Friday, 20th September 2024

ರಾಜ್ಯದ ದುರಂತವೊಂದಕ್ಕೆ ಸಾಕ್ಷಿಯಾಗದಿರಲಿ ಸರಕಾರ

ಅಭಿವೃದ್ಧಿ ಪರವಾದ ಬಹು ನಿರೀಕ್ಷೆಯೊಂದಿಗೆ ರಾಜ್ಯ ಹಾಗೂ ಕೇಂದ್ರದ ಆಡಳಿತ ಪಕ್ಷ ಬಿಜೆಪಿಗೆ ಜನರು ಅಧಿಕಾರ ನೀಡಿದ್ದಾರೆ. ಆದರೆ ಪ್ರಸ್ತುತ ರಾಜ್ಯ ಸರಕಾರವು
ರಾಜ್ಯದ ದುರಂತವೊಂದಕ್ಕೆ ಸಾಕ್ಷಿಯಾಗಲಿದೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿ ತವರು ಜಿಲ್ಲೆಗಳ ಸಮಸ್ಯೆ ಯೊಂದರ ಕಾರಣದಿಂದಾಗಿ ರಾಜ್ಯ ಸರಕಾರ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಉಳಿಯಲಿದೆಯೇ ಎಂಬುದು ಅವಲೋಕನದ ಸಂಗತಿ.

ಮುಖ್ಯಮಂತ್ರಿ ತವರು ಜಿಲ್ಲೆ ಶಿವಮೊಗ್ಗ ಜಿಲ್ಲೆಯಲ್ಲಿನ ಮೈಸೂರು ಸಕ್ಕರೆ ಕಾರ್ಖಾನೆಯನ್ನು ಉಳಿಸಿಕೊಳ್ಳುವಲ್ಲಿ  ರಾಜ್ಯ ಸರಕಾರದಿಂದ ಉತ್ತಮ ಪ್ರಯತ್ನ ಗಳಾಗದ ಕಾರಣ ಮುಚ್ಚಲಾಗಿದೆ. ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರ ಕನಸ್ಸಿನ ಕೊಡುಗೆಯಾದ ಎಂಪಿಎಂ ಕಾರ್ಖಾನೆಯ ಅಂಗವಾಗಿದ್ದ ಎಂಪಿಎಂ ಸಕ್ಕರೆ ಕಾರ್ಖಾನೆ ಇದೀಗ ಸ್ಥಗಿತಗೊಂಡಿದೆ. ಇದೀಗ ಮೈಶುಗರ್ಸ್ ಖಾಸಗೀಕರಣದ ಬಗ್ಗೆ ಹೇಳಿಕೆಗಳು ಕೇಳಿಬರಲಾರಂಭಿಸಿವೆ.

ಈ ಕಾರ್ಖಾನೆಯೂ ಸಹ ಬಹಳಷ್ಟು ಇತಿಹಾಸವನ್ನು ಹೊಂದಿದೆ. ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಾಣವಾಗಿದ್ದ ಈ ಕಾರ್ಖಾನೆ ಯನ್ನು ಖಾಸಗೀಕರಣ
ಗೊಳಿಸಬಾರದು ಎಂಬುದು ಬಹುಜನರ ಅಪೇಕ್ಷೆ. ಇದಕ್ಕಾಗಿ ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಿಎಂ ಯಡಿಯೂರಪ್ಪರಿಗೆ
ಮನವಿ ಸಲ್ಲಿಸಿದ್ದಾರೆ. ಖಾಸಗೀಕರಣಗೊಳಿಸುವುದಿಲ್ಲ ಎಂದು ಸಿಎಂರಿಂದ ಭರವಸೆ ದೊರಕಿದೆ.

ಆದರೆ ಮುಂದಿನ ದಿನಗಳಲ್ಲಿ ಖಾಸಗೀಕರಣಗೊಂಡಿದ್ದೆ ಆದಲ್ಲಿ ರಾಜ್ಯದ ಎರಡು ಐತಿಹಾಸಿಕ ಹಾಗೂ ಸರಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆಗಳ ಅಳಿವಿಗೆ
ಕಾರಣ ವಾಗಲಿದೆ ರಾಜ್ಯ ಸರಕಾರ. ಆದ್ದರಿಂದ ಇಂಥದೊಂದು ದುರಂತಕ್ಕೆ ರಾಜ್ಯ ಸರಕಾರ ಸಾಕ್ಷಿಯಾಗದಿರಲಿ ಎಂಬ ಆಶಯ ಹಲವರದ್ದು. ಸರಕಾರಿ ಸ್ವಾಮ್ಯದ ಹಾಗೂ ಬಹಳಷ್ಟು ಇತಿಹಾಸವನ್ನು ಹೊಂದಿರುವಂಥ ಸಕ್ಕರೆ ಕಾರ್ಖಾನೆಗಳ ರಕ್ಷಣೆಗೂ ರಾಜ್ಯ ಸರಕಾರ ಆದ್ಯತೆ ನೀಡಬೇಕಿರುವುದು ಪ್ರಮುಖ ಜವಾಬ್ದಾರಿ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇಂಥದೊಂದು ದುರಂತಕ್ಕೆ ಸಾಕ್ಷಿಯಾಗಿ ಉಳಿಯಲಿದೆ ರಾಜ್ಯ ಸರಕಾರ.