Saturday, 23rd November 2024

12ನೇ ತರಗತಿ ಪರೀಕ್ಷೆ: ಆಂಧ್ರ ಸರ್ಕಾರದ ನಡೆಗೆ ಛೀಮಾರಿ

ನವದೆಹಲಿ: ಕೋವಿಡ್ ಸಾಂಕ್ರಾಮಿಕದ ನಡುವೆಯೇ 12ನೇ ತರಗತಿ ಪರೀಕ್ಷೆ ನಡೆಸಲು ಮುಂದಾಗಿರುವ ಆಂಧ್ರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ.

ಪರೀಕ್ಷೆಗಳನ್ನು ನಡೆಸುವ ಕುರಿತು ಸರ್ಕಾರ ಮನವರಿಕೆ ಮಾಡಿಕೊಡದ ಹೊರತು ರಾಜ್ಯ ಮಂಡಳಿ ಪರೀಕ್ಷೆಗಳನ್ನು ನಡೆಸಲು ಅನುಮತಿ ನೀಡುವುದಿಲ್ಲ ಎಂದು ಕೋರ್ಟ್ ಗುರುವಾರ ಹೇಳಿದೆ.

ವಿದ್ಯಾರ್ಥಿಗಳ ಕಾರ್ಯಕ್ಷಮತೆ ನಿರ್ಣಯಿಸಲು ವಿಶ್ವಾಸಾರ್ಹ ಪರ್ಯಾಯ ವ್ಯವಸ್ಥೆಗಳಿಲ್ಲದ ಕಾರಣ ಜುಲೈ ಕೊನೆಯ ವಾರದಲ್ಲಿ ಪರೀಕ್ಷೆಗಳನ್ನು ಭೌತಿಕ ಕ್ರಮದಲ್ಲಿ ನಡೆಸುವುದಾಗಿ ರಾಜ್ಯ ಸರ್ಕಾರ ಅಫಿಡವಿಟ್ ಸಲ್ಲಿಸಿದೆ. ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಸರ್ಕಾರವು ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ನಲ್ಲಿ ಮಾಹಿತಿ ನೀಡಿದ್ದು, ಪರೀಕ್ಷೆಗಳನ್ನು ನಡೆಸುವಾಗ ತೆಗೆದುಕೊಳ್ಳುವ ಮುನ್ನೆಚ್ಚರಿಕಾ ಕ್ರಮಗಳನ್ನೂ ಸಹ ಪಟ್ಟಿ ಮಾಡಿತ್ತು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಅವರನ್ನೊಳಗೊಂಡ ನ್ಯಾಯಪೀಠ ಗುರುವಾರ ಸರ್ಕಾರ ಸಲ್ಲಿಸಿದ ಅಫಿಡವಿಟ್‌ಗೆ, ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಬಹಳ ಅನಿಶ್ಚಿತವಾಗಿದೆ ಮತ್ತು ಜುಲೈ ಕೊನೆಯ ವಾರದಲ್ಲಿ ಏನಾಗಬಹುದು ಎಂದು ಊಹಿಸಲು ಸಾಧ್ಯವಿಲ್ಲ. ಇತರೆ ರಾಜ್ಯಗಳು ತಮ್ಮ ಮಂಡಳಿಯ ಪರೀಕ್ಷೆಗಳನ್ನು ರದ್ದುಗೊಳಿಸಿರುವುದನ್ನು ಕೂಡ ನ್ಯಾಯಪೀಠ ಉಲ್ಲೇಖಿಸಿತು.

ಕೋವಿಡ್‌ನಿಂದಾಗಿ ಯಾವುದೇ ಮಾರಣಾಂತಿಕ ಘಟನೆಗಳು ಸಂಭವಿಸಿದಲ್ಲಿ ರಾಜ್ಯ ಸರ್ಕಾರವನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ನ್ಯಾಯಪೀಠ ಆಂಧ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿತು.