ಸೊಂಟ ಬಗ್ಗಿಸದೇ ನೆಲ ಗುಡಿಸಬೇಕೆ? ಹಾಗಿದ್ದರೆ ಈ ರೋಬೋಟ್ ಬಳಸಬಹುದು! ಆದರೆ ಮೊದಲೇ ಹೇಳಿಬಿಡುತ್ತೇನೆ – ಇದರ ಬೆಲೆಯ ವಿಚಾರ. ಕೃತಕ ಬುದ್ಧಿಮತ್ತೆ ಬಳಸಿ, ಮನೆಯ ಮೂಲೆ ಮೂಲೆಗಳನ್ನೂ, ಅಷ್ಟೇಕೆ ಮಂಚದ ಮೇಲಿನ ಹೊದಿಕೆಯನ್ನೂ ದೂಳಿಲ್ಲದಂತೆ ಚೊಕ್ಕಟಗೊಳಿಸಬಲ್ಲ ಈ ರೋಬೋಟ್ ಬೆಲೆ ಸುಮಾರು.
69,900/- ಬೆಲೆಯ ವಿಚಾರವನ್ನು ಮೊದಲೇ ಏಕೆ ಹೇಳಿದ್ದೆಂದರೆ, ‘ಹೌದಾ, ನೆಲ ಗುಡಿಸುವ ಈ ರೋಬೋಟ್ ಇಷ್ಟು ದುಬಾರಿನಾ?’ ಎಂದು ಓದುಗರು ಕೊನೆಯಲ್ಲಿ ಬೆಚ್ಚಿ ಬಿದ್ದು, ವ್ಯಂಗ್ಯದ ಉದ್ಗಾರ ಮಾಡುವುದನ್ನು ತಪ್ಪಿಸಲು. ನಿಜ, ನಮ್ಮ ದೇಶದ ಮಾನದಂಡದಲ್ಲಿ, ಸಾಕಷ್ಟು ಸ್ಥಿತಿವಂತರು ಮಾತ್ರ ಇದನ್ನು ಖರೀದಿಸಬಲ್ಲರು. ಅದೇನೇ ಇದ್ದರೂ, ಇಂತಹದೊಂದು ರೋಬೊಟ್ನ ವಿವರ ತಿಳಿಯುವುದು ಸಾಕಷ್ಟು ಕುತೂಹಲಕಾರಿ. ‘ನೆಲಗುಡಿಸುವಂತಹ ಯಕಶ್ಚಿತ್ ಕೆಲಸವಾ?’ ಎಂದು ಮುಗು ಮುರಿಯಬೇಡಿ.
ಕಳೆದ ಒಂದು ವರ್ಷದಿಂದ ನೆಲ ಗುಡಿಸುವುದು ಎಷ್ಟು ಕಷ್ಟ ಎಂದು ವಿಶ್ವದ ಹಲವರ ಅನುಭವಕ್ಕೆ ಬಂದಿದೆ. ಅದರಲ್ಲೂ ತಾವೇ ಸ್ವತಃ ನೆಲ ಗುಡಿಸದೇ, ಕೆಲಸದವರನ್ನೇ ನೆಚ್ಚಿಕೊಂಡಿದ್ದ ಕುಟುಂಬಗಳು, ಲಾಕ್ಡೌನ್ ಅವಧಿಯಲ್ಲಿ ಈ ಕೆಲಸ ಎಷ್ಟು ರೇಜಿಗೆಯದ್ದು ಎಂಬ ಅನುಭವ ಪಡೆದಿದ್ದಾರೆ! ಅಂತಹವರಿಗೆ ಸಾಕಷ್ಟು ಸಹಕಾರಿಯಾಗಬಲ್ಲದು ನೆಲಗುಡಿಸುವ ರೋಬಾಟ್!
ಇವುಗಳಲ್ಲಿ ಹಲವು ಕಂಪೆನಿಗಳ ವಿವಿಧ ಬ್ರ್ಯಾಂಡ್ಗಳಿದ್ದು, ಇವುಗಳ ಬೆಲೆ ರು.25000 ದಿಂದ ಆರಂಭ. ಇಲ್ಲಿ ವಿವರಿಸಿದ್ದು ಐ ರೋಬೋಟ್ ರೂಂಬಾ ಐ೩+ ಮಾದರಿಯ ಗುಡಿಸುವ ಯಂತ್ರವನ್ನು. (ಇದನ್ನು ಹೋಲುವ ಐ ರೋಬಾಟ್ ರೂಂಬಾ ಐ೩ ಮಾದರಿಯ ಬೆಲೆ ಸುಮಾರು ರು. 49,900/- .) ಇದು ವ್ಯಾಕ್ಯೂಮ್ ಅಂದರೆ ನಿರ್ವಾತವನ್ನು ಬಳಸಿ ಮನೆಯ ದೂಳನ್ನು ಹೀರಿ ತೆಗೆಯುತ್ತದೆ. ಇದರ ವಿಶೇಷಗಳೇನು?
*ವ್ಯಾಕ್ಯೂಮ್ ಬಳಸಿ ನೆಲದ ದೂಳನ್ನು ಹೀರಿ ತೆಗೆಯುತ್ತದೆ
*ತನ್ನಷ್ಟಕ್ಕೇ ತಾನೇ ನೆಲದ ಮೇಲೆ ಓಡಾಡುತ್ತಾ, ಮೂಲೆ ಮೂಲೆಗಳಲ್ಲೂ ಚೊಕ್ಕಟ ಮಾಡುತ್ತದೆ
*ವಿರುದ್ಧ ದಿಕ್ಕಿನಲ್ಲಿ ಸಂಚರಿಸುವ ಬ್ರಶ್ಗಳು ಸಣ್ಣ ಕಸವನ್ನೂ ಸಂಗ್ರಹಿಸುತ್ತವೆ
*ರಗ್, ಕಾರ್ಪೆಟ್ ಮೇಲಿನ ದೂಳು ಹೀರಿ ತೆಗೆಯಲು ಉತ್ತಮ
*ಸಂಗ್ರಹಗೊಂಡ ದೂಳು ಒಳಗಿನ ಪುಟ್ಟ ಚೀಲದಲ್ಲಿ ಶೇಖರಗೊಳ್ಳುತ್ತದೆ. ಅದನ್ನು ಆಗಾಗ ತೆಗೆದು ಧೂಳನ್ನು ಹೊರಹಾಕಬೇಕು.
*ಆರು ತಿಂಗಳಿಂದ ಒಂದು ವರ್ಷದ ಅವಽಯಲ್ಲಿ ಈ ಚೀಲಗಳನ್ನು ಬದಲಿಸಬೇಕು. ಮೂರು ಚೀಲದ ಬೆಲೆ ಸುಮಾರು ರು.1660/-
*ನೆಲದ ಮೇಲಿನ ಸಣ್ಣ ಪುಟ್ಟ ಕಲೆಗಳನ್ನು ಸಹ ಹೀರಿ ತೆಗೆಯಬಲ್ಲದು.
*ಅಲರ್ಜಿ ಉಂಟುಮಾಡಬಲ್ಲ ಸಣ್ಣ ಸಣ್ಣ ಧೂಳಿನ ಕಣಗಳನ್ನು ಹೀರಬಲ್ಲದು.
*ಇದನ್ನು ಅಲೆಕ್ಸಾದ ಜತೆ ಜೋಡಿಸಿ, ಕಮಾಂಡ್ ಗಳನ್ನು ನೀಡಲು ಸಾಧ್ಯ.
*ಒಮ್ಮೆ ಚಾರ್ಜ್ ಮಾಡಿದರೆ, ಒಂದೂವರೆ ಗಂಟೆ ಚಲಿಸುತ್ತಾ, ಮನೆಯ ಮೂಲೆಗಳನ್ನು ಚೊಕ್ಕಟ ಮಾಡಬಲ್ಲದು.
ಇನ್ನೇನು ತಡ, ಸೊಂಟ ಬಗ್ಗಿಸಿ ಗುಡಿಸಲು ನಿಮ್ಮಿಂದ ಅಸಾಧ್ಯವೆ? ಇಂತಹ ಗುಡಿಸುವ ರೋಬಾಟ್ ವೊಂದನ್ನು ಖರೀದಿಸಿ, ನೆಲದ ಮೇಲೆ ಪ್ರಯೋಗಿಸಿ ನೋಡಿ.