Friday, 18th October 2024

ಬದುಕಿನಲ್ಲಿ ಸಂಭವಿಸುವ ಯೂಟರ್ನ್‌ ಬಗ್ಗೆ

ಪ್ರಚಲಿತ

ಟಿ.ದೇವಿದಾಸ್

What if You Woke Up One Morning and Realized You were Living the Wrong Life? – ಬ್ರೂಸ್ ಗ್ರೀಸನ್ ಎಂಬಾತ ಬರೆದ ಪುಸ್ತಕದ ಸಾಲಿದು. ಇದ್ದಕ್ಕಿದ್ದ ಹಾಗೆ ಬದಲಾಗಿ ಹೋಗುವ ವ್ಯಕ್ತಿಗಳ ಬಗ್ಗೆ ಗ್ರೀಸನ್ ಬರೆ ಯುತ್ತಾನೆ. ಯಾವತ್ತಿಗೂ ಮನುಷ್ಯನ ಸ್ವಭಾವ ಬದಲಾಗುವುದಿಲ್ಲ ಎನ್ನುವ ಧೋರಣೆಯ ಮನಃಶಾಸ್ತ್ರಜ್ಞರು ಕೂಡ, ಮನುಷ್ಯನ ಸ್ವಭಾವದಲ್ಲಿ ಬದಲಾವಣೆಗಳು ಆಗುತ್ತವೆ ಎಂಬುದನ್ನು ಸಾಂದರ್ಭಿಕವಾಗಿ ಒಪ್ಪುವಷ್ಟು ಬದಲಾವಣೆಗಳು ಬದುಕಿನಲ್ಲಿ ಆಗುತ್ತವೆ.

ಬೆಳಗಾಗುವುದರೊಳಗೆ ವ್ಯಕ್ತಿಯ ಮನಸ್ಥಿತಿ, ಮನೋಧರ್ಮ ಮತ್ತು ಮನೋಧೋರಣೆ ಬದಲಾಗಿ ಬಿಡುತ್ತದೆ. ಖಡ್ಡಾ ಜಿಪುಣ ಬರಬರುತ್ತಾ ಉದಾರಿಯಾಗಿ ಬಿಡುತ್ತಾನೆ. ಕ್ರೌರ್ಯ ಕಳೆದು ಶಾಂತವಾಗುತ್ತದೆ. ನನ್ನ ಬದುಕಿನ ಗತಿಯೆಲ್ಲವೂ ನನ್ನ ನಿಯಂತ್ರಣದ ಇದೆಯೆಂಬ ಭಾವವನ್ನು ಅತಿರೇಕದಲ್ಲಿ ರೂಢಿಸಿಕೊಂಡವರು ಇದ್ದಕ್ಕಿದ್ದ ಹಾಗೆ ಯಾವುದೂ ನನ್ನ ಕೈಯಲ್ಲಿ ಇಲ್ಲ, ಎಲ್ಲವೂ ಅವನ ಕರುಣೆ ಎಂದು ಕೈಮೇಲೆತ್ತಿ ತೋರುವವರನ್ನು ನೋಡಿಲ್ಲವೆ? ತಾನೇ ತನ್ನಿಂದಲೇ ತನ್ನದೇ ಎಂದು ಹಾರಾಡಿದವರೂ, ಕೋಟೆ ಕಟ್ಟಿಕೊಂಡವರೂ ಬದಲಾಗಿ ಹೋದದ್ದನ್ನು ಚರಿತ್ರೆಯುದ್ದಕ್ಕೂ ಕಾಣಬಹುದು.

ದೇವರೇ ಇಲ್ಲ ಎಂದವನು ತೇನ ವಿನಾ ತೃಣಮಪೀನ ಚಲತಿ ಎನ್ನುತ್ತಾನೆ. ಕಾಲದ ಗತಿಯಲ್ಲಿ ಹಿಂಸೆ ಅಹಿಂಸೆಯ ರೂಪವನ್ನು ತಾಳುತ್ತದೆ. ಅಧರ್ಮ ಧರ್ಮವನ್ನು ಅಪ್ಪುತ್ತದೆ. ಬಡವ ಶ್ರೀಮಂತನಾಗುತ್ತಾನೆ. ಶ್ರೀಮಂತ ಬಡವ ನಾಗುತ್ತಾನೆ. ಆಯ್ತು, ಈ ಜೀವನ ಇಲ್ಲಿಗೇ ಮುಗಿದು ಹೋಯ್ತು ಎಂದು ತೀರ್ಮಾನಿಸಿ ಮಲಗಿದವ ನಿಗೆ ಬೆಳಗ್ಗೆ ಏಳು ಏಳುತ್ತಲೇ ಹೊಸ ಜಗತ್ತು ಕಾಣುತ್ತದೆ. ಹೊಸ ಶಕ್ತಿ ಸಂಚಯವಾಗುತ್ತದೆ. ಬದುಕಿನ ಕುರಿತಾಗಿ ಹೊಸ ಹೊಳಹುಗಳು ಹುಮ್ಮಸ್ಸು ಚೈತನ್ಯ ಹುಟ್ಟಿ ಇಲ್ಲ, ಏನನ್ನಾದರೂ ಸಾಧಿಸಲೇ ಬೇಕು ಎಂಬ ಛಲ ಹುಟ್ಟಿಕೊಂಡು ಬಿಡುತ್ತದೆ.

ಕಳೆದುಕೊಂಡದ್ದನ್ನು ಮತ್ತೆ ಸಂಪಾದಿಸುವುದಕ್ಕೆ ನಿರ್ಧರಿಸುತ್ತಾನೆ. ಇವಳೊಂದಿಗೆ ಬದುಕು ಸಾಗೋದಿಲ್ಲ, ನೀಗೋದಿಲ್ಲ ಎಂದು ಅವಸರದ ನಿರ್ಧಾರಕ್ಕೆ ಬಂದವನು ಬೆಳಗಾಗುತ್ತಲೇ ಅವಳೊಂದಿಗೇ ಮತ್ತೆ ಬದುಕು ಕಟ್ಟಿಕೊಳ್ಳುತ್ತ ಹೊಸ ಜೀವನವನ್ನು ಸಾಗಿಸುತ್ತಾನೆ. ಮುರಿದುಹೋದ, ನಿಂತುಹೋದ ಮದುವೆ
ಮತ್ತೆ ಚಿಗುರೊಡೆದು ಬಿಡುತ್ತದೆ. ಅರ್ಧಕ್ಕೇ ನಿಂತುಹೋದ ಮನೆ ಪೂರ್ಣವಾಗುತ್ತದೆ. ಒಡಕಿನ ದಾಂಪತ್ಯ ಸುಗಮವಾಗುತ್ತದೆ. ವಿಚ್ಛೇದನಕ್ಕಾಗಿ ಅರ್ಜಿ ಹಾಕಿದ ಮನಸ್ಸುಗಳು ಏಕೋ ಏನೋ ಎಲ್ಲ ವಿರಸಗಳನ್ನು ಮರೆತು ಒಂದಾಗಿ ಬಿಡುತ್ತದೆ. ಅತೀ ಭ್ರಷ್ಟನೊಬ್ಬ ಸತ್ಯ ಹರಿಶ್ಚಂದ್ರನಾಗಿ ಬಿಡುತ್ತಾನೆ.

ಬದುಕು ಕುಸಿದುಹೋದ ನೆಲದ ಮತ್ತೆ ಬದುಕನ್ನು ಕಟ್ಟಿಕೊಂಡವರು ಅದೆಷ್ಟಿಲ್ಲ ಹೇಳಿ! ಬದುಕು ಸುಗಮವಾಗುವುದಕ್ಕೂ ನಾವೇ ಕಾರಣ. ಹಾಳಾಗಿ ಹೋಗುವು ದಕ್ಕೂ ನಾವೇ ಕಾರಣ. ಸಾಮಾನ್ಯವಾಗಿ ಎಲ್ಲರ ಬದುಕಿನಲ್ಲೂ ಒಂದು ಯೂ ಟರ್ನ್ ಸಾಧ್ಯವಿರುತ್ತದೆ. ಬದುಕಲ್ಲಿ ಯಾವುದೂ ನಡೆಯುವುದಿಲ್ಲ ಅಂತ
ಇಂಥದ್ದನ್ನು ಬೊಟ್ಟು ಮಾಡಲು ಸಾಧ್ಯವಿಲ್ಲ ಎಂದು ಈಗ ಗೊತ್ತಾಗಿಬಿಟ್ಟಿದೆ. ದುರ್ಬಲ ಮನಸ್ಸು ತೀರಾ ಅವಸರಕ್ಕೆ ಬಿದ್ದು ಯಾವುದೋ ದುಡುಕಿನ ನಿರ್ಧಾರಕ್ಕೆ ಬಂದು ಬಿಡುತ್ತದೆ. ಮತ್ತೆ ಅರಿವು ಹುಟ್ಟಿ ಹಿಂದೆ ಸರಿಯುತ್ತದೆ.

ಹಿಂದೆ ಹೆಜ್ಜೆಯಿಟ್ಟವರು ಮುಂದೆ ನೋಡುತ್ತಾ ಮುಂದೆ ಸಾಗಿಬಿಡುತ್ತಾರೆ. ಹಿಂದಡಿಯಿಟ್ಟವರು ಸವಾಲಿಗೆ ಎದೆಯೊಡ್ಡಿ ನಿಲ್ಲುತ್ತಾರೆ. ಬಹುಕಾಲದವರೆಗೆ ಒಲ್ಲದ ಗಂಡ ಒಮ್ಮೆಲೇ ಇಷ್ಟವಾಗಿ ಬಿಡುತ್ತಾನೆ. ಒಲ್ಲದ ಹೆಂಡತಿಯ ಹೆಗಲನ್ನು ಬಳಸಿಕೊಳ್ಳುತ್ತಾ ಇನ್ನು ಇಂಥ ತಪ್ಪನ್ನು ಮಾಡಲಾರೆ ಎಂದು ಗಂಡ ಬೆಳಗಾಗುತ್ತಲೇ ನಿರ್ಧರಿಸಿ ಬಿಡುತ್ತಾನೆ. ಪ್ರಾಣಿಯನ್ನು ಬಲಿಕೊಡುವ ಕಾಯಕವನ್ನು ಮಾಡುವವನು ಒಮ್ಮಿಂದೊಮ್ಮೇಲೇ ಅಹಿಂಸೆಯ ಮಂತ್ರವನ್ನು ಪಠಿಸಲು ಶುರುವಿಡುತ್ತಾನೆ.

ಭ್ರಷ್ಟ ರಾಜಕಾರಣಿ ಸತ್ಯ ಸುಭಗನಾಗಲು ಪ್ರಯತ್ನಿಸುತ್ತಾನೆ. ಪಾರಮಾರ್ಥಿಕ ಮಾತುಗಳನ್ನು ಆಡಲಾರಂಭಿಸುತ್ತಾನೆ. ಪರಮ ಜಿಪುಣ ದಾನಿಯಾಗಬಹುದು.
ತಾನು ನಂಬಿದ್ದು ಸತ್ಯವಲ್ಲ, ಸತ್ಯ ಬೇರೆಯದೇ ಇದೆಯೆಂದು ಬದುಕಿನ ಅದ್ಯಾವುದೋ ತಿರುವಿನಲ್ಲಿ ಶುದ್ಧ ಕರ್ಮಠನಿಗೂ ಅನಿಸಿ ಸಹಜವಾದ ನೆಲೆಗೆ ಬಂದು ಜನಸಾಮಾನ್ಯರ ದಾರಿಯನ್ನು ಹಿಡಿಯುವುದೂ ಇದೆ. ಕರ್ಮಠ ಕಮ್ಯುನಿಸ್ಟರು ಬಂಡವಾಳ ಷಾಹಿಯ ದಾಸರಾಗುತ್ತಾರೆ. ಶುದ್ಧಾತಿಶುದ್ಧ ಸರ್ವಾಧಿಕಾರಿ ನೇತಾರನೊಬ್ಬ ತನ್ನ ನೀತಿಗಳಿಂದ ತಾನೇ ಹೇಸಿ ಪ್ರಜಾಪ್ರಭುತ್ವದ ಮಾತನ್ನಾಡಬಹುದು.

ಕಾಡುಪ್ರಾಣಿಗಳನ್ನು ಬೇಟೆಯಾಡಿ ತಿಂದು ಬದುಕುವವನಿಗೆ ತನ್ನ ಬದುಕಿನ ದಾರಿ ಅಸಹ್ಯವೆನಿಸುತ್ತದೆ. ನನ್ನ ಬದುಕಿನ ದಾರಿ ಎಲ್ಲರಂತೆ ಇಲ್ಲ ಎಂದುಕೊಂಡು ಅತೀ ಮೇಲರಿಮೆಯನ್ನು ಹೊಂದಿದವನಿಗೆ ಬದುಕಿನ ಬೇರೆ ಯಾವ ದಾರಿಯೂ ಸಿಗದೇ ಹೋದೀತು! ಮತ್ತೆ ಬದುಕಿನ ಹಳಿಯನ್ನು ಹುಡುಕಲು ಅವನೆಷ್ಟು ಹೆಣಗಾಡುತ್ತಾನೆ! ನಾನು ತಿಳಿದದ್ದೇ ಪರಮ ಸತ್ಯ ಎಂದುಕೊಂಡ ಆಧ್ಯಾತ್ಮಿಕ ಗುರುವಿಗೆ ಅದ್ಯಾವ ಘಳಿಗೆಯಲ್ಲಿ ಜ್ಞಾನೋದಯವಾಗಿ ಬಿಡುತ್ತೆ ಎಂದು ಯಾರು
ಬಲ್ಲರು? ದೇವರಿಗೆ ಮಾತ್ರ ಗೊತ್ತು! ಬೆಳೆದ ಬೆಳೆ ಮಳೆಗೆ ಕೊಚ್ಚಿಹೋಗಿಯೋ ಅಥವಾ ಬೆಲೆಯೇ ಇಲ್ಲದೇ ಕೊಳೆತು ಹಾಳಾಗಿ ಹೋದಾಗಲೂ ಅದನ್ನು ಬೆಳೆದವ ತಲೆಮೇಲೆ ಕೈಹೊತ್ತು ಕುಳಿತುಕೊಂಡು ಕಣ್ಣೀರು ಸುರಿಸುತ್ತಾನೆಯೇ ಹೊರತು ಬೆಳೆಯುವುದನ್ನೇ ನಿಲ್ಲಿಸಲಾರ.

ಒಬ್ಬಾಕೆಯನ್ನು ಮದುವೆಯಾಗಿ ಅವಳೊಂದಿಗೇ ಅರುವತ್ತು ಸಂವತ್ಸರಗಳಿಗೂ ಹೆಚ್ಚು ಕಾಲ ದಾಂಪತ್ಯ ಜೀವನ ನಡೆಸಿದ ದಂಪತಿಗಳು ಅದೆಷ್ಟಿಲ್ಲ ಹೇಳಿ? ಅರುವತ್ತು ಸಂವತ್ಸರಗಳಿಗೂ ಹೆಚ್ಚು ಕಾಲ ಬದುಕಿನ ಎಂಥಾ ಸಂದರ್ಭದಲ್ಲೂ ಅವರಿಬ್ಬರಿಗೆ ವೈಮನಸ್ಸು ಹುಟ್ಟಿಯೋ ಬೇಸರವಾಗಿಯೋ, ಅಸಹ್ಯವೆನಿಸಿಯೋ, ಇವನೊಂದಿಗೆ ಅಥವಾ ಇವಳೊಂದಿಗೆ ಜೀವನ ಸಾಧ್ಯವೇ ಇಲ್ಲ ಎಂದೆನಿಸಿಯೋ, ಇವಳಿಂದ ಅಥವಾ ಇವನಿಂದ ಯಾವ ಸುಖವೂ ನನಗೆ ಸಿಗಲಿಲ್ಲವೆಂದೋ ಅಥವಾ ಯಾವುದೇ ಕ್ಷುಲ್ಲಕ ವಿಚಾರಗಳೂ ಜೀವತಾಳದೇ ಬೇರಾಗಲಿಲ್ಲ.

ಅಂದ ಮಾತ್ರಕ್ಕೆ ಆ ದಾಂಪತ್ಯದಲ್ಲಿ ಯಾವುದೇ ಥರದ ಜಗಳ, ಮುನಿಸು, ದುಃಖ, ನೋವು, ಹತಾಶೆ, ವೈರಾಗ್ಯ, ಖಿನ್ನತೆ, ಹಠ, ಮೊಂಡುತನ ಇರಲೇ ಇಲ್ಲವೆಂದು ಭಾವಿಸಲು ಸಾಧ್ಯವೇ? ನೋ ಚಾ. ಇದೆಲ್ಲ ಇದ್ದೂ ಗೆದ್ದವರು ಅವರು. ದಾಂಪತ್ಯದ ಸುಖವಿರುವುದೇ ವಿರಸದಲ್ಲಿ. ದೇಹ, ಮನಸುಗಳ ಅಗಲುವಿಕೆಯಲ್ಲಿ. ಗಂಡ ಹೆಂಡತಿಯಾಗಿಯೂ, ಹೆಂಡತಿಯಾಗಿಯೂ ಕಲ್ಪಿಸಿಕೊಳ್ಳುವುದರ ಒಂದು ಸುಖವಿದೆ. ಗಂಡ ಹೆಂಡತಿಯೆದುರು ಸೋಲಬೇಕು; ಹೆಂಡತಿ ಸೋತು ತನ್ನ ಸರ್ವಸ್ವವನ್ನೂ ಅವನಿಗೇ ಕೊಟ್ಟಂತೆ.

ಅದೊಂದು ಕಾಲವಿತ್ತು, ಈಗ ಆ ಕಾಲದ ಅಂಥಾ ಪರಿಯ ದಾಂಪತ್ಯದ ಬದುಕಿಲ್ಲ ಎಂದು ನಾನು ಹೇಳಲಾರೆ. ಪತಿಯೇ ಪರದೈವ ಎಂಬ ಆದರ್ಶವನ್ನು ಕಟ್ಟಿಕೊಂಡು ಬದುಕಿ ಬಾಳಿದ ಹೆಂಡತಿಯೆದುರು ಯಾವ ಗಂಡನೂ ನೈತಿಕವಾಗಿ ಉದ್ಧಟತನವನ್ನೂ ತೋರಿಸಲಾರ ಎಂದು ನಂಬಿದ ಸಮಾಜ ನಮ್ಮದು.
ಹೆಂಡತಿಯೂ ಅಷ್ಟೆ; ಗಂಡ ಹಾಕಿದ ಗೆರೆಯನ್ನು ದಾಟಲಾರಳು. ಗಂಡನ ಮನಸ್ಸನ್ನು ನೋಯಿಸಲಾರಳು. ಗಂಡನ ಪಾದಕ್ಕೆರಗಿ ಶರಣಾಗತಳಾಗಿ ಒಪ್ಪ ಓರಣವಾಗಿ ಬಾಳಿ ಬದುಕನ್ನು ಸಾಗಿಸಿದ ಪುರಾಣ ಹಾಗೂ ಇತಿಹಾಸದ ಪರಂಪರೆಯಲ್ಲಿ ಅದೆಷ್ಟು ಹೆಂಗಳೆಯರು ಆದರ್ಶದ ಮೇಲ್ಪಂಕ್ತಿಯನ್ನು ತೋರಿಸಿಕೊಟ್ಟಿಲ್ಲ ಹೇಳಿ? ಗಂಡ ಏನು ಮಾಡಿದರೂ ಸರಿಯೇ ಎಂದು ಮುಗ್ಧವಾಗಿ ನಂಬುವ ಹೆಂಡತಿಗೆ ದಾಂಪತ್ಯದಲ್ಲಿ ಎಂದೂ ನ್ಯೂನತೆ ಕಾಣಿಸುವುದಿಲ್ಲ.

ಕಾಣಿಸಿದರೂ ಹೊಂದಿಕೊಂಡು ಬದುಕನ್ನು ಸಾಗಿಸುವ ಔದಾರ್ಯ ಅವಳ ಸಂಸ್ಕಾರದ ಮನೆಮಾಡಿರುತ್ತದೆ. ಈ ಬದುಕು ಒಂದಲ್ಲ ಒಂದು ದಿನ ಸರಿಯಾದೀತು ಎಂದು ತನ್ನನ್ನು ತಾನೇ ಸಾಂತ್ವನ ಮಾಡಿಕೊಂಡೋ ಸಮರ್ಥಿಸಿಕೊಂಡೋ ಸಮಾಧಾನಿಸಿಕೊಂಡೋ ಧೈರ್ಯದೊಂದಿಗೆ ಬದುಕುವ ಕಾಲದಲ್ಲಿ ಈ ಬದುಕು ಚೆನ್ನಾಗಿಯೇ ಇತ್ತು. ಅಂಥ ಬದುಕು ಈಗಲೂ ಚೆನ್ನಾಗಿಯೇ ಇದೆಯೆನ್ನಿ. ಆದರೆ ಈಗ ಹಾಗಲ್ಲ, ಕಾಲ ಬದಲಾಗಿದೆ. ‘ಕಲಿತದ್ದು ಹೆಚ್ಚಾಯಿತು, ಕಾಲು ಮೇಲಾಯಿತು’ ಅಂದಹಾಗೆ ಅಂಥ ಪತಿವ್ರತೆಯ ಸ್ವಭಾವದ ಹೆಣ್ಣು ಹೆಂಡತಿಯಾಗಿಲ್ಲವೇನೋ!

ಗಂಡಸೂ ಅಂಥ ಗಂಡನಾಗಿಲ್ಲವೇನೋ! ಯಾರೇನೇ ಅಂದರೂ, ಎಷ್ಟೇ ವಾದಿಸಿದರೂ ಗಂಡಸು ಮಹಾಸ್ವಾರ್ಥಿ. ಯಜಮಾನಿಕೆ ಸದಾಕಾಲ ತನ್ನದೇ ಆಗಿರಬೇಕು ಎಂದು ಬಯಸುತ್ತಾನೆ. ಹೆಂಡತಿ ತನಗೆ ಸಂಪೂರ್ಣವಾಗಿ ಶರಣಾಗಬೇಕೆಂಬ ಔದ್ಧಟ್ಯವನ್ನು ಹೊಂದಿರುತ್ತಾನೆ. ಗಂಡ ಎಂಬ ಅಹಂಭಾವದ ಮನೋಧೋರಣೆಯ ವರ್ತನೆಯನ್ನು ಅಭಿವ್ಯಕ್ತಿಸಿ, ಆ ಮೂಲಕ ನಿಯಂತ್ರಣವನ್ನು ಹೆಂಡತಿಯ ಮೇಲೆ ಪ್ರತಿಹಂತದಲ್ಲೂ ಪ್ರಭಾವಗೊಳಿಸುತ್ತಲೇ ಇರುತ್ತಾನೆ.
ಗಂಡು-ಹೆಣ್ಣಿನಲ್ಲಿ ಅದೆಷ್ಟೇ ಪ್ರೀತಿಯ ಗಾಢ ಸಂಕೋಲೆ ಮದುವೆಯ ಪೂರ್ವದಲ್ಲಿದ್ದರೂ ಆಮೇಲೆ ಆ ಸಂಕೋಲೆಯೇ ಇರುವುದಿಲ್ಲ.

ಗಂಡು ಗಂಡನಾಗಿ ವರ್ತಿಸಲು ಆರಂಭಿಸುತ್ತಾನೆ. ಹೆಣ್ಣು ಹೆಂಡತಿಯಾಗಿ ವರ್ತಿಸುತ್ತಾಳೆ. ಮಕ್ಕಳಾದ ಮೇಲಂತೂ ದಾಂಪತ್ಯದ ಬದುಕಿನ ಗತಿಯೇ ಬದಲಾಗಿ ಬಿಡುತ್ತದೆ. ಶರಣಾಗುವಿಕೆ ಬದಲು ಎಲ್ಲದರಲ್ಲೂ ಸಮಪಾಲನ್ನು ಹೆಂಡತಿ ಕೇಳುತ್ತಾಳೆ. ಸುಖದಲ್ಲೂ ದುಃಖದಲ್ಲೂ ನೋವು ನಲಿವಿನಲ್ಲೂ ಕಷ್ಟದಲ್ಲೂ ನೀನು ನನ್ನಂತೆಯೇ ಎಂದು ಗಂಡನಿಗೆ ಅಂದು ಬಿಡುತ್ತಾಳೆ. ಹೆಂಡತಿಯಾಗಿ ತನ್ನ ಸ್ವಾತಂತ್ರ್ಯವನ್ನು ಬಯಸುತ್ತಾಳೆ. ಆದರೆ, ಮದುವೆಯಾದ ಹೊಸತರಲ್ಲಿ ಇರುವ ತನ್ನದೆನ್ನುವ ಎಲ್ಲವನ್ನೂ ಕೊಟ್ಟು ಬಿಡುವ ಸಂಭ್ರಮ ಅವಳಲ್ಲಿ ಕೊನೆಯವರೆಗೂ ಇರುತ್ತದೆ. ಕೊಟ್ಟು ಬಿಡುತ್ತಾಳೆ ಕೂಡ. ತನ್ನನ್ನೂ ಕೊಟ್ಟುಕೊಂಡು ಬಿಡುತ್ತಾಳೆ.

ಎಲ್ಲವನ್ನೂ ಗಂಡನಿಗೇ ಧಾರೆಯೆರೆದು ಅವನ ಉತ್ಕರ್ಷದಲ್ಲಿ ತನ್ನ ಏಳಿಗೆಯನ್ನು ಕಾಣುತ್ತಾಳೆ. ಗಂಡನಿಗೆ ಬಾಗುತ್ತಾಳೆ, ಬಳಕುತ್ತಾಳೆ, ಬಗ್ಗುತ್ತಾಳೆ, ಸರಿದು
ನಿಲ್ಲುತ್ತಾಳೆ, ಆಶಿಸುತ್ತಾಳೆ. ತನ್ನ ಕನಸುಗಳನ್ನು ತ್ಯಾಗ ಮಾಡುತ್ತಾಳೆ, ಈ ಬದುಕು ನಿನ್ನದೇ ಅಂತ ಅಂದುಕೊಂಡು ಅವನೊಂದಿಗೇ ಸಂಭ್ರಮಿಸುತ್ತಾಳೆ. ಈಗಲೂ ಈ ದೇಶದಲ್ಲಿ ಗಂಡನ ಮನಸ್ಸನ್ನು ನೋಯಿಸುವಂಥ ಕೆಲಸವನ್ನು, ಅವನ ಹೆಸರಿಗೆ ಮಸಿ ಬಳಿಯುವಂಥ, ಮನೆತನದ ಮರ್ಯಾದೆ ಕೆಡುವಂಥ ಕಾರ್ಯವನ್ನು ಮಾಡದಿರುವ ಅದೆಷ್ಟೋ ಸಾತ್ವಿಕ ಮನಸ್ಸಿನ ಹೆಂಡತಿಯರು ಇzರೆ. ಅಸಂಖ್ಯ ದಾಂಪತ್ಯಗಳು ಒಡೆದು ಹೋಗದಿರುವುದಕ್ಕೆ ಹೆಂಡತಿಯ ಹೊಂದಿಕೊಂಡು ಹೋಗುವ ಮನಸು ಕಾರಣವೆಂಬುದರಲ್ಲಿ ಎರಡು ಮಾತಿಲ್ಲ. ಈ ಕಾರಣಕ್ಕಾಗಿಯೇ ‘ಗೃಹಿಣೀಂ ಗೃಹಮುಚ್ಚತೇ’ ಎಂಬ ಮಾತು ಹುಟ್ಟಿದ್ದು.

ಆದರೆ ಈ ಕಾಲದಲ್ಲಿ ಗಂಡನ ಎಲ್ಲ ದೌರ್ಬಲ್ಯಗಳನ್ನು ಒಪ್ಪಿಕೊಂಡು ಎಲ್ಲ ಕಷ್ಟ ನೋವು ಅವಮಾನಗಳನ್ನೂ ಬದುಕಬೇಕಾದ ದರ್ದು ಯಾವ ಹೆಂಡತಿಗೂ ಇರುವುದಿಲ್ಲ. ಕಾರಣ ಅವಳೂ ದಾಂಪತ್ಯದಲ್ಲಿ ಸಮಾನತೆಯನ್ನು ಬಯಸುತ್ತಾಳೆ. ತನ್ನ ಗಂಡನಲ್ಲಿ ಇಲ್ಲದ ಅದ್ಭುತಗಳನ್ನು ಕಲ್ಪಿಸಿಕೊಳ್ಳುವುದಿಲ್ಲ. ಗಂಡನ ತಾಕತ್ತಿನ ಒಟ್ಟೂ ಮಿತಿಯನ್ನು ಅಳೆದಿಟ್ಟುಕೊಳ್ಳುತ್ತಾಳೆ. ಅವನು ಸೋತರೆ ಸಂತೈಸಿ ಧೈರ್ಯವನ್ನು ಸ್ಥೈರ್ಯವನ್ನು ತುಂಬುತ್ತಾಳೆ. ಗೆಲ್ಲುವುದಕ್ಕೆ ಪ್ರೇರಣೆ ನೀಡುತ್ತಾಳೆ. ಹತಾಶೆಗಳಿಂದ ಹೊರಬರಲು ಉಪಾಯಗಳನ್ನು ತೋರುತ್ತಾಳೆ. ಮಕ್ಕಳಿಗೆ ಕೌಟುಂಬಿಕವಾದ ಕಷ್ಟ ನಷ್ಟದ ಬಗ್ಗೆ ತಿಳಿಸಿ ಅರಿವು ಮೂಡಿಸುವ, ಹೊಂದಾಣಿಕೆಯನ್ನು ರೂಢಿಸಿಕೊಳ್ಳುವಂತೆ ಅವರ ಮನಸ್ಥಿತಿಯನ್ನು ರೂಪಿಸುತ್ತಾಳೆ. ಇವೆಲ್ಲವೂ ಸಾಧ್ಯವಾಗುವ ಹೊತ್ತಿಗೇ ಬದುಕಿನಲ್ಲಿ ಯೂ ಟರ್ನ್ ಸಂಭವಿಸ ಬಹುದು. ಒಂದು ರಾತ್ರೆ ಕಳೆದು ಬೆಳಗಾಗುವುದರೊಳಗೆ ಗಂಡ ಹೆಂಡತಿಯರು ಮನಸು ಮುರಿದುಕೊಳ್ಳಬಹುದು. ಕುಟುಂಬ ಮುರಿದು ಹೋಗಬಹುದು. ಅದೇ ವೇಳೆ ಮುರಿದುಕೊಂಡ ಮನಸುಗಳು ಕೂಡಬಹುದು.

ಕೂಡಿ ಬದುಕಿನುದ್ದಕ್ಕೂ ಸಂಸಾರವನ್ನು ನಡೆಸಬಹುದು. ಹಾಗೆ ನಡೆದು ಹೋದ ನಿದರ್ಶನಗಳಿಗೇನೂ ಕಡಿಮೆಯಿಲ್ಲ. ಹಾಗಂತ ಕ್ಷುಲ್ಲಕ ವಿಚಾರಗಳಿಗೆ ದೂರಾಗುವ ಅಥವಾ ಮೂರನೆಯವನ/ಳ ಪ್ರವೇಶದಿಂದ ಕುಟುಂಬಗಳು ವಿಚ್ಛೇದವಾಗುವುದಿದೆ. ಅಂಥಾ ಯೂ ಟರ್ನ್‌ಗಳು ಬದುಕಿನಲ್ಲಿ ಯಾವ ಸಂದರ್ಭದಲ್ಲಿ ಸಂಭವಿಸಿ ಬಿಡುತ್ತದೆಂದು ಊಹಿಸಿ ಬಿಡುವುದು ಬಲುಕಷ್ಟ. ಮೊನ್ನೆ ಮೊನ್ನೆ ಅಂಥದ್ದೊಂದು ಘಟನೆ ನಡೆದು ಹೋದದ್ದು ಭಾರೀ ಸುದ್ದಿಯಾಗಿದ್ದು ಎಲ್ಲರಿಗೂ ಗೊತ್ತಿರುವಂಥದ್ದೇ!

ಮೊದಲ ಹೆಂಡತಿಗೆ ವಿಚ್ಛೇದನ ಕೊಟ್ಟು ಎರಡನೆಯ ಮದುವೆಯಾಗಿ ಹದಿನೈದು ವರ್ಷ ಸಂಸಾರ ನಡೆಸಿ ಗಂಡು ಮಗುವನ್ನೂ ಪಡೆದು ವಿಚ್ಛೇದನ ಕೊಟ್ಟ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಸ್ (?) ಎಂದೇ ಖ್ಯಾತನಾದ ಅಮೀರ್ ಖಾನ್ ಬದುಕಿನಲ್ಲಿ ಇಂಥದ್ದೊಂದು ಯೂ ಟರ್ನ್ ಸಂಭವಿಸಿದ್ದು ಸೋಜಿಗವಾದರೂ ಸತ್ಯ!
ಯೂಟರ್ನ್‌ಗಳು ಹೀಗೂ ಆಗುತ್ತವೆಯೇ ಎಂಬಷ್ಟು ವಿಚಿತ್ರವಾಗಿದೆ ಇದು! ಯಾಕೆಂದರೆ, ಒಂದು ಸಂದರ್ಭದಲ್ಲಿ ಅಸಹಿಷ್ಣುತೆಯ ಬಗ್ಗೆ ಮಾತಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡವನೀತ. ಆ ಅಸಹಿಷ್ಣುತೆ ಅಮೀರನಲ್ಲಿ ಇನ್ನೂ ಜೀವಂತವಾಗಿದೆಯೇ? ಎಟb hಟಡಿo.

ಯಾಕೆಂದರೆ, ಬದುಕಿನಲ್ಲಿ ಸಂಭವಿಸುವ ಯೂಟರ್ನ್ ಗಳು ದೈವನಿಯಾಮಕವಾದುದು. ಮನುಷ್ಯ ನಿರ್ಮಿತ ಯೂಟರ್ನ್‌ಗಳು ಹೇಗಿರುತ್ತವೆಂಬುದನ್ನು ನಿತ್ಯವೂ ನೋಡುತ್ತಿರುತ್ತೇವೆ. ಅಧಿಕಾರ, ಮಂತ್ರಿಗಿರಿ, ಪದವಿ, ಪ್ರಶಸ್ತಿಗಳು ಅಯೋಗ್ಯರಿಗೆ, ಅಪಾತ್ರರಿಗೆ ರಾಜಕೀಯ ಲೆಕ್ಕಾಚಾರದಲ್ಲಿ ಒಲಿದು ಬರುವುದನ್ನೇ ಬದುಕಿನ ಯೂಟರ್ನಗಳು ಅಂಥ ಭಾವಿಸಲಾದೀತೆ? ಚಮಚಾಗಿರಿ ಮಾಡಿ ಹುದ್ದೆ, ಭಡ್ತಿಯನ್ನು ಪಡೆಯುವುದು ಯೂಟರ್ನ್‌ಗಳಲ್ಲ. ಅಮೀರನಲ್ಲಿ ಹೇಗೋ ಏನೋ ಗೊತ್ತಿಲ್ಲ, ಕಿರಣ್ ರಾವ್‌ಗೆ ಇದು ನಿಜವಾದ ಯೂಟರ್ನ್? ಯಾಕೆಂದರೆ, ಅಕಾಲದಲ್ಲಿ ಹೆಂಡತಿ ನಿಧನಳಾಗಿ ಗಂಡನಾದವ ವಿಧುರನೆನಿಸಿ ಒಬ್ಬಂಟಿಯಾಗಿ ಬದುಕು
ವುದು ಬೇರೆ, ಹೆಂಡತಿಯನ್ನು ಬಿಟ್ಟು ಗಂಡ ಒಬ್ಬಂಟಿಯಾಗಿ ಬದುಕುವುದು ಬೇರೆ.

ಆದರೆ, ಗಂಡನನ್ನು ಕಳಕೊಂಡು ವಿಧವೆಯಾಗಿ ಬದುಕುವ ಹೆಣ್ಣಿನ ಮನಸ್ಸನ್ನು ಹೇಗೆ ಅರ್ಥೈ ಸೋದು? ಅದರಲ್ಲೂ ಗಂಡ ಇದ್ದೂ ಮಕ್ಕಳಿದ್ದೂ ಎಲ್ಲಾ ಇದ್ದೂ ಅವನಿಲ್ಲದೇ ಒಬ್ಬಂಟಿಯಾಗಿ ಬದುಕುವುದು…ಹೆಣ್ಣಿಗೆ ಹೇಗೆ ಸಾಧ್ಯವೋ?! ಗಂಡ ಗಂಡಸಾಗಿ ಬದುಕಬಹುದು. ಆದರೆ ಹೆಂಡತಿ ಹೆಣ್ಣಾಗಿ ಬದುಕುವುದು ಅಷ್ಟು ಸುಲಭವಲ್ಲ. ಬದುಕಿನಲ್ಲಿ ಸಂಭವಿಸುವ ಯೂಟರ್ನ್‌ಗಳು ಬದುಕಿನ ಏಳ್ಗೆಗೆ ಪೂರಕವೂ ಆಗಿಬಿಡುತ್ತದೆ, ಮಾರಕವೂ ಆಗಿಬಿಡುತ್ತದೆ. ನಿಜವಾದ ಯೂಟರ್ನ್‌ಗಳು ಏರುದಾರಿ ವಿಕಾಸ ಪಥಗಳೇ ಹೊರತು ಅಧೋಗತಿಯ ಪಥಗಳಲ್ಲ.