ಕೆ.ಜನಾರ್ದನ ತುಂಗ
ಬುದ್ಧಿ ಅಥವಾ ಪ್ರಜ್ಞೆ ಸ್ಥಾಪಿತವಾದವನು ಯುಕ್ತ. ಇಲ್ಲದಿದ್ದರೆ ಅವನು ಅಯುಕ್ತ.
ನಾಸ್ತಿ ಬುದ್ಧಿರಯುಕ್ತಸ್ಯ ನ ಚಾಯುಕ್ತಸ್ಯ ಭಾವನಾ |
ನ ಚಾಭಾವಯತಃ ಶಾಂತಿರಶಾಂತಸ್ಯ ಕುತಃ ಸುಖಮ್ ||
ಈ ಶ್ಲೋಕದಲ್ಲಿ ಬರುವ ಅಯುಕ್ತಸ್ಯ ಶಬ್ದಕ್ಕೆ ‘ಪರಾತ್ಪರ ನೊಡನೆ, ಸಂಬಂಧ ಹೊಂದದವನಿಗೆ, ಕರಣಗಳನ್ನು ಗೆಲ್ಲದವನಿಗೆ’ ಎಂದು ಬೇರೆಬೇರೆಯಾಗಿ ಅರ್ಥಗಳನ್ನು ಹೇಳಿದ್ದಾರೆ.
ಅಯುಕ್ತನಿಗೆ ಬುದ್ಧಿ ಇರುವುದಿಲ್ಲ ಎಂದು ಹೇಳಿರುವುದನ್ನು ಮೊದಲು ಗಮನಿಸೋಣ. ಬುದ್ಧಿ ಎಂದರೇನು? ಈಗ ನಡೆಯು ತ್ತಿರುವ ವಿದ್ಯಮಾನಗಳನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಬುದ್ಧಿ. ಬುದ್ಧಿಸ್ತಾತ್ಕಾಲಿಕೀ ಜ್ಞಾಯಾ. ಇದು ವರ್ತಮಾನಕ್ಕೆ
ಸಂಬಂಧಿಸಿದ ವಿಷಯ.
(ಸ್ಮತಿರ್ವ್ಯತೀತವಿಷಯಾ ಮತಿರಾಗಾಮಿಗೋಚರಾ |
ಬುದ್ಧಿಸ್ತಾತ್ಕಾಲಿಕೀ eಯಾ ಪ್ರಜ್ಞಾ ತ್ರೈಕಾಲಿಕೀ ಮತಾ||
ಪ್ರಜ್ಞಾ ನವನವೋನ್ಮೇಷಶಾಲಿನೀ ಪ್ರತಿಭಾ ಮತಾ)
ಅಯುಕ್ತನಾದವನಿಗೆ ವರ್ತಮಾನದ ಘಟನೆಗಳನ್ನು ಅವು ಹೇಗಿವೆಯೋ ಹಾಗೆಯೇ ತಿಳಿದುಕೊಳ್ಳುವುದು ಸಾಧ್ಯವಾಗುವುದಿಲ್ಲ.
ಅಯುಕ್ತ ಯಾರು?
ಈ ಅಯುಕ್ತ ಎಂದರೆ ಯಾರು ಎಂದು ತಿಳಿದುಕೊಳ್ಳಲು ಸಾಂಖ್ಯಯೋಗದಲ್ಲಿ ಈ ಶ್ಲೋಕದ ಹಿಂದಿನ ಕೆಲವು ಶ್ಲೋಕಗಳನ್ನು ಗಮನಿಸಬೇಕು. ಈ ಮೊದಲು ಯೋಗದ ಮೂರು ಪ್ರಯೋಜನಗಳನ್ನು ವಿವರಿಸಿ ಸಮಾಧೌ ಅಚಲಾ ಬುದ್ಧಿಸ್ತದಾ ಯೋಗಮವಾಪ್ಸ್ಯಸಿ ನಿನ್ನ ಬುದ್ಧಿಯು ಸಮಾಧಿಯಲ್ಲಿ ಅಚಲವಾಗಿರುವಾಗ ನೀನು ಯೋಗವನ್ನು ಹೊಂದುವೆ ಎನ್ನುತ್ತಾನೆ, ಶ್ರೀಕೃಷ್ಣ. ಸಮಾಧಿ ಎಂದರೆ ಸಮತ್ವದಲ್ಲಿರುವ ಬುದ್ಧಿ.
ಸಮಾಧಿಯಲ್ಲಿ ಬುದ್ಧಿ ಅಚಲವಾದಾಗ ಯೋಗ ಉಂಟಾಗುತ್ತದೆ. ಯೋಗ ಎಂದರೆ ಜೋಡಿಸಿಕೊಳ್ಳುವುದು. ಯಾವುದರೊಡನೆ? ಆತ್ಮನೊಡನೆ. (ಆತ್ಮ ಮತ್ತು ಪರಮಾತ್ಮ ಒಂದೇ) ಆತ್ಮನಿ ಏವ ಆತ್ಮನಾ ತುಷ್ಟಃ ಸ್ಥಿತಪ್ರಜ್ಞಸ್ತದೋಚ್ಯತೇ. ತನ್ನಲ್ಲಿ ತಾನೇ ಸಂತೃಪ್ತನಾಗಿರುವವನು, ಸಂತೋಷದಿಂದಿರುವವನು ಸ್ಥಿತಪ್ರಜ್ಞ. ಇದರ ಅರ್ಥವಿಷ್ಟೇ; ಬುದ್ಧಿಯು ಆತ್ಮನಲ್ಲಿ ಸ್ಥಿರವಾಗಿರಬೇಕು, ಪ್ರತಿಷ್ಠಿತವಾಗಿರಬೇಕು. ಬುದ್ಧಿ ಅಥವ ಪ್ರಜ್ಞೆಯು ಹೇಗೆ ಆತ್ಮನಲ್ಲಿ ಪ್ರತಿಷ್ಠಿತವಾಗುತ್ತದೆಂದು ಕೃಷ್ಣ ಮುಂದಿನ ಶ್ಲೋಕಗಳಲ್ಲಿ ಪದೇ ಪದೇ ಹೇಳಿದ್ದಾನೆ.
ಹೀಗೆ ಪ್ರಜ್ಞೆಯು ಪ್ರತಿಷ್ಠಿತವಾಗುವ ಲಕ್ಷಣ ಆತ್ಮಾಪ್ರಸಾದಮಧಿಗಚ್ಛತಿ ಆತ್ಮಕ್ಕೆ ಪ್ರಸಾದ ದೊರೆಯುತ್ತದೆ. ಪ್ರಸಾದ ಎಂದರೆ ನಾವು ಬಯಸಿದ್ದು ನಡೆಯುತ್ತದೆ ಎಂಬ ನಂಬಿಕೆ ರೂಢಿಯಲ್ಲಿರುವ ಅರ್ಥ. ಈ ಭಾವನೆ ಬಂದ ಕ್ಷಣದಲ್ಲಿ ಮಾನಸಿಕ ಕ್ಲೇಶಗಳು ದೂರವಾಗುತ್ತವೆ.
ಪ್ರಸಾದೇ ಸರ್ವದುಃಖಾನಾಂ ಹಾನಿರಸ್ಯೋಪಜಾಯತೇ
ಪ್ರಸನ್ನಚೇತಸೋ ಹ್ಯಾಶು ಬುದ್ಧಿಃ ಪರ್ಯವತಿಷ್ಠತೇ
ಪ್ರಸಾದದಿಂದ ಮಾನಸಿಕ ಕ್ಲೇಶಗಳು, ಗೊಂದಲಗಳು ಇಲ್ಲದ ಸ್ಥಿತಿ ಉಂಟಾಗುತ್ತದೆ. ಹೀಗಾಗಿ ಇದು ಸಿದ್ಧಿಗೆ ಮುನ್ನದ ಸ್ಥಿತಿ. ಇಲ್ಲಿಂದ ನಂತರ ಯಶಸ್ಸು. ಯಶಸ್ಸಿಗೆ ಪ್ರಸನ್ನಚೇತನ ಇರಬೇಕು, ಬುದ್ಧಿಯು ಪ್ರತಿಷ್ಠಿತವಾಗಬೇಕು, ಸ್ಥಿರವಾಗಬೇಕು. (ಚಂಚಲ ಬುದ್ಧಿ, ಸಂಕಲ್ಪರಹಿತ ಮನಸ್ಸಿನಿಂದ ಯಶಸ್ಸು ದೊರೆಯುವುದಿಲ್ಲ) ಆತ್ಮನಲ್ಲಿ ನಂಬಿಕೆ ಬೆಳೆಸಿಕೊಳ್ಳದಿದ್ದರೆ ಪ್ರಸಾದ, ಅನುಗ್ರಹ
ದೊರೆಯುವುದಿಲ್ಲ. (ಆತ್ಮವಿಶ್ವಾಸವಿಲ್ಲದವನಿಂದ ಯಾವ ಸಾಧನೆಯೂ ಸಾಧ್ಯವಿಲ್ಲ) ಪ್ರಸಾದ ದೊರೆಯದಿದ್ದರೆ ಪ್ರಸನ್ನ
ಚೇತನ ಉಂಟಾಗುವುದಿಲ್ಲ. ಆಗ ಬುದ್ಧಿಯೂ ಸ್ಥಾಪಿತವಾಗುವುದಿಲ್ಲ.
ಹೀಗೆ ಬುದ್ಧಿ ಅಥವ ಪ್ರಜ್ಞೆ ಸ್ಥಾಪಿತವಾದವನು ಯುಕ್ತ. ಇಲ್ಲದಿದ್ದರೆ ಅವನು ಅಯುಕ್ತ. ಬುದ್ಧಿಯು ಆತ್ಮನಲ್ಲಿ ಸ್ಥಾಪಿತವಾಗ ದಿದ್ದರೆ ಅದು ಹೊರಗಣ ವಿಷಯಗಳಲ್ಲಿ ಮಗ್ನವಾಗುತ್ತದೆ. ಜಗತ್ತಿನ ವ್ಯವಹಾರಗಳಲ್ಲಿ ನಿರತವಾಗುತ್ತದೆ. ಇಂದಿನ ಪರಿಸ್ಥಿತಿ ಯನ್ನೇ ಗಮನಿಸೋಣ. ಜಗತ್ತಿನಲ್ಲಿ ಕರೋನಾ ಸೋಂಕು ವಕ್ಕರಿಸಿಕೊಂಡು ಎಲ್ಲೆಡೆ ಹಾವಳಿ ನಡೆಸುತ್ತಿದೆ. ನಾವು ವಾಸ್ತವವನ್ನು ವಿಶ್ಲೇಷಣೆ ಮಾಡುವಾಗ ವಿರೋಧಿ ದೇಶಗಳು ಏನಕೇನ ಪ್ರಕಾರೇಣ ನಮ್ಮನ್ನು ನಾಶಮಾಡಲು ಪ್ರಯತ್ನಿಸುವುದು ಸಹಜ ಎಂಬುದು ನಮಗೆ ತಿಳಿದಿರುತ್ತದೆ.
ಇಂತಹ ಭೀಕರ ಪರಿಸ್ಥಿತಿಯಲ್ಲಿ ಆಡಳಿತ ವ್ಯವಸ್ಥೆ ಏರುಪೇರಾಗುವುದು ಸಹಜ ಎಂಬ ಎಚ್ಚರಿಕೆಯೂ ನಮ್ಮಲ್ಲಿರುತ್ತದೆ. ವಿರೋಧಿಗಳ ಟೀಕೆಯನ್ನು (ಚೀನಾ ವೈರಸ್ ಎಂಬ ಆಪಾದನೆಯನ್ನೂ) ಸಹಜವಾಗಿ ಸ್ವೀಕರಿಸುವುದು ಸಾಧ್ಯವಾಗುತ್ತದೆ. ಸರಕಾರದ ಅಥವ ವ್ಯವಸ್ಥೆಯ ವೈಫಲ್ಯಗಳ ಹಿಂದಿನ ಕಾರಣ ತಿಳಿದಾಗ ಸಹಾನುಭೂತಿ ಉಂಟಾಗುತ್ತದೆ. ಮನಸ್ಸಿನಲ್ಲಿರುವ ಕ್ಲೇಶ ದೂರವಾದಾಗ ಗಮನ ಕರೋನಾದ ಕಡೆ ಹರಿಯುತ್ತದೆ. ಕರೋನಾ ನಿಯಂತ್ರಣದ ಕಡೆ ನಮ್ಮ ಪ್ರಯತ್ನಗಳು ಕೇಂದ್ರೀಕೃತ ವಾಗುತ್ತವೆ.
ಅಯುಕ್ತನಿಗೆ ಬುದ್ಧಿ ಇರುವುದಿಲ್ಲ ಎಂದರೆ ಇದೇ. ವರ್ತಮಾನವನ್ನು ನಿರ್ವಿಕಾರವಾಗಿ, ಅದು ಇರುವ ಹಾಗೆಯೇ ಗ್ರಹಿಸುವ ಶಕ್ತಿ ಇರುವುದಿಲ್ಲ. ಅಂತಹ ಜನರು ಸರಕಾರಗಳ ಮೇಲೆ, ವಿರೋಧಿಗಳ ಮೇಲೆ, ಬೇರೆ ದೇಶಗಳ ಮೇಲೆ ನಿರರ್ಥಕವಾಗಿ ಉರಿದು ಬೀಳುತ್ತಾರೆ. ಇದರಿಂದ ಪ್ರಯೋಜನವಿಲ್ಲ ಎಂಬ ಸತ್ಯ ಅವರಿಗೆ ತಿಳಿಯುವುದಿಲ್ಲ.
ಭಾವನೆಗಳಿಲ್ಲದ ವ್ಯಕ್ತಿ
ಅಯುಕ್ತನಿಗೆ ಭಾವನೆಗಳೂ ಇರುವುದಿಲ್ಲ. ಅವನು ಕಷ್ಟಕಾಲದಲ್ಲಿ ತನ್ನ ಸಂಪರ್ಕದಲ್ಲಿರುವವರಿಗೆ ಯುಕ್ತನಾಗಿದ್ದರೆ ತನ್ನ
ಅಳವಿನಲ್ಲಿರುವಷ್ಟಾದರೂ ಸಹಾಯ ಮಾಡಲು ನಿರತನಾಗುತ್ತಾನೆ. ಕೊರತೆಗಳ ಬಗ್ಗೆ ಇತರರನ್ನು ದೂರುತ್ತಾ ಕೂರುವ
ಬದಲು ಕೊರತೆಯನ್ನು ನಿವಾರಿಸುವುದು ಹೇಗೆ ಎಂದು ಯೋಚಿಸುತ್ತಾನೆ. ಅವನ ತತ್‌ಕ್ಷಣದ ಗಮನ ಪೀಡಿತನ ಮೇಲಿರುತ್ತದೆ, ಚೆಲ್ಲಾಪಿಲ್ಲಿಯಾಗಿ ಆಕ್ರೋಶಭರಿತವಾಗಿರುವುದಿಲ್ಲ.
ಆತ್ಮನಲ್ಲಿ ನಂಬಿಕೆ ಬೆಳೆಸಿಕೊಳ್ಳದಿರುವವನಿಗೆ ಭಾವನೆಗಳೂ ಇರುವುದಿಲ್ಲ. ಅಂದರೆ ಅವನನ್ನು ಯಾವ ವಿಷಯಗಳು
ಆಕ್ರಮಿಸಿಕೊಳ್ಳುತ್ತವೆಯೋ ಅವನ್ನು ಬಿಟ್ಟು ಬೇರೆ ಯಾವುದೂ ಮುಖ್ಯವಾಗುವುದಿಲ್ಲ. ಉದಾಹರಣೆಗೆ ಕಾಮಾಂಧನಾದ ವ್ಯಕ್ತಿಗೆ ಲಜ್ಜೆ, ದಯೆ, ಮುಂತಾದ ಇತರ ಯಾವ ಭಾವನೆಗಳೂ ಇರುವುದಿಲ್ಲ. ಹೀಗೆ ಭಾವನೆಗಳನ್ನು ಕಳೆದುಕೊಂಡವನಿಗೆ ಮನಸ್ಸಿನಲ್ಲಿ ಶಾಂತಿಯಿರುವುದಿಲ್ಲ.
ಶಾಂತಿಯನ್ನು ಕಳೆದುಕೊಂಡವನಿಗೆ ಸುಖವೂ ಇರುವುದಿಲ್ಲ. ಅಶಾಂತ ವ್ಯಕ್ತಿ ದುಃಖಿಯಾಗಿರುತ್ತಾನೆ. ಸುಖವನ್ನು ಗುರುತಿಸುವ ಶಕ್ತಿಯನ್ನೂ ಕಳೆದುಕೊಂಡಿರುತ್ತಾನೆ. ಹೀಗೆ ಮೇಲೆ ವಿವರಿಸಿದ ರೀತಿಯಲ್ಲಿ ಬುದ್ಧಿ, ಭಾವನೆಗಳಿಲ್ಲದ ಅಯುಕ್ತನ ಮನಸ್ಸಿನಲ್ಲಿ ತಳಮಳ, ಆಕ್ರೋಶ, ಭಯ, ಆತಂಕ ಎಲ್ಲವೂ ತುಂಬಿ ಆತ ಅಶಾಂತನಾಗಿರುತ್ತಾನೆ. ಅಶಾಂತನಿಗೆ ಸುಖ ದೊರೆಯುವುದಾದರೂ ಹೇಗೆ?
ಯುಕ್ತನ ಲಕ್ಷಣಗಳು
ಇಲ್ಲಿ ಯುಕ್ತನ ಲಕ್ಷಣಗಳ ಬಗ್ಗೆಯೂ ಹೇಳಬೇಕು. ಯುಕ್ತರಾದವರಿಗೆ ಮೂರು ಸಿದ್ಧಿಗಳು ಲಭಿಸುತ್ತವೆ. ಯೋಗಃ ಕರ್ಮಸು ಕೌಶಲಂ, ಕರ್ಮದಲ್ಲಿ ಕುಶಲತೆ ಉಂಟುಮಾಡುತ್ತದೆ. ಸಮತ್ವಂ ಯೋಗ ಉಚ್ಚ್ಯತೇ ಸುಖದುಃಖಗಳಲ್ಲಿ, ಒಳಿತು ಕೆಡುಕುಗಳಲ್ಲಿ, ವ್ಯಕ್ತಿ ವ್ಯಕ್ತಿಗಳಲ್ಲಿ ಚರಾಚರಗಳಲ್ಲಿ ಸಮತ್ವವನ್ನು ನೋಡುವ ದೃಷ್ಟಿ ದೊರೆಯುತ್ತದೆ.
ನಿರ್ಯೋಗ ಕ್ಷೇಮ ಆತ್ಮವಾನ್ – ಸ್ವಂತ ಯೋಗಕ್ಷೇಮಗಳ ಗೊಡವೆಯಿಲ್ಲದ ಆತ್ಮನನ್ನು ನೋಡಲು ಶಕ್ತರಾಗುತ್ತೇವೆ. ಸ್ವಂತದ ಬಗ್ಗೆ ಯೋಚಿಸುವುದೇ ದುಃಖಕ್ಕೆ ಕಾರಣ. ಆನಂದದಿಂದಿರಲು ಇದಕ್ಕಿಂತ ಹೆಚ್ಚಿನದು ಇನ್ನೇನು ಬೇಕು? ಇಂದು ಸಮಾಜದಲ್ಲಿ ಇಂತಹ ಯುಕ್ತರ ಅವಶ್ಯಕತೆಯಿದೆ.