Saturday, 23rd November 2024

ಅರ್ಜೆಂಟೀನಾಗೆ ಕಪ್‌ ಎತ್ತಲು ಸಾಕಾಯ್ತು ಕಳಪೆ ಆಟಗಾರನ ಗೋಲು !

ಬ್ಯೂನಸ್ ಏರ್ಸ್‌/ರಿಯೊ ಡಿ ಜನೈರೊ: ಕಳಪೆ ಆಟದಿಂದ ಆಕ್ರೋಶಕ್ಕೆ ಕಾರಣವಾಗಿದ್ದ ಅಂಗೆಲ್ ಡಿ ಮರಿಯಾ ಅವರು ಕೋಪಾ ಅಮೆರಿಕ ಟೂರ್ನಿಯಲ್ಲಿ ಅರ್ಜೆಂಟೀನಾಗೆ ಪ್ರಶಸ್ತಿ ಗೆದ್ದುಕೊಟ್ಟರು.

ಶನಿವಾರ ರಾತ್ರಿ ನಡೆದ ಫೈನಲ್‌ನಲ್ಲಿ ಅಂಗೆಲ್ ಗಳಿಸಿದ ಏಕೈಕ ಗೋಲು, ಬ್ರೆಜಿಲ್ ವಿರುದ್ಧ ಅರ್ಜೆಂಟೀನಾಗೆ 1-0 ಅಂತರದ ಗೆಲುವು ತಂದುಕೊಟ್ಟಿತು. ಈ ಮೂಲಕ 28 ವರ್ಷಗಳ ನಂತರ ತಂಡ ಪ್ರಮುಖ ಟೂರ್ನಿಯೊಂದರ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ನಾಯಕ ಲಯೊನೆಲ್ ಮೆಸ್ಸಿಗೆ ಪ್ರಮುಖ ಟೂರ್ನಿಯಲ್ಲಿ ಇದು ಮೊದಲ ಪ್ರಶಸ್ತಿಯಾಗಿದೆ.

ಆಡಿದರೂ ಯಶಸ್ಸು ಕಾಣದೇ ಇರುವುದರಿಂದ ನೊಂದಿದ್ದ ಅಂಗೆಲ್ ಮನೋವಿಜ್ಞಾನಿಯನ್ನು ಭೇಟಿಯಾಗಿ ಖಿನ್ನತೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದ್ದರಂತೆ. ಕೋಪಾ ಅಮೆರಿಕ ಟೂರ್ನಿಯ ಫೈನಲ್‌ನಲ್ಲಿ ಅವರನ್ನು ಕಣಕ್ಕೆ ಇಳಿಸಬಾರದು ಎಂದು ತಂಡದ ಅಭಿಮಾನಿಗಳು ಒತ್ತಾಯಿಸಿದ್ದರು. ಆದರೆ 33 ವರ್ಷದ ಸ್ಟ್ರೈಕರ್ 22ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ಮುನ್ನಡೆ ತಂದುಕೊಟ್ಟರು. ಇದನ್ನು ಕೊನೆಯ ವರೆಗೂ ಉಳಿಸಿಕೊಂಡ ತಂಡದ ಆಟಗಾರರು ಕಪ್ ಎತ್ತಿ ಹಿಡಿದು ಕುಣಿದಾಡಿದರು.

2014ರ ವಿಶ್ವಕಪ್‌ ಟೂರ್ನಿಯಲ್ಲಿ ಅರ್ಜೇಂಟೀನಾ ಪರ ಆಡಿದ್ದ ಅಂಗೆಲ್‌, ಸ್ಟ್ರೈಕರ್ ಸರ್ಜಿಯೊ ಅಗೆರೊ ಮತ್ತು ನಾಯಕ ಲಯೊನೆಲ್ ಮೆಸ್ಸಿ ಮಾತ್ರ ಈಗ ತಂಡ ದಲ್ಲಿ ಉಳಿದಿದ್ದಾರೆ. ವಿಶ್ವಕಪ್ ಫೈನಲ್‌ನಲ್ಲಿ ತಂಡ ಸೋತಿತ್ತು.

ಈ ನಡುವೆ ಅಂಗೆಲೊ ಗಾಯದಿಂದಾಗಿ ಆಗಾಗ ಸಂಕಷ್ಟಕ್ಕೆ ಒಳಗಾಗಿದ್ದರು. 2014ರ ವಿಶ್ವಕಪ್‌ನ ಫೈನಲ್‌ನಲ್ಲಿ ಆಡಲು ಅವರಿಗೆ ಸಾಧ್ಯವಾಗಲಿಲ್ಲ. ಮುಂದಿನ ವರ್ಷದ ಕೋಪಾ ಅಮೆರಿಕ ಟೂರ್ನಿಯ ಫೈನಲ್‌ನಲ್ಲೂ ಗಾಯದ ಸಮಸ್ಯೆ ಕಾಡಿತ್ತು. 2016ರ ಟೂರ್ನಿಯಲ್ಲಿ ಚಿಲಿ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಆಡುವು ದಕ್ಕೂ ಸಾಧ್ಯವಾಗಲಿಲ್ಲ.

ಆದರೆ ಮರಕಾನ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮ್ಯಾಜಿಕ್ ಮಾಡಿದರು. ರೊಡ್ರಿಗೊ ಡಿ ಪಾಲ್ ದೂರದಿಂದ ನೀಡಿದ ಪಾಸ್‌ನಲ್ಲಿ ಚೆಂಡನ್ನು ನಿಯಂತ್ರಿಸಿ ಅಂಗೆಲೊ ಮುನ್ನುಗ್ಗಿದಾಗ ಎದುರಾಳಿ ತಂಡದ ಡಿಫೆಂಡರ್‌ಗಳು ಇರಲಿಲ್ಲ. ಗೋಲ್‌ಕೀಪರ್ ತಮ್ಮತ್ತ ಧಾವಿಸಿ ಬರುವುದನ್ನು ಗಮನಿಸಿದ ಅಂಗೆಲೊ ದೂರ ದಿಂದಲೇ ಚೆಂಡನ್ನು ತುದಿಗಾಲಲ್ಲಿ ಎತ್ತಿ ಗೋಲ್‌ಕೀಪರ್ ತಲೆ ಮೇಲಿಂದ ಗೋಲುಪೆಟ್ಟಿಗೆ ಬಾರಿಸಿದರು.

ಲಯೊನೆಲ್ ಮೆಸ್ಸಿ ಮತ್ತು ಕೊಲಂಬಿಯಾದ ಲೂಯಿಸ್ ಡಯಾಸ್ ಅವರು ಕೋಪಾ ಅಮೆರಿಕದಲ್ಲಿ ಈ ಬಾರಿ ಗರಿಷ್ಠ ಗೋಲು ಗಳಿಸಿದ ಶ್ರೇಯಸ್ಸು ತಮ್ಮದಾಗಿಸಿ ಕೊಂಡರು. ಇಬ್ಬರೂ ತಲಾ ನಾಲ್ಕು ಗೋಲು ಗಳಿಸಿ ದ್ದಾರೆ. ಮೆಸ್ಸಿ ಫೈನಲ್‌ನಲ್ಲಿ ಗೋಲು ಗಳಿಸಲಿಲ್ಲ. ಮೂರನೇ ಸ್ಥಾನಕ್ಕಾಗಿ ನಡೆದಿದ್ದ ಪಂದ್ಯದಲ್ಲಿ ಡಯಾಸ್ ಎರಡು ಗೋಲು ಗಳಿಸಿದ್ದರು. ತಂಡ 3-2ರಲ್ಲಿ ಪೆರು ವಿರುದ್ಧ ಜಯ ಗಳಿಸಿತ್ತು.

ಲಯೊನೆಲ್ ಮೆಸ್ಸಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರೂ ಫೈನಲ್ ಪಂದ್ಯದಲ್ಲಿ ಆಡಿದ್ದರು ಎಂದು ಕೋಚ್ ಸ್ಕಾಲೊನಿ ತಿಳಿಸಿದ್ದ ಹಿನ್ನೆಲೆಯಲ್ಲಿ ಅವರು ಹೆಚ್ಚು ಅಭಿನಂದನೆಗೆ ಅರ್ಹರು ಎಂದು ಅಭಿಪ್ರಾಯಪಟ್ಟರು.