ಶಾ.ಮಂ.ಕೃಷ್ಣರಾಯ
ಕಾದಂಬರಿಕಾರ, ಸಾಹಿತಿ ಮತ್ತು ಕನ್ನಡ ಹೋರಾಟಗಾರ ಅನಕೃ ಅವರು ಕನ್ನಡದ ಉಳಿವಿಗಾಗಿ ಹೋರಾಡಿದವರು. ರಾಜಧಾನಿಯಲ್ಲಿ ಕನ್ನಡವು ಎರಡನೆಯ
ಸ್ಥಾನಕ್ಕೆ ಇಳಿದದ್ದನ್ನು ಕಂಡು, ಕನ್ನಡಕ್ಕೆ ಸೂಕ್ತ ಸ್ಥಾನಮಾನ ದೊರಕಿಸಲು ಚಳುವಳಿಯನ್ನೇ ನಡೆಸಿದರು. ಕರ್ನಾಟಕದ ಏಕೀಕರಣಕ್ಕೆ ಹೋರಾಡಿದರು.
ಜನರಿಗೆ ಕನ್ನಡ ಸಾಹಿತ್ಯವನ್ನು ತಲುಪಿಸಲು ಒಂದರ ಹಿಂದೆ ಒಂದರಂತೆ ಕೃತಿಗಳನ್ನು ರಚಿಸಿದವರು. ಆದರೆ ಇಂದು ಅವರನ್ನು ನಾವು ಮರೆತಿದ್ದೇವೆಯೆ? ಅವರ
ಕೊಡುಗೆಯನ್ನು ನಾಡು ಮರೆಯಬಾರದು, ಮರೆಯುವಂತಿಲ್ಲ.
ಕನ್ನಡ ಸಾಹಿತ್ಯದಲ್ಲಿ ಅ.ನ.ಕೃಷ್ಣರಾಯರದು ಮರೆಯಲಾರದ ಹೆಸರು. ಅವರು ಕಥೆ – ಕಾದಂಬರಿಗಳನ್ನು ಬರೆದು ಬರವಣಿಗೆಯ ದಿಶೆಯನ್ನೇ ಬದಲಿಸಿದರು. ತಮ್ಮ ಕಾದಂಬರಿಗಳಿಂದ ಕನ್ನಡಿಗರಲ್ಲಿ ವಾಚನಾಭಿರುಚಿ ಯನ್ನು ಬೆಳೆಸಿದರು. ಅವರ ಬರೆಹಗಳಿಂದ ಸೂರ್ತಿಗೊಂಡ ಅನೇಕರು ಸಾಹಿತ್ಯಕ್ಷೇತ್ರವನ್ನು ಅಪ್ಪಿಕೊಂಡರು. ಅವರಿಂದಾಗಿ, ಕನ್ನಡದಲ್ಲಿ ಸುಲಭ ಬೆಲೆಯ ಆವೃತ್ತಿಗಳು ಹುಟ್ಟುಕೊಂಡವು ಮತ್ತು ನಾಡಿನ ಮೂಲೆ ಮೂಲೆಗೆ ತಲುಪಿದವು. ಅದರಿಂದ ಪ್ರಭಾವಿತಗೊಂಡು, ಹಲವು ಸುಲಭ ಬೆಲೆಯ ಪುಸ್ತಕಗಳನ್ನು ಪ್ರಕಟಿಸುವ ಪ್ರಕಾಶ ಕರ ಸಂಖ್ಯೆ ಹೆಚ್ಚಾಯಿತು.
ಅನಕೃ ಅವರ ಸಾಹಿತ್ಯ ಕೃಷಿಯನ್ನು ಕಂಡು, ಸಮಕಾಲೀನರಾದ ನಿರಂಜನ, ಕಾರಂತ, ಕಟ್ಟೀಮನಿ, ತರಾಸು, ದೇವುಡು, ಕುಮಾರ ವೆಂಕಣ್ಣ, ಚದುರಂಗ, ನಾಡಿಗೇರ ಕೃಷ್ಣರಾಯ, ರಾಮಚಂದ್ರ ಕೊಟ್ಟಲಗಿ, ಸತ್ಯಕಾಮ, ರಾವಬಹದ್ದೂರ, ವ್ಯಾಸರಾಯ ಬಲ್ಲಾಳರಂತಹ ಲೇಖಕರು ಮೈಚಳಿ ಬಿಟ್ಟು ಬರೆಯ ತೊಡಗಿದರು. ಆ ಕಾಲದಲ್ಲಿ ಬಂದ ಬಹುಪಾಲು ಕೃತಿಗಳು ಜನಪ್ರಿಯತೆಯನ್ನು ಗಳಿಸಿದ್ದು ಮಾತ್ರವಲ್ಲ, ಇಂದಿಗೂ ಮರುಮುದ್ರಣ ಕಾಣುತ್ತಿವೆ. ಸಂಪ್ರದಾಯವಾದಿ ಸಾಹಿತ್ಯದಿಂದ ಮುಕ್ತಿ ಪಡೆಯಲು ಪ್ರಯತ್ನಿಸಿದ ಅನಕೃ ಅವರು, ಸಾಹಿತ್ಯದ ದೃಷ್ಟಿ ಮತ್ತು ನಿಲುವು ಬದಲಾಗಲು ಕಾರಣರಾದರು.
ಕನ್ನಡಕ್ಕಾಗಿ ಬೀದಿಗಿಳಿದರು
ಅನಕೃ ಅವರು ನಾಲ್ಕು ಗೋಡೆಗಳ ಮಧ್ಯೆ ಕುಳಿತು, ಕಲ್ಪನೆಯ ಸೌಧ ಕಟ್ಟುವಲ್ಲಿ ಸಂತೋಷ ಪಡೆಯಲಿಲ್ಲ. ಅವರು ನಾಡು – ನುಡಿ – ಗಡಿಯ ಸಮಸ್ಯೆಗಳಿಗೂ ತೀವ್ರವಾಗಿ ಸ್ಪಂದಿಸಿದರು. ರಾಜ್ಯದ ರಾಜಧಾನಿ ಎನಿಸಿದ ಬೆಂಗಳೂರಿನಲ್ಲಿ ಅನ್ಯಭಾಷಿಕರ ಹಾವಳಿ ಹೆಚ್ಚಾದಾಗ, ಕನ್ನಡಿಗರೇ ಅಲ್ಪಸಂಖ್ಯಾತರಾಗುವಂತಹ
ಪರಿಸ್ಥಿತಿ ನಿರ್ಮಾಣವಾದಾಗ, ಅನಕೃ ಅವರು ‘ಸಂಯುಕ್ತ ರಂಗ’ವನ್ನು ಕಟ್ಟಿ ಕನ್ನಡ ಚಳವಳಿಗೆ ಕರೆಕೊಟ್ಟರು. ಅದು ಕನ್ನಡಿಗರಲ್ಲಿ ಕನ್ನಡ ನಾಡು, ನುಡಿಯ ಬಗ್ಗೆ
ಮಮಕಾರವನ್ನುಂಟುಮಾಡಿತು. ‘ಇದು ಕನ್ನಡಿಗರ ನಾಡು, ಕನ್ನಡ ನಾಡು, ಇಲ್ಲಿ ಕನ್ನಡಕ್ಕೇ ಪ್ರಥಮ ಸ್ಥಾನ ಸಲ್ಲಬೇಕು.
ಕನ್ನಡದ ಸಾರ್ವಭೌಮತೆಯನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ.’ ಎಂಬುದನ್ನು ಘಂಟಾಘೋಷವಾಗಿ ಸಾರಿದರು. ಆಗಲೂ ಕೆಲವರು ಗುಸು ಗುಸು, ಪಿಸಿ ಪಿಸಿ ಮಾಡಿದ್ದುಂಟು! ಆದರೆ ಅನಕೃ ಅವರು ತಮ್ಮ ಈ ಘೋಷಣೆ ಯನ್ನು ದೊಡ್ಡ ಚಳವಳಿಯಾಗಿ ರೂಪಿಸಿದರು, ಸಮಾನಾಸಕ್ತರ ಬೆಂಬಲ ಗಳಿಸಿದರು. ಆ ಕಾಲಘಟ್ಟದ ಕನ್ನಡ ಚಳವಳಿ ಯು ಕನ್ನಡಿಗರಲ್ಲಿ ಆತ್ಮಸಮ್ಮಾನ ಬೆಳೆಸಿ ಕನ್ನಡತನದ ಜಾಗೃತಿಗೆ ಕಾರಣವಾಯಿತು.
ಭಾಷಣ ಕೇಳಲು ಜನಸಾಗರ
ಆಗಲೇ ಅವರು ತಮ್ಮ ಸಾಹಿತ್ಯದಿಂದ ಹೆಸರು ಮಾಡಿದ್ದರಿಂದ, ಅವರೊಬ್ಬ ವಾಗ್ಮಿಯಾದುದರಿಂದ, ಅವರು ಎಲ್ಲಿ ಹೋದರೂ ಜನ ಮುತ್ತಿಕೊಳ್ಳುತ್ತಿದ್ದರು. ಅವರ ಭಾಷಣಗಳಿಗೆ ಸಾವಿರಾರು ಜನ ಸೇರುತ್ತಿದ್ದರು. ಕೃಷ್ಣರಾಯರು ತಮ್ಮ ಪ್ರಗತಿಪರ ವಿಚಾರಗಳಿಂದ, ಪ್ರಗತಿಶೀಲ ಸಾಹಿತ್ಯದಿಂದ, ಸ್ನೇಹ ಸೌಹಾರ್ದಯುತ ಮನೋಭಾವದಿಂದ, ಸ್ವಂತ ಪರಿಶ್ರಮದಿಂದ ಹೋದಲ್ಲೆಲ್ಲ ಸ್ನೇಹಿತರನ್ನು, ಅಭಿಮಾನಿಗಳನ್ನು, ಕನ್ನಡ ಕಾರ್ಯಕರ್ತರನ್ನು ಸಂಪಾದಿಸಿದರು.
ಆ ಕಾಲದಲ್ಲಿ ಜನ ಕೃಷ್ಣರಾಯರನ್ನು ಕಣ್ಣಾರೆ ನೋಡಲು, ಅವರ ಭಾಷಣ ಕೇಳಲು ತಹತಹಿಸುತ್ತಿದ್ದರು. ಆ ದಿನಗಳಲ್ಲಿ ಕೃಷ್ಣರಾಯರು ಊರಿಗೆ ಬರುತ್ತಾರೆಂದು ತಿಳಿದರೆ ಸಾಕು, ಅಕ್ಕಪಕ್ಕದ ಊರುಗಳಿಂದ ಜನ ಅವರ ಭಾಷಣ ಕೇಳಲು ಬಂದು ಸೇರುತ್ತಿದ್ದರು. ಅವರ ಮಾತೆಂದೆ ಬರೀ ಬುರುಡೆಯಲ್ಲ, ಅಲ್ಲಿ ಅವರ ಅನುಭವ, ಅಧ್ಯಯನ, ನಾಡುನುಡಿಯ ಪ್ರೀತಿ ಮೇಳೈಸುತ್ತಿತ್ತು ಎಂದು ಧಾರವಾಡದ ಸಾಹಿತ್ಯ ಮಂದಿರದ ಟಿ.ಡಿ. ಶಿವಲಿಂಗಯ್ಯನವರು ಹೇಳಿದ್ದು ನನಗೆ ಈಗಲೂ ನೆನಪಾಗುತ್ತದೆ.
ಕ್ಯಾಲಿಫೋರ್ನಿಯಾದಲ್ಲಿ ಓದಿ, ಕನ್ನಡ ಪತ್ರಿಕೋದ್ಯಮವನ್ನು ಶ್ರೀಮಂತಗೊಳಿಸಿದ ಪಾಟೀಲ ಪುಟ್ಟಪ್ಪ ‘ಬರೆಹಗಾರರು ಸಿಕ್ಕುತ್ತಾರೆ, ಆದರೆ ಅ.ನ.ಕೃ. ಅವರಂತಹ ಬರೆಹಗಾರ ಸಿಕ್ಕುವುದಿಲ್ಲ. ಸ್ನೇಹಿತರು ಸಿಕ್ಕುತ್ತಾರೆ, ಆದರೆ ಅ.ನ.ಕೃ. ಅವರಂತಹ ನಿರಪೇಕ್ಷ ಸ್ವಭಾವದ ಸ್ನೇಹಿತ ಸಿಕ್ಕುವುದಿಲ್ಲ. ಮಾರ್ಗದರ್ಶಿ ಸಿಕ್ಕುತ್ತಾರೆ, ಆದರೆ ಅ.ನ.ಕೃ. ಅವರಂತಹ ಹಿತಚಿಂತಕ, ಮಾರ್ಗದರ್ಶಕ ಸಿಕ್ಕುವುದಿಲ್ಲ. ಅಭಿಮಾನಿಗಳೂ ಸಿಕ್ಕುತ್ತಾರೆ, ಆದರೆ ಅವರಂತಹ ಕನ್ನಡದ ಅಭಿಮಾನಿ ಸಿಕ್ಕುವುದಿಲ್ಲ. ಅ.ನ.
ಕೃ. ಯಾವಾಗಲೂ ಅವಿಸ್ಮರಣೀಯರು’ ಎಂದು ಹೇಳಿದ್ದಾರೆ.
ಇದು ಅ.ನ.ಕೃ. ಅವರ ಸಮಕಾಲೀನ ಖ್ಯಾತರ ಉದ್ಗಾರ! ಕೃಷ್ಣರಾಯರು ನಾಡು ನುಡಿಗೆ ಸಲ್ಲಿಸಿದ ನಿಸ್ವಾರ್ಥ ಸೇವೆ ಕಂಡು ಕನ್ನಡ ಜನ ಅವರಿಗೆ ಪ್ರೀತಿ, ಆತ್ಮೀಯತೆ, ಗೌರವ ನೀಡಿದ್ದಾರೆ. ಅವರನ್ನು ಮಣಿಪಾಲದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಬಾರದೆಂದು ಒಂದು ಗುಂಪು ತಕರಾರು ಮಾಡಿದಾಗ, ಕನ್ನಡ ಜನ ಕೃಷ್ಣರಾಯರ ಬೆಂಬಲಕ್ಕೆ ನಿಂತರು. ಸಮ್ಮೇಳನಕ್ಕೆ ಸಾವಿರಾರು ಜನರು ಸೇರಿದರು. ಹಿರಿಯ ಸಾಹಿತಿಗಳಾದ ಮಾಸ್ತಿ, ಬೇಂದ್ರೆ,
ಕಾರಂತ, ಬೀಚಿ, ಬಸವರಾಜ ಕಟ್ಟೀಮನಿಯಂಥವರು ಉಪಸ್ಥಿತರಿದ್ದು ಸಮ್ಮೇಳನದ ಶೋಭೆ ಹೆಚ್ಚಿಸಿದರು.
ಅಕಾಲಿಕ ಮರಣ
ಕನ್ನಡ ನಾಡು, ನುಡಿಯ ಏಳಿಗೆಗಾಗಿ, ರಕ್ಷಣೆಗಾಗಿ ಸ್ವಂತ ಹಣವನ್ನು, ತಮ್ಮ ಬಹುಮೂಲ್ಯ ಸಮಯವನ್ನು ವಾಕ್ ಚಾತುರ್ಯವನ್ನುಧಾರೆಯೆರೆದರು. ಕನ್ನಡವನ್ನೇ ಉಸಿರಾಡಿದ ಕೃಷ್ಣರಾಯರು ತಮ್ಮ ೬೩ನೆಯ ವಯಸ್ಸಿನಲ್ಲಿ, ೮ ಜುಲೈ, ೧೯೭೧ರಂದು ಆಕಸ್ಮಿಕವಾಗಿ ನಮ್ಮನ್ನಗಲಿದ ದಿನ ಬಹುಭಾಗ ಕರ್ನಾಟಕ ಸ್ವಯಂ ಘೋಷಿತ ಬಂದ್ ಆಚರಿಸಿ, ಅಗಲಿದ ಕಾದಂಬರಿಕಾರನಿಗೆ ಅಂತಿಮ ಗೌರವ ಸಲ್ಲಿಸಿತು. ಅವರ ಅಂತಿಮ ದರ್ಶನಕ್ಕೆ ಅಂದಿನ ರಾಜ್ಯಪಾಲ ಧರ್ಮವೀರ, ಮುಖ್ಯಮಂತ್ರಿ ಕೆ. ಹನುಮಂತಯ್ಯ ಬಂದಿದ್ದರು. ಸಾವಿರಾರು ಕನ್ನಡಿಗರು, ಕನ್ನಡಾಭಿಮಾನಿಗಳು ರಾಯರ ಮನೆಯ ಅಂಗಳದಲ್ಲಿ ಅಂತಿಮ ದರ್ಶನ ಪಡೆದರು.
ಕರ್ನಾಟಕದಾದ್ಯಂತ ಅನೇಕ ಸಂಘಸಂಸ್ಥೆಗಳು ಅವರ ಶ್ರದ್ಧಾಂಜಲಿ ಸಭೆ ನಡೆಸಿದರು.
ಕೃಷ್ಣರಾಯರಿಗೆ ಸಿಕ್ಕಂತಹ ಅಂತಿಮ ಗೌರವ ನೋಡಿದ ಹಿರಿಯ ಸಾಹಿತಿ ಜಿ.ಪಿ.ರಾಜರತ್ನಂ ಅವರು, ‘ಇಂಥ ಅಂತಿಮ ಗೌರವ ಕರ್ನಾಟಕದಲ್ಲಿ ಯಾರಿಗೂ – ಯಾವ ಸಾಹಿತಿಗೂ ಸಿಗಲಿಲ್ಲ. ಇಂಥ ಗೌರವಯುತ ಸಾವು ಸಿಗುವುದಾದರೆ ಯಾವ ಸಾಹಿತಿಯೂ ಸಾಯಲು ಸಿದ್ಧರಾಗಬಹುದು’ ಎಂದುದು ಮಾರ್ಮಿಕ ನುಡಿ.
ಕೃಷ್ಣರಾಯರು ಗತಿಸಿ ಅರ್ಧಶತಮಾನವಾಯಿತು. ಐವತ್ತು ಮಳೆಗಾಲಗಳು ದಾಟಿದವು. ಕೃಷ್ಣರಾಯರ ಪುಸ್ತಕಗಳು ಇಂದಿಗೂ ಮರುಮುದ್ರಣವಾಗುತ್ತಿದ್ದು, ಖಾಸಗಿ ಪ್ರಕಾಶನದವರು ವಿತರಿಸುತ್ತಿದ್ದಾರೆ. ಅವರ ಹೆಸರಿನಲ್ಲಿ ಕರ್ನಾಟಕದಲ್ಲಿ ಅನೇಕ ಕಡೆ ವಿಚಾರ ಸಂಕಿರಣಗಳು ನಡೆಯುತ್ತಿವೆ.
ಕೆಲವು ಕಾಲೇಜುಗಳು ಇಂದಿಗೂ ಅವರ ಹೆಸರಿನಲ್ಲಿ ಭಾಷಣ ಸ್ಪರ್ಧೆ, ಲೇಖನ ಸ್ಪರ್ಧೆಗಳನ್ನು ಏರ್ಪಡಿಸುತ್ತಿವೆ. ಇಂದಿಗೂ ಅವರ ಸಾಹಿತ್ಯ ಓದುವವರಿದ್ದಾರೆ, ಎಲ್ಲ ಕ್ಷೇತ್ರಗಳಲ್ಲಿಯೂ ಅವರ ಅಭಿಮಾನಿಗಳಿದ್ದಾರೆ. ಇಷ್ಟೊಂದು ಕನ್ನಡದ ಕೆಲಸ ಮಾಡಿದ ಸಾಹಿತಿಗೆ ಕರ್ನಾಟಕ ಸರಕಾರ ಕೊಟ್ಟಿದ್ದೇನು? ಅಲ್ಲೊಂದು ರಸ್ತೆ, ಇಲ್ಲೊಂದು ಬೀದಿಗೆ ಅವರ ಹೆಸರಿಟ್ಟರೆ ಸಾಕೆ? ಬದುಕಿದ್ದಾಗಲೂ ಅವರು ಮಾಡಿದ ಕನ್ನಡದ ಕಾರ್ಯಕ್ಕೆ ಸರಕಾರದಿಂದ ಹೆಚ್ಚಿನ ಮಾನ್ಯತೆ ಸಿಗಲಿಲ್ಲ. ಅವರು ಗತಿಸಿದ ಮೇಲಾದರೂ ಅವರ ಹೆಸರಿನಲ್ಲಿ ಒಂದು ಸ್ಮಾರಕವನ್ನು ನಿರ್ಮಿಸಬಹುದಾಗಿತ್ತು. ಅವರ ಹೆಸರಿನಲ್ಲಿ ಒಂದು ಪ್ರತಿಷ್ಠಾನ ಸ್ಥಾಪಿಸಬಹುದಿತ್ತು. ಅವರ ಜನ್ಮದಿನವನ್ನು ‘ಕನ್ನಡ ದಿನ’ ಎಂದು ಪ್ರತಿವರ್ಷ ಆಚರಿಸುವಂತೆ ಮಾಡಬಹುದಿತ್ತು.
ಅವರ ಕೃತಿಗಳು ಜನರನ್ನು ತಲುಪಬೇಕು
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕೃಷ್ಣರಾಯರ ಜನ್ಮ ಶತಮಾನೋತ್ಸವದ ಒಂದು ಕಾರ್ಯಕ್ರಮ ಏರ್ಪಡಿಸಿತ್ತು. ಅದೇ ಕಾಲಕ್ಕೆ ಇಲಾಖೆಯು ‘ಅನಕೃ ಸಾಹಿತ್ಯ ಶ್ರೇಣಿ’ ಪ್ರಕಟಣೆಯ ಯೋಜನೆಯನ್ನು ಕೈಗೆತ್ತಿಕೊಂಡು, ಮೂರು ವರ್ಷಗಳಲ್ಲಿ ಎಂಟು ಸಂಪುಟಗಳನ್ನು ಹೊರತಂದಿದೆ. ಆದರೆ ನಂತರ ಸುದೀರ್ಘ ನಿದ್ರೆಗೆ ಜಾರಿದೆ. ಮಿಕ್ಕ ಐದು ಸಂಪುಟಗಳು ಪ್ರಕಟಣೆಗೆ ಸಿದ್ಧವಾಗಿ ಹತ್ತು ವರ್ಷಗಳೇ ಕಳೆದಿವೆ. ಆದರೆ ಅವು ಮುದ್ರಣಾಲಯದಲ್ಲಿ ಬಿದ್ದುಕೊಂಡಿವೆ. ಅವರು ಗತಿಸಿದ ಐವತ್ತು ವರ್ಷಗಳ ನೆನಪಿಗಾದರೂ ಅವರ ಕೃತಿಶ್ರೇಣಿಯ ಮಿಕ್ಕ ಐದು ಸಂಪುಟಗಳನ್ನು ಬಿಡುಗಡೆ ಮಾಡಿ ಎಂದು ಸಾರ್ವಜನಿಕರು ಮನವಿ ಮಾಡಿ ಕೊಂಡರೂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸ್ಪಂದಿಸಲಿಲ್ಲ ಎಂದು ನೋವಿನಿಂದ ಹೇಳಬೇಕಾಗಿದೆ.
ಸರಕಾರ ಈಗಲಾದರೂ ಮಧ್ಯೆ ಪ್ರವೇಶಿಸಿ, ಅನಕೃ ಅವರ ಎಲ್ಲಾ ಸಂಪುಟಗಳನ್ನು ಅತಿ ಶೀಘ್ರದಲ್ಲಿ ಬಿಡುಗಡೆ ಮಾಡಲಿ ಮತ್ತು ಅವು ಸುಲಭ ಬೆಲೆಯಲ್ಲಿ ಆಸಕ್ತ ಕನ್ನಡ ಓದುಗರಿಗೆ ಲಭ್ಯವಾಗಲಿ ಎಂದು ಮನವಿ ಮಾಡುತ್ತೇನೆ. ಆ ಮೂಲಕ, ಕನ್ನಡಕ್ಕೆ ಈ ನಾಡಿನಲ್ಲಿ ಗೌರವಯುತವಾದ ಸ್ಥಾನವನ್ನು ದೊರಕಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಆ ಹಿರಿಯ ಸಾಹಿತಿ, ಕಾದಂಬರಿಕಾರರ ಕೊಡುಗೆಯನ್ನು ನಮ್ಮ ನಾಡು ಸ್ಮರಿಸುವಂತಾಗಲಿ.
ಏಕೀಕರಣಕ್ಕಾಗಿ ಎಲ್ಲೆಡೆ ಪ್ರವಾಸ
ಪ್ರಗತಿಶೀಲ ಚಳುವಳಿ ಕಟ್ಟಲು ಕಾಲಿಗೆ ಚಕ್ರ ಕಟ್ಟಿ ಕೊಂಡವರಂತೆ ಕರ್ನಾಟಕದ ತುಂಬ ಓಡಾಡಿದ ಕೃಷ್ಣರಾಯರು, ಕರ್ನಾಟಕ ಏಕೀಕರಣ ಹೋರಾಟದಲ್ಲಿ
ಸ್ವಯಂಸೂರ್ತಿಯಿಂದ ಧುಮುಕಿದರು. ಸಮಗ್ರ ಕರ್ನಾಟಕವನ್ನು ವಿರೋಧಿಸುವ ‘ಮೈಸೂರುವಾದಿ’ಗಳು ತೊಡಕನ್ನು ಉಂಟು ಮಾಡಿದರೂ, ತಾನು ಸ್ವತಃ ಹಳೆಯ ಮೈಸೂರು ರಾಜ್ಯದಲ್ಲಿ ಹುಟ್ಟಿ ಬೆಳೆದವರಾದರೂ, ಕರ್ನಾಟಕ ಏಕೀಕರಣ ಅವರ ಧ್ಯೇಯವಾಯಿತು.
ಕುಹಕಿಗಳ, ವಿರೋಧಿಗಳ ಮಾತನ್ನು ಽಕ್ಕರಿಸಿ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಾಪುರ, ಬಳ್ಳಾರಿ, ಉತ್ತರ ಕನ್ನಡ, ದಕ್ಷಿಣ ಕನ್ನಡಗಳಿಗೆ ಪ್ರವಾಸ ಮಾಡಿ ಅಭಿಯಾನ ಕೈಗೊಂಡರು. ತನ್ನ ಸ್ವಂತ ಜೇಬಿನಿಂದ ಹಣ ಖರ್ಚು ಮಾಡಿ, ಕನ್ನಡ ಡಿಂಡಿಮ ಬಾರಿಸಲು ಹೊರಟರು.