Thursday, 19th September 2024

ಸೆಮಿ ಫೈನಲ್‌ಗೆ ಮುನ್ನಡೆದ ಇಟಲಿ, ಸ್ಪೇನ್

ಮ್ಯೂನಿಚ್ : ಯೂರೋ-2020 ಫುಟ್ಬಾಲ್ ಟೂರ್ನಿ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಪ್ರಬಲ ಇಟಲಿ ಮತ್ತು ಸ್ಪೇನ್ ಸೆಮಿ ಫೈನಲ್‌ಗೆ ಮುನ್ನಡೆದಿವೆ.

ನಿಕೊಲೊ ಬರೆಲ್ಲಾ ಮತ್ತು ಲೊರೆನ್ಸೊ ಇನ್‌ಸೈನ್ 31ನೇ ನಿಮಿಷದಲ್ಲಿ ಅವರ ಗೋಲಿನ ನೆರವಿ ನೊಂದಿಗೆ ಬೆಲ್ಜಿಯಂ ವಿರುದ್ಧ 2-1 ಗೋಲುಗಳ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಸೆಮಿ ಫೈನಲ್‌ನಲ್ಲಿ ವಿಶ್ವದ ನಂಬರ್ ವನ್ ಸ್ಪೇನ್ ತಂಡವನ್ನು ಎದುರಿಸಲು ಸಜ್ಜಾಗಿದೆ.

ಮ್ಯೂನಿಚ್‌ನಲ್ಲಿ ನಡೆದ ಪಂದ್ಯದಲ್ಲಿ ಬೆಲ್ಜಿಯಂನ ರೊಮೆಲು ಲುಕಾಕು ಗೋಲು ಹೊಡೆದು ವಿರಾಮದ ವೇಳೆಗೆ 1-1 ಸಮಬಲ ಸಾಧಿಸಿದ ಬಳಿಕ ಉತ್ತರಾರ್ಧದಲ್ಲಿ ಉಭಯ ತಂಡಗಳು ಗೋಲು ಗಳಿಸುವ ಅವಕಾಶ ಹೊಂದಿದ್ದವು. ಆದರೆ ಅಂತಿಮವಾಗಿ, ಇನ್‌ಸೈನ್ ಗೋಲಿನಿಂದಾಗಿ ರೊಬೆರ್ಟೊ ಮೆನ್ಸಿನಿ ತಂಡ ಸತತ 13ನೇ ಜಯ ದಾಖಲಿಸಿ ತಮ್ಮ ಅಜೇಯ ಸರಣಿಯನ್ನು 32 ಪಂದ್ಯಗಳಿಗೆ ವಿಸ್ತರಿಸಿದರು.

ಇನ್ನೊಂದು ಪಂದ್ಯದಲ್ಲಿ ಸ್ವಿಟ್ಝರ್ಲೆಂಡ್ ವಿರುದ್ಧ 3-1 ಗೋಲುಗಳ ಭರ್ಜರಿ ಜಯ ಗಳಿಸುವಲ್ಲಿ ಸ್ಪೇನ್‌ನ ಗೋಲ್‌ ಕೀಪರ್ ಉನಯ್ ಸೈಮನ್ ಪ್ರಮುಖ ಪಾತ್ರ ವಹಿಸಿದರು. ಪಂದ್ಯ 1-1 ಸಮಬಲದಲ್ಲಿದ್ದಾಗ ಕೊನೆಯ 43 ನಿಮಿಷಗಳನ್ನು ಸ್ವಿಟ್ಝರ್ಲೆಂಡ್ ನ ಕೇವಲ 10 ಆಟಗಾರರು ಆಡುವಂತಾದದ್ದು ಸ್ವಿಸ್ ತಂಡದ ಹಿನ್ನಡೆಗೆ ಕಾರಣವಾಯಿತು.

ಈ ಮೂಲಕ ಸತತ ನಾಲ್ಕನೇ ಬಾರಿಗೆ ಕಪ್ ಗೆಲ್ಲುವ ಸ್ಪೇನ್‌ನ ಆಸೆ ಜೀವಂತವಾಗಿ ಉಳಿದಿದೆ. ಆದರೆ ಸ್ವಿಟ್ಝರ್ಲೆಂಡ್ ಮೊದಲ ಬಾರಿಗೆ ಪ್ರಮುಖ ಟೂರ್ನಿಯ ಸೆಮಿಫೈನಲ್ ತಲುಪುವ ಆಸೆ ನುಚ್ಚು ನೂರಾಯಿತು.