Thursday, 28th November 2024

ಭಿನ್ನರ ಬಣದ ಗುರಿ ಈ ಬಾರಿ ಉಸ್ತುವಾರಿ

ಅತೃಪ್ತರಿಂದ ಶೀಘ್ರವೇ ದಿಲ್ಲಿ ಯಾತ್ರೆ

ಬಿಎಸ್‌ವೈ ಜತೆ ಅರುಣ್ ಸಿಂಗ್ ವಿರುದ್ಧವೂ ಹೋರಾಟ

ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ಬಹು ಕೋಟಿ ರುಪಾಯಿಗಳ ನೀರಾವರಿ ಅಕ್ರಮ ಕುರಿತು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆರೋಪದ ನಂತರ
ಮುಖ್ಯಮಂತ್ರಿ ಯಡಿಯೂರಪ್ಪ ಬಣ ಕೊಂಚ ವಿಚಲಿತವಾಗಿದೆ.

ಇದಕ್ಕೆ ಹೆಚ್ಚಿನ ಮಹತ್ವ ಸಿಗದಂತೆ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಸದ್ಯದ ಎರಡನೇ ಸುತ್ತಿನ ರಾಜ್ಯ ಪ್ರವಾಸ
ಆರಂಭಿಸಲು ಚಿಂತಿಸುತ್ತಿದ್ದರೆ, ಇತ್ತ ವಿರೋಧಿ ಬಣದ ನಾಯಕರು ದೆಹಲಿ ದಂಡಯಾತ್ರೆ ಮುಂದುವರಿಸಲು ಸಿದ್ಧತೆ ಮಾಡಿ ಕೊಳ್ಳುತ್ತಿದ್ದಾರೆ.

ಭಿನ್ನರ ಬಣದ ಈ ಬಾರಿಯ ಗುರಿ ನಾಯಕತ್ವ ಬದಲಾವಣೆ ಮಾತ್ರವಲ್ಲದೆ ರಾಜ್ಯ ಉಸ್ತುವಾರಿ ಬದಲಾವಣೆ ಕಡೆಗೂ ತಿರುಗಿದೆ ಎಂದು ತಿಳಿದುಬಂದಿದೆ. ಕಾರಣ ಅಹವಾಲು ಸ್ವೀಕಾರ ವೇಳೆ ಅರುಣ್ ಸಿಂಗ್ ಅವರು ಭಿನ್ನರಿಗೆ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಹಾಗೂ ತಮ್ಮ ಅಹವಾಲುಗಳಿಗೆ ಕಿಮ್ಮತ್ತು ನೀಡಿಲ್ಲ ಎನ್ನುವುದು ಭಿನ್ನರ ಪರೋಕ್ಷ ಆರೋಪವಾಗಿದೆ.

ಹೀಗಾಗಿ ಭಿನ್ನರ ಬಣದ ನಾಯಕರು ತಮ್ಮ ತುಪಾಕಿಯ ಗುರಿಯನ್ನು ಈಗ ಮುಖ್ಯಮಂತ್ರಿ ಕುರ್ಚಿಯಿಂದ ಕೊಂಚ ಉಸ್ತುವಾರಿ ಕಡೆಗೆ ತಿರುಗಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನೆಲೆಯಲ್ಲಿ ಭಿನ್ನರ ಬಣದ ನಾಯಕರು ಸದ್ಯದಲ್ಲಿ ದೆಹಲಿಗೆ ತೆರಳಲಿದ್ದು ಅಲ್ಲಿ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಅವರ ವಿರುದ್ಧ ಆರೋಪಗಳ ಸುರಿಮಳೆ ಗೈಯುವ ಸಾಧ್ಯತೆಯಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರ ವಿರುದ್ಧ ಆರೋಪಗಳನ್ನು ಮಾಡುವ ಎಲ್ಲಾ ತಯಾರಿಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.

೧೫ಕ್ಕೂ ಹೆಚ್ಚು ಮಂದಿ ಪಯಣ: ಭಿನ್ನರ ಗುಂಪು ಹಳ್ಳಿ ಹಕ್ಕಿಯ ವಿಶ್ವನಾಥ್ ಮೂಲಕ ಯಡಿಯೂರಪ್ಪ ಮತ್ತು ವಿಜಯೇಂದ್ರ
ವಿರುದ್ಧ ನೇರವಾಗಿ ಆರೋಪಗಳನ್ನು ಮಾಡಿರುವ ಹಿನ್ನೆಲೆಯಲ್ಲಿ ಈ ಬಾರಿ ದೆಹಲಿಗೆ 15ಕ್ಕೂ ಹೆಚ್ಚು ಮಂದಿ ಹೋಗುವ ಸಾಧ್ಯತೆ ಇದೆ. ಇದಕ್ಕೆ ದೆಹಲಿಯಲ್ಲಿರುವ ಪಕ್ಷದ ವರಿಷ್ಠರ ಪೈಕಿ ಕೆಲವರ ಪರೋಕ್ಷ ಬೆಂಬಲವೂ ಲಭಿಸಿದ್ದು ಇದು ಭಿನ್ನರ ವಿಶ್ವಾಸ ವನ್ನು ಹೆಚ್ಚಿಸಿದೆ ಎಂದು ಪಕ್ಷದ ದೆಹಲಿ ಮೂಲಗಳು ಹೇಳಿವೆ. ಇದರೊಂದಿಗೆ ರಾಜ್ಯ ಬಿಜೆಪಿಯಲ್ಲಿ ತಲೆದೋರಿರುವ ನಾಯಕತ್ವ ಬಿಕ್ಕಟ್ಟು ಇನ್ನೂ ಕಗ್ಗಂಟಾಗಿ ಪರಿಸ್ಥಿತಿ ದಿಕ್ಕೆಟ್ಟು ಸಾಗುವ ಎಲ್ಲಾ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಭಿನ್ನಮತ ಬಿಕ್ಕಟ್ಟು ಇನ್ನಷ್ಟು ಕಗ್ಗಂಟು ಹೇಗೆ?
ರಾಜ್ಯ ಬಿಜೆಪಿಯಲ್ಲಿ ತಲೆದೋರಿದ್ದ ಭಿನ್ನಮತ ಶಮನಕ್ಕಾಗಿ ಬಂದಿದ್ದ ಬಿಜೆಪಿ ಉಸ್ತುವಾರಿ ಅರುಣ್ ಅವರ ವಿಚಾರಣಾ ಪರ್ವ ಅಂತ್ಯವಾಗಿದೆ. ಇದರ ಪರಿಣಾಮ ಮೇಲ್ನೋಟಕ್ಕೆ ಯಡಿಯೂರಪ್ಪ ಇನ್ನಷ್ಟು ಗಟ್ಟಿಯಾಗಿದ್ದಾರೆ ಎಂದು ಕಾಣುತ್ತಿದ್ದಂತೆ ನಂತರ ಬಂದ ಆರೋಪಗಳು ಪರಿಸ್ಥಿತಿಯನ್ನು ಇನ್ನಷ್ಟು ರಾದ್ಧಾಂತ ಮಾಡಿದಂತಾಗಿದೆ.

ಅಂದರೆ ರಾಜ್ಯಕ್ಕೆ ಹೈಕಮಾಂಡ್ ಉಸ್ತುವಾರಿ ಬಂದಿದ್ದಾರೆ ಎಂದರೆ ಎಲ್ಲರು ಪಕ್ಷದ ವೇದಿಕೆಯಲ್ಲಿ ಚರ್ಚಿಸ ಬೇಕಿತ್ತು. ಆದರೆ ಅರುಣ್ ಸಿಂಗ್ ಅಭಿಪ್ರಾಯ ಆಲಿಕೆ ಸಂದರ್ಭದಲ್ಲಿ ಹಾದಿಬೀದಿಯ ಆರೋಪ ಮತ್ತು ಪ್ರತ್ಯಾರೋಪಗಳು ಇನ್ನಷ್ಟು ಜೋರಾಗಿ ಯೇ ನಡೆದುಹೋಗಿವೆ. ಇದರಿಂದ ರಾಜ್ಯದ ಭಿನ್ನಮತ ಬಿಕ್ಕಟ್ಟು ಶಮನಗೊಳ್ಳುವ ಬದಲು ಮತ್ತಷ್ಟು ಬಿಗಡಾಯಿಸಿ ದಂತಾಗಿದೆ. ಅದರಲ್ಲೂ ಅರುಣ್ ಸಿಂಗ್ ವಿಚಾರಣೆ ಮರುದಿನವೇ ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಮಾಡಿರುವ ೨೦ ಸಾವಿರ ಕೋಟಿ ರು. ಮೊತ್ತದ ಅಕ್ರಮ ಟೆಂಡರ್ ಆರೋಪ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸ್ಥಾನವನ್ನು ಕೊಂಚ ಅಲುಗಾಡಿ ಸುವ ಸಂದೇಶವನ್ನು ರವಾನಿಸಿದೆ.

ಇದೇ ವೇಳೆ ಶಾಸಕ ಚಂದ್ರಕಾಂತ್ ಬೆಲ್ಲದ್ ಅವರ ಫೋನ್ ಕದ್ದಾಲಿಕೆ ಪ್ರಕರಣ ಕೂಡ ಗಂಭೀರ ಆಗಿದ್ದು ಬೆಂಗಳೂರು ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದರಿಂದ ಭಿನ್ನರ ಬಣಕ್ಕೆ ದೆಹಲಿಗೆ ಹೋಗಲು ಮತ್ತೊಂದು ಬಲವಾದ ಅಸ್ತ್ರಗಳು ಸಿಕ್ಕಿ ದಂತಾಗಿದೆ.

ಉಸ್ತುವಾರಿ ಮುಂದೆ ಕಥೆ ಹೇಳಬೇಕಾ ಎಂದರು
ಅರುಣ್ ಸಿಂಗ್ ಅವರು ಅಹವಾಲು ಸ್ವೀಕಾರ ವೇಳೆ ಭಿನ್ನರ ಬಣದ ಚಂದ್ರಕಾಂತ್ ಬೆಲ್ಲದ್, ಸಿ.ಪಿ. ಯೋಗೇಶ್ವರ್, ವಿಶ್ವನಾಥ್ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಕೆಲವರಿಗೆ ಸರಿಯಾಗಿ ಸ್ಪಂದಿಸಿಲ್ಲ ಎನ್ನಲಾಗಿದೆ. ಅದರಲ್ಲೂ ಬಸನಗೌಡ ಪಾಟೀಲ್ ಯತ್ನಾಳ್ ಅಭಿಪ್ರಾಯ ಆಲಿಕೆ ಒಂದು ರೀತಿಯಲ್ಲಿ ಗಲಾಟೆಯನ್ನೇ ಸೃಷ್ಟಿಸಿದೆ. ಅಂದರೆ ಯತ್ನಾಳ್ ತಾವು ಕೇಂದ್ರ ಸಚಿವ, ಸಂಸದ ಹಾಗೂ ಎರಡು ಬಾರಿ ಶಾಸಕರಾಗಿದ್ದವರು. ಈಗ ಸಚಿವರಾಗಿರಬೇಕಿತ್ತು. ಈಗ ಅದನ್ನು ಬಿಟ್ಟು ಉಸ್ತುವಾರಿ ಮುಂದೆ ಕಥೆ ಹೇಳಬೇಕಾ ಎಂದು ಸಿಟ್ಟಾಗಿದ್ದರು ಎನ್ನಲಾಗಿದೆ. ಇದರಿಂದ ಅರುಣ್ ಕೂಡ ಬೇಸರಗೊಂಡು ಯತ್ನಾಳ್‌ಗೆ
ಸಮಯವನ್ನೇ ನೀಡಿಲ್ಲ.

ಹಾಗೆ ಉಳಿದವರಿಗೂ ಸರಿಯಾಗಿ ಮಾತನಾಡಲು ಅವಕಾಶ ನೀಡಿಲ್ಲ ಎಂಬ ಆರೋಪವಿದೆ. ಇದೆಲ್ಲವನ್ನು ಗಮನಿಸಿದ ಶಾಸಕ ಸುನಿಲ್ ಕುಮಾರ್ ಮತ್ತು ಸತೀಶ್ ರೆಡ್ಡಿ ಸೇರಿದಂತೆ ಕೆಲವರು ಸಮಯ ನಿಗದಿಯಾಗಿದ್ದರೂ ಭೇಟಿ ಮಾಡಿಲ್ಲ. ಹೀಗಾಗಿ ಭಿನ್ನರ ಬಣ ದೆಹಲಿಯ ಕೆಲವು ನಾಯಕರ ಬೆಂಬಲದೊಂದಿಗೆ ಉಸ್ತುವಾರಿ ವಿರುದ್ಧ ಹೋರಾಟಕ್ಕೆ ಚಿಂತಿಸಿದ್ದಾರೆ. ಇದರಿಂದಾಗಿ ಅರುಣ್ ಸಿಂಗ್ ಅವರು ರಾಜ್ಯದಲ್ಲಿ ನಡೆಸಿರುವ ಅಭಿಪ್ರಾಯ ಸಂಗ್ರಹದ ಬಗ್ಗೆ ಪಕ್ಷದ ಹೈಕಮಾಂಡಿಗೆ ವಸ್ತುನಿಷ್ಠ ವರದಿಯನ್ನು ಸಲ್ಲಿಸು ವುದು ಅನಿವಾರ್ಯವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.