ನವದೆಹಲಿ : ಆಗಸ್ಟ್ 15ರ ಸ್ವಾತಂತ್ರ‍್ಯ ದಿನಾಚರಣೆಯನ್ನು ಗುರಿಯಾಗಿಸಿಕೊಂಡು ದೆಹಲಿಯಲ್ಲಿ ದಾಳಿ ನಡೆಸಲು ಭಯೋತ್ಪಾದಕರು ಸಂಚು ರೂಪಿಸಿರುವ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ದೆಹಲಿಯಾದ್ಯಾಂತ ಬಿಗಿ ಭದ್ರತೆ ಒದಗಿಸಲಾಗಿದೆ.
ಸ್ವಾತಂತ್ರ್ಯ ದಿನದಂದು ಭಯೋತ್ಪಾದಕ ಸಂಘಟನೆಗಳು ಪ್ರಮುಖ ಭಯೋತ್ಪಾದಕ ದಾಳಿಯನ್ನ ಯೋಜಿಸಿವೆ ಎಂಬ ಮಾಹಿತಿ ಸಂಸ್ಥೆಗೆ ಬಂದಿದೆ. ಭಯೋತ್ಪಾದಕರು ಸ್ವಾತಂತ್ರ್ಯ ದಿನದ ಮೊದಲು ದೆಹಲಿಯಲ್ಲಿ ಪ್ರಮುಖ ಡ್ರೋನ್ ದಾಳಿ ನಡೆಸಲು ಯೋಜಿಸುತ್ತಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಿಂದ 370ನೇ ವಿಧಿ ತೆಗೆದುಹಾಕುವ ನಿರ್ಧಾರವನ್ನ ಆಗಸ್ಟ್ 5ರಂದು ಘೋಷಿಸ ಲಾಯಿತು. ಆದ್ದರಿಂದ, ಭಯೋತ್ಪಾದಕರು ಅದೇ ದಿನ ದಾಳಿ ನಡೆಸಲು ಉದ್ದೇಶಿಸಿದ್ದಾರೆ. ದಾಳಿಯ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಮತ್ತು ಇತರ ಭದ್ರತಾ ಪಡೆಗಳಿಗೆ ವಿಶೇಷ ತರಬೇತಿ ನೀಡಲಾಗಿದೆ. ಇದರಲ್ಲಿ ಸಾಫ್ಟ್ ಕಿಲ್, ಹಾರ್ಡ್ ಕಿಲ್ ಮತ್ತು ಇತರ ತರಬೇತಿ ಸೇರಿವೆ.
ಡ್ರೋನ್ ದಾಳಿಗಳ ಸಂಭಾವ್ಯ ವರದಿಗಳ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆಯ ಪ್ರಧಾನ ಕಚೇರಿಯಲ್ಲಿ ವಿಶೇಷ ಡ್ರೋನ್ ನಿಯಂತ್ರಣ ಕೊಠಡಿಯನ್ನ ಸಹ ಸ್ಥಾಪಿಸಲಾಗಿದೆ. ಭದ್ರತಾ ಕಾರಣಗಳಿಗಾಗಿ ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ 4 ಡ್ರೋನ್ ವಿರೋಧಿ ವ್ಯವಸ್ಥೆಗಳನ್ನು ನಿಯೋಜಿಸಲಾಗಿದೆ.
ಕೆಲವು ದಿನಗಳ ಹಿಂದೆ, ಲಕ್ನೋದಿಂದ ಇಬ್ಬರು ಅಲ್ ಖೈದಾ ಭಯೋತ್ಪಾದಕರನ್ನ ಬಂಧಿಸಲಾಯಿತು. ಅಲ್ ಖೈದಾ ಪ್ರಮುಖ ಭಯೋತ್ಪಾದಕ ದಾಳಿಯನ್ನು ಯೋಜಿಸುತ್ತಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.