Friday, 20th September 2024

ಮಕ್ಕಳಿಗೆ ಲಸಿಕೆ ಸಿಗುವ ಕಾರ್ಯಕ್ಕೆ ವೇಗ ಸಿಗಲಿ

#Vaccine

ಕರ್ನಾಟಕದಲ್ಲಿ ಕರೋನಾ ಎರಡನೇ ಅಲೆ ತಣ್ಣಗಾದ ಬೆನ್ನಲ್ಲೇ ಮೂರನೇ ಅಲೆಯ ಆತಂಕ ಶುರುವಾಗಿದೆ. ಸೋಂಕು ಹೆಚ್ಚಾಗುತ್ತಿದ್ದಂತೆ ಮೊದಲು ಬ್ರೇಕ್ ಹಾಕುವುದು ಶೈಕ್ಷಣಿಕ ಕ್ಷೇತ್ರಕ್ಕೆ. ಮಕ್ಕಳಿಗೆ ಕಳೆದ ಎರಡು ವರ್ಷದಿಂದ ಆನ್‌ಲೈನ್ ತರತಿಯ ನೆಪದಲ್ಲಿ ಮೊಬೈಲ್, ಲ್ಯಾಪ್ ಟಾಪ್‌ಗಳೇ ಶಾಲೆಗಳಾಗಿ ಪರಿವರ್ತನೆ ಯಾಗಿದೆ. ಮೊದಲ ಎರಡು ಅಲೆಯ ಕಾರಣಕ್ಕೆ, ಭೌದ್ಧಿಕವಾಗಿ ಕಳೆದ ಎರಡು ವರ್ಷದಿಂದ ಪಾಠವನ್ನು ಕೇಳು ತ್ತಿಲ್ಲ.

ಕರೋನಾದಿಂದ ತಪ್ಪಿಸಿಕೊಳ್ಳಲು ಆಫ್ ಲೈನ್ ಬದಲು ಆನ್‌ಲೈನ್ ತರಗತಿಗಳು ನಡೆಯುತ್ತಿವೆ. ಆದರೆ ಇದರಿಂದ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಿಗುತ್ತಿಲ್ಲ. ಇನ್ನು ಸೋಂಕು ಹೆಚ್ಚಾಗುತ್ತಿದ್ದಂತೆ, ಶಾಲೆಗಳನ್ನು ತೆರೆಯುವ ಕಾರ್ಯಕ್ಕೆ ಮುಂದಕ್ಕೆ ಹಾಕುವುದು ಅನಿವಾರ್ಯ. ಇದಕ್ಕೆ ಕಾರಣ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಲಸಿಕೆ ನೀಡಲು ಅವಕಾಶವಿಲ್ಲ. ಲಸಿಕೆ ಪಡೆಯದೇ ಇರುವವರಿಗೆ ಸೋಂಕು ಹಬ್ಬುವ ಸಾಧ್ಯತೆ ಹೆಚ್ಚು ಎನ್ನುವ ಕಾರಣಕ್ಕೆ ಆಫ್ ಲೈನ್ ತರಗತಿಗಳನ್ನು ಮುಂದಕ್ಕೆ ಹಾಕಲಾಗುತ್ತಿದೆ. ಮಕ್ಕಳಿಗೆ ಲಸಿಕೆ ನೀಡುವ ಸಂಬಂಧ ಈಗಾಗಲೇ ವಿವಿಧ ದೇಶಗಳು ಹಾಗೂ ಏಮ್ಸ್ ಸಂಸ್ಥೆ ಟ್ರಯಲ್ಸ್ ನಡೆಸುತ್ತಿದೆ.

ಈ ಸಂಶೋಧನೆಗೆ ಇನ್ನಷ್ಟು ವೇಗ ಕೊಟ್ಟು, ಆದಷ್ಟು ಶೀಘ್ರ ಲಸಿಕೆಯನ್ನು ಮಕ್ಕಳಿಗೆ ನೀಡಿದಾಗ ಮಾತ್ರ ಈ ‘ಓಪನ್-ಕ್ಲೋಸ್’ ಸಮಸ್ಯೆಗೆ ಪರಿಹಾರ ಸಿಗಲಿದೆ. ಆದ್ದರಿಂದ ಸರಕಾರ ಮೂರನೇ ಅಲೆಯ ನಿಯಂತ್ರಣದ ಜತೆಜತೆಗೆ ಮಕ್ಕಳಿಗೆ ಲಸಿಕೆ ನೀಡುವ ಸಂಬಂಧದ ಕಾರ್ಯಕ್ಕೆ ವೇಗ ನೀಡಬೇಕಿದೆ. ಇದರೊಂದಿಗೆ ಮಕ್ಕಳಿಗೆ ಲಸಿಕೆ ಹಾಕುವ ಸಂಶೋಧನೆ ಪೂರ್ಣಗೊಳ್ಳುತ್ತಿದ್ದಂತೆ ಸಾಧ್ಯವಾದಷ್ಟು ವೇಗವಾಗಿ ಲಸಿಕೆ ನೀಡುವ ಕಾರ್ಯ ನಡೆಯಬೇಕು. ಏಕೆಂದರೆ, ಕರೋನಾ ಸದ್ಯಕ್ಕಂತೂ ಹೋಗುವುದಿಲ್ಲ.

ಲಸಿಕೆಯೂ ಇಲ್ಲದೇ, ಶಾಲೆಯನ್ನು ಆರಂಭಿಸಿದರೆ ಸೋಂಕು ಮಕ್ಕಳನ್ನು ವ್ಯಾಪಿಸುವ ಸಾಧ್ಯತೆ ದಟ್ಟವಾಗಿರುತ್ತದೆ. ಆದ್ದರಿಂದ ರಾಜ್ಯ ಹಾಗೂ ಕೇಂದ್ರ ಸರಕಾರ ಕೂಡಲೇ ಮಕ್ಕಳಿಗೆ ಲಸಿಕೆ ನೀಡುವ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡುವ ಕಾರ್ಯಕ್ಕೆ ಮುಂದಾಗಬೇಕು.