Friday, 27th December 2024

ಉತ್ತರ ಕನ್ನಡಕ್ಕೇಕೆ ಈ ಅನ್ಯಾಯ ? ಈ ಜಿಲ್ಲೆ ರಾಜ್ಯದಲ್ಲಿಲ್ಲವೇ ?

ಪ್ರಚಲಿತ

ವಿನುತಾ ಹೆಗಡೆ ಶಿರಸಿ

ನಮ್ಮ ತಲೆಮೇಲೆ ಚಪ್ಪಡಿ ಕಲ್ಲಿದೆ ಕೊರಳಿಗೆ ಲಿಂಗವಿಲ್ಲವಲ್ಲ….. ಮಳೆ ನಿಂತರೂ ನಿಂತಿಲ್ಲ ಕಣ್ಣೀರು…..ಮೊದಲಿಗೇ ಹೇಳಿ ಬಿಡುತ್ತೇನೆ.

ಉತ್ತರಕನ್ನಡ ಜನ ಎಂದೂ ಯಾವುದಕ್ಕೂ ರೊಚ್ಚಿಗೆದ್ದವರಲ್ಲ., ಜಾತಿ, ಜಾತಿ ಎಂದು ರಾಜಕೀಯ ಬೇಳೆ ಬೇಯಿಸಿದವರಲ್ಲ. ರಾಜ್ಯವಾಳುವ ನಾಯಕರು ಬರಲೇ ಬೇಕು ಜಿಲ್ಲೆಗೆ ಎಂದು ಪ್ರತಿಭಟಿಸಿದವರಲ್ಲ. ಈ ಎಲ್ಲ ಕಾರಣಕ್ಕೆ ಉತ್ತರಕನ್ನಡ ಜಿಲ್ಲೆಯನ್ನು ರಾಜ್ಯದ ನಾಯಕರು ತುಚ್ಛವಾಗಿ ಕಂಡಿದ್ದಾರೆ.

ಮಳೆಯಿಂದಾಗಿ ರಾಜ್ಯದಲ್ಲೇ ಅತೀಹೆಚ್ಚು ಹಾನಿಗೊಳಗಾಗಿದ್ದು ಉತ್ತರಕನ್ನಡ ಜಿಲ್ಲೆ. ಇದು ಯಾವ ನಾಯಕರಿಗೂ ಕಂಡಿಲ್ಲವೇ.. ಕಂಡಿದ್ದರೂ ಅಧಿಕಾರದ ದಾಹ ದಿಂದ ಬೆಳಗಾವಿ ಮಾತ್ರ ಕಂಡಿತೇ..? ಅಭಿವೃದ್ಧಿಯ ಹೆಸರಲ್ಲಿ ಜಿಲ್ಲೆಯ ಸಂಪತ್ತನ್ನು ಕಸಿದಿದ್ದು, ಇಂದು ಮಳೆಯಿಂದಾಗಿ ಬೀಕರ ಸ್ಥಿತಿ ಎದುರಾದರೂ ಯಾವೊಬ್ಬರ ರಾಜ್ಯ ನಾಯಕರೂ ಇತ್ತ ಸುಳಿದಿಲ್ಲ. ಓರ್ವ ಮಹಿಳೆಯನ್ನು ಅತ್ಯಾಚಾರ ಮಾಡಿ ಬಿಸಾಕಿ ಹೋಗಿದೆ ರಾಜ್ಯ ಆಡಳಿತ ನಡೆಸುವ ನಾಯಕರು ಎಂದರೆ ತಪ್ಪಲ್ಲ.

ಏಕೆಂದರೆ ಉಳಿಯಲು ಮನೆ ಇಲ್ಲ, ನೆಲೆ ಇಲ್ಲ, ಉಟ್ಟ ಬಟ್ಟೆ ಬಿಟ್ಟರೆ ತುತ್ತು ಅನ್ನಕ್ಕೆ ಪರಾಶ್ರಯ ನುಂಗಲಾರದ ನೋವು…ಇಷ್ಟೊಂದು ಸಾವು, ನೋವು, ಅನಾಹುತ, ವಿಪತ್ತು ನಡೆದಿದೆ. ರಾಜ್ಯವಾಳುವ ಕುರುಡು ನಾಯಕರರಿಗೆ ಜಾತಿ, ಓಟು ಇಷ್ಟಕ್ಕೇ ಸೀಮಿತ ವಾಯಿತೇ.. ಥೂ ಅಸಹ್ಯವಾಗುತ್ತಿದೆ ರಾಜ್ಯದ ಆಡಳಿತ ನಡೆಸುವ ನಾಯಕರ ಬಗ್ಗೆ… ರಾಜ್ಯವಾಳುವ ಕಾರ್ಯಕರ್ತರ ಪಕ್ಷ ಎಂದೇಳುವ ಲಿಂಗಾಯಿತ ಪಕ್ಷಕ್ಕೆ ಇಲ್ಲಿಯಾವ ಲಿಂಗಾಯತ ಶಾಸಕರೂ ಇಲ್ಲ ಬಿಡಿ… ಸುಂದರ ಬದುಕು ಕಟ್ಟಿಕೊಂಡು ನೆಮ್ಮದಿಯ ಜೀವನ ಸಾಗಿಸುವ ಪುಟ್ಟ ಪುಟ್ಟ ಹಳ್ಳಿಗಳಲ್ಲಿಂದು ಕಣ್ಣೀರ ಧಾರೆ.

ಅವಾಂತರ ಸೃಷ್ಟಿಸಿದ ಮಳೆ ನಿಂತರೂ ನಿಂತಿಲ್ಲ ಕಣ್ಣೀರ ಹನಿ… ಜಲಧಾರೆಗೆ ಮಣ್ಣಿನಲ್ಲಿ ಮುಸುಕು ಹೊದ್ದು ಮಲಗಿದ ಅಡಕೆ, ತೆಂಗು ತೋಟಗಳು. ಬದುಕು ಕಟ್ಟಿಕೊಟ್ಟ ಊರುಗಳಿಂದು ಬದುಕನ್ನೇ ಬಡಿದೆಬ್ಬಿಸಿ ಊರಾಚೆ ನೂಕಿವೆ. ಜೀವ ಭಯದಿಂದ ಮನುಷ್ಯರೇನೋ ಎದ್ದೋ ಬಿದ್ದೋ ಅಡವಿದಾರಿ ಹಿಡಿದು ಜೀವ ಅಂಗೈಲಿಟ್ಟು ಬಂದರೆ ಮೂಕ ಪ್ರಾಣಿಗಳ ರೋಧನ ಮಣ್ಣಲ್ಲಿ ಮಣ್ಣಾಯ್ತು. ಕಣ್ಣೆದುರೇ ಧರೆ ಕುಸಿದು ಜೀವ ಬಲಿಯಾಯ್ತು…

ಬದುಕಿನ ಬಣ್ಣಗಳೆಲ್ಲ ಮಣ್ಣಲ್ಲಿ ಮಣ್ಣಾದ ಉತ್ತರ ಕನ್ನಡ ಜಿಲ್ಲೆಯಲ್ಲೀಗ ನೀರವ ಮೌನ. ಸಂತಾಪಗಳ ವಿನಿಮಯ…. ಜಿಲ್ಲೆಯ ಜನರಿಂದಷ್ಟೇ.. ಅದೆಷ್ಟೋ ಪ್ರೀತಿಯಿಂದ ಸಾಕಿದ ಹಸು ಕರು, ಜೀವ ಕೊಟ್ಟ ತಾಯಿ, ಹೆತ್ತ ಮಗ ಇವೆಲ್ಲವೂ ಕಣ್ಣೆದುರೇ ಧರಾಶಾಯಿ, ಜಲ ಸಮಾಧಿಯಾಗುತ್ತಾರೆ……ಪ್ರಕೃತಿ ವಿಕೋಪದ ಕೆಂಗಣ್ಣಿಗೆ ಅದೆಷ್ಟು ಸಹಸ್ರ ಜೀವಿ, ಸಹಸ್ರ ಫಲ ಕೊಡುವ, ಪರಿಸರಗಳು ಉರುಳಿದವೋ ಲೆಕ್ಕವೇ ಇಲ್ಲ. ಬದುಕು ಇಷ್ಟೇ ನಶ್ವರ ಎಂದು ಕೊಳ್ಳುವ ಮನಸ್ಸಿಗೂ ಲೆಕ್ಕವೇ ಇಲ್ಲ…. ಪಶ್ಚಿಮ ಘಟ್ಟ ಪ್ರದೇಶಕ್ಕೊಳಪಡುವ ಉತ್ತರಕನ್ನಡ ಜಿಲ್ಲೆಯಲ್ಲಿ ಶೇ ೮೦ ಪರ್ಸೆಂಟ್ ಅರಣ್ಯ ಭಾಗವೇ ಇದೆ. ಅದರಲ್ಲೂ ಘಟ್ಟದ ಮೇಲ ಭಾಗವಾದ ಶಿರಸಿ, ಯಲ್ಲಾಪುರ, ಸಿದ್ದಾಪುರ, ಮುಂಡಗೋಡ, ಜೋಯಿಡಾ, ಹಳಿಯಾಳ ತಾಲೂಕುಗಳು ಅತೀ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿವೆ.

ಆದ್ದರಿಂದ ಮಳೆಗಾಲದಲ್ಲಿ ಸಾಮಾನ್ಯಾಗಿ ಮಳೆ ಜೋರಾಗಿಯೇ ಇರುತ್ತದೆ. ಅದರ ನಡುವೆ ಮಳೆ ಪ್ರಕೃತಿ ವಿಕೋಪ ನಡೆದರೆ ಗುಡ್ಡಗಾಡು ಜನರ ಸ್ಥಿತಿ ಏನೆಂದು ಇದೀಗ ಕಣ್ಣಾರೆ ಕಂಡಿದ್ದು, ಇದೆಂತ ಪ್ರಳಯ ಅನಿಸಿದ್ದು ಸುಳ್ಳಲ್ಲ. ಸಂಪರ್ಕ ಸಾಧನ ಇಲ್ಲದಿದ್ದರೂ, ಓರ್ವ ಉಸ್ತುವಾರಿಗಳು ಅದೆಷ್ಟೂ ಅಂತ ಓಡಾಡಿಯಾರು..
ಇಲ್ಲಿ ಪೂಜಾರಿ ಕೊಡುತ್ತಿದ್ದರೂ ದೇವರು (ರಾಜ್ಯನಾಯಕರು)ಕೊಡುತ್ತಿಲ್ಲ ರಾಜ್ಯದಲ್ಲಿ ಅತೀ ಹೆಚ್ಚು ಹಾನಿಗೊಳಗಾ  ನೆರೆಗೆ ನಲುಗಿದ ಜಿಲ್ಲೆ ಎಂದರೆ ಉತ್ತರಕನ್ನಡ ಜಿಲ್ಲೆ. ಅದರಲ್ಲೂ ಯಲ್ಲಾಪುರ ತಾಲೂಕು. ಯಲ್ಲಾಪುರ ತಾಲೂಕಿನ ಕಳಚೆ, ಭಾಗಿನಕಟ್ಟಾದಂತ ಐವತ್ತಕ್ಕೂ ಹೆಚ್ಚು ಗ್ರಾಮಗಳು ಹೇಳಲಾರದಂತ ಪರಿಸ್ಥಿತಿಗೆ
ಸಿಲುಕಿದ್ದಾರೆ. ಇನ್ನೂ ಮುಗಿದಿಲ್ಲ ಅಲ್ಲಿಯವರ ಗೋಳು.

ಇದುವರೆಗೂ ಸರಿಯಾದ ಸಂಪರ್ಕವಿಲ್ಲ. ದೂರವಾಣಿ, ವಿದ್ಯುತ್ ಇನ್ನೂ ಅದಾವಾಗ ಬರುವುದೋ ಗೊತ್ತಿಲ್ಲ. ಇನ್ನೊಂಡೆದೆ ಕಳಚೆಯ ಕುಂಬ್ರಿ ಎಂಬಲ್ಲಿ ದ್ವೀಪ ವಾಗಿದ್ದ ಮನೆಯ ವಯಸ್ಸಾದ ಅಜ್ಜಿಯೊಬ್ಬಳನ್ನು ಕಂಬಳಿಯಲ್ಲಿ ಕಟ್ಟಿ ಆರು ಕಿಲೋಮೀಟರ್ ದೂರ ಸಾಗಿ ಅವರನ್ನು ರಕ್ಷಣೆ ಮಾಡಲಾಗಿದೆ. ಈ ಕಾರ್ಯದಲ್ಲಿ ಮಾಜಿ ಯೋಧ ವಿ.ಎಂ ಭಟ್ ಅವರ ರಕ್ಷಣಾ ಕಾರ್ಯ ಶ್ಲಾಘನೀಯವಾಗಿತ್ತು. ಕಳಚೆಯ ಅನೇಕ ಜನರನ್ನು ಅರಣ್ಯ ರಕ್ಷಕರು ಐದು ಕಿಮಿ ದೂರ ಕಂಬಳಿಯಲ್ಲಿ
ಕಟ್ಟಿ ಸಾಗಿಸುತ್ತಿದ್ದಾರೆ. ಇದೇ ರೀತಿ ಬೆಳಗಾವಿ ಅಥವಾ ಬೇರೆಡೆಯಾಗಿದ್ದರೆ ಯಾವ ಯಾವ ತಂಡಗಳು ಕಾರ್ಯ ಪ್ರವೃತ್ತರಾಗುತ್ತಿದ್ದರೋ….ಇಲ್ಲಿಯ ಜನರಿಂದಲೇ ಹೀಗೆ ಇನ್ನೂ ಬೆಳಕಿಗೆ ಬಾರದೇ ಅನೇಕರ ಜೀವ ರಕ್ಷೆಯಾಗಿದೆ.

ಮಾನವೀಯ ಮೌಲ್ಯಗಳು ಇಂತ ಸ್ಥಿಯಲ್ಲಿ ಮೌಲ್ಯ ಹೆಚ್ಚಿಸಿಕೊಂಡಿವೆ. ಶಿರಸಿ ತಾಲೂಕಿನ ಬನವಾಸಿಯ ಹೆಬ್ಬಳ್ಳಿ, ಕಲಕರಡಿ, ಅಂಡಗಿ, ಹೆಬ್ಬತ್ತಿ, ರಂಗಾಪುರ, ಸಂತೊಳ್ಳಿ, ಹಾಡಲಗಿ, ಗುಡ್ನಾಪುರ, ಮಧುರವಳ್ಳಿ ಮತ್ತಿತರ ಕಡೆ ಶುಂಠಿ, ಬಾಳೆ, ಅನಾನಸ್, ಜೋಳ ಹಾಗೂ ಅಡಕೆ ತೋಟ ಜಲವೃತ್ತಗೊಂಡಿವೆ. ಯಲ್ಲಾಪುರ ತಾಲೂಕಿನ ಕಳಚೆ, ಬಾರೆ, ಭಾಗಿನಕಟ್ಟಾ, ಬೀಗಾರ್, ತಳಕೆಬೈಲ್ ಮುಂತಾದ ಕಡೆಗಳಲ್ಲಿ ನೂರಾರು ಎಕರೆ ಅಡಕೆ, ಬಾಳೆ ತೋಟಗಳು ಮಣ್ಣಲ್ಲಿ ಮಣ್ಣಾಗಿದ್ದು ನೋಡಿದರೆ ಅದನ್ನು ಅರಗಿಸಿಕೊಳ್ಳುವ ಶಕ್ತಿ ಯಾರಲ್ಲಿಯೂ ಇಲ್ಲ.

ತಾಲೂಕಿನ ಕಳಚೆ ಭಾಗದಲ್ಲಿ ಹೆಚ್ಚಿನ ಹಾನಿ ಉಂಟಾಗಿದ್ದು, ಗುಳ್ಳಾಪುರದ ಐತಿಹಾಸಿಕ ಸೇತುವೆಯೂ ನದಿಯಲ್ಲಿ ಕೊಚ್ಚಿ ಹೋಗಿದೆ. ಕಳಚೆ, ಬಾರೆ, ಮಲವಳ್ಳಿ ಇನ್ನೂ ಧರೆ, ಮಣ್ಣು ಕುಸಿತ ನಿಂತಿಲ್ಲ. ನೂರಾರು ಅಡಕೆ ತೋಟಗಳು ಮಣ್ಣು ಪಾಲಾಗಿವೆ. ಕಳಚೆಯಲ್ಲಿ ಮಣ್ಣು ಕುಸಿದು ದೇವಕಿ  ಗಾಂವ್ಕರ್ ಎಂಬುವರು ಮೃತಪಟ್ಟಿದ್ದು, ಅವರಿಗೆ ಕೇವಲ ಒಂದು ದಿನದಲ್ಲಿ 5 ಲಕ್ಷ ರೂ. ಪರಿಹಾರ ಒದಗಿಸಲಾಯಿತು ಆದರೆ ಮಾನವೀಯ ಮೌಲ್ಯ ಹೊತ್ತ ಸಚಿವ ಹೆಬ್ಬಾರ್ ಅವರು ಪ್ರಯಾಸದಿಂದ ಸಂತ್ರಸ್ಥರ ಮನೆ ಮನೆಗೆ ತೆರಳಿ ಸಾಂತ್ವನ ಹೇಳಿದರಲ್ಲದೇ ಪರಿಹಾರದ ಹಣವನ್ನೂ ಶೀಘ್ರವಾಗಿ ವಿತರಿಸಿದ್ದು ಓರ್ವ ಜವಾಬ್ದಾರಿಯುತ ಜನಪ್ರತಿ ಏನೇನು ಮಾಡಬಹುದು ಎಂಬುದಕ್ಕೆ ಉದಾರಣೆಯಾದರು.

ಜಿಲ್ಲೆಯಲ್ಲಿ ಈಗಾಗಲೇ 1000 ಕೋಟಿಗೂ ಹೆಚ್ಚು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಅರಣ್ಯ ಇಲಾಖೆ, ಕೆಇಬಿ, ಝಡ್ ಪಿ, ಪಿ ಡಬ್ಲುಡಿ ಎಲ್ಲಾ
ಇಲಾಖೆ ಗಳಿಗೆ ತುಂಬಾ ಹಾನಿಯಾಗಿದೆ . ಎಲ್ಲವನ್ನು ಸಹಜಸ್ಥಿತಿಯತ್ತ ತರಲು ಪ್ರಯತ್ನಿಸಲಾಗುತ್ತಿದೆ ಎನ್ನುವುದು ಶಾಸಕ ಹೆಬ್ಬಾರ್ ಮಾತು. ಅಂದಿಗೂ
ಇಂದಿಗೂ ಅವರೊಬ್ಬರೇ ಜನರ ಕಷ್ಟ ಸುಕದತ್ತ ತಿರುಗಿ ನೋಡುತ್ತಿದ್ದಾರೆ. ಕೆಲ ಅಧಿಕಾರಿಗಳು ಜತೆಗಿದ್ದಾರಷ್ಟೆ. ರಾಜ್ಯ ನಾಯಕರಿಗೆ ಬೆಳಗಾವಿಗೆ ಬರಲಾಗು ತ್ತದೆಯೇ ಹೊರತು ಉತ್ತರಕನ್ನಡ ಕಾಣುವುದೇ ಇಲ್ಲ. ಇಲ್ಲಿ ಬೆಂಬಲ ಸೂಚಿಸಲು ಯಾವ ಲಿಂಗಾಯಿತ ಶಾಸಕರೂ ಇಲ್ಲ, ಇದು ಉತ್ತರ ಕರ್ನಾಟಕವೂ ಅಲ್ಲ, ಕರಾವಳಿಯೂ ಅಲ್ಲ. ಯಾರಿಗೂ ಬೇಡದ ಅತ್ಯಾಚರಕ್ಕೊಳಗಾದ ಮಗು ಅಷ್ಟೆ. ಇಲ್ಲಿ ಇರುವ ಓರ್ವ ಕಾಂಗ್ರೇಸ್ ಶಾಸಕ ಎಂದು ವಿರೋಧ ಪಕ್ಷದ ನಾಯಕರು ಇತ್ತ ಸುಳಿಯಲಾರರು.

ಕಳೆಚೆಯ ಜನರಿಗೆ ಪುನರ್ ವಸತಿ ಕಲ್ಪಿಸುವ ಅಗತ್ಯತೆ ಇದೆ. ಹಾನಿಯ ತುರ್ತು ಪರಿಹಾರ ನೀಡಬೇಕಿದೆ. ಅತ್ಯಂತ ಹೆಚ್ಚು ಗುಡ್ಡ ಗಳಿಂದ ಕೂಡಿದ ಕಳಚೆ ಇನ್ನೂ ಸಹಜ ಸ್ಥಿತಿಯತ್ತ ಬರಲು ಅದೆಷ್ಟು ವರ್ಷ ಬೇಕೋ ಗೊತ್ತಿಲ್ಲ. ಮನೆ, ತೋಟಗಳಿಲ್ಲದ, ಜೀವಕ್ಕೆ ಭರವಸೆ ಇಲ್ಲದ ಆ ಊರಲ್ಲಿ ಇರಲು ಜನ ಒಪ್ಪುತ್ತಿಲ್ಲ. ಇವರಿಗೆ ಶಾಶ್ವತ ಪರಿಹಾರ, ಪರ್ಯಾಯ ವ್ಯವಸ್ಥೆ ಶೀಘ್ರವಾಗಿ ನೀಡಿ, ಜನರನ್ನು ಸ್ಥಳಾಂತರಿಸಬೇಕು ಎನ್ನುವುದು ವಿಶ್ವವಾಣಿಯ ಕಾಳಜಿಯಾಗಿದೆ. ಗುಡ್ಡ ಕುಸಿತ, ಮರ ಧರೆಗುರುಳಿದ್ದು, ಸೇತುವೆ ಕಳೆದುಕೊಂಡಿದ್ದು, ರಸ್ತೆ ಕುಸಿತದಿಂದ ಬಾರೆ, ಮಲವಳ್ಳಿ, ಕಳಚೆ, ಬೀಗಾರ, ಭಾಗಿನಕಟ್ಟಾ, ಗುಳ್ಳಾಪುರ, ಹೆಗ್ಗಾರ್, ಕಲ್ಲೇಶ್ವರ, ಕೆಳಾಸೆ ಮುಂತಾದ ಅನೇಕ ಗ್ರಾಮಗಳು ಈಗಾಗಲೇ ಸಂಪರ್ಕ ಕಡಿದುಕೊಂಡಿದ್ದು, ಸ್ವರ್ಣವಲ್ಲೀ ಮಠಗಳಿಂದ ವೈದ್ಯರ ತಂಡ, ಆಹಾರ ಕಿಟ್ ನೀಡುವ ತಂಡಗಳು ಪ್ರಯಾಸ ದಿಂದ ಭೇಟಿ ನೀಡಿವೆ. ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದ್ದು, ರಾಜ್ಯ ನಾಯಕರು ನಮ್ಮತ್ತ ತಿರುಗಿ ನೋಡಲಿಲ್ಲ ಎಂದು ಯಾವೊಬ್ಬರೂ ಬೊಬ್ಬೆ
ಹಾಕಲಿಲ್ಲ.

ಇಷ್ಟಾಗಿಯೂ ನಮ್ಮಲ್ಲಿಯವರು ಭ್ರಷ್ಟರಲ್ಲ ಅವರಿಗೇ ಮಣೆ ಹಾಕಿ ಮುಖ್ಯಮಂತ್ರಿ ಸ್ಥಾನ ನೀಡಿ ಎನ್ನಲಿಲ್ಲ. ನಮ್ಮ ಜಿಲ್ಲೆಯಲ್ಲಿ 5 ಜನ ಬಿಜೆಪಿ ಶಾಸಕರೇ ಇದ್ದಾರೆ ಅದು ಬಿಜೆಪಿ ಪಕ್ಷ ಎಂದು ಹೇಳಿ ಜಾತಿಗೆ ಮಣೆಹಾಕುವ ರಾಜ್ಯನಾಯಕರಿಗೆ ಅರ್ಥವಾಗಿರಲಿಕ್ಕಿಲ್ಲ ಬಿಡಿ. ನಮ್ಮ ಜಿಲ್ಲೆಯನ್ನು ಧಿಕ್ಕರಿಸಿ ಮನುಷ್ಯತ್ವ, ಮಾನವೀಯತೆ, ಕನಿಷ್ಟ ಸೌಜನ್ಯ ತೋರದ ಕೇವಲ ಜಾತಿಯಿಂದ ರಾಜ್ಯವಾಳುವ ರಾಜ್ಯ ನಾಯಕರಿಗೆ,  ಬಿಜೆಪಿಎಲ್‌ಗೆ ಧಿಕ್ಕಾರ ಕೂಗದೇ ಇನ್ನೇನು ಮಾಡಲಿ…