Friday, 20th September 2024

ಜಿಲ್ಲಾ ಪಂಚಾಯಿತಿಗೆ ರೂ.140 ಕೋಟಿ ಹೊಸ ಆದಾಯ !

ಗ್ರಾಮ ಪಂಚಾಯಿತಿಗಳಲ್ಲಿ ಕೋಟಿ ಕೋಟಿ ಸೋರಿಕೆ ತಡೆದ ಸಿಇಒ ಸರಕಾರದ ಮೆಚ್ಚುಗೆ 

ಗ್ರಾಪಂ ಪಿಡಿಒ ತಂತ್ರಗಳಿಗೆ ಕಡಿವಾಣ

ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ರಾಜ್ಯದಲ್ಲಿ ಬಹುತೇಕ ಜಿಲ್ಲಾ ಪಂಚಾಯಿತಿಗಳು ಅವಧಿ ಮುಗಿಸುವ ಜತೆಗೆ ಖಜಾನೆಯನ್ನೂ ಖಾಲಿ ಮಾಡಿಕೊಳ್ಳುತ್ತಿದ್ದು, ಬೆಂಗಳೂರು ಜಿಲ್ಲಾ ಪಂಚಾಯಿತಿ ಮಾತ್ರ ಇದಕ್ಕೆ ಅಪವಾದ. ಕೋವಿಡ್ ತಂದೊಡ್ಡಿರುವ ಆರ್ಥಿಕ ಸಂಕಷ್ಟದ ನಡುವೆಯೂ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸುಮಾರು 122 ಕೋಟಿ ರು.ಗಳ ಆಸ್ತಿ ತೆರಿಗೆ ಸಂಗ್ರಹಿಸುವುದರ ಜತೆಗೆ ಸುಮಾರು 140 ಕೋಟಿ ರು. ಗಳಿಗೂ ಅಧಿಕ ಆಸ್ತಿ ತೆರಿಗೆಯ ಮೂಲಗಳನ್ನು ಗುರುತಿಸಿಕೊಂಡಿದೆ. ಇದರೊಂದಿಗೆ ಮುಂದಿನ ಈ ವರ್ಷ ಸುಮಾರು 140 ಕೋಟಿ ರು.ಗಳಿಗೂ ಅಧಿಕ ಆಸ್ತಿ ತೆರಿಗೆ ಜಿಪಂಚಾಯಿತಿಗೆ ಲಭಿಸಲಿದೆ.

ಇದೆಲ್ಲಕ್ಕಿಂತ ಮುಖ್ಯವಾಗಿ ಪಂಚಾಯಿತಿಗೇ ಮರೆ ಮಾಚಲಾಗುತ್ತಿದ್ದ ಸುಮಾರು 14.48 ಲಕ್ಷಕ್ಕೂ ಅಧಿಕ ಆಸ್ತಿಗಳ ತೆರಿಗೆಯನ್ನು ಪತ್ತೆ ಮಾಡಿದಂತಾಗಿದೆ. ಜಿಲ್ಲಾ ಪಂಚಾಯಿತಿಗೆ ಇತ್ತೀಚಿಗೆ ಬಂದಿರುವ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರ ಕಠಿಣ ಕ್ರಮ ಮತ್ತು ವಿಶೇಷ ಆಸಕ್ತಿಯಿಂದ ಈ ಆಕ್ರಮ ಪತ್ತೆ ಮಾಡಿದಂತಾ ಗಿದ್ದು, ಇದೀಗ ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಚಾಲನೆ ನೀಡಲಾಗಿದೆ.

ಇದರಿಂದ ಪಂಚಾಯಿತಿ ಆಡಳಿತ ಯೋಜನೆ ಮತ್ತು ಯೋಜನೇತರ ವೆಚ್ಚಗಳ ಗಾತ್ರಗಳನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಪರಿಶಿಷ್ಟ ಜಾತಿ, ವರ್ಗಗಳ ಹಾಗೂ ವಿಕಲಾಂಗರು, ಮಹಿಳಾ ಹಾಗೂ ಇತರ ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚಿನ ಹಣ ನಿಗದಿ ಮಾಡಲು ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಸಿಇಒ ವಿಶೇಷ ಸಾಧನೆ
ಬೆಂಗಳೂರು ನಗರ ಜಿಪಂ ವ್ಯಾಪ್ತಿಯಲ್ಲಿ 96 ಗ್ರಾಪಂ ಗಳಿದ್ದು, ಇವುಗಳಲ್ಲಿ ಹಿಂದಿನ ಬಾಕಿ 78 ಕೋಟಿ ರು. ಸೇರಿದಂತೆ ಒಟ್ಟಾರೆ ವಾರ್ಷಿಕ 217 ಕೋಟಿ ರು. ಸಂಗ್ರಹಿಸುವ ಗುರಿ ಇದೆ. ಇದರಲ್ಲಿ 94.53 ಕೋಟಿ ರು. ತೆರಿಗೆ ಸಂಗ್ರಹಿಸಲಾಗಿದ್ದು, ಶೇ.56ರಷ್ಟು ಸಾಧನೆ ತೋರಿಸಲಾಗಿದೆ. ಇದಲ್ಲಕ್ಕಿಂತ ವಿಚಿತ್ರ ಎಂದರೆ, ಸುಮಾರು 14.48 ಲಕ್ಷ ಆಸ್ತಿಗಳು ಆಸ್ತಿ ತೆರಿಗೆ ಜಾಲದ ವ್ಯಾಪ್ತಿಗೇ ಬಂದಿಲ್ಲ. ಒಂದೊಮ್ಮೆ ಈ ಆಸ್ತಿಗಳನ್ನೂ ಜಾಲಕ್ಕೆ ಸೇರಿಕೊಂಡರೆ ಆಸ್ತಿ ತೆರಿಗೆ ಸಂಗ್ರಹ ಎರಡು ಪಟ್ಟು ಹೆಚ್ಚಾಗಬೇಕಿದೆ.

ಆದರೆ ಆಗುತ್ತಿಲ್ಲ. ಏಕೆಂದರೆ, ತಳಮಟ್ಟದ ಅಧಿಕಾರಿಗಳು ನಿಗದಿತ ಗುರಿಯಷ್ಟು ತೆರಿಗೆ ಸಂಗ್ರಹ ಮಾಡಿಕೊಡುತ್ತಿದ್ದಾರೆಯೇ ವಿನಃ ಹೊಸ ಆಸ್ತಿಗಳನ್ನು ತೆರಿಗೆ ಜಾಲಕ್ಕೆ ಸೇರಿಸುತ್ತಿಲ್ಲ. ಅವುಗಳಿಂದ ಸಂಗ್ರಹಿಸುವ ತೆರಿಗೆ ವಿವರವನ್ನೂ ಸಲ್ಲಿಸುತ್ತಿಲ್ಲ. ಇದರಿಂದ ಪ್ರತಿವರ್ಷ ಪಂಚಾಯಿತಿಗೆ ಸುಮಾರು ೧೪೦ ಕೋಟಿ ರು.ಗಳಿಗೂ ಅಧಿಕ ಮೊತ್ತದ ತೆರಿಗೆ ಸೋರಿಕೆಯಾಗುತ್ತಿತ್ತು. ಇದನ್ನು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಂಗಪ್ಪ ಗುರುತಿಸಿ ಪಿಡಿಒಗಳಿಗೆ ಬಿಸಿ ಮುಟ್ಟಿಸಿದ್ದಾರೆ.

ಪಿಡಿಒ ತಂತ್ರಗಳೇನು?
ನಿಯಮದ ಪ್ರಕಾರ ಗ್ರಾಮಪಂಚಾಯಿತಿಗಳಲ್ಲಿ ಯಾವುದೇ ಹೊಸ ಆಸ್ತಿಗಳಿಗೆ ತೆರಿಗೆ ನಿಗದಿ ಮಾಡಿ ಇ-ಸ್ವತ್ತು ನೀಡಿದ ನಂತರ ಅದರ ವಿವರವನ್ನು ಪಂಚ ತಂತ್ರಕ್ಕೆ ಸೇರಿಸಬೇಕು. ಆದರೆ ನಗರ ಜಿಪಂನ ಬಹುತೇಕ ಪಂಚಾಯಿತಿಗಳಲ್ಲಿ ಪಿಡಿಒಗಳು ನಿಗದಿತ ಗುರಿಯಷ್ಟು ಮೊತ್ತದ ತೆರಿಗೆ ಸಂಗ್ರಹಿಸುತ್ತಾರೆ. ಆದರೆ ಎಷ್ಟು ಆಸ್ತಿಗಳಿಂದ ಎಷ್ಟೆಷ್ಟು ಸಂಗ್ರಹವಾಗಿದೆ ಎನ್ನುವ ವಿವರ ನೀಡುವುದಿಲ್ಲ. ಉದಾಹರಣೆಗೆ ಒಂದು ಗ್ರಾಪಂನಲ್ಲಿ 1000 ಆಸ್ತಿಗಳಿದ್ದು, ಅವುಗಳಿಂದ 1 ಕೋಟಿ ತೆರಿಗೆ ಸಂಗ್ರಹಿಸಬೇಕೆಂದು ಗುರಿ ನೀಡಿದರೆ, ಪಿಡಿಒಗಳು 1 ಕೋಟಿ ರು.ತೆರಿಗೆ ಸಂಗ್ರಹಿಸಿ ಕೊಡುತ್ತಾರೆ. ಆದರೆ 25 ಹೊಸ ಆಸ್ತಿಗಳು ತೆರಿಗೆ ಪಾವತಿಸಿ ಇ-ಸ್ವತ್ತು ಪಡೆದಿದ್ದರೆ ಪಿಡಿಒಗಳು ಅದನ್ನು ಪಂಚತಂತ್ರಕ್ಕೆ ಸೇರಿಸದೆ ಮರೆ ಮಾಚುತ್ತಾರೆ.

ಏಕೆಂದರೆ, ಕೇಳಿದಷ್ಟು ತೆರಿಗೆ ಸಂಗ್ರಹಿಸಿ ಕೊಟ್ಟ ಮೇಲೆ ಆಸ್ತಿಗಳು ಎಷ್ಟಿದ್ದ ರೇನು ಎನ್ನುವ ಧೋರಣೆ. ಇಂಥ ಸಂದರ್ಭದಲ್ಲಿ ಮೇಲಿನ ಅಧಿಕಾರಿಗಳು ಕೇಳಿದಷ್ಟು ತೆರಿಗೆ ಬಂದಿದೆಯ ಅಷ್ಟೇ ಸಾಕು ಎಂದು ತೃಪ್ತರಾಗುತ್ತಿದ್ದರು. ಹೀಗಾಗಿ ಈತನಕ 14.48ಲಕ್ಷ ಆಸ್ತಿಗಳು ಪಂಚ ತಂತ್ರ ವ್ಯಾಪ್ತಿಗೆ ಬಾರದೆ ಅವು ಎಷ್ಟು ತೆರಿಗೆ ಪಾವತಿ ಸುತ್ತಿವೆ ಎನ್ನುವುದೇ ತಿಳಿಯುತ್ತಿರಲಿಲ್ಲ. ಆದರೆ ಈಗಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಂಗಪ್ಪ ಅವರು ಎಲ್ಲಾ ಆಕ್ರಮಗಳಿಗೂ ಕಡಿವಾಣ ಹಾಕಿ ಸುಮಾರು 140 ಕೋಟಿ ರು.ಹೆಚ್ಚುವರಿ ತೆರಿಗೆ ಆದಾಯ ಬರುವಂತೆ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

***

ತೆರಿಗೆ ಜಾಲದಿಂದ ಹೊರಗಿದ್ದ ಆಸ್ತಿಗಳನ್ನ ಗುರುತಿಸಿರುವ ಕಾರಣ ಸುಮಾರು 100 ಕೋಟಿ ರು. ಗಳಿಗೂ ಹೆಚ್ಚಿನ ಆಸ್ತಿ ತೆರಿಗೆ ಹೆಚ್ಚುವರಿಯಾಗಿ ಸಿಗಲಿದ್ದು,
ಇದನ್ನು ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗೆ ಬಳಸಲು ಅನಕೂಲವಾಗಲಿದೆ.
– ಸಂಗಪ್ಪ ಬೆಂಗಳೂರು ಜಿಪಂಚಾಯಿತಿ ಸಿಇಒ