Saturday, 23rd November 2024

ಸೆಮಿ ಫೈನಲ್ ಗೆ ಭಾರತದ ವನಿತೆಯರ ಹಾಕಿ ತಂಡ

ಟೋಕಿಯೊ: ಒಲಿಂಪಿಕ್ಸ್ ನಲ್ಲಿ ಭಾರತದ ಹಾಕಿ ಗತ ವೈಭವ ಮರಳುತ್ತಿದೆ. ಭಾರತದ ವನಿತೆಯರ ತಂಡ ಕೂಡಾ ಸೆಮಿ ಫೈನಲ್ ಗೆ ಎಂಟ್ರಿ ನೀಡಿದೆ. ಈಗಾಗಲೇ ಪುರುಷರ ಹಾಕಿ ತಂಡ ಸೆಮಿ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದೆ.

ಸೋಮವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಭಾರತ ತಂಡ 1-0 ಗೋಲುಗಳ ಅಂತರದಿಂದ ಸೋಲಿಸಿತು.

ಭಾರತದ ಗುರ್ಜೀತ್ ಕೌರ್ ಗೋಲು ಗಳಿಸಿ ಭಾರತಕ್ಕೆ ಮುನ್ನಡೆ ಒದಗಿಸಿದರು. ನಂತರ ಸಮಬಲ ಸಾಧಿಸಲು ಆಸೀಸ್ ವನಿತೆಯರು ಹರಸಾಹಸ ಪಟ್ಟರೂ ಭಾರತದ ಬಲಿಷ್ಠ ಡಿಫೆನ್ಸ್ ದಾಟಿ ಗೋಲು ಗಳಿಸಲು ಸಾಧ್ಯವಾಗಿಲ್ಲ. ಗ್ರೂಪ್ ಹಂತದ ಆರಂಭದಲ್ಲಿ ಕಳಪೆ ಪ್ರದರ್ಶನ ತೋರಿದ್ದ ರಾಣಿ ರಾಂಪಾಲ್ ಬಳಗ ನಂತರ ತಿರುಗಿ ಬಿದ್ದಿತ್ತು. ಕೊನೆಯಲ್ಲಿ ಅದೃಷ್ಟದ ಬಲದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶ ಪಡೆದಿದ್ದ ತಂಡ ಸೆಮಿ ಫೈನಲ್ ನಲ್ಲಿ ಬಲಿಷ್ಠ ಆಸೀಸ್ ತಂಡವನ್ನು ಸೋಲಿಸಿದೆ.

ಎ ಗುಂಪಿನಲ್ಲಿ ಹ್ಯಾಟ್ರಿಕ್ ಸೋಲಿನ ನಡುವೆಯೂ ಕಡೇ ಎರಡು ಪಂದ್ಯಗಳಲ್ಲಿ ಉತ್ತಮ ನಿರ್ವಹಣೆ ತೋರಿದ ಭಾರತ ತಂಡ, 6 ಪಾಯಿಂಟ್ಸ್‌ಗಳೊಂದಿಗೆ 4ನೇ ಸ್ಥಾನಿಯಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು. ಕಡೇ ಎರಡು ಹಣಾಹಣಿಯಲ್ಲಿ ಐರ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ಎದುರು ಜಯ ದಾಖಲಿಸಿತ್ತು. ಮಹಿಳಾ ತಂಡ 1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಅರ್ಹತೆ ಗಿಟ್ಟಿಸಿಕೊಂಡಾಗ ಎಂಟರಘಟ್ಟಕ್ಕೇರಿದ ಸಾಧನೆ ಮಾಡಿತ್ತು.

ವಿಶ್ವ ನಂ.4 ಆಸ್ಟ್ರೇಲಿಯಾ ತಂಡವೇ ಫೆವರಿಟ್ ಎನಿಸಿದರೂ ವಿಶ್ವ ನಂ.10ನೇ ಸ್ಥಾನದಲ್ಲಿರುವ ಭಾರತ, ಅಚ್ಚರಿ ಫಲಿತಾಂಶ ನೀಡಿದೆ.