Thursday, 28th November 2024

ಉಗ್ರ ಸಂಘಟನೆ ನಂಟು: ಉ.ಪ್ರದೇಶದಲ್ಲಿ ಮತ್ತೆ ಮೂವರ ಬಂಧನ

ಲಖನೌ: ಅಲ್‌ ಖೈದಾ ಉಗ್ರ ಸಂಘಟನೆಯ ಕಾಶ್ಮೀರಿ ಘಟಕದ ಜೊತೆ ನಂಟು ಹೊಂದಿದ್ದ ಮೂವರನ್ನು ಉತ್ತರ ಪ್ರದೇಶ ಭಯೋತ್ಪಾದನೆ ನಿಗ್ರಹ ಪಡೆ ಬುಧವಾರ ಬಂಧಿಸಿದೆ.

ಜು.11ರಂದು ಲಖನೌನಲ್ಲಿ ಇಬ್ಬರು ಉಗ್ರರನ್ನು ಬಂಧಿಸಲಾಗಿತ್ತು. ಅವರ ವಿಚಾರಣೆ ನಡೆಸುವ ವೇಳೆ ಮೂವರ ಹೆಸರು ಬೆಳಕಿಗೆ ಬಂದಿದೆ ಎಂದು ಉತ್ತರ ಪ್ರದೇಶ ಪೊಲೀಸರು ಮಾಹಿತಿ ನೀಡಿದ್ದಾರೆ. ಮೂವರೂ ಲಖನೌ ನಿವಾಸಿಗಳು ಎಂದು ಭಯೋತ್ಪಾದನೆ ನಿಗ್ರಹ ಪಡೆ ತಿಳಿಸಿದೆ.

‘ಉತ್ತರ ಪ್ರದೇಶದಲ್ಲಿ ಸಕ್ರಿಯವಾಗಿದ್ದ ಅಲ್‌ ಖೈದಾ ಉಗ್ರ ಸಂಘಟನೆಯ ಘಟಕವೊಂದನ್ನು ಪತ್ತೆ ಮಾಡಿದ್ದೇವೆ. ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದು, ಭಾರಿ ಪ್ರಮಾಣದ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದೇವೆ’ ಎಂದು ಉತ್ತರ ಪ್ರದೇಶ ಭಯೋತ್ಪಾದನೆ ನಿಗ್ರಹ ಪಡೆ ಭಾನುವಾರ ಹೇಳಿತ್ತು.

‘ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ರಾಜ್ಯದ ರಾಜಧಾನಿಯ ಜನನಿಬಿಢ ಪ್ರದೇಶದಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದರು. ಇವರ ಜತೆಗಾರರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ಮತ್ತಷ್ಟು ಶಂಕಿತರನ್ನು ಬಂಧಿಸಲು ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿಸಿದ್ದರು.