Friday, 20th September 2024

ಕೇರಳ ಮಾದರಿ ಎಂಬ ನೀರ ಗುಳ್ಳೆ ಒಡೆಯುತ್ತಿದೆ

ಪ್ರಚಲಿತ

ಗಣೇಶ್ ಭಟ್

ganeshabhatv@gmail.com

ಕೇರಳ ಎಂದರೆ ಅತಿ ಹೆಚ್ಚು ಸಾಕ್ಷರರು ಇರುವ ರಾಜ್ಯವಾಗಿದೆ. ಅಲ್ಲಿನ ಆರೋಗ್ಯ ರಕ್ಷಣಾ ವ್ಯವಸ್ಥೆ ಅತ್ಯುತ್ತಮವಾಗಿದೆ, ಅಲ್ಲಿನ ಜನರ ಜೀವಿತಾವಧಿ ಹೆಚ್ಚಾಗಿದೆ. ಅಲ್ಲಿ ಶಿಶು ಮರಣದ ಪ್ರಮಾಣ ಕಡಿಮೆ ಎನ್ನುವ ವಿಷಯಗಳು ಪ್ರಚಲಿತದಲ್ಲಿರುವ ಮಾತುಗಳು. ಹೀಗಾಗಿ ಕೇರಳ ಬಹಳಷ್ಟು ಮುಂದುವರಿದ ರಾಜ್ಯವಾಗಿದೆ ಎನ್ನುವ ಭಾವನೆ ದೇಶದ ಜನರಲ್ಲಿದೆ.

ಕೇರಳಿಗರು ಬಹಳ ಬುದ್ಧಿವಂತರು ಎನ್ನುವ ಚಿತ್ರಣವನ್ನು ಹರಿಯಬಿಡಲಾಗಿದೆ. ಕೇರಳವಿಂದು ಏನನ್ನು ಆಲೋಚಿಸುತ್ತಿದೆಯೋ ಅದನ್ನು ಭಾರತ ನಾಳೆ ಆಲೋಚಿಸುತ್ತದೆ ಅನ್ನುವ ಹೊಗಳಿಕೆ ಬೇರೆ. ಕೇರಳವನ್ನು ಹೊಗಳಲು ಮಾಧ್ಯಮಗಳಿಗೂ ಎಲ್ಲಿಲ್ಲದ ಹುಮ್ಮಸ್ಸು. ಕೇರಳದಲ್ಲಿ ಆಗುವ ಯಾವುದೋ ಒಂದು ಯಶಸ್ಸು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತದೆ. ಅದನ್ನು ಕೇರಳ ಮಾದರಿ ಎಂದು ಹಾಡಿ ಹೊಗಳಲಾಗುತ್ತದೆ. ಭಾರತದ ಇತರ ರಾಜ್ಯಗಳಂತೆ ಕೇರಳದಲ್ಲೂ ಬಹಳಷ್ಟು ನಕಾರಾತ್ಮಕ ಬೆಳವಣಿಗೆಗಳು ಆಗುತ್ತವೆ. ಆದರೆ ಕೇರಳದಲ್ಲಿ ನಡೆಯುತ್ತಿರುವ ಅನಪೇಕ್ಷಿತ ಘಟನೆಗಳು ಸುದ್ದಿಯಾಗುವುದೇ ಇಲ್ಲ.

ಅಂತವುಗಳನ್ನು ಉದ್ದೇಶಪೂರ್ವಕವಾಗಿ ಮುಚ್ಚಿಹಾಕಲಾಗುತ್ತದೆ. ಕೇರಳದ ರಾಜ್ಯ ಸರಕಾರಗಳ ಹಾಗೂ ಆಡಳಿತ ಮಾಡುವ ರಾಜಕೀಯ ಪಕ್ಷಗಳ ಹಿತಾಸಕ್ತಿಯನ್ನು ಕಾಪಾಡುವ ಮಾಧ್ಯಮ ವ್ಯವಸ್ಥೆಯನ್ನು ಅಲ್ಲಿ ಪೋಷಿಸ ಲಾಗುತ್ತಿದೆ. ಕರೋನಾ ಮೊದಲ ಅಲೆಯ ಸಂದರ್ಭದಲ್ಲಿ ಕೇರಳದ ಪಿಣರಾಯೀ ವಿಜಯನ್ ನೇತೃತ್ವದ ಕಮ್ಯುನಿ ಸರಕಾರವು ಕರೋನಾ ಪರಿಸ್ಥಿತಿಯನ್ನು ಬಹಳ ಚೆನ್ನಾಗಿ ನಿಭಾಯಿಸಿದೆ ಎಂದು ರಾಜ್‌ದೀಪ್ ಸರ್ದೇಸಾಯಿ, ಸಾಗರಿಕಾ ಘೋಷ್ , ಬರ್ಕಾ ದತ್, ರವೀಶ್ ಕುಮಾರ್ ಮೊದಲಾದವರು ಪ್ರಮಾಣಪತ್ರವನ್ನು ಕೊಟ್ಟಿದ್ದರು.

ಕೇರಳ ಮಾದರಿಯನ್ನು ದೇಶಾದ್ಯಂತ ಅನುಸರಿಸಬೇಕು ಎಂದು ಸಲಹೆಯನ್ನು ಆಗಾಗ ಕೊಡುತ್ತಿದ್ದರು. ಇತ್ತೀಚೆಗೆ ಕೇರಳದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲೂ ಕೇರಳ ಮಾದರಿ ಎನ್ನುವುದು ಆಡಳಿತ ಪಕ್ಷದ ಪ್ರಚಾರದ ವಿಷಯವಾಗಿತ್ತು. ಮೊದಲ ಕರೋನಾ ಅಲೆಯ ಆರಂಭದ ದಿವಸಗಳಲ್ಲಿ ನಿತ್ಯ ಸುದ್ದಿಗೋಷ್ಠಿ ನಡೆಸುತ್ತಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇತರ ರಾಜ್ಯಗಳ ಕರೋನಾ ನಿರ್ವಹಣೆಯ ಬಗ್ಗೆ ವ್ಯಂಗ್ಯ ಮಾಡುತ್ತಿದ್ದುದೂ ಉಂಟು. ಕಳೆದ ಅವಽಯಲ್ಲಿ ಪಿಣಾರಾಯಿ ಸರಕಾರದ ಆರೋಗ್ಯ ಮಂತ್ರಿಯಾಗಿದ್ದ ಕೆ.ಕೆ ಶೈಲಜಾ ಅವರಿಗಂತೂ ರಾಷ್ಟ್ರೀಯ ಮಾಧ್ಯಮಗಳು ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಾಧ್ಯಮಗಳೂ ಹೊಗಳಿಕೆಯ ಹೊಳೆಯನ್ನೇ ಹರಿಸಿದ್ದವು.

ಇಂಗ್ಲೆಂಡ್‌ನ ‘ದ ಗಾರ್ಡಿಯನ್’ ಪತ್ರಿಕೆ ಶೈಲಜಾ ಅವರನ್ನು ಕರೋನಾ ವೈರಸ್ ಸ್ಲೇಯರ್(ಕೊರೋನಾ ವೈರಸ್ ಸಂಹಾರಕಿ) ಹಾಗೂ ಆಕೆ ರಾಕ್ ಸ್ಟಾರ್ ಆರೋಗ್ಯ ಮಂತ್ರಿ ಎಂದು ಬಣ್ಣಿಸಿತ್ತು. ಬಿಬಿಸಿಯು ಆವರನ್ನು ಏಷ್ಯಾದ ಮಹಿಳಾ ಕರೋನಾ ಹೋರಾಟಗಾರ್ತಿಯರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಪ್ರಕಟಿಸಿತ್ತು. ವೋಗ್ ಮ್ಯಾಗಜಿನ್ ಆಕೆಗೆ ವೋಗ್ ವಾರಿಯರ್ ಅನ್ನುವ ಬಿರುದನ್ನು ಕೊಟ್ಟಿತ್ತು. ಪ್ರಾಸ್ಪೆಕ್ಟ್ ಅನ್ನುವ ಬ್ರಿಟಿಷ್ ಮ್ಯಾಗಜಿನ್ ಆಕೆಯನ್ನು 2020ರ ಟಾಪ್
ಥಿಂಕರ್ ಎಂದು ಕರೆದಿತ್ತು. ಇಂಗ್ಲೆಂಡ್‌ನ ಫೈನಾನ್ಷಿಯಲ್ ಟೈಮ್ಸ ಶೈಲಜಾಗೆ ಜಗತ್ತಿನ ಅತಿ ಪ್ರಭಾವಿ ಮಹಿಳೆ ಅಂಬ ಅಭಿದಾನವನ್ನು ನೀಡಿತ್ತು.

ಇತ್ತೀಚೆಗೆ ಸೆಂಟ್ರಲ್ ಯುನಿವರ್ಸಿಟಿ ಯುರೋಪ್ ಸಂಸ್ಥೆಯು ಆಕೆಗೆ ಓಪನ್ ಸೊಸೈಟಿ ಅವಾರ್ಡ್ ಅನ್ನು ಕೊಟ್ಟಿತ್ತು. ಆದರೆ ಈ ಪ್ರಶಸ್ತಿಯನ್ನು ಕೊಡಮಾಡಿದ ಓಪನ್ ಸೊಸೈಟಿ ಸಂಸ್ಥೆಯ ಮುಖ್ಯಸ್ಥ ಜಾಗತಿಕ ಮಟ್ಟದಲ್ಲಿಭಾರತದ ವಿರುದ್ಧವಾಗಿ ಕೆಲಸ ಮಾಡುತ್ತಿರುವ ಜಾರ್ಜ್ ಸೋರೋಸ್! ಆದರೆ ಯಾವ ರಾಜ್ಯವನ್ನು ಕರೋನಾ ನಿರ್ವಹಣೆಯಲ್ಲಿ ಮಾದರಿ ರಾಜ್ಯ ಎಂದು ಬಣ್ಣಿಸಲಾಗಿತ್ತೋ ಆ ರಾಜ್ಯದಲ್ಲಿ ಕರೋನಾದ ಮೊದಲ ಅಲೆಯೇ ಮುಗಿಯದೆ, ಮೊದಲ ಅಲೆಯೇ
ಎರಡನೇ ಅಲೆಯಾಗಿ ಬದಲಾಗಿ ಈಗ ದೇಶಾದ್ಯಂತ ಕರೋನಾದ ಮೂರನೇ ಅಲೆಯನ್ನು ತಂದೊಡ್ಡುವ ಭಯವನ್ನು ಉಂಟುಮಾಡಿದೆ.

ಇಂದು ದೇಶಾದ್ಯಂತ ಅತಿ ಹೆಚ್ಚು ಹೊಸ ಕರೋನಾ ಕೇಸುಗಳು ದಾಖಲಾಗುತ್ತಿರುವುದು ಕೇರಳದಲ್ಲಿ. ಈಗ ದೇಶಾದ್ಯಂತ 40 ಸಾವಿರದ ಆಸುಪಾಸಿನಲ್ಲಿ ಹೊಸ ಕರೋನಾ ಕೇಸುಗಳು ದಾಖಲಾಗುತ್ತಿದ್ದರೆ ಅದರ ಅರ್ಧದಷ್ಟು ಅಂದರೆ ಸುಮಾರು 20ಸಾವಿರದದಷ್ಟು ಹೊಸ ಕೇಸುಗಳು ಕೇರಳದಲ್ಲಿ ದಾಖಲಾಗುತ್ತಿವೆ. ಕರೋನಾದ ಎರಡನೇ ಅಲೆಯನ್ನು ಉತ್ತರ ಪ್ರದೇಶ, ಗುಜರಾತ್ ಮಧ್ಯಪ್ರದೇಶ, ಬಿಹಾರ್ ಗಳಂತಹ ಉತ್ತರದ ರಾಜ್ಯಗಳಲ್ಲಿ ಸಮರ್ಥವಾಗಿ ನಿಯಂತ್ರಿಸ ಲಾಯಿತು. ಮೇ ತಿಂಗಳಲ್ಲಿ ದಿನವೊಂದಕ್ಕೆ 60 ಸಾವಿರ ಹೊಸ ಕರೋನ ಕೇಸ್‌ಗಳು ದಾಖಲಿಸಲ್ಪಟ್ಟಿದ್ದ ಕರ್ನಾಟಕ ರಾಜ್ಯವೂ ಕರೋನಾವನ್ನು ನಿಯಂತ್ರಿಸಿದೆ.

ಆದರೆ ಕೇರಳಕ್ಕೆ ಕರೋನಾದ ಎರಡನೇ ಅಲೆಯನ್ನು ನಿಯಂತ್ರಿಸುವುದು ಬಿಡಿ ಮೊದಲ ಅಲೆಯನ್ನೇ ನಿಯಂತ್ರಿಸಲು ಆಗಿಲ್ಲ. 2020 ರ ಅಕ್ಟೋಬರ್ ತಿಂಗಳಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲಿ ಹೊಸ ಕರೋನಾ ದಾಖಲಾಗುತ್ತಿದ್ದ ಸಂಖ್ಯೆಯು ಕಡಿಮೆಯಾಗುತ್ತಿದ್ದರೂ ಕೇರಳದಲ್ಲಿ ಅದು ಕಡಿಮೆಯಾಗಿರಲಿಲ್ಲ. 2020ರ ಅಕ್ಟೋಬರ್ 25ರಂದು ಕೇರಳದಲ್ಲಿ 8252 ಹೊಸ ಕರೋನಾ ಕೇಸುಗಳು ದಾಖಲಾಗಿ ಕೇರಳವು ದೇಶದ ಮೊದಲ ಸ್ಥಾನದಲ್ಲಿತ್ತು. ಅದೇ ದಿನ 6417 ಹೊಸ ಕೇಸುಗಳನ್ನು ಕಂಡ ಮಹಾರಾಷ್ಟ್ರ ಎರಡನೆಯ ಸ್ಥಾನದಲ್ಲಿತ್ತು.

2021ರ ಜನವರಿ ತಿಂಗಳಲ್ಲಿ ಕೂಡಾ ಹೊಸ ಕೇಸುಗಳ ವಿಷಯದಲ್ಲಿ ಕೇರಳವು ಮೊದಲ ಸ್ಥಾನದಲ್ಲಿಯೇ ಮುಂದುವರಿಯಿತು. 2021ರ ಜನವರಿ 7 ರಂದು
ದೇಶದ ಅತಿ ಹೆಚ್ಚು ಹೊಸ ಕರೋನಾ ಕೇಸುಗಳು (6394) ಕೇರಳದಲ್ಲಿ ದಾಖಲಾಗಿದ್ದವು. ಆ ದಿನ ಮಹಾರಾಷ್ಟ್ರದಲ್ಲಿ ದಾಖಲಾದ ಹೊಸ ಕೇಸುಗಳ ಸಂಖ್ಯೆ
4382. ಫೆಬ್ರವರಿ 23ರಂದು ಮಹಾರಾಷ್ಟ್ರದ ನಂತರ ಅತಿ ಹೆಚ್ಚು 2212 ಹೊಸ ಕೇಸುಗಳು ದಾಖಲಾದುದು ಕೇರಳದಲ್ಲಿ. ಅದೇ ದಿನ ಕರ್ನಾಟಕದಲ್ಲಿ ದಾಖಲಾಗಿದ್ದ ಹೊಸ ಕೇಸುಗಳು ಕೇವಲ 317. ಈ ಎಲ್ಲ ಅಂಕಿ ಅಂಶಗಳು ಕರೋನಾ ಮೊದಲ ಅಲೆಯನ್ನೇ ಕೇರಳ ನಿಯಂತ್ರಿಸಿಲ್ಲ ಎಂಬುದನ್ನು ಸೂಚಿಸುತ್ತವೆ. ಮೊದಲ ಅಲೆಯನ್ನೇ ನಿಯಂತ್ರಿಸಲಾಗದೆ ಅದು ಎರಡನೇ ಅಲೆಯಾಯಿತು.

ಎರಡನೇ ಅಲೆಯು ದೇಶಾದ್ಯಂತ ನಿಯಂತ್ರಣಕ್ಕೆ ಬಂದಿದ್ದರೂ ಕೇರಳದಲ್ಲಿ ಮಾತ್ರ ನಿಯಂತ್ರಣಕ್ಕೆ ಬಾರದೆ ಮೂರನೇ ಅಲೆಗೆ ಮುನ್ನುಡಿ ಇಡುತ್ತಿದೆ.
ರಾಜ್ಯದಲ್ಲಿ ಕರೋನಾ ಸಂಖ್ಯೆ ಏರುತ್ತಿದ್ದರೂ ಇತ್ತೀಚೆಗೆ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಕೇರಳ ಸರಕಾರವು ಕರೋನಾ ನಿಯಂತ್ರಣ ಕಟ್ಟುನಿಟ್ಟನ್ನು ಮೂರು ದಿವಸಗಳ ಕಾಲ ಸಡಿಲಿಸಿ ಟೀಕೆಗೆ ಒಳಾಗಾಯಿತು. ಸುಪ್ರೀಂ ಕೋರ್ಟ್ ಕೂಡಾ ಕೇರಳದ ನಡೆಗೆ ಅಸಮಧಾನವನ್ನು ವ್ಯಕ್ತಪಡಿಸಿದೆ. ನಿರೀಕ್ಷಿಸಿದಂತೆ ಬಕ್ರೀದ್ ರಿಯಾಯಿತಿಯ ಪರಿಣಾಮವಾಗಿ ಕೇರಳದಲ್ಲಿ ಕರೋನಾ ಹೊಸ ಕೇಸುಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ.

10 ರಿಂದ 12 ಸಾವಿರದ ಒಳಗೆ ಇದ್ದ ದಿನವೊಂದರ ಹೊಸ ಕರೋನಾ ಪ್ರಕರಣಗಳ ಸಂಖ್ಯೆ ಬಕ್ರೀದ್ ಹಬ್ಬ ಮುಗಿದು ವಾರವಾಗುವುದೊರೊಳಗೆ 20
ಸಾವಿರವನ್ನು ದಾಟಿತು. ಇದೀಗ ಕೇರಳದಲ್ಲಿ 1,67,000ದಷ್ಟು ಸಕ್ರಿಯ ಪ್ರಕರಣಗಳಿವೆ. ದೇಶದ ಅತಿ ಹೆಚ್ಚು ಜನಸಂಖ್ಯೆಯಿರುವ ರಾಜ್ಯವಾದ ಉತ್ತರ
ಪ್ರದೇಶ ದಲ್ಲಿಂದು ದಿನವೊಂದಕ್ಕೆ ದಾಖಲಾಗುತ್ತಿರುವ ಹೊಸ ಕರೋನಾ ಪ್ರಕರಣಗಳ ಸಂಖ್ಯೆ 50 ಕ್ಕಿಂತಲೂ ಕಡಿಮೆ ಇದೆ. ಅಲ್ಲಿರುವ ಸಕ್ರಿಯ ಕೇಸುಗಳ ಸಂಖ್ಯೆ ಕೇವಲ 600ರ ಆಸುಪಾಸಿನಲ್ಲಿ ಇದೆ. ಉತ್ತರ ಪ್ರದೇಶದ 50 ಕ್ಕೂ ಹೆಚ್ಚಿನ ಜಿಗಳಲ್ಲಿ ಹೊಸ ಕರೋನಾ ಪ್ರಕರಣಗಳು ದಾಖಲಾಗುತ್ತಿಲ್ಲ.

ಅಲ್ಲಿ 10 ಕ್ಕೂ ಹೆಚ್ಚಿನ ಜಿಲ್ಲೆಗಳಲ್ಲಿ ಯಾವುದೇ ಸಕ್ರಿಯ ಕರೋನಾ ಪ್ರಕರಣಗಳು ಇಲ್ಲ. ಇಷ್ಟಾದರೂ ಉತ್ತರಪ್ರದೇಶದಲ್ಲಿ ದಿನವೊಂದಕ್ಕೆ 2.5 ಲಕ್ಷಕ್ಕಿಂತಲೂ ಹೆಚ್ಚಿನ ಮಂದಿಗೆ ಕರೋನಾ ಟೆಸ್ಟ್ ಮಾಡಿಸಲಾಗುತ್ತಿದೆ. ಕರೋನಾ ನಿಗ್ರಹ ವಿಷಯದಲ್ಲಿ ಮಾದರಿ ರಾಜ್ಯ ಎಂದು ಹೊಗಳಿಕೆಗೆ ಭಾಜನವಾಗಿರುವ ಕೇರಳ ರಾಜ್ಯದ ಕರೋನಾ ಅಂಕೆ ಸಂಖ್ಯೆಗಳನ್ನು ಉತ್ತರಪ್ರದೇಶದ ಜತೆಗೆ ಹೋಲಿಕೆ ಮಾಡಿದಾಗ ಕೇರಳದ ಪರಿಸ್ಥಿತಿ ಹೇಗಿದೆ ಎಂಬುದನ್ನು ಅರ್ಥಮಾಡಿ ಕೊಳ್ಳಬಹುದು. ಕೇರಳ ಸರಕಾರವು ರಾಜ್ಯದಲ್ಲಿ ಕರೋನಾ ಸಾವಿನ ಪ್ರಮಾಣ ಕಡಿಮೆ ಎಂದು ಹೇಳಿಕೊಳ್ಳುತ್ತಿದೆ. ಆದರೆ ಕರೋನಾ ಸಾವಿನ ಸಂಖ್ಯೆಯನ್ನು ಕೇರಳ ಸರಕಾರವು ಮುಚ್ಚಿಡುತ್ತಿದೆ ಎಂಬುದು ಪತ್ರಿಕಾ ವರದಿಗಳ ಮೂಲಕ ಬಹಿರಂಗವಾಗಿದೆ.

ಕೇರಳ ರಾಜ್ಯದಲ್ಲಿ 13000ಗಳಷ್ಟು ಸಂಖ್ಯೆಯ ಕರೋನಾ ಸಾವುಗಳನ್ನು ಅಧಿಕೃತವಾಗಿ ಕರೋನಾ ಸಾವಿನ ಪಟ್ಟಿಗೆ ಸೇರಿಸಲಾಗಿಲ್ಲ. ದ ವೀಕ್ ವಾರ
ಪತ್ರಿಕೆಯು ಈ ವರ್ಷದ ಜುಲೈ 4 ರಂದು ಪ್ರಕಟಿಸಿರುವ ಮಾಹಿತಿಯಂತೆ ಕೇರಳದ ಪಾಲ್ಘಾಟ್ ಜಿಲ್ಲೆಯ ಸ್ಥಳೀಯ ಪಂಚಾಯತ್ ಹಾಗೂ ನಗರಪಾಲಿಕೆಗಳಲ್ಲಿ ದಾಖಲಾದ ಕರೋನಾ ಸಾವುಗಳ ಸಂಖ್ಯೆ 2571. ಅಲ್ಲಿ ಕೊಡಲಾದ ಮರಣ ಪ್ರಮಾಣ ಪತ್ರದಲ್ಲೂ ಸಾವಿನ ಕಾರಣ ಕರೋನಾ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ. ಆದರೆ ಕೇರಳ ಸರಕಾರವು ಅಧಿಕೃತವಾಗಿ ಪ್ರಕಟಿಸಿರುವ ಪಾಲ್ಘಾಟ್ ಜಿಲ್ಲೆಯ ಕರೋನಾ ಸಾವಿನ ಸಂಖ್ಯೆ ಕೇವಲ 1173. ತ್ರಿಶೂರ್ ಜಿಯ ಅರೋಗ್ಯ ಇಲಾಖೆಯು ನೀಡಿದ ಕರೋನಾ ಸಾವುಗಳ ಸಂಖ್ಯೆ 2571 ಆಗಿದ್ದರೆ ಆ ಜಿಲ್ಲೆಯ ಕರೋನಾ ಸಾವಿನ ಪಟ್ಟಿಯಲ್ಲಿ ಸರಕಾರವು ಪ್ರಕಟಿಸಿರುವ
ಸಂಖ್ಯೆ 1390.

ಪಟ್ಟನಂತಿಟ್ಟ ಜಿಲ್ಲೆಯಲ್ಲಿ ನಿಜವಾಗಿ ಸಂಭವಿಸಿದ ಕರೋನಾ ಸಾವು 933 ಆಗಿದ್ದರೆ ಸರಕಾರವು ತೋರಿಸಿದ್ದು 431 ಮಾತ್ರ. ಮಲಪ್ಪುರಂ ಜಿಲ್ಲೆಯಲ್ಲಿ
ನಿಜವಾದ ಕರೋನಾ ಸಾವಿನ ಸಂಖ್ಯೆ 2758 ಆಗಿದ್ದು ಸರಕಾರವು ಪ್ರಕಟಿಸಿರುವ ಕರೋನಾ ಸಾವಿನ ಪಟ್ಟಿಯಲ್ಲಿ ಮಲಪ್ಪುರಂ ನಲ್ಲಿ ಕೇವಲ 1197 ಕರೋನಾ ಸಾವುಗಳು ಸಂಭವಿಸಿವೆ ಎಂದು ತೋರಿಸಲಾಗುತ್ತಿದೆ. ಕಾಸರಗೋಡಿನಲ್ಲೂ 741 ಮಂದಿ ಕರೋನಾದಿಂದಾಗಿ ಸಾವಿಗೀಡಾಗಿದ್ದಾರೆ. ಆದರೆ ಕಾಸರಗೋಡಿನಲ್ಲಿ ಅಧಿಕೃತವಾಗಿ ತೋರಿಸಲಾದ ಕರೋನಾ ಸಾವಿನ ಸಂಖ್ಯೆ ಕೇವಲ 235. ದಿ ಹಿಂದೂ, ಮನೋರಮಾ, ಲೈವ್ ಮಿಂಟ್, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಮೊದಲಾದ ಪತ್ರಿಕೆಗಳಲ್ಲೂ ಕೇರಳ ಸರಕಾರವು 13ಸಾವಿರ ಕರೋನಾ ಸಾವುಗಳನ್ನು ಬಚ್ಚಿಟ್ಟಿರುವ ಕುರಿತು ವಿಸ್ಕೃತ ವರದಿಗಳು ಪ್ರಕಟವಾಗಿವೆ.

ಕೇರಳದಲ್ಲಿಂದು ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಅಪರಾಧಿಗಳು ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಸದಸ್ಯರಾಗಿದ್ದರಂತೂ ಪೊಲಿಸರು ಅವರ ವಿರುದ್ಧ ಕ್ರಮಗಳನ್ನು ಕೈಗೊಳ್ಳುವುದೇ ಇಲ್ಲ. ದೇಶದಲ್ಲಿ ಮಹಿಳೆಯರ ಮೇಲೆ 5ನೇ ಅತಿ ಹೆಚ್ಚು ಅತ್ಯಾಚಾರ ನಡೆಯುತ್ತಿರುವ ಕೇರಳವು ದಕ್ಷಿಣಭಾರತ ಅತಿ ಹೆಚ್ಚು ಅತ್ಯಾಚಾರಗಳು ದಾಖಲಾಗುತ್ತಿರುವ ರಾಜ್ಯವಾಗಿದೆ. 2019 ರಲ್ಲಿ ಕೇರಳದಲ್ಲಿ ನಡೆದ ಅತ್ಯಾಚಾರಗಳ ಸಂಖ್ಯೆ 2023. ಕೇರಳದ ಇಡುಕ್ಕಿ ಜಿಲ್ಲೆಯ ಕಮ್ಯುನಿ ಪಕ್ಷದ ಯುವ ವಿಭಾಗದ ನಾಯಕನೋರ್ವನು 6 ವರ್ಷದ ಹೆಣ್ಣುಮಗುವನ್ನು ಸತತವಾಗಿ 3 ವರ್ಷಗಳ ಕಾಲ ಅತ್ಯಾಚಾರ ಮಾಡಿ ಆ ಮಗುವನ್ನು ಮರಕ್ಕೆ ನೇತು ಹಾಕಿ ಸಾಯಿಸಿದ ಅತಿ ಕ್ರೂರ ಪ್ರಕರಣವು ಇತ್ತೀಚೆಗೆ ನಡೆದಿದೆ.

ಆದರೆ ಕಾಶ್ಮೀರದ ಕತುವಾ ಅತ್ಯಾಚಾರ ಪ್ರಕರಣಕ್ಕೆ ಸಿಕ್ಕಿದ ಮಾಧ್ಯಮ ಪ್ರಚಾರವೂ, ಸಂತಾಪವೂ ಈ ಪ್ರಕರಣಕ್ಕೆ ಸಿಕ್ಕಿಲ್ಲ. ಇನ್ನೊಂದು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಂತ್ರಸ್ಥೆಯು ಕಮ್ಯುನಿ ಪಕ್ಷದ ನಾಯಕನೋರ್ವನ ಮೇಲೆ ಲೈಂಗಿಕ ಕಿರುಕುಳ ಕೇಸನ್ನು ದಾಖಲಿಸಿದ್ದಕ್ಕೆ ಕೇರಳದ ಸಾರಿಗೆ ಸಚಿವ ಸಸೀಂದ್ರನ್ ಸಂತ್ರಸ್ಥೆಯ ಹೆತ್ತವರಿಗೆ ಖುದ್ದಾಗಿ ಫೋನ್ ಮಾಡಿ ಮೊಕದ್ದಮೆಯನ್ನು ಹಿಂತೆಗೆದುಕೊಳ್ಳಲು ಬೆದರಿಕೆ ಒಡ್ಡಿದ ಪ್ರಕರಣವೂ ನಡೆದಿದೆ. ತಾನು ವಿರೋಧ ಪಕ್ಷದಲ್ಲಿ ದ್ದಾಗ ಕೇರಳ ವಿಧಾನ ಸಭೆಯಲ್ಲಿ ದಾಂಧಲೆ ನಡೆಯಿಸಿ, ಅಲ್ಲಿನ ಕಂಪ್ಯೂಟರ್, ಸ್ಪೀಕರ್, ಪೀಠೋಪಕರಣಗಳನ್ನು ಹಾನಿಮಾಡಿದ್ದ ಪ್ರಕರಣದಲ್ಲಿ ಈಗಿನ ಕೇರಳ ಸರಕಾರದ ಶಿಕ್ಷಣ ಸಚಿವ ವಿ. ಸಿವನ್ ಕುಟ್ಟಿಯ ಮೇಲೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.

ಅಭಿವೃದ್ಧಿಯ ವಿಷಯದಲ್ಲಿ ಕೇರಳ ಇತರ ರಾಜ್ಯಗಳಿಂದ ತುಂಬಾ ಹಿಂದುಳಿದಿದೆ. ಕೇರಳದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕೆಲಸಗಳಿಗೆ ಭೂಮಿಯನ್ನು ಖರೀದಿ
ಮಾಡುವುದೇ ದೊಡ್ಡ ಸವಾಲು ಎಂಬುದನ್ನು ಕೇಂದ್ರ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿಯವರೇ ಹೇಳಿದ್ದಾರೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಕೇರಳದಲ್ಲಿ ಕುಂಟುತ್ತಿವೆ. ಇನ್ನು ಉನ್ನತ ಶಿಕ್ಷಣದ ವಿಷಯದಲ್ಲೂ ಕೇರಳ ಹಿಂದುಳಿದಿದೆ. ರಾಜ್ಯದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಕೊರತೆ ಯಿರುವುದರಿಂದ ಕೇರಳದ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ಬೇರೆ ರಾಜ್ಯಗಳನ್ನು ಅವಲಂಬಿಸಬೇಕಾಗಿದೆ. ಕೇರಳದಲ್ಲಿ ಉದ್ಯೋಗಾವ ಕಾಶದ ಬಗ್ಗೆ ಹೇಳುವುದೇ ಬೇಡ.

ಕೇರಳದ ನಿರುದ್ಯೋಗ ಪ್ರಮಾಣವು ದೇಶದ ಅತಿ ಹೆಚ್ಚು. 2020 ರ ಏಪ್ರಿಲ್ ತಿಂಗಳಲ್ಲಿ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ ನಡೆಸಿದ ಸಮೀಕ್ಷೆಯ ಪ್ರಕಾರ ಕೇರಳದ ನಿರುದ್ಯೋಗ ಪ್ರಮಾಣ ಶೇ.17. ಕರ್ನಾಟಕದ ನಿರುದ್ಯೋಗ ಪ್ರಮಾಣ ಶೇ.3.6 ಆಗಿದೆ. ಕೇರಳದ ಯುವಕರು ಉದ್ಯೋಗಕ್ಕಾಗಿ ಇತರ ರಾಜ್ಯಗಳು ಹಾಗೂ ಉದ್ದಗಲ ದೇಶಗಳನ್ನು ಅವಲಂಬಿಸಿದ್ದಾರೆ. ಕೇರಳದಲ್ಲಿ ಖಾಸಗಿ ಉದ್ದಿಮೆಗಳಿಗೆ ಅವಕಾಶವೇ ಇಲ್ಲದಂತಹ ವಾತಾವರಣವಿದೆ. ಅಲ್ಲಿ ನಡೆಯುತ್ತಿರುವ ಕಮ್ಯುನಿ ಬೆಂಬಲಿತ ಕಾರ್ಮಿಕ ಸಂಘಟನೆಗಳ ಹೋರಾಟ ಹಾಗೂ ಮುಷ್ಕರಗಳು ಉದ್ದಿಮೆದಾರರು ಹಾಗೂ ಹೂಡಿಕೆದಾರರು ಕೇರಳದ ಕಡೆ ಕಾಲು ಹಾಕಲು ಹೆದರುವ ವಾತಾವರಣವನ್ನು ಸೃಷ್ಟಿಸಿವೆ.

ಕೇರಳದಲ್ಲಿದ್ದ ಬಟ್ಟೆಬರೆಗಳ ಉತ್ಪಾದನೆಯನ್ನು ಮಾಡುತ್ತಿದ್ದ ಕಿಟೆಕ್ಸ್ ಕಂಪನಿಯು ಕೇರಳ ಸರಕಾರದ ನಿರಂತರ ಕಿರುಕುಳಕ್ಕೆ ಬೇಸತ್ತು ಕೇರಳದ ಘಟಕವನ್ನು ಮುಚ್ಚಿ ತೆಲಂಗಾಣಕ್ಕೆ ವರ್ಗಾವಣೆಗೊಂಡಿದೆ. ಇದರ ಪರಿಣಾಮವಾಗಿ ಕೇರಳದ ಸಾವಿರಾರು ಮಂದಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಕೇರಳದಲ್ಲಿ ಎಷ್ಟು ಉದ್ಯಮ ವಿರೋಧಿ ವಾತಾವರಣವಿದೆ ಎಂದರೆ ಕೇರಳ ರಾಜ್ಯವು ದೇಶದ ಉದ್ಯಮ ಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ 28 ನೇ ಸ್ಥಾನದಲ್ಲಿದೆ! ದೇಶದ ಜಿಡಿಪಿಯಲ್ಲಿ
ಕೇರಳದ ಪಾಲು ಬಹಳ ಕಡಿಮೆ. ಜಿಎಸ್‌ಟಿ ಸಂಗ್ರಹದ ಪ್ರಮಾಣವೂ ಕಡಿಮೆಯೇ.

ಕೇರಳ ರಾಜ್ಯದ ದುರವಸ್ಥೆ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುವುದೇ ಇಲ್ಲ. ಉಗ್ರವಾದಿ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ್ ಸಿರಿಯಾ (ಐಸಿಸ್)ಗೆ ಕೇರಳದ ಯುವಕರು ದೊಡ್ಡ ಪ್ರಮಾಣದಲ್ಲಿ ಸೇರುತ್ತಿzರೆ. ಕೇರಳದಲ್ಲಿ ದೊಡ್ಡ ಪ್ರಮಾಣದಲ್ಲಿ ಉಗ್ರವಾದಿ ಸಂಘಟನೆಗಳ ಸ್ಲೀಪಿಂಗ್ ಸೆಲ್‌ಗಳು ಸಕ್ರಿಯವಾಗಿವೆ. ಉಗ್ರ ಸಂಘಟನೆಗಳು ಕಾಶ್ಮೀರದ ನಂತರ ಕೇರಳದೆಡೆಗೆ ಮುಖ ಮಾಡುತ್ತಿವೆ. ಮುಖ್ಯಮಂತ್ರಿಯ ಆಪ್ತರ ಚಿನ್ನ ಕಳ್ಳಸಾಗಾಣಿಕೆ ಹಾಗೂ ಡ್ರಗ್ ಪ್ರಕರಣಗಳು ಕೇರಳಕ್ಕೆ ಅಂಟಿರುವ ಕಳಂಕವಾಗಿದೆ. ಆದರೆ ಈಗಾಗಲೇ ಕೇರಳವನ್ನು ಹೊಗಳಿ ಹೊಗಳಿ ಅಟ್ಟಕ್ಕೇರಿಸಿರುವ ಮಾಧ್ಯಮಗಳಿಗೆ, ಬುದ್ಧಿಜೀವಿಗಳಿಗೆ ಕೇರಳದ ಈ ನಿಜಸ್ಥಿತಿಯನ್ನು ತೆರೆದಿಡುವ ಮನಸ್ಥಿತಿ ಇಲ್ಲ. ಆದರೆ ಕೇರಳ ಮಾದರಿ ಎನ್ನುವ ನೀರ ಗುಳ್ಳೆ ಒಡೆದಿದೆ.