Friday, 20th September 2024

ಬಿಎಸ್’ವೈ ನಿರ್ಗಮನ; ವರಿಷ್ಠರ ಮೇಲೆ ರಾಜ್ಯದ ಭಾರ

ಅಶ್ವತ್ಥಕಟ್ಟೆ

ರಂಜಿತ್ ಎಚ್‌.ಅಶ್ವತ್ಥ

ranjith.hosakere@gmail.com

ರಾಜ್ಯ ರಾಜಕೀಯದಲ್ಲಿ ಕಳೆದ ಕೆಲ ವಾರಗಳಿಂದ ಚರ್ಚೆಯಾಗುತ್ತಿರುವ ಏಕೈಕ ವಿಷಯ ‘ಮುಖ್ಯಮಂತ್ರಿ ಬದಲಾವಣೆ’ ಎನ್ನುವುದಾಗಿದೆ. ಸಮ್ಮಿಶ್ರ ಸರಕಾರದ ಪತನದ ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಎರಡು ವರ್ಷ ಪೂರೈಸುತ್ತಿದ ದಿನವೇ ಯಡಿಯೂರಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎನ್ನುವ ಮಾತುಗಳು ಕೇಳಿಬಂದಿದೆ.

ಈ ವಿಷಯದಲ್ಲಿ ಕರ್ನಾಟಕದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ಎಲ್ಲ ಬೆಳವಣಿಗೆಗಳು ನಡೆಯು ತ್ತಿದ್ದರೂ, ‘ಮುಖ್ಯಮಂತ್ರಿ ರಾಜೀನಾಮೆ ನೀಡುತ್ತಾರಾ?’ ಎನ್ನುವ ಪ್ರಶ್ನೆಗೆ ಭಾನುವಾರ ಮಧ್ಯರಾತ್ರಿ ಯವರೆಗೆ ಸ್ಪಷ್ಟ ಉತ್ತರ ಸಿಕ್ಕಿರಲಿಲ್ಲ. ಆದರೆ ಸರಕಾರದ ಸಾಧನಾ ಸಮಾವೇಶದ ಮಾತುಗಳನ್ನು ಹೇಳುವಾಗ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳುವ ಮೂಲಕ ಎಲ್ಲ ಗೊಂದಲಗಳಿಗೆ ವಿದಾಯ ಹೇಳಿದ್ದಾರೆ. ಹಾಗೆ ನೋಡಿದರೆ ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ್ದು, ಅಷ್ಟು ಸುಲಭವಾಗಿರಲಿಲ್ಲ.

75 ವರ್ಷ ದಾಟಿದವರ‍್ಯಾರೂ ಅಧಿಕಾರದಲ್ಲಿರ ಇರಬಾರದು. ಮಾರ್ಗದರ್ಶಕ ಮಂಡಳಿಗೆ ಸರಿಯಬೇಕು ಎನ್ನುವುದು ಬಿಜೆಪಿಯ ಸಿದ್ಧಂತಾ ಒಂದು ಭಾಗ ವಾಗಿದ್ದರೆ, ಇನ್ನೊಂದೆಡೆ ರಾಜ್ಯದಲ್ಲಿ ಬಹುಮತವಿಲ್ಲದಿದ್ದರೂ, ‘ಆಪರೇಷನ್ ಕಮಲ’ದ ಸಾಹಸಕ್ಕೆ ಕೈಹಾಕಿ, ಈ ಇಳಿವಯಸ್ಸಿನಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಯಡಿಯೂರಪ್ಪ ಇನ್ನೊಂದೆಡೆ. ಈ ಜಿಜ್ಞಾಸೆಯಲ್ಲಿಯೇ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಯಡಿಯೂರಪ್ಪ ಅವರು ಸ್ವೀಕರಿಸಿದರು. ಆದರೆ ಕಳೆದ ನಾಲ್ಕೈದು ತಿಂಗಳಿನಿಂದ ಮುಖ್ಯಮಂತ್ರಿ ಬದಲಾವಾಣೆಯ ಮಾತು ಆಗಾಗ್ಗೆ ಕೇಳಿಬರುತ್ತಿತ್ತು.

ಆರಂಭದಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್ ಮಾತ್ರ ಈ ಬಗ್ಗೆ ಧ್ವನಿ ಎತ್ತಿದ್ದರೆ, ಬಳಿಕ ಅರವಿಂದ ಬೆಲ್ಲದ್, ಸಚಿವ ಸಿ.ಪಿ. ಯೋಗೇಶ್ವರ ಸೇರಿದಂತೆ ಹಲವು ಶಾಸಕರು ಈ ಕೂಗಿಗೆ ಧ್ವನಿಯಾದರು. ಇಷ್ಟೆಲ್ಲ ಆದರೂ, ಪಕ್ಷದ ವರಿಷ್ಠರು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮುಖೇನ ಕಳೆದ ತಿಂಗಳು ‘ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಿಲ್ಲ’ ಎನ್ನುವ ಸಂದೇಶವನ್ನು ರವಾನಿಸಿದ್ದರು. ಈ ಸಂದೇಶ ರವಾನೆಯಾದರೂ ಬದಲಾವಣೆ ಎನ್ನುವ ಗುಸು-ಗುಸುಗೆ ಮಾತ್ರ ನಿಂತಿರಲಿಲ್ಲ. ಇದಕ್ಕೆ ಪೂರಕ ಎನ್ನುವಂತೆ ಯಡಿಯೂರಪ್ಪ ದೆಹಲಿ ಭೇಟಿ, 25ಕ್ಕೆ ಹೈಕಮಾಂಡ್ ಸಂದೇಶ ಹೀಗೆ ಒಂದಕ್ಕೊಂದು ‘ಲಿಂಕ್’ ಆಗುತ್ತಾ ಹೋಯಿತು.

ಈ ಎಲ್ಲವನ್ನು ಒಂದಕ್ಕೊಂದು ಜೋಡಿಸಿದಾಗ ಯಡಿಯೂರಪ್ಪ ಅವರ ನಿರ್ಗಮನ ಖಚಿತವೆಂದೇ ಹೇಳಲಾಗಿತ್ತು. ಆದರೆ ಈ ಎಲ್ಲ ಮಾತುಗಳು ಬಂದು ಹೋಗು ವಾಗಲೆಲ್ಲ ಕೇಳಿಬರುತ್ತಿದ್ದ ಮತ್ತೊಂದು ಮಾತೆಂದರೆ, ‘ಮುಂದಿನ ಮುಖ್ಯಮಂತ್ರಿ ಯಾರು?’ ಎನ್ನುವುದಾಗಿತ್ತು. ಹಲವು ರಾಜ್ಯಗಳಲ್ಲಿ ‘ಅಚ್ಚರಿಯ ಆಯ್ಕೆ’ ಮಾಡಿ ರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಜೋಡಿಗೆ, ಈ ಸಮಸ್ಯೆ ಕರ್ನಾಟಕದಲ್ಲಿ ಮಾತ್ರ ಉದ್ಭವಿಸಿದ್ದೇಕೆ ಎನ್ನುವ ಪ್ರಶ್ನೆಗೆ ಉತ್ತರ, ‘ಕಳೆದ ನಾಲ್ಕು ದಶಕಗಳಿಂದ ಯಡಿಯೂರಪ್ಪ ಅವರು ರಾಜ್ಯ ಬಿಜೆಪಿಯಲ್ಲಿ ಸಾಧಿಸಿರುವ ಹಿಡಿತ’ ಎನ್ನುವುದಾಗಿದೆ.

ಸ್ಥಾನ ಹೋದ ಮೇಲೆ, ಅವರೊಂದಿಗೆ ಯಾರು ನಿಲ್ಲುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ‘ಲಿಂಗಾಯತ ಸಮುದಾಯದ ಮೇಲೆ ಯಡಿಯೂರಪ್ಪ ಪ್ರಭಾವ ಹೆಚ್ಚಿದೆ’. ಒಂದು ವೇಳೆ ಸಂಘರ್ಷ ಮಾಡಿಕೊಂಡು ಯಡಿಯೂರಪ್ಪ ಅವರನ್ನು ಕೆಳಗೆ ಇಳಿಸಿದರೆ, ಖಚಿತವಾಗಿ ಅದು ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಹೊಡೆತ ಬೀಳಲಿದೆ. ಆದ್ದರಿಂದ ಈ ಬಿಕ್ಕಟ್ಟನ್ನು ಸೂಕ್ಷ್ಮವಾಗಿ ಹ್ಯಾಂಡಲ್ ಮಾಡಬೇಕಿತ್ತು. ಇದರೊಂದಿಗೆ ಯಡಿಯೂರಪ್ಪ ಅವರು ಇತರ ನಾಯಕರಂತೆ, ಹೈಕಮಾಂಡ್‌ಗೆ ಮಾತಿಗೆ ಬಾಗುವ ವ್ಯಕ್ತಿಯಲ್ಲ.

ಒಂದು ವೇಳೆ ತಿರುಗಿಬಿದ್ದರೆ ಎನ್ನುವ ಆತಂಕವೂ ಹಲವು ನಾಯಕರಲ್ಲಿದೆ. ಇನ್ನು ಗುಜರಾತ್, ಉತ್ತರಪ್ರದೇಶ ಸೇರಿದಂತೆ ಕೆಲ ರಾಜ್ಯಗಳಲ್ಲಿ ಮೋದಿ, ಶಾ ಅವರು ಮುಖ್ಯಮಂತ್ರಿಗಳನ್ನು ಸಮಯಕ್ಕೆ ಅನುಗುಣವಾಗಿ, ತಮಗೆ ಬೇಕಾದ ರೀತಿ ಬದಲಾಯಿಸಿದ್ದ ಉದಾಹರಣೆಯಿದೆ. ಈ ರೀತಿ ಬದಲಾವಣೆ ಮಾಡಿದ ಬಹುತೇಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಆ ಇಬ್ಬರಿಂದ. ಆದರೆ ಕರ್ನಾಟಕದ ವಿಷಯಕ್ಕೆ ಬಂದಾಗ, ಬಿಜೆಪಿಯನ್ನು ಅಧಿಕಾರಕ್ಕೆ ತಂದಿರುವುದು
ಯಡಿಯೂರಪ್ಪ. ಆ ಕಾರಣಕ್ಕಾಗಿಯೇ, ಯಡಿಯೂರಪ್ಪ ವಿರೋಧ ಕಟ್ಟಿಕೊಂಡು ಈ ನಿರ್ಣಯ ತೆಗೆದುಕೊಳ್ಳಲು ವರಿಷ್ಠರು ಎರಡು ಭಾರಿ ಯೋಚಿಸಬೇಕಾಯಿತು. ಆದರೆ ಅಂತಿಮವಾಗಿ ಯಡಿಯೂರಪ್ಪ ಅವರನ್ನು ವಿಶ್ವಾಸಕ್ಕೆ ತಗೆದುಕೊಂಡೇ ಈ ಪ್ರಹಸನವನ್ನು ಇತ್ಯರ್ಥ ಪಡಿಸಿದ್ದಾರೆ.

ಇದರಿಂದ ಆಗಿರುವ ಪಾಸಿಟಿವ್ ಅಥವಾ ನೆಗೆಟಿವ್ ಎಫೆಕ್ಟ್ ತಿಳಿಯಲು ಇನ್ನಷ್ಟು ತಿಂಗಳು ಅಗತ್ಯ ಎನ್ನುವುದು ಬೇರೆ ಮಾತು. ಇನ್ನು ಮತಬ್ಯಾಂಕ್, ಬಂಡಾಯ, ಚುನಾವಣೆ ಎನ್ನುವ ಈ ಎಲ್ಲ ರಾಜಕೀಯ ಸೂಕ್ಷ್ಮಗಳು ಒಂದು ಭಾಗ. ಬಿಜೆಪಿ ವರಿಷ್ಠರ ಮಟ್ಟಿಗೆ ಈ ಎಲ್ಲವನ್ನು ಅರಗಿಸಿಕೊಳ್ಳುವ ಶಕ್ತಿ ಹಾಗೂ ಕಲೆ ಕರಗತ ವಾಗಿದೆ. ಆದರೆ ಯಡಿಯೂರಪ್ಪ ಬಳಿಕ ಮುಖ್ಯಮಂತ್ರಿ ಯಾರು ಎನ್ನುವ ಪ್ರಶ್ನೆ ಬಂದಾಗಲೆಲ್ಲ, ಸ್ಪಷ್ಟ ಉತ್ತರ ಸಿಕ್ಕಂತಿಲ್ಲ. (ಮೋದಿ ಹಾಗೂ ಅಮಿತ್ ಶಾ ‘ಅಚ್ಚರಿಯ ಆಯ್ಕೆ’ಯ ಲೆಕ್ಕಾಚಾರದಲ್ಲಿ ಇರಬಹುದು. ಆದರೆ ಇತರ ನಾಯಕರಿಗೆ ಈ ಬಗ್ಗೆ ಯಾವುದೇ ಸ್ಪಷ್ಟನೆಯಿಲ್ಲ.) ಇದರೊಂದಿಗೆ ಯಡಿಯೂರಪ್ಪ ಬದಲಾವಣೆಯ ಮಾತುಗಳು ಬರುತ್ತಿದ್ದಂತೆ ವೀರಶೈವ ಲಿಂಗಾಯತ ಸೇರಿದಂತೆ ಹಲವು ಸಮುದಾಯದ ಸ್ವಾಮೀಜಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದರು.

ಸಾಲು ಸಾಲಾಗಿ ಸಿಎಂ ಮನೆಗೆ ತೆರಳಿ ಬೆಂಬಲ ಸೂಚಿಸಿದರು. ಬಳಿಕ ಭಾನುವಾರಷ್ಟೇ ದುಂಡು ಮೇಜಿನ ಸಭೆ ನಡೆಸಿ, ‘ಮುಖ್ಯಮಂತ್ರಿಯನ್ನು ಬದಲಾಯಿಸ ಬೇಡಿ’ ಎಂದು ಒಕ್ಕೊರಲಿನ ಬೇಡಿಕೆಯನ್ನು ಇಟ್ಟರು. ಆದರೆ ಇದ್ಯಾವುದು ವರ್ಕ್ ಔಟ್ ಆಗುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದ್ದ ಸಂಗತಿ. ಪಕ್ಷವಾಗಿ ಬಿಜೆಪಿ ಬೆಳೆದಷ್ಟೇ ಯಡಿಯೂರಪ್ಪ ಅವರು ವೈಯಕ್ತಿಕವಾಗಿಯೂ ಕರ್ನಾಟಕದಲ್ಲಿ ಬೆಳೆದಿದ್ದರು. ಇತರರನ್ನು ಬೆಳೆಯಲು ಬಿಡಲಿಲ್ಲ ಎನ್ನುವ ವಾದವಿದೆ. ಅದು ಇನ್ನೊಂದು ವಿಷಯ. ಆದರೆ ಯಡಿಯೂರಪ್ಪ ವಿರೋಧ ಕಟ್ಟಿಕೊಂಡು ಕರ್ನಾಟಕದಲ್ಲಿ ಬಿಜೆಪಿ ಅನುಭವಿಸಿರುವ ಸಮಸ್ಯೆ 2013ರ ಚುನಾವಣಾ ಫಲಿತಾಂಶದಲ್ಲಿ ಕಾಣಿಸಿದೆ.

ಈ ಬಾರಿ ಪಕ್ಷ ಬಿಟ್ಟು ಇನ್ನೊಂದು ಪಕ್ಷ ಕಟ್ಟಿ ಬಿಜೆಪಿಗೆ ಮುಳುವಾಗುವಷ್ಟು ಶಕ್ತಿ ಹಾಗೂ ವಯಸ್ಸು ಯಡಿಯೂರಪ್ಪ ಅವರಿಗೆ ಇಲ್ಲ. ಆದರೆ ‘ರಾಜಕೀಯವಾಗಿ
ನೀಡಬಹುದಾದ ಒಳ ಹೊಡೆತ’ವನ್ನು ಅಂತೂ ನೀಡಬಹುದು ಎನ್ನುವುದು ಅಷ್ಟೇ ಸತ್ಯ. ಆದರೆ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಅವರ ವಿರುದ್ಧ ಕೆಲ ಬಿಜೆಪಿ ಶಾಸಕರಲ್ಲಿದ್ದ ಆಕ್ರೋಶ ಹಾಗೂ ಅಸಮಾಧಾನದಿಂದ ಈ ಪ್ರಹಸನ ಇನ್ನಷ್ಟು ತೀವ್ರತೆ ಪಡೆಯಿತು. ಆದ್ದರಿಂದ ಯಡಿಯೂರಪ್ಪ ಅವರು ವಿದಾಯ ಹೇಳುವಾಗ, ಪುತ್ರನ ವಿಚಾರದಲ್ಲಿ ಮಾಡಿದ್ದಾರೆ ಎನ್ನಲಾದ ಚೌಕಾಸಿಯೂ ಹೆಚ್ಚು ಫಲ ನೀಡಿದಂತೆ ಕಾಣುತ್ತಿಲ್ಲ. ಆದ್ದರಿಂದ ವರಿಷ್ಠರಿಂದ ಸಂದೇಶ ಪಡೆಯುವ ನಿರೀಕ್ಷೆಯಲ್ಲಿದ್ದ ಯಡಿಯೂರಪ್ಪ, ಸಂದೇಶಕ್ಕೆ ಮೊದಲೇ ಸ್ಥಾನದಿಂದ ಕೆಳಗೆ ಇಳಿದಿದ್ದಾರೆ ಎನ್ನಲಾಗಿದೆ.

ಇದರಿಂದ ಇನ್ನೊಂದು ವಾರದಲ್ಲಿ ಆಗಬಹುದಾದ ಎಲ್ಲ ರಾಜಕೀಯ ಬೆಳವಣಿಗೆಗಳು ಸೋಮವಾರ ಮಧ್ಯಾಹ್ನದಿಂದಲೇ ಶುರುವಾಗಿವೆ. ಈ ಎಲ್ಲವನ್ನು ವರಿಷ್ಠರು
ಯಾವ ರೀತಿ ನಿಭಾಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಈ ಎಲ್ಲ ಪರ-ವಿರೋಧ ಚರ್ಚೆಯ ನಡುವೆ ಒಂದು ಪ್ರಶ್ನೆಯಂತೂ ಬರುತ್ತದೆ. ‘ಮುಂದೇನು?’ ಎನ್ನುವ ಪ್ರಶ್ನೆ ಬಂದಾಗಲೆಲ್ಲ ಯಡಿಯೂರಪ್ಪ ಪರ ವಾದ ಮಾಡುವವರು ಮಾತ್ರವಲ್ಲ, ವಿರೋಧಿಸುವವರ ಬಳಿಯೂ ಇದಕ್ಕೆ ಉತ್ತರವಿಲ್ಲ. ರಾಜ್ಯದಲ್ಲಿ ಬಿಜೆಪಿ ಪರ ಘೋಷಣೆ ಕೂಗುವುದಕ್ಕೆ ಜನರಿಲ್ಲದೇ ಇರುವಾಗ, ಬಾವುಟ ಕಟ್ಟಲು ಜನರಿಲ್ಲದೇ ಇರುವಾಗ ಯಡಿಯೂರಪ್ಪ ಅವರು ಬಿಜೆಪಿಯನ್ನು ಕಟ್ಟಲು ನಿಂತಿದ್ದರು.

‘ಯಡಿಯೂರಪ್ಪ ಅವರ ದೇಹ, ಅನಂತಕುಮಾರ ಅವರ ಮಿದುಳು’ ಎನ್ನುವ ಕಾಂಬಿನೇಷನ್‌ನಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಪಕ್ಷ ಕಟ್ಟಲು ತಂತ್ರಗಾರಿಕೆ ಹೆಣೆಯ ಲಾಗಿತ್ತು. ಇದರೊಂದಿಗೆ ಯಡಿಯೂರಪ್ಪ ಅವರಿಗಿದ್ದ ‘ಮಾಸ್ ಲೀಡರ್’ ವರ್ಚಸ್ಸಿನಿಂದ ರಾಜ್ಯ ಬಿಜೆಪಿಯಲ್ಲಿ ‘ಮಾಸ್ ನಾಯಕ’ನಾಗಿ ಕಾಣಿಸಿಕೊಂಡರು. ಇವರೊಂದಿಗೆ ಪಕ್ಷ ಕಟ್ಟಲು ಶ್ರಮಿಸಿದ್ದ ಅನಂತಕುಮಾರ ಅವರು ಈಗಿಲ್ಲ. ಪಕ್ಷ ಕಟ್ಟುವ ವೇಳೆ ಜತೆಗಿದ್ದ ಈಶ್ವರಪ್ಪ ಅವರು ಈಗಲೂ ಬಿಜೆಪಿಯಲ್ಲಿದ್ದಾರೆ. ಆದರೆ ಅವರನ್ನು ಎಲ್ಲ ಭಾಗದ ಕಾರ್ಯಕರ್ತರು ಒಪ್ಪಿಕೊಂಡಿಲ್ಲ. ಇನ್ನುಳಿದಂತೆ ಡಿ.ಎಚ್.ಶಂಕರಮೂರ್ತಿ ಸೇರಿದಂತೆ ಹಲವು ನಾಯಕರಿದ್ದರೂ, ಅವರ‍್ಯಾರು ಆಕ್ಟೀವ್
ಪಾಲಿಟಿಕ್ಸ್‌ನಲ್ಲಿಲ್ಲ.

ಇನ್ನು ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶ ಏನೆಂದರೆ, ಈಗಿರುವ ಮೊದಲ ಹಂತದ ನಾಯಕರ ಬಳಿಕ ಯಾರು ಎನ್ನುವ ಪ್ರಶ್ನೆಗೆ ಉತ್ತರವಾಗಿ ಇರಬೇಕಿದ್ದ ಎರಡನೇ ಹಂತದ ನಾಯಕರನ್ನು ಬೆಳೆಸಲಿಲ್ಲ. ಕೆಲವರು ಎರಡನೇ ಹಂತ ನಾಯಕರಿದ್ದರೂ, ಅವರು ‘ಯಡಿಯೂರಪ್ಪ ಅವರಿಗೆ ಪರ್ಯಾಯ’ ಎನ್ನುವ ರೀತಿ ಯಲ್ಲಿ ಸದ್ಯಕ್ಕಂತೂ ಕಾಣಿಸುತ್ತಿಲ್ಲ. ಇದರೊಂದಿಗೆ ಯಡಿಯೂರಪ್ಪ ಅವರಿಗೆ ಇರುವ ‘ಲಿಂಗಾಯತ’ ಬ್ರ್ಯಾಂಡ್ ಹಾಗೂ ಇಡೀ ಸಮುದಾಯವನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುತ್ತಿದ್ದಾರೆ.

ವೀರೇಂದ್ರ ಪಾಟೀಲ್ ಅವರನ್ನು ಕಾಂಗ್ರೆಸ್ ಕೆಳಗೆ ಇಳಿಸಿದ ಬಳಿಕ, ಕಾಂಗ್ರೆಸ್ ಜತೆಯಲ್ಲಿದ್ದ ಲಿಂಗಾಯತ ಸಮುದಾಯದ ವೋಟ್‌ಗಳು, ಬಿಜೆಪಿಯತ್ತ ವಾಲಿದವು.
ಇದನ್ನು ಸಮರ್ಪಕವಾಗಿ ಬಳಸಿಕೊಂಡ ಯಡಿಯೂರಪ್ಪ ಅವರು, ಲಿಂಗಾಯತರನ್ನು ಬಿಜೆಪಿ ವೋಟ್‌ಬ್ಯಾಂಕ್ ಆಗಿ ಪರಿವರ್ತಿಸಿದರು. ಆದರೆ ಲಿಂಗಾಯತರು ಬಿಜೆಪಿ ವೋಟ್ ಬ್ಯಾಂಕ್ ಆಗದೇ, ಯಡಿಯೂರಪ್ಪ ಅವರ ವೋಟ್ ಬ್ಯಾಂಕ್ ಆಗಿ ಕೂತಿರುವುದು ವರಿಷ್ಠರಿಗೆ ಇರುವ ಬಹು ದೊಡ್ಡ ತಲೆಬಿಸಿ. ಈಗಲೂ ‘ಯಡಿಯೂ ರಪ್ಪ ರಾಜೀನಾಮೆ’ ಎನ್ನುತ್ತಿದ್ದಂತೆ ಲಿಂಗಾಯತ ಮಠಾಧೀಶರೆಲ್ಲ ಭಾರಿ ಪ್ರಮಾಣದಲ್ಲಿ ವಿರೋಧಿಸಿದರು.

ಕೇಂದ್ರ ಬಿಜೆಪಿಗೆ ಈ ವಿರೋಧವನ್ನು ಅರಗಿಸಿಕೊಳ್ಳುವ ತಾಕತ್ತಿದ್ದರೂ, ರಾಜ್ಯ ರಾಜಕೀಯದ ಲೆಕ್ಕಾಚಾರದಲ್ಲಿ ನೋಡುವುದಾದರೆ ‘ಲಿಂಗಾಯತರನ್ನು ಬಿಟ್ಟು ಗೆಲ್ಲುತ್ತೇವೆ’ ಎನ್ನುವ ವಿಶ್ವಾಸ ಬಿಜೆಪಿ ನಾಯಕರಿಗೆ ಇಲ್ಲ. ಇದು ಪಕ್ಷದ ವರಿಷ್ಠರಿಗೂ ತಿಳಿದಿದೆ. ಆದ್ದರಿಂದಲೇ ‘ರಾಜಾಹುಲಿಯ ಮಹಾನಿರ್ಗಮನ’ದ ಸುತ್ತ ಈ ಪ್ರಮಾಣದ ಗೊಂದಲ ಸೃಷ್ಟಿಯಾಗಿರುವುದು. ಈ ಎಲ್ಲ ಈ ಎಲ್ಲ ಗೊಂದಲ-ಗೋಜಲುಗಳಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ್ದಾರೆ.

75 ವರ್ಷ ದಾಟಿದ ಯಡಿಯೂರಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ತಮ್ಮ ಮೇಲಿನ ಭಾರವನ್ನು ಕೆಳಗೆ ಇಳಿಸಿದ್ದಾರೆ. ಇನ್ನೇನಿದ್ದರೂ ಯಡಿಯೂರಪ್ಪ ನಂತರ ಯಾರನ್ನು ಈ ಸ್ಥಾನದಲ್ಲಿ ಕೂರಿಸಬೇಕು ಎನ್ನುವ ಮಹತ್ವದ ಹಾಗೂ ಸೂಕ್ಷ್ಮ ನಿರ್ಣಯವನ್ನು ಪಕ್ಷದ ವರಿಷ್ಠರು ತಗೆದುಕೊಳ್ಳಬೇಕಿದೆ. ಏಕೆಂದರೆ ಮುಂದೆ ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆ, ಅದಾದ ನಂತರ ವಿಧಾನಸಭಾ ಚುನಾವಣೆ ಬಳಿಕ ಲೋಕಸಭಾ ಚುನಾವಣೆ ಎದುರಾಗಲಿದೆ.
ಯಡಿಯೂರಪ್ಪ ಪರ-ವಿರೋಧ ಏನೇ ಮಾತಾಡಲಿ, ಕರ್ನಾಟಕದ ಮಟ್ಟಿಗೆ ಯಡಿಯೂರಪ್ಪ ಒಬ್ಬ ‘ಮಾಸ್ ಲೀಡರ್’.

ಪುರಸಭೆಯಿಂದ ಶುರುವಾದ ಸಾರ್ವಜನಿಕ ಜೀವನದಲ್ಲಿ ಶಾಸಕರಾಗಿ, ರಾಜ್ಯಾಧ್ಯಕ್ಷರಾಗಿ, ಪ್ರತಿಪಕ್ಷದ ನಾಯಕನಾಗಿ, ಒಂದು ಪ್ರತ್ಯೇಕ ಪಕ್ಷ ಕಟ್ಟಿ, ಸಂಸದನಾಗಿ,
ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ರಾಜಕೀಯ ಜೀವನಕ್ಕೆ ವಿದಾಯ ಹೇಳಿದ್ದಾರೆ.