Sunday, 5th January 2025

ಗೂಗಲ್‌ನ ಕೆಲಸ ಬಿಟ್ಟು ಸಮೋಸಾಗೆ ಮಾರುಹೋದವನ ಕತೆ!

ವಿರಾಜಯಾನ

ವಿರಾಜ್ ಕೆ ಅಣಜಿ

ಜೂನ್ ತಿಂಗಳ Entrepreneur startups ಮ್ಯಾಗಜಿನ್ ಓದುತ್ತಿದ್ದೆ. ತಾನೊಬ್ಬ ಉದ್ಯಮಿ ಆಗಬೇಕು ಎಂದು ಕನಸು ಕಾಣುವವರ ಕೈಪಿಡಿಯದು. ಸದಾ ಕಾಲ ಕನಸಿನ ರೆಕ್ಕೆಗಳಿಗೆ ಇನ್ನಷ್ಟು ಬಲ ತುಂಬಬಲ್ಲ ಅಕ್ಷರಗಳ ಮಾಲೆ, ಆಪ್ತ ನಿಯತ ಕಾಲಿಕೆಯದು.

ಅಲ್ಲಿನ ಒಂದೊಂದೇ ಪುಟ ತಿರುಗಿಸಿ ಹೋಗುತ್ತಿದ್ದರೆ ಸಾಹಸಗಳು ಮತ್ತು ಸಾಹಸಿಗಳ ಲೋಕದೊಳಗೇ ತೂರಿಕೊಂಡು ಬಿಡುತ್ತೇವೆ. ಎಲ್ಲೋ ಉಳಿದು ಹೋದ
ನಮ್ಮ ಕನಸು, ಯೋಜನೆ, ಚಿಂತನೆಗಳು ನಮಗರಿವಿಲ್ಲದಂತೆ ಗರಿಗೆದರಿ ಎದ್ದು ಕೂತುಬಿಡುತ್ತವೆ. ನನಗೂ ಹೀಗೇ ಆಯಿತು. 2011-14ರಲ್ಲಿ ಪದವಿ
(ಬ್ಯುಸಿನೆಸ್ ಮ್ಯಾನೇಜ್‌ಮೆಂಟ್) ಓದುವ ದಿನಗಳಲ್ಲಿ ಇಂಥದ್ದೇ ನೂರೆಂಟು ಕನಸುಗಳು. ಅದಕ್ಕೆಲ್ಲ ಕಿಚ್ಚು ಹಚ್ಚುತ್ತಿದ್ದುದ್ದು ನಮ್ಮ ಪ್ರಧಾನ ಸಂಪಾದಕರು
ಬರೆಯುತ್ತಿದ್ದ ನೂರೆಂಟು ನೋಟ ಅಂಕಣಗಳು.

ಇದರ ಜತೆಗೆ ಕಾಲೇಜಿನ ಲೈಬ್ರರಿಯಲ್ಲಿ ಕೂತು ಪಟ್ಟುಬಿಡದೇ ಓದುತ್ತಿದ್ದ ಬಾನಯಾನ ಎಂಬ ರೋಚಕ ಕಥನ ಎಲ್ಲವೂ ನೆನಪಾಗುತ್ತಿತ್ತು. ಅದರೊಟ್ಟಿಗೇ
ಮ್ಯಾಗಜಿನ್ ಒಳಗೆ ಕಳೆದು ಹೋದಾಗ Chief Eating Office ಆಗಿದ್ದವರ ಕತೆ ಕಣ್ಣಿಗೆ ಬಿತ್ತು, ಅವರೇ The Bohri Kitchen ಸಂಸ್ಥಾಪಕ ಮುನಾಫ್  ಕಪಾಡಿಯಾ. ಇದಕ್ಕೂ ಮೊದಲು ಮುನಾಫ್ ಅವರ ಬಗ್ಗೆ ಸ್ಪಲ್ಪ ಕೇಳಿದ್ದ ನನಗೆ ಇನ್ನಷ್ಟು ತಿಳಿದುಕೊಳ್ಳುವ ಕುತೂಹಲ ಕೇಕೆ ಹಾಕಿತು. ಅದಕ್ಕೆ ಕಾರಣ ದೊಡ್ಡದು. ನಾವೆಲ್ಲ ನಮ್ಮ ತಂದೆ – ತಾಯಿ ಹಳೆಯ ಕಾಲದವರು, ನಮ್ಮ ಚಿಂತನೆ, ಆಲೋಚನೆ ಹಾಗೂ ನಮ್ಮ ಸ್ಪೀಡಿನ ಜತೆ ಹೊಂದಿಕೆ ಆಗಲ್ಲ ಎಂದುಕೊಂಡು ನಮ್ಮ
ಐಡಿಯಾಗಳನ್ನೇ ಅವರಿಗೆ ಹೇಳಿಕೊಂಡಿರುವುದಿಲ್ಲ.

೨೫ನೇ ವರ್ಷದವರೆಗೆ ಉದ್ದುದ್ದ ಓದು, ನಂತರ ಒಂದು ಕೆಲಸ ಹಿಡಿ, ಆಮೇಲೆ ಮದುವೆ, ಸಂಸಾರ ಇದಿಷ್ಟೇ ಅವರಿಗೆ ಗೊತ್ತಿರುವ ಸಂಗತಿ ಎಂದು ಭಾವಿಸಿ
ಬಿಡುತ್ತೇವೆ. ಅದು ಒಂದಷ್ಟು ನಿಜವೂ ಇರಬಹುದು. ಆದರೆ, ಮುನಾಫ್ ಇದಕ್ಕೆ ಅಪವಾದ. ತನ್ನ ತಾಯಿಯನ್ನು ನಂಬಿ, ಅವರು ಪ್ರತಿದಿನ ಮಾಡಿ ಬಡಿಸುತ್ತಿದ್ದ ವಿಧವಿಧದ ಬೋಹ್ರಿ ಶೈಲಿಯ ಅಡುಗೆ ಮೇಲೆ ನಂಬಿಕೆಯಿಟ್ಟು ಗೂಗಲ್‌ನಲ್ಲಿ ತನಗಿದ್ದ ಕೆಲಸ, ಕೈ ತುಂಬ ಸಂಬಳವನ್ನೇ ಬಿಡುವ ಸಾಹಸಕ್ಕೆ ಮುನಾ- ಕೈ ಹಾಕಿದ್ದರು. ತನ್ನ ತಾಯಿಯ ಜತೆ ಅಡುಗೆ ಮನೆ ಸೇರಿ, ಸೌಟು – ಚಮಚ ಹಿಡಿದು ನಿಂತು, ಅದನ್ನೇ ಉದ್ಯಮ ಮಾಡಿಕೊಂಡು -ರ್ಬ್ಸ್ ನಿಯತಕಾಲಿಕೆಯ ಮುಖಪುಟದಲ್ಲಿ ರಾರಾಜಿಸುವ ಮಟ್ಟಕ್ಕೆ ಮುನಾಫ್ ಬೆಳೆದಿದ್ದಾರೆ, ಹಲವು ಪ್ರಶಸ್ತಿಗಳಿಗೆ ಕೊರಳೊಡ್ಡಿದ್ದಾರೆ. ಅದಕ್ಕೇ ನನಗವರು ಕುತೂಹಲ ಕೆರಳಿಸಿದ್ದು. ಇಲ್ಲಿಂದ ಮುಂದಿನ ಕತೆಯನ್ನೆಲ್ಲ ಕಪಾಡಿಯಾ ಅವರ ಮಾತಿನಲ್ಲೇ ಕೇಳಿ, ನನಗೀಗ ವಿರಾಮ.

ನಾನೊಬ್ಬ ಸಿಇಒ. ಆದರೆ ನಾನು ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಅಲ್ಲ. ನಾನು ಮುಂಬೈನಲ್ಲಿರುವ ದ ಬೋಹ್ರಿ ಕಿಚನ್‌ನ ಈಟಿಂಗ್ ಆಫೀಸರ್. ಇದಕ್ಕಿಂತ ಹೆಚ್ಚಾಗಿ ಸಮೋಸಾ ಮಾರಲು ಗೂಗಲ್ ಬಿಟ್ಟವನು ಎಂದೇ ಹೆಚ್ಚು ಚಿರಪರಿಚಿತ. ಟಿಬಿಕೆಯ ಯಾನ ಆರಂಭವಾಗಿದ್ದು 2015ರಲ್ಲಿ. ಆಗ ನಾನು ಗೂಗಲ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಶನಿವಾರ, ಭಾನುವಾರ ರಜಾ ದಿನಗಳು. ಆ ಒಂದು ದಿನ ಮನೆಯಲ್ಲಿ ಅರಾಮಾಗಿ ಕೂತು ಟಿವಿ ನೋಡುತ್ತಿದ್ದೆ. ಕಿಚನ್‌ನಿಂದ ಅಲ್ಲಿಗೆ ಬಂದ ನನ್ನಮ್ಮ ಟಿವಿಯ ಚಾನೆಲ್ ಬದಲಿಸಿ ಯಾವುದೋ ಅಡುಗೆ ಕಾರ್ಯಕ್ರಮ ಹಾಕಿದರು. ಅದಕ್ಕಾಗಿ ನನಗೂ ಅಮ್ಮನಿಗೂ ಒಂದಷ್ಟು ಮಾತಿನ ಜಟಾಪಟಿ ಕೂಡ ಆಯಿತು. ಆಗ ನನಗನಿಸಿದ್ದೇ ಬೇರೆ, ನನ್ನನ್ನೂ ಸೇರಿ ಮೂರು ಮಕ್ಕಳನ್ನು ನೋಡಿಕೊಂಡೇ ತನ್ನೀಡಿ ಜೀವನವನ್ನೇ ಅಮ್ಮ ಮುಡಿಪಿಟ್ಟಿದ್ದಾರೆ. ದಿನನಿತ್ಯ ನಮಗೆ ರುಚಿರುಚಿ ಅಡುಗೆ ಮಾಡಿ ಬಡಿಸಿ ಮನೆಗೆಲಸವನ್ನೇ ಪ್ರಪಂಚ ಮಾಡಿಕೊಡಿದ್ದಾರೆ. ಆಯಾಸ ಮರೆಯಲು ಕೆಲ ಸಮಯ ಟಿವಿ ನೋಡಲು ಬಂದರೆ ಅವರಿಗೇ
ರೇಗಿಬಿಟ್ಟೆನಲ್ಲ ಎಂದು ನೋವಾಯಿತು. ಅವರಿಗಾಗಿ ಏನನ್ನಾದರೂ ಮಾಡಬೇಕು ಎಂದು ಆಗಲೇ ಬಲವಾಗಿ ಅನಿಸಿತು.

ಅಮ್ಮನಿಗಾಗಿ ಏನು ಮಾಡಬೇಕು ಎಂದು ಯೋಚಿಸಿದಾಗ, ಆಕೆಗೆ ಅಡುಗೆ ಮಾಡುವುದು ಎಂದರೆ ಪಂಚಪ್ರಾಣ. ಇದರ ಜತೆಗೆ ನಾವು ದೌವುಡಿ ಬೋಹ್ರಾ ಜನಾಂಗದವರು. ನಮ್ಮಲ್ಲಿ ಮಾಡುವ ಭಕ್ಷ್ಯಭೋಜ್ಯ ಸುಲಭವಾಗಿ ನಮ್ಮ ಜನಾಂಗದವರನ್ನು ಬಿಟ್ಟು ಬೇರೆಲ್ಲೂ ಸಿಗದು ಎಂಬ ಹೊಳಹು ಮೂಡಿತು. ಅಂತದರಲ್ಲಿ ಬೋಹ್ರಾ ಶೈಲಿಯ ಅಡುಗೆಗಳನ್ನು ಮಾಡುವುದರಲ್ಲಿ ನನ್ನಮ್ಮ ಸಿದ್ಧಹಸ್ತರು. ಮಾಡಿದ ಅಡುಗೆಯನ್ನು ಹೆಚ್ಚೆಚ್ಚು ಜನರು ತಿಂದು ಸಂತೃಪ್ತರಾದರೆ ಇನ್ನೂ ಆನಂದ ಪಡುವವರು. ಇದನ್ನೇ ಬಳಸಿಕೊಂಡು, ಅಮ್ಮನ ಜತೆ ನಾನು ಸೇರಿ ಒಂದು ರೆಸ್ಟೋರೆಂಟ್ ಆರಂಭಿಸೋಣ ಎಂದು ಯೋಚಿಸಿದೆ. ಆದರೆ, ಎರಡೇ ದಿನದಲ್ಲಿ ನನಗೊಂದು ಸತ್ಯ ಅರಿವಾಯಿತು. ಮುಂಬೈನಂಥ ಮಹಾನಗರ ದಲ್ಲಿ ನಮ್ಮಂಥ ಮಧ್ಯಮ ವರ್ಗದವರು ರೆಸ್ಟೋರೆಂಟ್ ಆರಂಭ ಮಾಡುವು ದೆಲ್ಲ ಅಸಾಧ್ಯವೇ ಆಗಿತ್ತು, ಅಷ್ಟು ಹಣ ನಮ್ಮಲಿರಲಿಲ್ಲ. ಆದರೆ, ಅಂದುಕೊಂಡದನ್ನು ಮಾಡದೇ ಕೈಬಿಡಲು ಮನಸಾಗಲಿಲ್ಲ.

ಕೊನೆಗೆಲ್ಲ ಯೋಚನೆ ಮಾಡಿ, ನನ್ನ ಆಪ್ತ ಐವತ್ತು ಸ್ನೇಹಿತರಿಗೆ ಒಂದು ಇ-ಮೇಲ್ ಬರೆದೆ. ಅದರಲ್ಲಿ ನಾನು ದ ಬೋಹ್ರಿ ಕಿಚನ್ ಆರಂಭಿಸಿದ್ದು, ಇದೆಲ್ಲ ನಮ್ಮಲ್ಲಿ ಭೋಜನಗಳು ಲಭ್ಯವಿದೆ. ಒಬ್ಬರಿಗೆ 700 ರುಪಾಯಿಗಳನ್ನು ಚಾರ್ಜ್ ಮಾಡುತ್ತೇವೆ. ದಯವಿಟ್ಟು ಆಸಕ್ತಿ ಇದ್ದವರು ಬನ್ನಿ ಎಂದು ಕೇಳಿಕೊಂಡಿದ್ದೆ. ಬಹಳಷ್ಟು ಸ್ನೇಹಿತರು ಕರೆ ಮಾಡಿ, ತಮಾಷೆ ಮಾಡಬೇಡ, ಫುಲ್ ಮಾಡಬೇಡ ಎಂದು ತಿಳಿಸಿದ್ದರು. ಆದರೆ, ಒಬ್ಬ ಸ್ನೇಹಿತ ನನ್ನ ಮೇಲ್ ಅನ್ನು ತನ್ನ ಸ್ನೇಹಿತರೊಬ್ಬರಿಗೆ ಫಾರ್ವರ್ಡ್ ಮಾಡಿದ್ದ.

ಕೊನೆಗೆ, ನಾನು 50 ಮೇಲ್ ಕಳಿಸಿದ ಮೂರು ಗಂಟೆಯಲ್ಲೇ ಸೋನಾಲಿ ಎಂಬುವರಿಂದ ನನಗೆ ಕರೆ ಬಂತು. ನಿಜಕ್ಕೂ ನನಗೆ ಮೈ ರೋಮಾಂಚವಾದ
ಕ್ಷಣವದು. ನಿಮ್ಮ ಮೆನು ಇಷ್ಟವಾಗಿದೆ, ನಿಮ್ಮ ರೆಸ್ಟೋರೆಂಟ್‌ಗೆ ಬರಲು ಇಷ್ಟಪಟ್ಟಿದ್ದೇವೆ ಎಂದರು. ನಾನವರಿಗೆ ಇದು ರೆಸ್ಟೋರೆಂಟ್ ಅಲ್ಲ, ಇದು ನಮ್ಮ ಮನೆ, ನನ್ನ ತಾಯಿಯೇ ಅಡುಗೆ ಮಾಡಿ ಬಡಿಸುತ್ತಾರೆ ಎಂದು ಸ್ಪಷ್ಟಪಡಿಸಿದೆ. ಅದಕ್ಕವರು, ಏನೂ ತೊಂದರೆ ಇಲ್ಲ, ಖಂಡಿತ ಬರುತ್ತೇವೆ ಎಂದು ತನ್ನ ಆರು ಸ್ನೇಹಿತ ರೊಂದಿಗೆ ನಮ್ಮ ಮನೆಗೆ ಬಂದರು. ನಮ್ಮ ಮನೆಯ ಡೈನಿಂಗ್ ಟೇಬಲ್‌ನಲ್ಲೇ ಎಲ್ಲರೂ ಕೂತು ಅಮ್ಮ ಮಾಡಿದ ಭೋಜನ ಸವಿದರು. ನಾವೂ ಕೂಡ ಅವರಿಗೆ ಜತೆಯಾದೆವು. ಅದು ಗೆಟ್ ಟು ಗೆದರ್ ರೀತಿ ಅತ್ಯಂತ ಸಹಜವೂ, ಆಪ್ತವೂ ಆಗಿತ್ತು.

ಇನ್ನೇನು ಹೊರಡಬೇಕು ಎನ್ನುವಾಗ ನನ್ನ ತಾಯಿಯನ್ನು ಅಪ್ಪಿಕೊಂಡ ಸೋನಾಲಿ, ಆಂಟಿ ನಿಮ್ಮ ಕೈಯಲ್ಲಿ ಮ್ಯಾಜಿಕಲ್ ರುಚಿಯಿದೆ, ಇಂಥದ್ದೊಂದು ಊಟವನ್ನು ನನ್ನ ಜೀವಮಾನದಲ್ಲೇ ಎಂದೂ ಮಾಡಿರಲಿಲ್ಲ, ಥ್ಯಾಂಕ್ಯೂ ಸೋ ಮಚ್. ಪ್ಲೀಸ್ ಇದನ್ನು ಇಲ್ಲಿಗೇ ನಿಲ್ಲಿಸಬೇಡಿ ಎಂದು ಕೇಳಿಕೊಂಡಿದ್ದದರು. ದುಡ್ಡು ಕೊಟ್ಟೇ ಊಟ
ಮಾಡಿದ್ದರೂ ಅವರು ತೋರಿಸಿದ ಆಪ್ತ ಭಾವ ನಮ್ಮ ಮನೆಯ ಎಲ್ಲರ ಕಣ್ಣಲ್ಲೂ ನೀರು ತರಿಸಿತ್ತು. ತಾನು ಮಾಡಿದ ಅಡುಗೆ ಬಗ್ಗೆ ಅಷ್ಟು ಪ್ರೀತಿ ವ್ಯಕ್ತವಾದ ಬಗ್ಗೆ
ನನ್ನ ಅಮ್ಮನಿಗೆ ಸಾರ್ಥಕತೆಯ ಭಾವ ಮೂಡಿತ್ತು. ನಾವೆಲ್ಲ ಪ್ರತಿದಿನ ಸಹಜವಾಗಿ ತಿನ್ನುತ್ತಿದ್ದ ಊಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಅಪರಿಚಿತರೊಬ್ಬರು ಅಷ್ಟು
ಪ್ರೀತಿಯಿಂದ ನನ್ನಮ್ಮನನ್ನು ಅಪ್ಪಿದ್ದು ನಿಜಕ್ಕೂ ನನ್ನನ್ನು ಕುಬ್ಜನಾಗಿಸಿತ್ತು. ಇಷ್ಟೆಲ್ಲ ನಮಗಾಗಿ ಮಾಡುತ್ತಲೇ ಇರುವ ಅಮ್ಮನಿಗಾಗಿ ಏನಾದರೂ ಮಾಡಲೇಬೇಕು
ಎಂದು ಆಗಲೇ ಗಟ್ಟಿ ನಿರ್ಧಾರ ಮಾಡಿಕೊಂಡೆ.

ಆಗ ನನಗನಿಸಿದ್ದು ಒಂದೇ ವಿಚಾರ. ಅಡುಗೆಯ ರುಚಿಯ ಬಗ್ಗೆ ನಾನು ಯಾವುದೇ ರೀತಿ ಯೋಚನೆ ಮಾಡಬೇಕಿಲ್ಲ. ಇನ್ನು ನನ್ನ ಕೆಲಸವೆಂದರೆ, ನಮ್ಮದೇ
ಒಂದು ಬ್ರ್ಯಾಂಡ್ ಕ್ರಿಯೇಟ್ ಮಾಡಬೇಕು. ಹಾಗೆಯೇ ಪ್ರೆಸೆಂಟೇಷನ್ ಸ್ಟೈಲ್‌ನಲ್ಲಿ ಸುಧಾರಣೆ ತರುವಲ್ಲಿ ಹೆಚ್ಚಿನ ಗಮನ ನೀಡಬೇಕಿತ್ತು. ಆಗಲೇ ಕುಳಿತು The Bohri Kitchen ಎಂಬ ಲೋಗೋವನ್ನು ಬರೆದೆ, ಅದಕ್ಕೆ ಟ್ರೇಡ್ ಮಾರ್ಕ್ ಗುರುತನ್ನೂ ನಾನೇ ಹಾಕಿಬಿಟ್ಟೆ. ಹಾಗೆಯೇ ಅದರಲ್ಲಿ ಎರಡು ವೈರುಧ್ಯಗಳೂ
ಇರುವಂತೆ ಮಾಡಿದೆ. ಒಂದು: ನಾನು ಆಟಿಟ್ಯೂಡ್ ನಲ್ಲಿ ಕುಳಿತ ಚಿತ್ರ. ನೀವು ಪ್ರಧಾನಿಯೇ ಆಗಿದ್ದರೂ ನಮ್ಮ ಮನೆಗೆ ಬಂದು ಊಟ ಮಾಡುತ್ತೇನೆ ಎಂದು
ಹೇಳುವಂತಿಲ್ಲ. ನಾವು ಆಹ್ವಾನಿಸಿದರೆ ಮಾತ್ರವೇ ಪ್ರವೇಶ ಎಂಬುದರ ಅರ್ಥ.

ಇನ್ನೊಂದು ನನ್ನ ತಂದೆ-ತಾಯಿ ಚಿತ್ರ. ನಮ್ಮಲ್ಲಿ ಬಂದವರಿಗೆ ತಮ್ಮ ಮನೆಯಲ್ಲೇ ಕೂತು ಊಟ ಮಾಡುತ್ತಿದ್ದೇವೆ, ಪ್ರೀತಿ, ಮಮತೆಗೆ ಕೊರತೆಯಿಲ್ಲ ಎಂಬ ಭಾವ ಬರುವ ಚಿತ್ರ, ಎರಡನ್ನೂ ಸೇರಿಸಿಯೇ ಲೋಗೋ ಕ್ರಿಯೇಟ್ ಮಾಡಿದ್ದೆ. ವಾರಾಂತ್ಯ ರಜಾ ದಿನಗಳಲ್ಲಿ ಬೋಹ್ರಿ ಕಿಚನ್ ನಡೆಯುತ್ತಿತ್ತು. ನಿಧಾನವಾಗಿ ಕಿಚನ್ ಸದ್ದು ನಮ್ಮ ಆಪ್ತ ವಲಯದಲ್ಲಿ ಕೇಳಲು ಆರಂಭಿಸಿತ್ತು. ನಮ್ಮಲ್ಲಿ ದೊರೆಯುತ್ತಿದ್ದ ಸಮೋಸಾಗಳ ವಾಸನೆ ಹಿಡಿದು ಒಂದಷ್ಟು ಪತ್ರಕರ್ತರೂ ನನ್ನನ್ನು ಹುಡುಕಿ
ಬಂದರು. ಬರುತ್ತಿದ್ದ ಹಲವರು, ತಾಯಿ-ಮಗ ಸೇರಿಕೊಂಡು ಎರಡು ತಿಂಗಳು ಇಂಥದ್ದೊಂದು ಹರಸಾಹಸ ಮಾಡಿ, ನಂತರ ಕಿಚನ್‌ಗೆ ಬೀಗ ಹಾಕುತ್ತಾರೆ
ಎಂದೇ ಭಾವಿಸಿರುತ್ತಿದ್ದರು. ಕಿಚನ್ ಸ್ಥಾಪಿಸದ ಉದ್ದೇಶವೇನು ಎಂದು ನನ್ನನ್ನು ಕೇಳಿದವರಿಗೆ, ನಾನು ದೊಡ್ಡ foodpreneur  ಆಗಬೇಕು ಎನ್ನುತ್ತಿದ್ದೆ.

ಹಾಗೆಯೇ ನಮ್ಮೆಲ್ಲರ ಆರಾಧ್ಯದ ಚಿತ್ರ ನಟ ಶಾರೂಖ್ ಖಾನ್ ಫೋನ್ ಮಾಡಿ, ನಿಮ್ಮ ಮನೆಗೆ ಊಟಕ್ಕೆ ಬರುತ್ತೇನೆ ಎಂದು ಹೇಳಬೇಕು, ಇದಿಷ್ಟೇ ನಮ್ಮ ಉದ್ದೇಶ ಎಂದು ಹೇಳುತ್ತಿದ್ದೆ. ಅದೇನೋ ಗೊತ್ತಿಲ್ಲ, ನನ್ನ ನೇರ ಮಾತು ಕೇಳಿದವರಿಗೆ, ಮುನಾಫ್ ಏನೋ ದೊಡ್ಡದಾಗಿ ಮಾಡಬಲ್ಲ ಎಂಬ ನಂಬಿಕೆ ಮೂಡಿತ್ತು.
ಕಿಚನ್ ಚೆನ್ನಾಗಿ ನಡೆಯುತ್ತಿತ್ತು. 2015ರ ಅಂತ್ಯದಲ್ಲಿ  ನಾನು ಗೂಗಲ್‌ಗೆ ರಾಜೀನಾಮೆ ನೀಡಿ ಇದನ್ನೇ ಫುಲ್ ಟೈಂ ಆಗಿ ತೆಗೆದುಕೊಂಡರೆ ಹೇಗೆ ಎಂಬ
ಆಲೋಚನೆಯೂ ಬಂತು. ನನ್ನ ಅಪ್ಪ – ಅಮ್ಮನೂ ಸೇರಿ ಎಲ್ಲರೂ, ಇದೆಲ್ಲ ಹೇಳಲು, ಕೇಳಲು ಚೆಂದ. ಗೂಗಲ್ ಬಿಡುವಂತ ಹುಚ್ಚು ಸಾಹಸ ಬೇಡ ಎಂದೇ ಹೇಳಿದ್ದರು.

ಆಗೇನು ನಿರ್ಧಾರಕ್ಕೆ ಬರಬೇಕು ಎಂಬುದರ ಬಗ್ಗೆ ನನ್ನ ಬಾಸ್ ಆಗಿದ್ದವರೇ ಸಲಹೆ ನೀಡಿದ್ದರು. ನೀವೊಬ್ಬ ಒಳ್ಳೆಯ ಉದ್ಯೋಗಿಯಾಗಿ ಬೆಳೆಯಬೇಕು ಎಂದು
ನೀವು ಕೆಲಸದಲ್ಲಿರುವ ಸಂಸ್ಥೆ ಭಾವಿಸಿದ್ದರೆ ನಿಮ್ಮನ್ನು ಬಿಟ್ಟು ಕೊಡಲು ಅದು ಒಪ್ಪುವುದಿಲ್ಲ. ಆದರೆ ಅದೇ ಕಂಪನಿಯು ನೀವೊಬ್ಬ ಉತ್ತಮ ಮನುಷ್ಯ, ಸಾಧಕ ನಾಗಬೇಕು ಎಂದು ಬಯಸಿದ್ದರೆ ನಿಮ್ಮ ಸಮಯ ಬಂದಾಗ ತಾನಾಗಿಯೇ ನಿಮ್ಮನ್ನು ಕಳುಹಿಸಿ ಕೊಡುತ್ತದೆ. ಇದೇ ನನ್ನ ಪಾಲಿಗೂ ಆಯಿತು. ಗಟ್ಟಿ ಮನಸ್ಸು ಮಾಡಿ ಗೂಗಲ್‌ಗೆ ರಾಜೀನಾಮೆ ನೀಡಿ ಹೊರಬಂದಿದ್ದೆ.

ಇದಾಗಿ ಮೂರ್ನಾಲ್ಕು ತಿಂಗಳಲ್ಲೇ ನನ್ನ ನಿರ್ಧಾರದ ಬಗ್ಗೆ ನನಗೆ ಮರುಕ ಉಂಟಾಗಲು ಆರಂಭಿಸಿತ್ತು. ಕಿಚನ್ ಆರಂಭಿಸಿ ತಪ್ಪು ಮಾಡಿದೆ, ಯಾವುದೂ
ಅಂದುಕೊಂಡಂತೆ ಮಾಡಲು ಆಗುತ್ತಿಲ್ಲ. ಹೇಗೋ ತೂಗಿಸಿಕೊಂಡು ಹೋಗಲು ಹಣವಿಲ್ಲ. ಇಷ್ಟು ವಯಸ್ಸಿಗೇ ನಾನೊಬ್ಬ ಬ್ಯಾಂಕ್ರಪ್ಟ್ ಆಗಿಬಿಟ್ಟೆನಲ್ಲ ಎನಿಸಲು
ಆರಂಭಿಸಿತ್ತು. ಸಾಕು ಇದನ್ನು ಇಲ್ಲಿಗೇ ಬಿಟ್ಟು ಉದ್ಯೋಗ ಮಾಡಿಕೊಂಡು ಇದ್ದು ಬಿಡೋಣ ಎಂಬ ಆಲೋಚನೆಯಲ್ಲಿದೆ. ಅದಾಗಿ, ಒಂದೆರಡು ದಿನದ ನಂತರ ಫೋರ್ಬ್ಸ್ ಇಂಡಿಯಾ ಮ್ಯಾಗಜಿನ್ ತಂಡ ಕರೆ ಮಾಡಿ, ೩೦ ವರ್ಷದೊಳಗಿನ ೩೦ ಸಾಧಕರಲ್ಲಿ ನೀವೂ ಒಬ್ಬರು, ನಿಮ್ಮ ಫೋಟೋ ಮುಖಪುಟದಲ್ಲಿ ಬರಲಿದೆ ಎಂದರು. ನಾನವರಿಗೆ ನನ್ನ ಸೋಲಿನ ಕತೆ ಹೇಳಿದ್ದಕ್ಕೆ, ನಮಗೆ ಅದೆಲ್ಲ ಗೊತ್ತು. ನೀವು ಗೆದ್ದಿದ್ದೀರಿ ಎಂದು ನಿಮ್ಮನ್ನು ಆಯ್ಕೆ ಮಾಡಿಲ್ಲ. ಬದಲಾಗಿ, ನೀವು
ಸೋತಿಲ್ಲ ಎಂದು ನಿಮ್ಮನ್ನು ಆಯ್ಕೆ ಮಾಡಿದ್ದೇವೆ ಎಂದಿದ್ದರು.

ಆ ಕ್ಷಣ, ಇನ್ನೆಂದೂ ಕಿಚನ್‌ನಲ್ಲಿ ಒಲೆಯನ್ನು ಆರಿಸಬಾರದು ಎಂದು ನಿರ್ಧರಿಸಿದೆ… ಇದರ ಮುಂದಿನ ಎಲ್ಲ ಕತೆಯನ್ನು How I quit GOOGLE to sell Samosas ಎಂಬ ಪುಸಕ್ತದಲ್ಲಿ ಮುನಾಫ್ ಕಪಾಡಿಯಾ ಬರೆದಿದ್ದು, ಇದೇ ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. ಕಳೆದೊಂದು ವರ್ಷದಿಂದ ಕರೋನಾದಿಂದ ಜನ ಜೀವನವೇ ಸಂಪೂರ್ಣ ಸ್ತಬ್ಧವಾಗಿದ್ದು, ಇದಕ್ಕೆ ಬೋಹ್ರಿ ಕಿಚನ್ ಕೂಡ ಹೊರತಾಗಿರಲಿಲ್ಲ. ಮುಂಬೈನಲ್ಲಿ ನಾಲ್ಕು ಕಡೆ ಬ್ರ್ಯಾಂಚ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಿಚನ್‌ಗೆ ಬೀಗ ಬಿದ್ದಿದೆ. ಆದರೆ, ತಾಯಿ ನಫೀಸಾ ಕಪಾಡಿಯಾ ಮತ್ತು ಮಗ ಮುನಾಫ್ ಕಪಾಡಿಯಾ ಸೇರಿ ಕಂಡಿದ್ದ ಕನಸಿಗೆ, ಛಲಕ್ಕೆ ಯಾವುದೇ ಸೋಂಕು ಆವರಿಸಿಲ್ಲ.

ಬಾಲಿವುಡ್ ತಾರೆಗಳಾದ ಹೃತಿಕ್ ರೋಷನ್, ರಿಷಿ ಕಪೂರ್, ಸಂಜಯ ಲೀಲಾ ಬನ್ಸಾಲಿ, ರಾಣಿ ಮುಖರ್ಜಿಯಂಥ ಹಲವರು ಬೋಹ್ರಿ ಕಿಚನ್‌ಗೆ ಮಾರು ಹೋಗಿದ್ದಾರೆ. ತಿಂಗಳಿಗೆ 40 ಲಕ್ಷದಷ್ಟು ವಹಿವಾಟು ಮಾಡುತ್ತಿದ್ದ ಬೋಹ್ರಿ ಕಿಚನ್ ಮತ್ತೆ ತನ್ನ ಘಮವನ್ನು ಮರಳಿ ಪಡೆಯಲಿ. ವಿಶ್ವವ್ಯಾಪಿ ಹೆಸರಾಗಲಿ. ಅಮ್ಮ-ಮಗನ ಆಸೆಯಂತೆ ಶಾರೂಖ್ ಖಾನ್ ಅವರ ಮನೆಗೆ ಊಟಕ್ಕೆ ಬರುವಂತಾಗಲಿ, ಆಲ್ ದ ಬೆಸ್ಟ್ ಮುನಾಫ್ !

Leave a Reply

Your email address will not be published. Required fields are marked *