Friday, 20th September 2024

ಹಳೆ ಕಾಯಿದೆಗಳು ಮುಂದುವರೆಯಬೇಕೆ ?

ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ, ದೇಶದ ಹಲವು ಕಾನೂನು ಕಟ್ಟಲೆಗಳಲ್ಲಿ ಈಗಲೂ ಬ್ರಿಟೀಷ್ ಕಾಲದ ನಿಯಮಗಳನ್ನೇ ಮುಂದುವರಿಸ ಲಾಗುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ರಚಿತವಾಗಿರುವ ಅನೇಕ ಕಾಯಿದೆಗಳನ್ನೇ ಈಗಲೂ ಬಳಸಲಾಗುತ್ತಿದೆ.

ಈ ರೀತಿ ‘ಅಜ್ಜ ಹಾಕಿದ ಆಲದ ಮರಕ್ಕೆ’ ಜೋತು ಬೀಳುವುದರಿಂದ, ಬ್ರಿಟೀಷ್ ಆಡಳಿತದಲ್ಲಿರುವ ಕಾನೂನುಗಳೇ ಮುಂದುವರಿದಿವೆ ಎನ್ನುವುದು ಒಂದು ಭಾಗ ವಾದರೆ, ಇಂದಿನ ಕಾಲಕ್ಕೆ ತಕ್ಕಂತೆ ಬದಲಾಗುವ ಅನೇಕ ಸಮಸ್ಯೆಗಳಿಗೆ ಈ ಕಾಯಿದೆಗಳಲ್ಲಿ ಉತ್ತರವಿರುವುದಿಲ್ಲ. ಇದೀಗ ಇದೇ ವಿಷಯವನ್ನು ಇಟ್ಟುಕೊಂಡು ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರ ಸರಕಾರಕ್ಕೆ ಛಾಟಿ ಬೀಸಿದೆ. ದೇಶದ್ರೋಹದ ಕಾಯಿದೆ 124(ಎ) ಎನ್ನುವ ಕಾಯಿದೆಯನ್ನು ಬ್ರಿಟೀಷರು ಜಾರಿ ಗೊಳಿಸಿದ್ದರು.

ಮಹಾತ್ಮ ಗಾಂಧಿ, ಬಾಲ ಗಂಗಾಧರ ತಿಲಕ್ ಸೇರಿದಂತೆ ಹಲವು ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಅಸ್ತ್ರವನ್ನು ಬಳಸಲು ಪ್ರಯೋಗಿಸಿದ್ದ ಈ ಕಾನೂನು
ಈಗ ಅಗತ್ಯವೇ ಎಂದು ಪ್ರಶ್ನಿಸಿದೆ. ಈ ಐಪಿಸಿ ಸೆಕ್ಷನ್‌ನಿಂದ ದೇಶದ ಜನರ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದೆ. ಸರ್ವೋಚ್ಚ ನ್ಯಾಯಾಲಯ ಗಮನಿಸಿರುವಂತೆ, ದೇಶದ್ರೋಹದ ಕಾನೂನು ಇತ್ತೀಚಿನ ದಿನದಲ್ಲಿ ಅನೇಕ ಬಾರಿ ದುರ್ಬಳಕೆಯಾಗುತ್ತಿದೆ. 2016 ರಿಂದ 2019ರ ಅವಧಿಯಲ್ಲಿ ಈ ಕಾನೂನಿ ನಲ್ಲಿ ದಾಖಲಾಗುವ ಪ್ರಕರಣಗಳ ಸಂಖ್ಯೆ ಶೇ.93ರಿಂದ 160ಕ್ಕೆ ಏರಿಕೆಯಾಗಿದೆ.

ಆದರೆ ಇದರಲ್ಲಿ ಕೇವಲ ಶೇ.3.3ರಷ್ಟು ಮಾತ್ರ ಅಪರಾಧ ಸಾಬೀತಾಗಿದೆ. ಅಂದರೆ 93 ಪ್ರಕರಣಗಳಲ್ಲಿ ಕೇವಲ 2 ಪ್ರಕರಣಗಳು ಮಾತ್ರ ತಾರ್ಕಿಕ ಅಂತ್ಯ ಕಂಡಿದೆ. ಆದ್ದರಿಂದ ನಿಜಕ್ಕೂ ಈ ರೀತಿಯ ಕಾನೂನು ಅಗತ್ಯವೇ? ಕೇವಲ ದೇಶದ್ರೋಹದ ಕಾಯಿದೆ ಮಾತ್ರವಲ್ಲದೇ, ಬಿಟ್ರೀಷರು ಭಾರತೀಯರನ್ನು ಕಟ್ಟಿ ಹಾಕಲು ಸಿದ್ಧಪಡಿಸಿಕೊಂಡಿದ್ದ ಹಲವು ಕಾನೂನುಗಳು ಈಗಲೂ ಜೀವಂತವಾಗಿದೆ. ಇದರಲ್ಲಿ ಅನೇಕ ಕಾನೂನುಗಳು ಇಂದಿನ ಅಪ್ರಸ್ತುತ. ಆದ್ದರಿಂದ ಈ ರೀತಿಯ ಅನವಶ್ಯಕ ಕಾನೂನುಗಳನ್ನು ರದ್ದುಗೊಳಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ.