್ಥ ಸೂಚಿತವಾಗುವಂತೆ. ಸಿಂಧು ಎಂಬ ಮೂಲ ಪದದಿಂದ ಸಾಧಿತಗೊಂಡ ಇಂಡಿಯಾ, ಹಿಂದ್ ಮುಂತಾದ ನಾಮಾಂಕಿತ ಗಳನ್ನು ಬಳಸಬಹುದು. ಭರತ ಭೂಮಿ ಮುಂತಾದವುಗಳು ನಿಜವಾಗಿಯೂ ನಮ್ಮ ದೇಶದ ಪ್ರಾಚೀನ ಹಾಗೂ ಬಹುಮೆಚ್ಚಿನ ಉಪಾಧಿಗಳು.

ಅವು ನಮ್ಮ ಸಂಸ್ಕೃತ ಗಣ್ಯ ವ್ಯಕ್ತಿಗಳಿಗೆ ಹಿತವಾಗಿ ಇನ್ನೂ ಉಳಿಯುತ್ತವೆ. ಅದೇನೇ ಇದ್ದರೂ, ನಮ್ಮ ತಾಯಿನಾಡನ್ನು ಹಿಂದೂಸ್ಥಾನ ಎಂದೇ  ರೆಯಬೇಕು ಎಂಬ ಹಿಂದೂಗಳ ಹಠದಿಂದಾಗಿ ನಮ್ಮ ಇಂದು ಹಿಂದೂಯೇತರ ಬಾಂಧವರ ಮೇಲೆ ಯಾವುದೇ ಆಕ್ರಮಣ ವಾಗಲಿ ಅಪಮಾನ ವಾಗಲಿ ಧ್ವನಿತವಾಗಲಾರದು. ಆಂಗ್ಲೋ ಇಂಡಿಯನ್ನರು, ಇಷ್ಟೊಂದು ನ್ಯಾಯ ಸಮ್ಮತವಾದ ಈ ವಿಷಯದಲ್ಲಿ ಹಿಂದುಗಳಾದ ನಮ್ಮ ಅಭಿಪ್ರಾಯ ಒಪ್ಪಿಕೊಳ್ಳಲು ನಿರಾಕರಿಸುತ್ತಾರೆ.

ನಮ್ಮ ಮುಸ್ಲಿಂ ಬಾಂಧವರ ಬಗ್ಗೆ ಹೇಳುವುದಾದರೆ ‘ಹಿಂದೂ- ಮುಸ್ಲಿಂ ಐಕ್ಯತೆಯಲ್ಲಿ ಈ ಸಣ್ಣ ವಿಷಯವನ್ನೇ ಒಂದು
ದೊಡ್ಡ ಬೆಟ್ಟವನ್ನಾಗಿ ಮಾಡುವ ಅವರ ಪ್ರವೃತ್ತಿಯನ್ನು ನಾವು ಮುಚ್ಚಿಡ ಬೇಕಾಗಿಲ್ಲ’. ಆದರೆ ಮುಸ್ಲಿಮರು ಇಂಡಿಯಾದಲ್ಲಿ ಮಾತ್ರ ನೆಲೆಸಿರುವುದಿಲ್ಲ. ಇಂಡಿಯಾದ ಮುಸ್ಲಿಮರು ಮಾತ್ರ ಇಸ್ಲಾಮಿನ ಅಳಿದುಳಿದ ಕಡು ಶ್ರದ್ಧಾಳುಗಳು ಅಲ್ಲ ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು.

ಚೀನಾದೊಳಗೆ ಕೋಟಿಗಟ್ಟಲೆ ಮುಸಲ್ಮಾನರಿದ್ದಾರೆ. ಗ್ರೀಸ್ ,ಪ್ಯಾಲೆಸ್ತೀನ್ ಹಂಗೇರಿ ಮತ್ತು ಪೋಲ್ಯಾಂಡ್‌ಗಳಲ್ಲಿ ಕೂಡ ಅವರ ಜನತೆಯ ಮಧ್ಯದಲ್ಲಿ ಸಾವಿರಾರು ಮುಸ್ಲಿಮರಿದ್ದಾರೆ. ಆದರೆ ಅಲ್ಲಿ ಅಲ್ಪಸಂಖ್ಯಾತರು ಆಗಿರುವುದರಿಂದ, ಕೇವಲ ಒಂದು ಜನ ಸಮುದಾಯವಾದ್ದರಿಂದ ಆ ದೇಶಗಳ ಬಹುಸಂಖ್ಯಾತರ ನೆಲೆಗಳನ್ನು ಸೂಚಿಸುವ ಪ್ರಾಚೀನ ಹೆಸರುಗಳನ್ನು ಬದಲಾಯಿಸಲು ತಮ್ಮ ಅಸ್ತಿತ್ವವನ್ನು ಒಂದು ಕಾರಣವನ್ನಾಗಿ ಅವರು ಮುಂದಿಟ್ಟಿಲ್ಲ.

‘ಪೋಲ್ಯಾಂಡ್ ಜನರ ನಾಡು ಪೋಲ್ಯಾಂಡ್ ಆಗಿಯೂ ಗ್ರೀಕರ ನಾಡು ಗ್ರೀಸ್ ಆಗಿಯೂ ಮುಂದುವರೆದಿದೆ ಮುಸ್ಲಿಮರು ಅವುಗಳನ್ನು ವಿರೂಪಗೊಳಿಸಲು ಇಲ್ಲ ಅಥವಾ ಹುಚ್ಚು ಸಾಹಸಕ್ಕಿಳಿಲಿಯಲಿಲ್ಲ’. ಅವರು ತಮ್ಮನ್ನು ಪೋಲ್ಯಾಂಡ್ ಮುಸ್ಲಿಮರು ಅಥವಾ ಗ್ರೀಕ್ ಮುಸ್ಲಿಮರು ಅಥವಾ ಚೀನೀ ಮುಸ್ಲಿಮರೆಂದು ಗುರುತಿಸಿಕೊಳ್ಳುವುದರಲ್ಲಿ ತೃಪ್ತಿ ಹೊಂದಿದ್ದಾರೆ.
ಅಂತೆಯೇ ನಮ್ಮ ಮುಸ್ಲಿಂ ಬಾಂಧವರು ತಮ್ಮನ್ನು ರಾಜಕೀಯವಾಗಿ ಅಥವಾ ಪ್ರಾದೇಶಿಕವಾಗಿ ಹಿಂದುಸ್ಥಾನಿ ಮುಸಲ್ಮಾನರು ಎಂದು ಗುರುತಿಸಿಕೊಂಡು, ತಮ್ಮ ಧಾರ್ಮಿಕ ಸಾಂಸ್ಕೃತಿಕ ಅಸ್ತಿತ್ವವನ್ನು ಕಾಪಾಡಿಕೊಳ್ಳಬಹುದು.

ಅಷ್ಟೇ ಅಲ್ಲ ಇಂಡಿಯಾಕ್ಕೆ ಅವರ ಆಗಮನ ಕಾಲದಿಂದ ಮುಸ್ಲಿಮರು ತಮ್ಮನ್ನು ಹಿಂದುಸ್ಥಾನಿಗಳೆಂದು ತಾವಾಗಿಯೇ ಕರೆದುಕೊಳ್ಳುತ್ತಿದ್ದರು. ವಸ್ತುಸ್ಥಿತಿ ಹೀಗಿದ್ದರೂ ಕೂಡ, ನಮ್ಮ ದೇಶದ ಭಾಂದವರಲ್ಲಿ ಕೆಲವೊಂದು ಸಿಡುಕು ಸ್ವಭಾವದ ಮುಸ್ಲಿಂ ಗುಂಪುಗಳು ,ನಮ್ಮ ದೇಶದ ಹೆಸರನ್ನು ಆಕ್ಷೇಪಿಸುತ್ತಾರೆ. ಇದರಿಂದಾಗಿ ನಮ್ಮ ಆತ್ಮಸಾಕ್ಷಿಗೆ ವಿರೋಧರಾಗಿ ಹೇಡಿಗಳಾಗಿ ನಾವು ಇರಬೇಕಾಗಿಲ್ಲ.

ನಮ್ಮ ತಾಯಿನಾಡಿನ ಸಮ್ಮತವಾದ ಹೆಸರು ಹಿಂದುಸ್ಥಾನ ಋಗ್ವೇದದ ಕಾಲದಿಂದ ನಮ್ಮ ಕಾಲದ ಹಿಂದೂಗಳಲ್ಲಿಯೂ ಸಮ್ಮತವಾದ ಸಿಂಧುಗಳು ಎಂಬುದರಿಂದ ಬಂದಂತಹದ್ದು. ನಮ್ಮ ತಾಯಿನಾಡಿನ ಹಿಂದುಸ್ಥಾನ ಎಂಬ ಹೆಸರಿನಲ್ಲಿ ಸೂಚಿತ ವಾಗುವ ನಮ್ಮ ರಾಷ್ಟ್ರದ ಪರಂಪರೆಗೆ ದ್ರೋಹವನ್ನಾಗಲಿ ಅಥವಾ ಬಂಗ ತರುವು ದನ್ನು ಆಗಲಿ ನಾವು ಹಿಂದುಗಳು ಮಾಡಕೂಡದು.

ಜರ್ಮನರ ದೇಶ ಜರ್ಮನಿ ಯಾಗುವಂತೆ, ಇಂಗ್ಲಿಷರ ನಾಡು ಇಂಗ್ಲೆಂಡ್ ಆಗುವಂತೆ , ತುರುಕರ ರಾಷ್ಟ್ರ ತುರ್ಕಿಸ್ತಾನ, ಆಫ್ಗನ್ ರದ್ದು ಆಫ್ಗನಿಸ್ತಾನ ಆಗುವಂತೆ, ಹಿಂದೂಗಳ ರಾಷ್ಟ್ರ ಎಲ್ಲಾ ಕಾಲಕ್ಕೂ ಹಿಂದೂಸ್ಥಾನವಾಗುವಂತೆ ಭೂ ನಕ್ಷೆಗಳ ಮೇಲೆ ಅಳಿದು ಹೋಗದ ಹಾಗೆ ನಾವು ನಮೂದಿಸಬೇಕು . ಎರಡನೇ ಅಂಶ ಸಂಸ್ಕೃತವನ್ನು ಧಾರ್ಮಿಕ ಭಾಷೆಯನ್ನಾಗಿ, ಹಿಂದಿಯನ್ನು
ರಾಷ್ಟ್ರೀಯ ಭಾಷೆಯನ್ನಾಗಿ ಮತ್ತು ನಗಾರಿಯನ್ನು ಹಿಂದೂ ಸಮುದಾಯದ ಲಿಪಿಯನ್ನಾಗಿಸಿಕೊಳ್ಳಬೇಕು.

ಸಂಸ್ಕೃತ ನಮ್ಮ ದೇವಭಾಷೆ. ಸಂಸ್ಕೃತ ಮೂಲದ, ಸಂಸ್ಕೃತದಿಂದ ಪುಷ್ಟಿ ಪಡೆಯುವ ಹಿಂದಿ ನಮ್ಮ ಪ್ರಚಲಿತ ರಾಷ್ಟ್ರಭಾಷೆ. ಹಿಂದುಗಳಾದ ನಮಗೆ ಸಂಸ್ಕೃತ ಕೇವಲ ಅತ್ಯಂತ ಸಂಪದ್ಭರಿತ ಜಗತ್ತಿನ ಅತಿ ಪ್ರಾಚೀನ ಭಾಷೆಗಳಲ್ಲಿ ಅತ್ಯಂತ ಸಂಸ್ಕಾರಗೊಂಡ ಭಾಷೆ ಮಾತ್ರವಲ್ಲದೆ, ಎಲ್ಲ ಭಾಷೆಗಳಿಗಿಂತ ಲೂ ಹೆಚ್ಚು ಪವಿತ್ರವಾದ ಭಾಷೆಯಾಗಿದೆ.

ನಮ್ಮ ಧಾರ್ಮಿಕ ಗ್ರಂಥಗಳು ಇತಿಹಾಸ ,ತತ್ವಶಾಸ್ತ್ರ ಹಾಗೂ ಸಂಸ್ಕೃತಿ ಅವುಗಳ ಬೇರು ಗಳೆಲ್ಲವೂ ಸಂಸ್ಕೃತ ಸಾಹಿತ್ಯದಲ್ಲಿ ಆಳವಾಗಿ ಭದ್ರವಾಗಿ ಹಿಡಿದುಕೊಂಡಿವೆ. ಈ ಕಾರಣದಿಂದಾಗಿ, ವಾಸ್ತವವಾಗಿ ಅದು ನಮ್ಮ ಜನಾಂಗದ ಜ್ಞಾನ ಕೇಂದ್ರ. ‘ಸಂಸ್ಕೃತ ನಮ್ಮ ಹಲವಾರು ಮಾತೃ ಭಾಷೆಗಳ ಜನನಿಯಾಗಿದ್ದು, ಉಳಿದವುಗಳಿಗೆ ತನ್ನ ಮೊಲೆಯ ಹಾಲುಣಿಸಿ ಪೋಷಿಸಿದ್ದಾಳೆ‘( ಪುಟ
ಸಂಖ್ಯೆ೪೯೨,೪೯೩,೪೯೪ ಸಂಪುಟ ) ಅಂಬೇಡ್ಕರರು ಗುರುತಿಸಿದಂತೆ, ಸಾವರ್ಕರ್ ಅವರು ಪಾಕಿಸ್ತಾನದ ಬದಲು ಸೂಚಿಸಿದ ಪರ್ಯಾಯ ವ್ಯವಸ್ಥೆಯಲ್ಲಿ ಸ್ಪಷ್ಟತೆ ಛಾತಿ, ಮತ್ತು ಖಚಿತತೆ ಇದ್ದು, ಅವುಗಳಲ್ಲಿರುವ ಕಾಂಗ್ರೆಸ್ ಪ್ರಕಟಣೆ, ಅಲ್ಪಸಂಖ್ಯಾತರ ಹಕ್ಕುಗಳ ಬಗೆಗಿನ ಅನಿಯತೆ, ಅಸ್ಪಷ್ಟತೆ ಮತ್ತು ಅನಿರ್ದಿಷ್ಟತೆಗಳನ್ನು ಗುರುತಿಸುತ್ತವೆ.

ಮುಸ್ಲಿಮರು ಇಲ್ಲಿಯ ತನಕ ಹೋಗಬಹುದು, ಆದರೆ ಇದಕ್ಕಿಂತ ಮುಂದೆಯಲ್ಲ ಎಂದು ಅವರಿಗೆ ತಿಳಿಸುವ ಯೋಜನೆ ಸಾವರ್ಕರ್ ಅವರ ಯೋಜನೆ ಆಗಿದೆ. ಹಿಂದೂ ಮಹಾಸಭೆಯೊಂದಿಗೆ ತಮ್ಮ ಸ್ಥಾನಮಾನವೇನೆಂಬುದನ್ನು ಮುಸ್ಲಿಮರು ಅರಿತುಕೊಂಡಿದ್ದಾರೆ. ತದ್ವಿರುದ್ಧವಾಗಿ, ಕಾಂಗ್ರೆಸ್ ಮುಸ್ಲಿಮರೊಡನೆ ನಡೆದುಕೊಳ್ಳುವ ರೀತಿ ಹಾಗೂ ಅಲ್ಪಸಂಖ್ಯಾತ ಪ್ರಶ್ನೆಯನ್ನು ಮೋಸಗಾರಿಕೆಯ ರೀತಿಯಲ್ಲಿ ಅಲ್ಲದಿದ್ದರೂ, ತನ್ನ ವ್ಯವಹಾರ ಚಾತುರ್ಯ ಒಂದು ಆಟವನ್ನಾಗಿ ಮಾಡಿದು
ದರಿಂದ, ಕಾಂಗ್ರೆಸ್‌ನೊಂದಿಗೆ ತಮ್ಮ ಸಂಬಂಧವೆಂಬುದು ಮುಸಲ್ಮಾನರಿಗೆಯೇ ಸ್ಪಷ್ಟವಾಗಿ ತಿಳಿಯದು. ( ಪುಟ ಸಂಖ್ಯೆ೫೦೧ ಸಂಪುಟ ) ಒಟ್ಟಾರೆ ಅಂಬೇಡ್ಕರರು, ಸ್ವಾತಂತ್ರ್ಯ ಹೋರಾಟದ ಸಾವರ್ಕರ್ ಯೋಜನೆಯಲ್ಲಿ ಸ್ಪಷ್ಟತೆ ಹಾಗೂ ದಕ್ಷತೆ
ಇರುವುದನ್ನು ಮತ್ತು ಇದೇ ವಿಷಯದಲ್ಲಿ ಕಾಂಗ್ರೆಸ್‌ನ ಕುತಂತ್ರತೆ ಅಡಕವಾಗಿರುವುದನ್ನು ಸೂಕ್ಷ್ಮವಾಗಿ ಗ್ರಹಿಸಿದ್ದಾರೆ.

ಜತೆಗೆ ನಿರ್ಭೀತಿಯಿಂದ ತಮ್ಮ ಬರಹಗಳಲ್ಲಿ ದಾಖಲಿಸಿದ್ದಾರೆ. ಇಂತಹ ನಿಷ್ಠೂರ ಜ್ಞಾನಿಗಳು, ಕಾನೂನು ಪಂಡಿತರಾದ
ಅಂಬೇಡ್ಕರರ ಗ್ರಹಿಕೆಯನ್ನು ಹಿಂದೂ ಸಮಾಜ, ಅದರಲ್ಲೂ ಯುವಕವರ್ಗ ಅತ್ಯಂತ ಸೂಕ್ಷ್ಮಗ್ರಾಹಿಗಳಾಗಿ, ಮಂಥನಕ್ಕೆ ಒಳಪಡಿಸಿಕೊಂಡು ಸಾವರ್ಕರರ ಜಯಂತಿ, ಶುಭಾಶಯಗಳಿಗೆ ಮಾತ್ರ ಸೀಮಿತವಾಗದಂತೆ, ರಾಷ್ಟ್ರ ಪರ ಚಿಂತನೆಗೆ ಮುಂದಾಗ ಬೇಕಿರುವುದು ಜರೂರು ನಡಾವಳಿ.