ರಶ್ಮಿ ಹೆಗಡೆ ಮುಂಬೈ
ಪ್ರೀತಿ ವಿಶ್ವಾಸದ ಬದುಕಿನಲಿ ಬರುವುದು ಒಮ್ಮೊಮ್ಮೆ ಅಹಂ ಎಂಬ ಕೋಟೆಯ ಕಾಟ. ಅದನ್ನು ತಪ್ಪಿಸಿಕೊಂಡು, ಪ್ರೇಮ, ಆತ್ಮೀಯತೆಯಿಂದ ಬದುಕು
ಕಟ್ಟುವುದು ಮುಖ್ಯ.
ಅದೇಕೋ ಗೊತ್ತಿಲ್ಲ, ಒಮ್ಮೊಮ್ಮೆ ಹೀಗಾಗಿ ಬಿಡುವುದಂತೂ ನಿಜ. ಜೀವನ ಸಾಂಗತ್ಯ ಎಂಬುದು ಪ್ರೀತಿಯ ತಳಹದಿಯ ಮೇಲೆ, ಪ್ರೇಮದ ಗೋಡೆಗಳಿಂದ, ಮಮಕಾರದ ಛಾವಣಿಯೊಂದಿಗೆ ನಿರ್ಮಾಣ ವಾಗುವ ಸುಂದರ ಮನೆ ಯಂತಿರಬೇಕು. ಆದರೆ ಕೆಲವೊಮ್ಮೆ, ಈ ಪ್ರೀತಿಯ ಸಾಂಗತ್ಯವನ್ನು ಬಿರುಸು ಕಲ್ಲಿನ
ಕೋಟೆಯೊಂದು ಆವರಿಸುತ್ತದೆ.
ಅಂತಹ ಅಹಂಕಾರಾದ ಕೋಟೆಯೊಳಗೆ ಬಂಧಿತರಾಗಿ ಜೀವಿಸುವ ನಾವುಗಳು ಅಲ್ಲಿಂದ ಹೊರಬರುವ ಮನಸ್ಸು ಮಾಡದೆ, ಅಲ್ಲಿಯೇ ದಾಂಪತ್ಯ ಜೀವನದ ಕೊನೆಯ ಕ್ಷಣಗಳಿಗೆ ನಾಂದಿಹಾಡಿ ಬಿಡುತ್ತೇವೆ. ಆತ್ಮಹತ್ಯೆ, ಕೊಲೆ, ವಿಚ್ಛೇದನ, ಕಲಹಗಳೆಂಬ ದುರಾಲೋಚನೆಗಳಿಗೆ ಬಲಿಯಾಗುತ್ತೇವೆ.
ಅವಘಡಕ್ಕೆ ನಾಂದಿ ಈ ಅಹಂ
ವಿವಾಹ ಪೂರ್ವ ಸುಗಮವಾಗಿ ಸಾಗುತ್ತಿದ್ದ ಪ್ರೀತಿಯು, ವಿವಾಹಾನಂತರ ಇಂಥಹ ಅವಘಡಗಳಿಗೆ ಸಿಕ್ಕಿ ನರಳು ತ್ತದೆ. ಇದಕ್ಕೆ ಕಾರಣ ಸ್ವತಃ ನಾವುಗಳೇ. ನಮ್ಮ ನಿರ್ಧಾರಗಳು, ನಡವಳಿಕೆ, ಒಳಮನಸ್ಸು ಹಾಗೂ ನಮ್ಮಲ್ಲಿ ಮನೆಮಾಡಿರುವ ಅರಿಷಡ್ವರ್ಗಗಳು ಜೀವನದ ಈ ಹಂತಕ್ಕೆ ಕಾರಣೀಕರ್ತರು ಎಂಬುದು ನಮ್ಮ ಅರಿವಿಗೆ ಬರುವು ದರೊಳಗೆ ಜೀವನ ಹರಿದು ಚೆಪಿಲ್ಲಿಯಾಗಿರುತ್ತದೆ. ಇತ್ತೀಚಿಗೆ ಸಮಾಜದಲ್ಲಿ ಚಿಕ್ಕ ಪುಟ್ಟ ಕಾರಣಕ್ಕೂ ನಡೆಯುವ ವಿಚ್ಛೇದನಗಳು ಮನುಷ್ಯ ಯಾಕಿಷ್ಟು ದುರಹಂಕಾರಿ? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುವಂತೆ ಮಾಡುತ್ತವೆ.
ಅದರಲ್ಲಿಯೂ ಸುಸಂಸ್ಕೃತ ಕುಟುಂಬಗಳು ಈ ಧೋರಣೆಗಳಿಂದ ನೊಂದು ಕಂಗಾಲಾಗುತ್ತಿದ್ದಾರೆ. ಜಗತ್ತಿನಲ್ಲಿಯ ಹೆಚ್ಚಿನ ವಿವಾಹ ವಿಚ್ಛೇದನ, ಹಾಗೂ ವೈವಾಹಿಕ ಕಲಹಗಳಿಗೆ ಮೂಲ ಕಾರಣ ಏನು ಗೊತ್ತೇ? ನಮ್ಮಲ್ಲಿರುವ ಒಣ ಜಂಭ, ದುರಹಂಕಾರ ಹಾಗೂ ಅಹಂ ಎಂಬ ಇಷ್ಟವಿಲ್ಲದ ಅತಿಥಿ. ಪ್ರೀತಿಸಿ ಮದುವೆ ಯಾದವರಲ್ಲಿ ಒಂದು ರೀತಿಯ ಭಿನ್ನಾಭಿಪ್ರಾಯ, ಮದುವೆಯಾದ ನಂತರ ಪ್ರೀತಿಸುವವರಲ್ಲಿ ಇನ್ನೊಂದು ರೀತಿಯ ಭಿನ್ನಾಭಿಪ್ರಾಯವೇಳಲು ಮುಖ್ಯ ಕಾರಣ ಅಹಂಎಂಬ ಎರೆಡಕ್ಷರದ ಶಬ್ದ.
ತಿಳಿಯಾದ ಅಹಂ ಎಲ್ಲರಲ್ಲೂ ಇರುತ್ತದೆ. ನಾನು, ನನ್ನಿಂದ, ನನಗಾಗಿ, ನನ್ನದೇ ಎನ್ನುವಂಥ ‘ನಾ’ಗಳು ನಮ್ಮನ್ನು ವಿನಾಶಕ್ಕೊಯ್ಯುತ್ತವೆ. ಹಾಗಂತ ಮೂಲತಃ ಮನುಷ್ಯ ಅಷ್ಟೊಂದು ಅಹಂಕಾರಿಗಳೂ ಅಲ್ಲ, ಯಾಕೆಂದರೆ ಎಲ್ಲರೊಂದಿಗೂ ಹಾಗಿರುವುದಿಲ್ಲ. ಗಂಡ, ಹೆಂಡತಿ, ದಾಂಪತ್ಯವೆಂಬ ವಿಷಯ ಬಂದಾಗ ಮಾತ್ರ ಆ ‘ಅಹಂ’ ಎಚ್ಚರಗೊಳ್ಳುತ್ತದೆ. ಸ್ವಲ್ಪ ಗಮನಿಸಿ,ವಿಚಾರಮಾಡಿ! ನಮ್ಮ ಹೆತ್ತವರು, ಸ್ನೇಹಿತರು, ಒಡನಾಡಿಗಳೊಂದಿಗೆ ನಾವು ಯಾವುದೇ ‘ಅಹಂ’ನ್ನು ತೋರಿಸು ವುದಿಲ್ಲ, ಆದರೆ ದಾಂಪತ್ಯದಲ್ಲಿ ಮಾತ್ರ ಕೆಲವು ಸಂದರ್ಭಗಳಲ್ಲಿ ನಮ್ಮ ಅಹಂ ತನ್ನ ಆಟವಾಡುತ್ತದೆ. ಅಂದಮೇಲೆ ತಪ್ಪು ನಮ್ಮ ವಿಚಾರದಲ್ಲಿದೆ, ದೃಷ್ಟಿಕೋನ ದಲ್ಲಿದೆ ಎಂದಾಯಿತು.
ಅವರಿಬ್ಬರದೂ ಪ್ರೇಮ ವಿವಾಹ. ಇವರ ಪ್ರೇಮಕ್ಕೆ ಹೆತ್ತವರ ಸಮ್ಮತಿಯೂ ದೊರೆಯಿತು. ಮನೆಯಲ್ಲಿ ಎಲ್ಲರ ಒಪ್ಪಿಗೆಯಂತೆಯೇ ಮದುವೆಯಾದವರು. ಇಬ್ಬರದೂ ಕೈತುಂಬ ಸಂಬಳ ತರುವ ಗೌರವಾನ್ವಿತ ವೃತ್ತಿ. ಮನೆಯಲ್ಲಿ ಅತ್ತೆ, ಮಾವ ಈಕೆಗೆ ಯಾವುದೇ ತಿಳುವಳಿಕೆಯ ಮಾತಾಗಲೀ, ಮನೆಯ ಕೆಲಸ ವನ್ನಾಗಲೀ ಹೇಳುವಂತಿಲ್ಲ. ಪತಿಯೂ ಆಕೆಯ ಸ್ವಾತಂತ್ರ್ಯಕ್ಕೆ, ಸಂತೋಷಕ್ಕೆ ಯಾವ ರೀತಿಯಿಂದಲೂ ಅಡ್ಡ ಬರುವಂತಿಲ್ಲ. ತಾನು ದುಡಿಯುತ್ತೇನೆ, ಸಾಕಷ್ಟು ದುಡ್ಡು ಸಂಪಾದಿಸುತ್ತೇನೆ ಎಂಬ ಅಹಂ.
ಸ್ವತಂತ್ರ ಮನೋಭಾವ
ಅತ್ತ ನೋಡಿದರೆ, ಆತನದೂ ತನ್ನ ಪತ್ನಿ ತಾನು ಹೇಳಿದಂತೆ ಕೇಳಬೇಕೆನ್ನುವ ಧೋರಣೆ. ಮನೆಯವರು ತಾನು ಹೇಳಿದಂತೆ ಕೇಳುತ್ತ, ತನ್ನ ಇಷ್ಟದಂತೆ ನಡೆಯಲು ಬಿಡಬೇಕೆಂಬ ಆಕೆಯ ಮನೋಗತದಿಂದಾಗಿ ಸಂಸಾರ ದಲ್ಲಿ ಬಿರುಕು ಕಾಣತೊಡಗಿತ್ತು. ತಾನು ದುಡಿದು ಬಂದು ಈ ಮನೆಗೆ ನೆರವಾಗುತ್ತಿದ್ದೇನೆ, ಸ್ವತಂತ್ರವಾಗಿ ತನ್ನ ಕಾಲಮೇಲೆ ತಾನು ನಿಂತು ಬದುಕುವ ತಾಕತ್ತಿದೆ, ಯಾರಿಗೂ ತಾನು ಹೆದರಬೇಕಿಲ್ಲ, ತಲೆಬಾಗಬೇಕಿಲ್ಲ, ಅಗತ್ಯ ಎನಿಸಿದರೆ ಇವರೆಲ್ಲರ ಅವಶ್ಯಕತೆ ತನಗಿಲ್ಲ ಎಂಬ ದುರಹಂಕಾರ ಆಕೆಯಲ್ಲಿ ಮನೆಮಾಡಿತ್ತು.
ಇನ್ನು ಆಕೆ ಪತಿಯೂ ಯಾವುದರಲ್ಲೂ ಕಡಿಮೆಯಿರಲಿಲ್ಲ. ಎಷ್ಟೆಂದರೂ ತಾನೊಬ್ಬ ಗಂಡಸು, ತನ್ನ ಕೈ ಹಿಡಿದವಳು ಈಕೆ, ತಾನು ಹೇಳಿದಂತೆ ಈಕೆ ಕೇಳಬೇಕು, ಈಕೆಯ ಮಾತನ್ನು ತಾನೇಕೆ ಕೇಳಬೇಕೆಂಬ ಅಹಂ. ಎಷ್ಟೆಂದರೂ ಸೊಸೆಯಾದವಳು ಬೇರೆ ಮನೆಯಿಂದ ಬಂದವಳು. ನಮ್ಮ ಮನೆಗೆ, ಸಂಸ್ಕಾರಕ್ಕೆ, ರೀತಿ ನೀತಿಗೆ ಹೊಂದಿಕೊಂಡು ನಡೆವುದು ಆಕೆಯ ಧರ್ಮ. ಆಕೆಗೆ ನಾವು ಹೊಂದಿಕೊಳ್ಳುವುದು ಸರಿಯಲ್ಲ, ಆಕೆಯೇ ನಮಗೆ ಹೊಂದಿಕೊಳ್ಳಬೇಕು ಎಂಬ ಆಸೆ, ಧೋರಣೆ ಮನೆಯ ಹಿರಿಯರದ್ದು. ಅಹಮ್ಮಿನ ಬೇಲಿಯ ದಾಟಲಾರದೆ, ಚಿಕ್ಕ ಪುಟ್ಟ ವಿಷಯಕ್ಕೆ ಭಿನ್ನಾಭಿಪ್ರಾಯ ಪ್ರಾರಂಬವಾಗಿ, ಜಗಳಗಳಾಗಿ, ಒಬ್ಬರಿಗೊಬ್ಬರು
ಹೊಂದಿಕೊಳ್ಳಲಾಗದೆ ಕೊನೆಗೂ ದಾಂಪತ್ಯ ನಡೆದಿದ್ದು ಕೋರ್ಟಿನೆಡೆಗೆ, ವಿಚ್ಛೇದನದೆಡೆಗೆ.
ವಕೀಲರ ಕೆಲಸ ವಿಚ್ಛೇದನಕೊಡಿಸುವುದು ಮಾತ್ರ. ಆದರೆ ಹೊಂದಿಕೊಳ್ಳುವ, ನಮ್ಮ ಅಹಮ್ಮಿನಿಂದ ಹೊರಬಂದು ಮತ್ತೆ ಒಂದಾಗಿ ಬಾಳುವವರು ದಂಪತಿಗಳೇ, ಕುಟುಂಬದ ಸದಸ್ಯರುಗಳೇ ಎಂಬುದನ್ನು ಮನದಟ್ಟುಮಾಡಿಕೊಳ್ಳಬೇಕು.
ಆಪ್ತಸಮಾಲೋಚನೆ
ಅವರ ಅದೃಷ್ಟಕ್ಕೆ ಸಿಕ್ಕಿದ್ದು ಒಬ್ಬ ಒಳ್ಳೆಯ ಕೌನ್ಸಲರ್, ಹಿತೈಷಿ ಹಾಗೂ ಕುಟುಂಬ ಸ್ನೇಹಿತರು. ಇವರ ವಿಚ್ಛೇದನದ ಸುದ್ದಿ ಕೇಳಿ ಮನೆಗೆ ಧಾವಿಸಿ, ಆಕೆಯನ್ನೂ
ಕರೆದು, ಕಲಹಕ್ಕೆ ಸರಿಯಾದ ಕಾರಣವೇನೆಂದು ಕೇಳಿ ತಿಳಿದರು. ಮನೆಯವರೆಲ್ಲರನ್ನು ಮಾತನಾಡಿಸಿ, ಹಿನ್ನೆಲೆ ತಿಳಿದರು. ಅಹಂಕಾರವೆಂಬ ಭೂತವೇ ಇವರನ್ನು
ಕಾಡಿದ್ದು ಎಂಬುದನ್ನು ಅರಿತು, ಅವರೆಲ್ಲರ ಜೊತೆ ಕುಳಿತು ಮಾತನಾಡಿದರು. ನಾನು ಎಂಬ ವೈಯಕ್ತಿಕ ಅಹಂಕಾರವನ್ನು ಬಿಟ್ಟು, ಇದು ನಮ್ಮ ಮನೆ, ನಮ್ಮ
ಜೀವನ, ನನ್ನವರು, ಇವರೆಲ್ಲ, ನಮಗಾಗಿ ಬಾಳಬೇಕು ಎಂಬ ಜೀವನದ ನೀತಿಯನ್ನು ಅರ್ಥಮಾಡಿಸಿಕೊಟ್ಟರು.
ಅದನ್ನೆಲ್ಲ ಸೂಕ್ಷ್ಮವಾಗಿ ಅರ್ಥಮಾಡಿಕೊಂಡ ನಾಲ್ವರೂ, ವಿಶೇಷವಾಗಿ ಪತಿ ಪತ್ನಿ ತಮ್ಮ ತಪ್ಪಿನ ಅರಿವಾಗಿ, ವಿಚ್ಛೇದನವನ್ನು ಮರೆತು, ಅಹಮ್ಮಿನ ಕೋಟೆಯಿಂದ
ಹೊರಬಂದು ಸುಖೀ ಸಂಸಾರಕ್ಕೆ ನಾಂದಿ ಹಾಡಿದರು. ಮನಸ್ತಾಪಕ್ಕೆ ಒಳಗಾಗುವ ಎಲ್ಲರ ಜೀವನದಲ್ಲೂ ಇಂಥಹ ಒಳ್ಳೆಯ ಕೌನ್ಸಲರ್ ಸಿಕ್ಕಿಬಿಟ್ಟರೆ ಬಹುಶಃ
ವಿಚ್ಛೇದನಗಳ ಸಂಖ್ಯೆ ಕ್ಷೀಣಿಸಬಲ್ಲದು. ಆದರೆ ಒಂದು ಮಾತು ಸದಾ ಸತ್ಯ. ನಮ್ಮ ಮನಸ್ಸಿಗಿಂತ, ಮುಕ್ತ ಮನಸ್ಸಿನ ಮಾತುಕತೆಯ ಮಾಧ್ಯಮಕ್ಕಿಂತ ಮಿಗಿಲಾದ
ಕೌನ್ಸಲರ್ ಇಲ್ಲ. ಇಂಥ ತಪ್ಪುಗಳು ನಡೆವಾಗ, ದಾಂಪತ್ಯ ದಲ್ಲಿ ಬಿರುಗಾಳಿ ಏಳುತ್ತಿರುವ ಸೂಚನೆ ಸಿಕ್ಕಾಗ, ಮನಸ್ಸೆಂಬ ಕೌನ್ಸಲರ್‌ನನ್ನು ಬಡಿದೆಬ್ಬಿಸಿ, ಆತನ
ಸಹಾಯ ಪಡೆಯಲೇ ಬೇಕು. ಅಹಂಕಾರವನ್ನು ತೊರೆದು, ಸಮಸ್ಯೆಯ ಮೂಲವನ್ನರಿತು, ಕುಳಿತು ಮಾತನಾಡಿ, ಒಬ್ಬರ ಮನಸ್ಸಿಗೆ ಇನ್ನೊಬ್ಬರು ಸ್ಪಂದಿಸಿ
ದಾಗ ಸಂಬಂಧ ಸರಿಯಾದ ಹಾದಿಗೆ ಬರಬಲ್ಲದು.
ಎಲ್ಲರಿಗೂ ಬೇಕಾದ್ದು ಕ್ಲಿಷ್ಟರಹಿತ, ಸುಲಭವಾದ, ಕಲಹರಹಿತ ಜೀವನ. ಆ ಸುಂದರವಾದ ಜೀವನದ ರೂವಾರಿಗಳೂ ನಾವೇ ಎಂಬುದೂ ಅಷ್ಟೇ ಸತ್ಯ. ಹತ್ತಿರ ವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ್ನ ಕೋಟೆಯಲಿ ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬದುಕಿನಲಿ ಎಂಬ ಕವಿ ಜಿ ಎಸ್ ಶಿವರುದ್ರಪ್ಪ ನವರ ಕವಿತೆಯ ಸಾಲಿನಂತೆ, ಅಹಂ ಎಂಬ ಕೋಟೆಯಿಂದ ನಾವೆಲ್ಲ ಹೊರಬಂದು, ಪ್ರೀತಿಯ ವಿಸ್ತಾರತೆಯನ್ನು ಅರ್ಥಮಾಡಿಕೊಂಡು, ಒಬ್ಬರ ನ್ನೊಬ್ಬರು ಗೌರವಿಸಿ ನಡೆದಾಗ ಜೀವನ ಸುಂದರವಾಗುವುದು. ದಾಂಪತ್ಯವೂ ಸುಗಮವಾಗಿ ಸಾಗುವುದು.