ನರೇಂದ್ರ ಎಸ್ ಗಂಗೊಳ್ಳಿ
ಸತತ ಪರಿಶ್ರಮದಿಂದ ಹಾಡುವುದನ್ನು ಕರಗತಗೊಳಿಸಿಕೊಂಡಿರುವ ಗೀತಾ ಗಂಗೊಳ್ಳಿ ಇಂದು ಹಲವು ಕಾರ್ಯಕ್ರಮ
ನೀಡಿದ್ದಾರೆ. ಇವರು ಬೆಂಕಿಯಲ್ಲಿ ಅರಳಿದ ಹೂವು.
ಅಂದು ಕಲರ‍್ಸ್ ಕನ್ನಡ ವಾಹಿನಿಯ ಹಾಡು ಕರ್ನಾಟಕ ಮೆಗಾ ಅಡಿಷನ್ ನಡೆಯುತ್ತಿತ್ತು. ಈ ಹುಡುಗಿ ವೇದಿಕೆಯೇರಿ ಟಿ.ಪಿ ಕೈಲಾಸಂ ಅವರ ಕೋಳಿಕೆ ರಂಗ ಹಾಡನ್ನು ಹಾಡಿ ಮುಗಿಸುತ್ತಿದ್ದಂತೆ ವೇದಿಕೆ ಹಸಿರು ಬಣ್ಣದಿಂದ ತುಂಬಿ ಈ ಹುಡುಗಿ ಸೆಲೆಕ್ಟೆಡ್ ಎಂದು ತೋರಿಸಿಯಾಗಿತ್ತು.
ನಿಮ್ಮಿಂದ ಕೂಡ ಹಾಡು ಕರ್ನಾಟಕಕ್ಕೆ ಹೆಸರು ಸಿಗುತ್ತದೆ ಅಂತ ಹೇಳಿದ್ದು ತೀರ್ಪುಗಾರ ರಲ್ಲೊಬ್ಬರಾಗಿದ್ದ ರಘು ದೀಕ್ಷಿತ್. ‘ಟಿ.ಪಿ ಕೈಲಾಸಂ ಇದ್ದಿದ್ದರೆ ಈ ನಿರ್ವಹಣೆ ನೋಡಿ ಕೋಳಿ ಕೆ ರಂಗ ಬದಲು ಕೋಳಿ ಕೆ ರಂಗಮ್ಮ ಅಂತಲೇ ಮಾಡಿರೋರು’ ಎಂದು ಸಂಗೀತ ನಿರ್ದೇಶಕ ಮನದುಂಬಿ ಶ್ಲಾಘಿಸಿದ್ದರು. ಆ ಹುಡುಗಿಯೇ ಗೀತಾ ಬೈಂದೂರು.
ಇವತ್ತು ಕರಾವಳಿ ಭಾಗದಲ್ಲಿ ಬೇಡಿಕೆಯಲ್ಲಿರುವ ಗಾಯಕಿ. ಭಕ್ತಿಗೀತೆ, ಭಾವಗೀತೆ, ಚಿತ್ರ ಗೀತೆ, ಸುಗಮ ಸಂಗೀತ, ಗಝಲ್, ಜಾನಪದ ಸೇರಿದಂತೆ ಎಲ್ಲಾ ಪ್ರಕಾರಗಳಲ್ಲೂ ಹಾಡಿ ಸೈ ಎನ್ನಿಸಿಕೊಂಡ ಹೆಮ್ಮೆ ಗೀತ ಅವರದ್ದು. ಉಡುಪಿ ಜಿಲ್ಲೆಯ ಬೈಂದೂರಿನ ಬಂಕೇ ಶ್ವರದ ಮುಧುರ ಪೂಜಾರಿ ಮತ್ತು ಗಂಗೆಯ ಮೂರು ಜನ ಹೆಣ್ಮಕ್ಕಳಲ್ಲಿ ಕಿರಿಯವಳು ಗೀತಾ.
ಶಿಕ್ಷಕರ ಪ್ರೋತ್ಸಾಹ
ಆರನೇ ತರಗತಿಯಲ್ಲಿದ್ದಾಗ ಶಿಕ್ಷಕ ವೆಂಕಟರಮಣ ಭಟ್ ಬಾಲ ಸಭೆಯೊಂದರಲ್ಲಿ ಇವಳ ಹಾಡನ್ನು ಮೆಚ್ಚಿ ಅವಳಿಗೆ ಹಾಡು ವಂತೆ ಪ್ರೋತ್ಸಾಹ ನೀಡಿದರು. ಆ ಬಳಿಕ ಶಾಲೆಯ ಹಂತಗಳಲ್ಲಿ ಸಂಗೀತ ಹಾಡಲಾರಂಭಿಸಿದ್ದಳು. ಬೈಂದೂರು ಸರಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ಮಂಜುನಾಥ ನಾಯಕ್‌ರ ಸಹಕಾರದೊಂದಿಗೆ ವಿದ್ವಾನ್ ಶ್ರೀನಿವಾಸ ಚಡಗರ ಬಳಿ ಕರ್ನಾಟಕ ಶಾಸೀಯ ಸಂಗೀತ ತರಬೇತಿ ಪಡೆಯಲಾರಂಬಿಸಿದಳು.
ಮುಂದೆ ರಾಘವೇಂದ್ರ ಉಪಧ್ಯಾಯರ ಬಳಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಒಂದು ವರ್ಷ ಅಭ್ಯಾಸ ಮಾಡುತ್ತಾಳೆ. ಪಿಯುಸಿ ಮುಗಿದ ಬಳಿಕ, ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಲು, ಅನಿವಾರ್ಯವಾಗಿ ಅಂಗನವಾಡಿ ಸಹಾಯಕಿ ಹುದ್ದೆಯನ್ನು ಮೂರು ವರ್ಷಗಳ ಕಾಲ ನಿರ್ವಹಿಸಬೇಕಾಯಿತು.
ಇವಳಲ್ಲಿದ್ದ ಹಾಡುಗಾರಿಕೆಯ ಪ್ರತಿಭೆಯನ್ನು ಗುರುತಿಸಿದ ಗೋಪಾಲ ಕೃಷ್ಣ ಜೋಶಿಯವರ ಮೂಲಕ ಚಂದ್ರ ಬೈಂದೂರು ಅವರ ಪರಿಚಯವಾಗಿ ಅವರು ತಮ್ಮ ಸುರಭಿ ನೃತ್ಯ ಕಲಾ ಶಾಲೆಯಲ್ಲಿ ಇವಳ ಗಾಯನ ಕಲಿಕೆಗೆ ಅವಕಾಶ ಮಾಡಿಕೊಡುತ್ತಾರೆ. ಅಲ್ಲಿಂದ ಬೇರೆ ಬೇರೆ ವೇದಿಕೆಗಳಲ್ಲಿ ಹೊಸ ಅವಕಾಶಗಳು ದೊರೆಯಲಾರಂಭಿಸುತ್ತವೆ.
ಭಟ್ಕಳದ ಝೇಂಕಾರ್ ಮೆಲೋಡಿಸ್‌ನಲ್ಲಿ ಅವಕಾಶ ಸಿಗಲು ವಿನಾಯಕ ಪ್ರಭು ಸಹಕಾರ ನೀಡುತ್ತಾರೆ. ಆ ಬಳಿಕ ಪ್ರಸನ್ನ ಪ್ರಭು ಮಾಗದರ್ಶನದಲ್ಲಿ ಹತ್ತಾರು ಊರುಗಳಲ್ಲಿ ಅನೇಕ ಕಾರ‍್ಯಕ್ರಮಗಳನ್ನು ನೀಡುತ್ತಾರೆ. ಮಂಗಳೂರಿನ ನೌಶಾದ್‌ರ ಖ್ಯಾತ ಆರ್ಕೆಸ್ಟ್ರಾ ತಂಡ ಶ್ಯಾಡ್ಸ್ ಸೇರಿಕೊಳ್ಳುವ ಗೀತಾ ಐದು ವರುಷಗಳ ಕಾಲ ಆ ತಂಡದ ಜೊತೆ ಕೆಲಸ ಮಾಡುತ್ತಾರೆ. ಅಲ್ಲಿ
ಮಲಯಾಳಂ ತುಳು, ತೆಲುಗು, ಮರಾಠಿ ಬಾಷೆಯ ಮತ್ತು ಹಿಂದಿ ಹಳೆಯ ಹಾಡುಗಳನ್ನು ಕರಾತಲಮಲಕ ಮಾಡಿಕೊಳ್ಳುತ್ತಾಳೆ.
ಎಲ್ಲಾ ರೀತಿಯ ಹಾಡುಗಳನ್ನು ಆಪ್ತವಾಗಿ ಹಾಡುವ ಅದ್ಭುತ ಸಾಮರ್ಥ್ಯದ ಗೀತಾ ಆಕಾಶ ವಾಣಿ ಮತ್ತು ಚಂದನ ವಾಹಿನಿಯ ಮಧುರ ಮಧುರವೀ ಮಂಜುಳ ಗಾನದಲ್ಲೂ ಹಾಡಿದ್ದಾರೆ. ತಾಯಿಯನ್ನು ಆಸ್ಪತ್ರೆಗೆ ಸೇರಿಸಿ ದ್ದಾಗ ಒಂದು ಕೈಯಲ್ಲಿ ಫೋನಿನಲ್ಲಿ ಆರೋಗ್ಯ ವಿಚಾರಿಸುತ್ತಾ ಇನ್ನೊಂದು ಕೈನಲ್ಲಿ ಮೈಕ್ ಹಿಡಿದು ಹಾಡಿದಂತಹ ಸಂದಿಗ್ಧ ಪರಿಸ್ಥತಿಯನ್ನು ಗೀತಾ ಎದುರಿಸಿದ್ದಿದೆ.
ಪರ್ಯಾಯ ಮಹೋತ್ಸವದಲ್ಲಿ, ಜನ್ನಾಡಿ ಮಹೋತ್ಸವದಲ್ಲಿ, ಲಾವಣ್ಯ ಬೈಂದೂರು, ಶಿರಸಿಯ ನಾಟ್ಯ ರಿದಂ ಶಾಲೆ, ಸುರಭಿ ನೃತ್ಯ ಕಲಾ ಶಾಲೆ, ರೋಟರಿ ಕ್ಲಬ್ ಬೈಂದೂರು ಹೀಗೆ ಹತ್ತಾರು ಸನ್ಮಾನಗಳಿಗೆ ಗೀತಾ ಭಾಜನರಾಗಿದ್ದಾರೆ. ಕಳೆದ ವರುಷ ಮಜಾ ಟಾಕೀಸ್‌ನಲ್ಲಿ ಭಾಗವಹಿಸಿ ವೀಕ್ಷಕರ ಮೆಚ್ಚುಗೆ ಗಳಿಸಿದ ಹೆಮ್ಮೆಯೂ ಅವರದ್ದು.
ತರಬೇತಿ ನೀಡುವ ಆಸೆ
ಗೀತಾ ಬೈಂದೂರು ಈ ವರೆಗೆ ಸುಮಾರು ಎರಡು ಸಾವಿರಕ್ಕೂ ಅಧಿಕ ಕಾರ‍್ಯಕ್ರಮಗಳನ್ನು ನೀಡಿದ್ದಾರೆ. ಈ ನಡುವೆ ವಿದ್ವಾನ್ ಅನಂತ ಹೆಬ್ಬಾರ್‌ರ ಬಳಿ ಹಿಂದೂಸ್ತಾನಿ ಶಾಸ್ತ್ರೀಯ ಗಾಯನವನ್ನು ಕಲಿಕೆಯನ್ನು ಮುಂದುವರೆಸಿದ್ದಾರೆ.
ಇತ್ತೀಚೆಗೆ ಸಮಾರಂಭ ವೊಂದರಲ್ಲಿ ಸಂಗೀತ ದಿಗ್ಗಜ ಹಂಸಲೇಖಾ ಅವರು ಇವಳ ಹಾಡನ್ನು ಕೇಳಿ ಅಭಿನಂದಿಸಿರು. ತನ್ನ ಯಶಸ್ಸಿನ ಹಾದಿಯಲ್ಲಿ ಸಹಕರಿಸಿದ ಎಲ್ಲರನ್ನೂ ಸ್ಮರಿಸಿಕೊಳ್ಳುವ ಗೀತಾ ಇಬ್ಬರು ಅಕ್ಕಂದಿರ ಮದುವೆ ಮಾಡಿಸಿದ್ದಾರೆ.
ಅಮ್ಮನ ಮನೆ ಕಟ್ಟುವ ಕನಸನ್ನು ನನಸು ಮಾಡಿದ್ದಾಳೆ. ಮುಂದೆ ಚಲನ ಚಿತ್ರಗಳಲ್ಲಿ ಹಾಡುವ ಕನಸಿದೆ. ಕಲಾ ಕ್ಷೇತ್ರವೊಂದನ್ನು ಆರಂಭಿಸಿ ಅವಕಾಶ ಸಿಗದ ಪ್ರತಿಭಾವಂತ ಕಲಾವಿದರಿಗೆ ಅವಕಾಶ ಒದಗಿಸುವ ತರಬೇತಿ ಕೊಡಿಸುವ ಮಹಾನ್ ಕನಸನ್ನು ಕೂಡ ಈಕೆ ಹೊತ್ತಿದ್ದಾರೆ. ಅವರ ಕನಸುಗಳು ಈಡೇರುವಲ್ಲಿ ಸಹೃದಯಿಗಳು ಸಹಕರಿಸಬೇಕಾಗಿದೆ.