Thursday, 12th December 2024

ಬರಲಿದೆ ಪಾರದರ್ಶಕ ಟಿವಿ

ಟೆಕ್ ಮಾತು

ಇಂಧುಧರ ಹಳೆಯಂಗಡಿ

ಸದಾ ಹೊಸಹೊಸತನ್ನು ಬಯಸುವ ಮಾನವನ ತುಡಿತಕ್ಕೆ ಅನುಗುಣವಾಗಿ ಮುಂದಿನ ದಿನಗಳಲ್ಲಿ ಬರಲಿವೆ ಟ್ರಾನ್ಸ ಪರೆಂಟ್ ಅಥವಾ ಪಾರದರ್ಶಕ ಟಿವಿಗಳು.

ಸ್ವಿಚ್ ಆಫ್ ಆಗಿರುವ ಟಿವಿ ಮುಂದೆ ಕುಳಿತುಕೊಂಡಿರುವಾಗ, ಅದರೊಳಗೆ ಯಾವೆ ಯಂತ್ರಾಂಶಗಳು ಇವೆ, ಏನೆ ತಂತ್ರಜ್ಞಾನ ಗಳನ್ನು ಬಳಸಿದ್ದಾರೆ, ಒಂದು ಟಿವಿ ಪೆಟ್ಟಿಗೆಯೊಳಗೆ ಏನೆ ಇದೆ ಎಂಬುವುದು ಹೊರಗಿನಿಂದಲೇ ಕಾಣುವಂತಾದರೆ ಚೆನ್ನಾಗಿರು ತ್ತಿತ್ತು ಎಂದು ನೀವು ಒಂದಲ್ಲ ಒಂದು ದಿನ ಆಶಿಸಿರುವಿರಿ. ಅದಕ್ಕೆಂದೇ ಬಂದಿದೆ ಟ್ರಾನ್ಸ್ಪರೆಂಟ್ (ಪಾರದರ್ಶಕ) ಟಿವಿ! ಇವು ಮುಂದಿನ ಪೀಳಿಗೆಯ ಎಲ್ಇಡಿ ಟಿವಿ ಎಂದೇ ಜನಪ್ರಿಯತೆ ಪಡೆಯುತ್ತಿದೆ.

ಹೆಸರೇ ಹೇಳುವಂತೆ ಇದು ಪಾರದರ್ಶಕ ಗಾಜು ಇರುವ ಟಿವಿ. ಗಾಜಿನಲ್ಲಿಯೇ ಟಿವಿಗೆ ಬೇಕಾದ ಯಂತ್ರಾಂಶಗಳು ಅಡಕವಾಗಿರು ತ್ತದೆ. ಆದರೆ ಇದು ನಮ್ಮ ಕಣ್ಣಿಗೆ ಕಾಣುವುದಿಲ್ಲ ಹಾಗೂ ಹೊರಗಿನಿಂದ ಟಿವಿ ಆಫ್ ಇದ್ದರೆ, ನೇರವಾಗಿ ಟಿವಿ ಹಿಂದೆ, ಕೊಠಡಿಯ ಚಿತ್ರಣ ಕಾಣುತ್ತದೆ. ಸರಳವಾಗಿ ಹೇಳುವುದಾದರೆ, ನಿಮ್ಮ ಮನೆಯ ಕಿಟಕಿಯ ಕನ್ನಡಿಯಲ್ಲಿಯೇ ಟಿವಿ ಕಂಡಂತೆ. ಅದಲ್ಲದೆ, ಕೆಳಗೆ ಬಿದ್ದರೂ ಗಾಜು ಒಡೆದು ಹೋಗುವುದಿಲ್ಲ.

ಟಿವಿ ಸ್ವಿಚ್ ಆಫ್ ಮಾಡಿದಾಗ ನೀವು ಅದರ ಹಿಂದಿನ ಎಲ್ಲವನ್ನೂ ವೀಕ್ಷಿಸಬಹುದು. ಟಿವಿ ಸ್ವಿಚ್ ಆನ್ ಆಗುವವರೆಗೆ ಅವು ಸಂಪೂರ್ಣವಾಗಿ ಪಾರದರ್ಶಕವಾಗಿರುತ್ತವೆ. ಹಾಗೆಯೇ, ನೀವು ಟಿವಿಯನ್ನು ಆನ್ ಮಾಡಿದಾಗ, ಅದರಲ್ಲಿ ಬರುವ ದೃಶ್ಯಗಳು ಗಾಳಿಯಲ್ಲಿ ತೇಲುವಂತೆ ಕಾಣುತ್ತದೆ. ನೀವು ಹೆಚ್ಚು ಬೆಳಕು ಇರುವ ಕೋಣೆಯಲ್ಲಿ ಕುಳಿತರೂ ದೃಶ್ಯಗಳು ಪ್ರಕಾಶಮಾನವಾಗಿ ಕಾಣುತ್ತದೆ.

ಪಾರದರ್ಶಕ ಟಿವಿ ಬ್ರಾಂಡ್‌ಗಳು
ಮೊಟ್ಟಮೊದಲ ಸಾಮೂಹಿಕ-ಉತ್ಪಾದಿತ ಸ್ಮಾರ್ಟ್ ಟಿವಿಯನ್ನು ಮಾರುಕಟ್ಟೆಗೆ ತಂದ ಶಿಯೋಮಿ ಕಂಪನಿಯು, ಅದರ ಟ್ರಾನ್ಸ್ಪರೆಂಟ್ ಆವೃತ್ತಿಯಾದ ಎಂಐ ಟಿವಿ ಎಲ್ಯುಎಕ್ಸ್‌ಅನ್ನು ಹೊರತಂದಿದೆ. ಈ ಸ್ಮಾರ್ಟ್ ಟಿವಿಯನ್ನು ಆಗಸ್ಟ್ ೨೦೨೦ ರಲ್ಲಿ ಮಾರುಕಟ್ಟೆಗೆ ಬಿಡಲಾಯಿತು. ಇದು ಮೀಡಿಯಾ ಟೆಕ್ ೯೬೫೦ ಕಸ್ಟಮ-ನಿರ್ಮಿತ ಟಿವಿ ಚಿಪ್ ನಿಂದ ನಿಯಂತ್ರಿಸಲ್ಪಡುತ್ತದೆ.

ಇದರ ಮೌಲ್ಯವು ೭,೭೨೩ ಡಾಲರ್‌ನಿಂದ (ರು.೫,೭೨,೧೭೬) ಪ್ರಾರಂಭ. ಎಲ್‌ಐ ಸಂಸ್ಥೆಯು ಟ್ರಾನ್ಸ್ಪರೆಂಟ್ ಒಎಲ್ಇಡಿ ಸಿಗ್ನೇಜ್, ೫೫ ಇಂಚಿನ ಡಿಸ್ಪ್ಲೇ ಹೊಂದಿರುವ ಟಿವಿಯನ್ನು ಹೊರತಂದಿತು. ಇದರ ಬೆಲೆ ೨೫,೦೦೦ ಡಾಲರ್‌ಗಳಿಂದ (ರು.೧೮,೫೨,೪೦೦) ಆರಂಭ. ಶಿಯೋಮಿಯ ಟ್ರಾನ್ಸ್ಪರೆಂಟ್ ಟಿವಿಗಿಂತ ಹೆಚ್ಚು ಬೆಲೆ ಇದ್ದರೂ, ಇದರಲ್ಲಿ ಹಲವಾರು
ವೈಶಿಷ್ಟ್ಯಗಳು ಇವೆ ಎಂದು ಎಲ್ ಐ ಹೇಳಿಕೊಂಡಿದೆ.

ಟ್ರಾನ್ಸ್ಪರೆಂಟ್ ಟಿವಿಗಳು ಎರಡು ಪ್ರಮುಖ ಯಂತ್ರಾಂಶಗಳಿಂದ ರಚಿಸಲ್ಪಡುತ್ತವೆ. ಒಂದು ಎಲ್‌ಸಿಡಿ ಮತ್ತೊಂದು ಒಎಲ್ಇಡಿ. ಎ ಎಲ್‌ಸಿಡಿ ಪರದೆಗಳು ಟ್ರಾನ್ಸ್ಪರೆಂಟ್ ಆಗಿಯೇ ಇರುತ್ತದೆ. ಆದರೆ, ಆನ್ ಮಾಡಿದಾಗ ಏನೂ ಡಿಸ್ಪ್ಲೇ ಕಾಣುವುದಿಲ್ಲ. ಆದರೆ, ಈ ಟ್ರಾನ್ಸ್ಪರೆಂಟ್ ಟಿವಿಯ ಸ್ಕ್ರೀನ್ ಡಿಸ್ಪ್ಲೇ ಕಾಣುತ್ತದೆ. ಈಗಿರುವ ಎಲ್ಸಿಡಿ ಸ್ಕ್ರೀನ್‌ಗಳು ಟ್ರಾನ್ಸ್ಪರೆಂಟ್ ಆಗಿದ್ದರೂ ದೃಶ್ಯಗಳು ಕಾಣಲ್ಲ, ಏಕೆಂದರೆ ಅವು ತಮ್ಮದೇ ಆದ ಬೆಳಕನ್ನು ಉತ್ಪಾದಿಸುವುದಿಲ್ಲ.ಆದರೆ ತಂತ್ರಜ್ಞಾನದಲ್ಲಿ ಆಗಿರುವ ಸುಧಾರಣೆ ಯೊಂದಿಗೆ, ಎಲ್‌ಸಿಡಿಯೊಂದಿಗೆ ಈಗ ಹೈಬ್ರಿಡ್ ಡಿಸ್ಪ್ಲೇ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತಿದೆ. ಎಲ್‌ಸಿಡಿ ಸ್ಕ್ರೀನ್‌ಗಳಿಗೆ ಶಕ್ತಿ ತುಂಬಲು ಟ್ರಾನ್ಸ್ಪರೆಂಟ್ ಎಲಇಡಿಗಳನ್ನು ಬಳಸಲಾಗುತ್ತಿದೆ.

ಎಷ್ಟು ಪ್ರಯೋಜನ?

ಈಗ ಮಾರುಕಟ್ಟೆಯಲ್ಲಿರುವ ಪಾರದರ್ಶಕ ಟಿವಿಗಳು ಅತಿ ದುಬಾರಿ. ರು. ಐದು ಲಕ್ಷಗಳಿಗಿಂತಲೂ ಹೆಚ್ಚು ಬೆಲೆಯ ಈ ಟಿವಿ ಉಪಯೋಗಕಾರಿಯೆ? ನಮ್ಮಲ್ಲೂ ಒಂದು ಇರಲಿ ಎಂದು ಶೋಕಿಗೆ ಇಟ್ಟುಕೊಳ್ಳಬಯಸುವವರು ಹಲವರು ಇದ್ದಾರೆ. ಜತೆಗೆ ಹೊಸ ತಂತ್ರಜ್ಞಾನದ ಕೆಲವು ವೈಶಿಷ್ಟ್ಯಗಳನ್ನು ಬಯಸುವವರು ಖರೀದಿಸಬಹುದು.