Sunday, 24th November 2024

ಸಿಕ್ಕಿ ಬಿದ್ದ ಕಳ್ಳ

ಗೋಪಿನಾಥ್

ಹಹ್ಹಾಸ್ಯ

ದಿನಾ ಅವಲಕ್ಕಿ, ಉಪ್ಪಿಟ್ಟು ತಿಂದು ನಾಲಗೆ ಜಡ್ಡು ಹಿಡಿದು ಹೋಗಿದೆ. ನಾಲಗೆಗೂ ಚೇಂಜ್ ಬೇಕು ಅಲ್ಲವೆ? ಆದರೆ, ಹಾಗಂದು ಕೊಂಡು, ಹೊಟೇಲ್‌ನಿಂದ ತಿಂಡಿ ಆರ್ಡರ್ ಮಾಡಿದಾಗ, ಕಳ್ಳ ಸಿಕ್ಕಿ ಬಿದ್ದಿದ್ದು ಹೇಗೆ?

ಈಗ ಮನೇಲಿ ತಿಂಡಿ ಮಾಡದಿದ್ದರೆ ಬಹಳ ಕಷ್ಟವಾಗುತ್ತೆ. ಮೊದಲಾದರೆ ಯಾವಾಗ ಬೇಕಾದರೂ ಹೊಟೇಲ್‌ಗೆ ಹೋಗಿ ಏನು ಬೇಕಾದರೂ ತಿಂದು ಬರಬಹುದಿತ್ತು. ಈಗ ಮಾತ್ರ ಹೆಂಡತಿ ಮಾಡುವ ಅದೇ ಉಪ್ಪಿಟ್ಟು ತಿನ್ನಬೇಕು. ಅದು ಬಿಟ್ಟರೆ ಅವಲಕ್ಕಿ ಒಗ್ಗರಣೆ. ಇದು ಮನೆಯಲ್ಲಿ ಯಾವಾಗಲು ಅಕ್ಷಯವಾಗುವ ತಿಂಡಿಗಳು. ತಿಂದು ತಿಂದು ಜೆಡ್ಡು ಹಿಡಿದ ಹಾಗಾಗಿದೆ. ಏನು ಕೊಟ್ಟರೆ ಅದನ್ನೇ ತಿನ್ನಬೇಕು.

ಇನ್ನು ಹೆಂಡತಿ ಮಾಡದೆ ಸೊಸೆ ತಿಂಡಿ ಮಾಡಿದ್ದರೆ ಮಗ ಪಕ್ಕದಲ್ಲಿದ್ದರೆ ಸೊಸೆಯನ್ನು ಮೆಚ್ಚಿಸಲಿಕ್ಕೆ ಅಲ್ಲದಿದ್ದರು ತುಂಬಾ ಚೆನ್ನಾಗಿದೆ ಎಂದು ಹೇಳಿ ಮಗನ್ನ ಮೆಚ್ಚಿಸಬೇಕು ! ಏನು ಬಂತಪ್ಪ ಗ್ರಹಚಾರ ಎಂದು ಕೊಳ್ಳುತ್ತಿದ್ದ ಹಾಗೆ ನಾವು ಹೋಗುತ್ತಿದ್ದ ತಿಂಡಿ ಹೋಟೆಲ್ eಪಕ ಬಂತು. ನಾವು ಎರಡು-ಮೂರು ತಿಂಡಿ ಕೊಳ್ಳುವ ಪ್ರಮೇಯವೇ ಇರಲ್ಲ. ಒಂದು ಜಂಬೋ ಹೇಳಿಬಿಟ್ಟರೆ ಸಾಕು. ಅದೇನದು ಜಂಬೋ ಎಂದರೆ ಅದರಲ್ಲಿ ಒಂದು ಮಿನಿ ಮಸಾಲೆ ದೋಸೆ, ಒಂದು ಉದ್ದಿನ ವಡೆ, ಒಂದು ಇಡ್ಲಿ, ಕೇಸರಿ ಬಾತ್ ಮತ್ತು ಖಾರ ಬಾತ್ ಇಷ್ಟು ಸೇರಿರುತ್ತೆ. ಇದು ಮುದುಕರ ಚಪಲಕ್ಕೆ -ವರಿಟ್. ಎಲ್ಲವೂ ಸಿಗುತ್ತೆ. ಕೇವಲ ಎಂಬತ್ತು ರೂಪಾಯಿಗೆ.

ಎಲ್ಲಾ ಐಟಂಗಳು ಚಿಕ್ಕವು. ಒಂದು ಮಿನಿ ಮಸಾಲೆ ದೋಸೆ, ಒಂದು ಸಣ್ಣ ಸೌಟು ಖಾರ ಬಾತ್, ಒಂದು ಸಣ್ಣ ಸೌಟು ಕೇಸರಿ ಬಾತು. ಇನ್ನು ವಡೆ ಮತ್ತು ಇಡ್ಲಿ ನಾರ್ಮಲ್ ಸೈಜು. ಇದನ್ನು ಯಾರು ಬೇಡಾಂತಾರೆ. ಈಗ ಹೇಳಿ, ಹೊಟೇಲ್‌ಗೆ ಹೋಗಿ ಇವೆಲ್ಲಾ ನನ್ನ ಪ್ರಿಯ ತಿಂಡಿಗಳನ್ನು ತಿನ್ನದೆ ಹೇಗಾಗಿರಬೇಡ. ಮನೆಯಲ್ಲಿ ಅದೇ ತಿಂಡಿ ರಿಪೀಟ. ಜತೆಗೆ ಅವೆಲ್ಲವನ್ನು ನಗು ಮುಖದಿಂದಲೇ ಸ್ವಿಕರಿಸಬೇಕು. ಇದು ನನ್ನೊಬ್ಬನ ಪಾಡಲ್ಲ, ಎಲ್ಲ ಗಂಡಸರ ಪಾಡೂ ಹೌದು. ಯಾಕೆಂದರೆ ನಾಲಿಗೆ ಚೇಂಜ್ ಬಯಸುತ್ತೆ. ನಾನು ಆ ನನ್ನ ಫೇವರೀಟ್ ತಿಂಡಿ ಹೊಟೇಲ್‌ಗೆ ಹೋಗುತ್ತಿದ್ದುದು ಕಳ್ಳತನದಲ್ಲಿ, ಮನೆಯಲ್ಲಿ ಯಾರಿಗೂ ಗೊತ್ತಾಗದ ಹಾಗೆ ಈ ರಹಸ್ಯವನ್ನು ಕಾಪಾಡಿಕೊಂಡಿದ್ದೆ.

‘ಲೇ ಇವಳೇ, ಏಕೋ ಹೊಟ್ಟೆ ಕೆಟ್ಟಿದೆ ತಿಂಡಿ ಬೇಡ’ ಎಂದು ಸುಳ್ಳು ಹೇಳಿ, ಸ್ವಲ್ಪ ಅರ್ಜೆಂಟ್ ಕೆಲಸವಿದೆಯಂದು ಸ್ಕೂಟರ ಮೇಲೆ ಹೋಗಿ ಕಳ್ಳತನದಲ್ಲಿ ತಿಂದು ಬರುತ್ತಿz. ಈಗ ಈ ತರಹದ ಕಳ್ಳಾಟಕ್ಕೆ ಅವಕಾಶವಿಲ್ಲವಾಗಿ ಹೋಯಿತು. ಅವತ್ತೊಂದು ದಿನ ‘ಮನೆಯಲ್ಲಿ ತಿಂಡಿ ಮಾಡುವುದು ಬೇಡ, ಪಾಪ ನಿಮಗೂ ಒಂದು ದಿನ ರೆಸ್ಟ್ ಬೇಕಲ್ಲ’ ಎಂದು ಮಗ ಹೊಟೇಲ್ ನಿಂದ ತರಿಸಿ ಬಿಡೋಣಾಂದು ನನಗೆ ಕಣ್ ಹೊಡೆದ. ಅವನೂ ಕಳ್ಳ!

ಬಾಯಿಬಿಟ್ಟು ಹೇಳಲಾರ. ನೀವುಗಳು ಮಾಡುವ ತಿಂಡಿ ತಿಂದು ಸಾಕಾಗಿದೆ. ನಾಲಿಗೆ ಚೇಂಜ್ ಕೇಳುತ್ತೆಂದು ಹೇಳಲಾರ. ನಾನು ಅವನ ಮಾತಿಗೆ ಹೆಬ್ಬೆಟ್ಟು ಮೇಲೆತ್ತಿ ಒಪ್ಪಿಗೆ ಸೂಚಿಸಿದೆ. ಸರಿ ಎಲ್ಲಿಂದ ತರಿಸುವುದು ? ಯೋಚಿಸುತ್ತಿದ್ದರು. ನಾನು ನನ್ನ ಫೇವರೀಟ್ ಹೊಟೇಲ್ ಹೆಸರು ಹೇಳಿ ‘ಅಲ್ಲಿಂದ ತರಿಸೋಣ. ಜಂಬೋ! ಅದರಲ್ಲಿ ಏನೇನು ಸಿಗುತ್ತೆ ಗೊತ್ತಾ?’ ಅಂತ ಎಲ್ಲ ಹೇಳಿ ತುಂಬಾ ಚೆನ್ನಾಗಿರುತ್ತೆ ಎಂದೆ.

ರಹಸ್ಯ ಬಯಲಾಯ್ತು
ತಕ್ಷಣ ಹಿಡಿದುಬಿಟ್ಟಳಲ್ಲ ನನ್ನ ಅರ್ಧಾಂಗಿ! ‘ಇಷ್ಟೆಲ್ಲ ವಿವರವಾಗಿ ಹೇಳಬೇಕಾದರೆ ನೀವ್ಯಾವಾಗ ಹೋಗಿದ್ದಿರಿ ? ಚೆನ್ನಾಗಿರುತ್ತೆಂತ ಹೇಳುತ್ತಿದ್ದೀರಿ. ಯಾವಾಗ ಹೋಗಿದ್ದಿರಿ?’ ‘ಏಯ..ಇಲ್ಲಪ್ಪ ನಾನೇನು ಆ ಹೊಟೇಲ್‌ಗೆ ಹೋಗಿದ್ದೀನಾ. ಅದೂ ನಿನ್ನ ಬಿಟ್ಟು ? ಚೆನ್ನಾಗಿರುತ್ತಂತೆ ಅಂತಲೇ ಹೇಳಿದ್ದು ನಿನಗೆ ತಪ್ಪಾಗಿ ಕೇಳಿಸಿರಬೇಕು, ಎದರೂ ಉಂಟೇ!

ಯಾವಾಗಲು ನಿನ್ನ ಕಣ್ ಮುಂದೇನೆ ಇರುತ್ತೀನಿ, ರೆಪ್ಪೆ ಮುಚ್ಚಿದರು ನಾ ಕಾಣಬೇಕು ಹಾಗೆ ಜಾದೂ ಮಾಡಿದ್ದೀಯಾ’ ಅಂತ ರೀಲು ಬಿಟ್ಟು ಅವಳನ್ನ ಉಬ್ಬಿಸಿ ಸುಮ್ಮನಾಗಿಸಿದೆ. ಹೋಟೆಲ್ ಪಾರ್ಸಲ್ ತರುವ ಹುಡುಗ ಫೋನ್ ಮಾಡಿ ವಿಳಾಸ ತಿಳಕೊಂಡ. ಅಷ್ಟರಲ್ಲಿ ನನಗೆ ಆತುರ. ಇನ್ನೂ ಎಷ್ಟು ಹೊತ್ತೂಂತ ಕಾತುರನಾಗಿದ್ದೆ. ಕೊನೆಗೆ ಬಂದೇ ಬಂದ. ಕಾಲಿಂಗ್ ಬೆಲ್ ಆಯಿತು.
ಹೋಗಿ ಬಾಗಿಲು ತೆಗೆದೆ. ಎದುರಿಗೆ ಪಾರ್ಸಲ್ ಹಿಡಿದು ನಿಂತಿದ್ದ ಹುಡುಗ ಗಣೇಶ! ಅವನು ನನ್ನ ಚೆನ್ನಾಗಿ ಬಲ್ಲ.

‘ಸಾರ್ ನೀವೇನು ಇಲ್ಲಿ ? ಇದೇನಾ ನಿಮ್ಮ ಮನೆ ? ಇಷ್ಟು ದೂರದಿಂದ ಬರುತ್ತೀರಾ ಸರ್ ನಮ್ಮ ಹೊಟೇಲಿಗೆ?’ ಎಂದು ಪ್ರಶ್ನೆ ಗಳನ್ನು ಎಸೆದ. ನನಗೆ ಹಿಂದಿರುಗಿ ನೋಡಲು ಧೈರ್ಯ ಎಲ್ಲಿ ಬರುತ್ತೆ? ಆದರೂ ಸುಮ್ಮನೆ ಹಿಂತಿರುಗಿ ಎಲ್ಲರನ್ನೂ ನೋಡಿ ಹಿ..ಹಿ.. ಎಂದೆ. ನನ್ನವಳ ಉರಿಗಣ್ಣು ನೋಡಲಾಗಲಿಲ್ಲ. ಆದರೆ ಖಂಡಿತ ಅನಿಸಿತು, ಈ ಹುಡುಗ ಹೋದ ಮೇಲೆ, ಜಂಬೋ
ತಿಂಡಿ ಖಾಲಿ ಆದ ಮೇಲೆ.. ಮುಂದೈತೆ ಮಾರಿಹಬ್ಬ