Thursday, 12th December 2024

ಸೇನಾ ಉತ್ಪನ್ನಗಳ ತಯಾರಿಕೆ, ರಾಜ್ಯಕ್ಕೆ ದೊರೆಯಬೇಕಿದೆ ಆದ್ಯತೆ

ರಾಜ್ಯದಲ್ಲಿ ರಕ್ಷಣಾ ತಂತ್ರಜ್ಞಾನ ಹಬ್‌ಗಳನ್ನು ಘೋಷಿಸಬೇಕೆಂಬ ಬೇಡಿಕೆ ಇತ್ತೀಚೆಗೆ ವ್ಯಕ್ತವಾಗಿದೆ. ಆದರೆ ರಕ್ಷಣಾ ತಂತ್ರಜ್ಞಾನ ಹಬ್‌ಗಳಿಗೆ ಮಾತ್ರವಲ್ಲದೆ, ರಕ್ಷಣಾ ಕ್ಷೇತ್ರದ ಉತ್ಪನ್ನಗಳ ಪೂರೈಕೆಗೂ ಕರ್ನಾಟಕ ಸೂಕ್ತ ಎಂಬುದು ಗಮನೀಯ ಸಂಗತಿ. ಇತ್ತೀಚೆಗೆ ಭಾರತೀಯ ಸೇನೆಯು ಹಲವು ರೀತಿಯ ಮಿಲಿಟರಿ ಉಪಕರಣಗಳನ್ನು ದೇಶೀಯ ವಾಗಿಯೇ ಖರೀದಿಸಲು ಆಸಕ್ತಿ ವಹಿಸಿದೆ.

ಇಂಥ ಸಂದರ್ಭದಲ್ಲಿ ಸೇನೆಗೆ ಅನೇಕ ಅಗತ್ಯ ವಸ್ತುಗಳ ಪೂರೈಕೆಗೆ ಕರ್ನಾಟಕ ಸಶಕ್ತ ರಾಜ್ಯವಾಗಿದ್ದು, ಇದು ಕೇವಲ ಬೇಡಿಕೆಯಾಗದೆ ಅನುಷ್ಠಾನಕ್ಕೆ
ತರಬೇಕಾದದ್ದು ಅವಶ್ಯಕ. ಪ್ರಸ್ತುತ ಯೋಧರಿಗೆ ಅಗತ್ಯವಿರುವ ಗ್ಲೋವ್ಸ್ ಗಳನ್ನು ಮ್ಯಾನ್ಮರ್ ಕಂಪನಿಯಿಂದ, ಸ್ಲೀಪಿಂಗ್ ಬ್ಯಾಗ್‌ಗಳನ್ನು ಶ್ರೀಲಂಕದಿಂದ, ಬೂಟ್‌ಗಳನ್ನು ಇಟಲಿಯಿಂದ ತರಿಸುತ್ತಿದೆ. ಆದರೆ ಇದೀಗ ಸೇನೆಗೆ ಅಗತ್ಯವಿರುವ ಎಲ್ಲ ವಸ್ತುಗಳನ್ನು ದೇಶಿಯವಾಗಿಯೇ ಖರೀದಿಸುವುದು ಎಂಬ ಬೇಡಿಕೆ ಕೇಳಿಬಂದಿದೆ. ಈ ಬೇಡಿಕೆಗೆ ಸೇನೆಯಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಸೇನಾ ಸಶಕ್ತಪಡೆಗಳ ಮುಖ್ಯಸ್ಥ ಜ.ಬಿಪಿನ್ ರಾವತ್ ಬೆಂಗಳೂರಿನ ಕಂಪನಿಯೊಂದಕ್ಕೆ ಭೇಟಿ ನೀಡಿ ಎಲ್ಲ ಅಗತ್ಯ ಉತ್ಪನ್ನಗಳನ್ನು ಪೂರೈಸಲು ಸಾಧ್ಯವೇ ಎಂದು
ಪರಿಶೀಲಿಸಿದ್ದಾರೆ. ರಾಜ್ಯದ ಪಾಲಿಗೆ ಇದೊಂದು ಉತ್ತಮ ಸಂಗತಿ. ಸೇನೆಗೆ ದೇಶಿಯವಾಗಿಯೇ ಉತ್ಪನ್ನಗಳನ್ನು ಖರೀದಿಸುವ ಬೆಳವಣಿಗೆ ಬಹುಮುಖ್ಯವಾದದ್ದು. ಸೇನೆಯ ಉತ್ಪನ್ನಗಳ ಪೂರೈಕೆ ಹಾಗೂ ರಕ್ಷಣಾ ತಂತ್ರಜ್ಞಾನ ಹಬ್‌ಗಳ ಸ್ಥಾಪನೆಗೆ ಕರ್ನಾಟಕ ಸೂಕ್ತ ಸ್ಥಳ ಎಂಬುದು ರಾಜ್ಯಕ್ಕೆ ಮಹತ್ತರವಾದ ಸಂಗತಿ.