Friday, 20th September 2024

ಅಭಿಚಾರ ಪ್ರಯೋಗಗಳ ಪ್ಲಾಸಿಬೋ ಪರಿಣಾಮ

ಹಿಂತಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

naasomeswara@gmail.com

ಕ್ರಿ.ಪೂ.30000 ವರ್ಷಗಳಿಂದ ಇಂದಿನವರೆಗೆ ಜಗತ್ತಿನ ಎಲ್ಲ ಕಾಲದ ಸಂಸ್ಕೃತಿಗಳು ಹಾಗೂ ಬುಡಕಟ್ಟುಗಳು ಅಜ್ಞಾತ ಅಭಿಚಾರಿಗಳು.

ನಮ್ಮ ಹಳ್ಳಿಯಲ್ಲಿ ಓರ್ವ ಹಿರಿಯ ಅಜ್ಜಿ ಇದ್ದಳು. ಮೈ ಚರ್ಮವೆಲ್ಲ ಸುಕ್ಕುಗಟ್ಟಿ ಕಪ್ಪಾಗಿತ್ತು. ಆಕೆ ತನ್ನ ಪಾಡಿಗೆ ತಾನು ಇದ್ದಳಾದರೂ, ಆಕೆಯ ಬಗ್ಗೆ ಊರಿನಲ್ಲಿ ಹಲವು ಸುದ್ಧಿಗಳು ಪ್ರಚಲಿದಲ್ಲಿದ್ದವು. ಆಕೆಯು ಚೌಡಿಯ ಆರಾಧಕಳೆಂದು, ಅಮಾವಾಸ್ಯೆಯ ನಡುರಾತ್ರಿಯಲ್ಲಿ ಒಬ್ಬಳೇ ಊರ ಹೊರಗೆ ಇದ್ದ ಸ್ಮಶಾನಕ್ಕೆ
ಹೋಗುತ್ತಾಳೆಂದು, ಆಲ್ಲಿ ನಾನಾ ರೀತಿಯ ಪೂಜೆಗಳನ್ನು ಮಾಡುತ್ತಾಳೆಂದು, ಆಕೆಗೆ ಅನೇಕ ಶಕ್ತಿಗಳು ಇವೆಯೆಂಬ ಗುಸು ಗುಸು ಮಾತುಗಳಿದ್ದವು.

ಮಕ್ಕಳು ಹೆದರಿಕೊಂಡಾಗ, ಅನಾರೋಗ್ಯಕ್ಕೆ ತುತ್ತಾದಾಗ, ದನವು ಸಂಜೆಯ ಹೊತ್ತಿಗೆ ಕೊಟ್ಟಿಗೆಗೆ ಬಾರದೇ ಹೋದಾಗ ಅಜ್ಜಿಗೆ ಹೇಳಿ ಕಳಿಸುತ್ತಿದ್ದರು. ಅಜ್ಜಿಯು ಮಗುವನ್ನು ನೋಡಿದ ಕೂಡಲೇ, ಮಗುವಿಗೆ ಏನಾಗಿದೆ ಎಲ್ಲಿ ದೃಷ್ಟಿಯಾಗಿದೆ ಎನ್ನುವುದನ್ನು ಹೇಳುತ್ತಿದ್ದಳು. ತನ್ನ ಹಸಿಬೆಯಿಂದ ಒಂದು ಚಿಟಿಕೆ ವಿಭೂತಿಯನ್ನು ತೆಗೆದು ಕೊಂಡು, ಕಣ್ಣುಮುಚ್ಚಿ ಮನಸ್ಸಿನಲ್ಲಿಯೇ ಮಣ ಮಣ ಮಂತ್ರವನ್ನು ಹೇಳಿ ಮಗುವಿನ ಹಣೆಗೆ ಹಚ್ಚುತ್ತಿದ್ದಳು.

ಒಂದರ್ಧ ಗಂಟೆಯಲ್ಲಿ ಮಗುವು ಬೆಚ್ಚುವುದನ್ನು ನಿಲ್ಲಿಸಿ, ನಿದ್ರೆ ಹೋಗುತ್ತಿತ್ತು. ಜ್ವರ ಇತ್ಯಾದಿಗಳು ಮಕ್ಕಳನ್ನು ಕಾಡುವಾಗ ತಾಮ್ರದ ತಾಯಿತವನ್ನು ಕೊರಳಿಗೆ ಕಟ್ಟುತ್ತಿದ್ದಳು. ಹಿರಿಯರಿಗೆ ಅನಾರೋಗ್ಯವು ತೀವ್ರವಾದಾಗ ಕೆಂಪುನೀರನ್ನು ನಿವಾಳಿಸಿ, ಇಲ್ಲವೇ ಮೊಟ್ಟೆಯನ್ನೋ ಅಥವ ತೆಂಗಿನಕಾಯಿಯನ್ನೋ ಮಂತ್ರಿಸಿ ಮೂರು ದಾರಿ ಕೂಡುವೆಡೆಯಲ್ಲಿ ಒಡೆಯಲು ಹೇಳುತ್ತಿದ್ದಳು. ಹೀಗೆ ಅಜ್ಜಿಯು ಇಡೀ ಊರಿಗೆ ಓರ್ವ ರಕ್ಷಕಳಾಗಿದ್ದಳು. ಆಕೆಯು ತಾನು ಮಾಡುತ್ತಿದ್ದ ಕೆಲಸಕ್ಕೆ ಯಾವುದೇ ಪ್ರತಿಫಲವನ್ನು ನಿರೀಕ್ಷಿಸುತ್ತಿರಲಿಲ್ಲ.

ಆದರೆ ಊರ ಜನರು ಹಾಲು ಹಣ್ಣು, ತರಕಾರಿ, ದವಸ ಧಾನ್ಯಗಳನ್ನು ಆಕೆಯ ಮನೆಗೆ ಸ್ವ-ಇಚ್ಚೆಯಿಂದ ತಲುಪಿಸುತ್ತಿದ್ದರು.  ಇಂತಹ ಅಜ್ಜಿಯರು/ಅಜ್ಜಂದಿರು ಕೇವಲ ನಮ್ಮ ಊರಿನಲ್ಲಿ ಮಾತ್ರವಲ್ಲ, ವಿಶ್ವದ ಎಲ್ಲ ಕಾಲದ, ಎಲ್ಲ ದೇಶದ ಪ್ರಧಾನ ಸಂಸ್ಕೃತಿಗಳಲ್ಲಿ ಹಾಗೂ ಬುಡಕಟ್ಟುಗಳಲ್ಲಿ ಇದ್ದರು. ಇಂದಿಗೂ ಇದ್ದಾರೆ ಹಾಗೂ ಮುಂದೂ ಇರುತ್ತಾರೆ. ಇವರನ್ನು ಮಂತ್ರಗಾತಿ, ಮಾಟಗಾತಿ, ಮಂತ್ರವಾದಿನಿ, ಮಾಂತ್ರಿಕ, ಮಾಟಗಾರ, ತಾಂತ್ರಿಕ, ಅಭಿಚಾರಿ ಇತ್ಯಾದಿ ಹೆಸರುಗಳಿಂದ ಕರೆಯುವುದುಂಟು. ಇವರು ಪರಿಪಾಲಿಸುವ ವಿದ್ಯೆಯು ಅಭಿಚಾರವೆಂದೇ ಪ್ರಸಿದ್ಧವಾಗಿವೆ.

ಪಾಶ್ಚಾತ್ಯರು ಇಂತಹವರನ್ನು ಶಮನ್ಸ್ ಎಂದು ಕರೆದು, ಇವರ ತತ್ತ್ವವನ್ನು ಶಮನಿಸಂ ಎಂದರು. ಇದೊಂದು ಸಮಷ್ಟಿ ಹೆಸರು. ಶಮನಿಸಂ-ನಲ್ಲಿ ನಾನಾ ರೀತಿಯ ಉಪ ಪ್ರಬೇಧಗಳುಂಟು. ಹೀಲರ್, ಪ್ರೀಸ್ಟ್, ಸಾರ್ಸರರ್, ವಿಚ್ ಡಾಕ್ಟರ್, ಮೆಡಿಸಿನ್ ಮ್ಯಾನ್, ವೂಡೂಯಿಸ್ಟ್, ಅಕಲ್ಟಿಸ್ಟ್, ಡಿವೈನರ್, ಎಕ್ಸಾರ್ಸಿಸ್ಟ್ ಇತ್ಯಾದಿ. ಶಮನಿಸಂ ಶಬ್ದವು ತುಂಗೂಸಿಕ್ ಭಾಷೆಯ ಸಮನ್ ಶಬ್ದದಿಂದ ಬಂದಿದೆ. ಎಲ್ಲವನ್ನೂ ತಿಳಿದವನು ಎಂದು ಈ ಪದದ ಅರ್ಥ. (ಮಹಿಳೆಯರ ಹೆಸರು ಶಮಂಕ) ಶಮನ್ಸ್ ಅಥವ ಶಮನಿಸಂ ಎನ್ನುವ ಶಬ್ದವು ಸಂಸ್ಕೃತ ಮೂಲದ ಶ್ರಮಣ ಮೂಲ ಶಬ್ದದಿಂದ ಬಂದಿದೆ ಎನ್ನುವ ವಿವರಣೆಯೂ ಉಂಟು. ಇವರು
ಸಾಮಾನ್ಯವಾಗಿ ಒಂದು ಕಡೆ ನಿಲ್ಲದ ಪರಿವ್ರಾಜಕರು.

ಅವದೂತರು. ಸಂತರು ಅಥವ ಯೋಗಿಗಳಾಗಿರಬಹುದು. ಇವರು ಅಲೌಕಿಕ ಶಕ್ತಿಯನ್ನು ಉಳ್ಳವರು. ಈ ಮಟ್ಟಕ್ಕಿಂತ ಕೆಳಗಿನ ಮಟ್ಟದಲ್ಲಿ, ಕೆಲವರು ಮಂತ್ರ ತಂತ್ರಗಳನ್ನು ಕಲಿತು ಅಥವ ದುಷ್ಟಶಕ್ತಿಗಳನ್ನು ವಶಪಡಿಸಿಕೊಂಡ ಮಂತ್ರವಾದಿಗಳು ಅಥವ ವಾಮಾಚಾರಿಗಳು ಎಂದು ಕರೆಸಿಕೊಳ್ಳುವರು. ಶಮನ್ಸ್ ಎನ್ನುವ ಪದಕ್ಕೆ ಸೂಕ್ತ ಕನ್ನಡ ಪದವಿಲ್ಲ. ಹಾಗಾಗಿ ಇವರೆಲ್ಲರನ್ನು ಒಟ್ಟಿಗೆ ಅಭಿಚಾರಿಗಳು ಎಂದು ಕರೆಯಬಹುದು.

ಮಾನವ ಜನಾಂಗದಲ್ಲಿ ಅಭಿಚಾರದ ಬೀಜವು ಪ್ರಾಚೀನ ಶಿಲಾಯುಗದಲ್ಲಿಯೇ ಆರಂಭವಾಯಿತು ಎನ್ನುವ ವಾದವಿದೆ. ಅಭಿಚಾರವನ್ನು ನಡೆಸುತ್ತಿದ್ದ ಅಭಿಚಾರಿಗಳು ಕ್ರಿ.ಪೂ.30000 ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದರು ಎನ್ನುವುದಕ್ಕೆ ನಿಖರ ಪುರಾವೆಯು ಜ಼ೆಕ್ ದೇಶದಲ್ಲಿ ದೊರೆತಿದೆ. ಸಂಸ್ಕೃತ ವಿದ್ವಾಂಸ ಹಾಗೂ ಪುರಾಣಗಳ ತಜ್ಞ ಮೈಕೇಲ್ ವಿಟ್ಜಲ್ ಅನ್ವಯ, ಎಲ್ಲ ಅಭಿಚಾರ ಸ್ವರೂಪಗಳು ಗೊಂಡ್ವಾನ (ಕ್ರಿ.ಪೂ.65000) ಹಾಗೂ ಲಾರೇಶಿಯ (ಕ್ರಿ.ಪೂ.40000) ಖಂಡಗಳಲ್ಲಿ ವಾಸಿಸುತ್ತಿದ್ದ ಜನರಲ್ಲಿ ಹುಟ್ಟಿದವಂತೆ. ನವಶಿಲಾಯುಗಕ್ಕೆ ಸೇರಿದ, ಅಂದರೆ ಕ್ರಿ.ಪೂ.12000 ವರ್ಷಗಳಷ್ಟು ಹಿಂದಿನ ಸಮಾಧಿಯೊಂದು ಇಸ್ರೇಲಿನ ಗೆಲೀಲಿಯಲ್ಲಿ ದೊರೆತಿದೆ. ಇದರಲ್ಲಿ ಓರ್ವ ಹಿರಿಯ ಮಾಟಗಾತಿಯ ಅಸ್ಥಿಪಂಜರವಿದೆ.

ಈಕೆಯನ್ನು ಹತ್ತು ಬೃಹತ್ ಶಿಲಾಫಲಕಗಳ ಕೆಳಗೆ ಹೂಳಲಾಗಿದೆ. ಜತೆಗೆ 50 ಆಮೆಯ ಚಿಪ್ಪುಗಳು, ಮನುಷ್ಯನ ಪಾದಮೂಳೆ, ಹಸುವಿನ ಬಾಲ, ಹದ್ದಿನ ರೆಕ್ಕೆ ಮುಂತಾದ ಅಭಿಚಾರ ವಸ್ತುಗಳೂ ದೊರೆತಿವೆ. ಕ್ರಿ.ಪೂ.15000-ಕ್ರಿ.ಪೂ.11500 ವರ್ಷಗಳ ನಡುವೆ ಆಸ್ತಿತ್ವದಲ್ಲಿ ನಚೂಫಿಯನ್ ಸಂಸ್ಕೃತಿಗೆ ಈ ಸಮಾಧಿ ಗಳು ಸೇರಿವೆ. ಮನಸ್ಸು ಇರುವ ಕಾರಣ ನಾವೆಲ್ಲರು ಮನುಷ್ಯರು. ಮನಸ್ಸು ಶರೀರಕ್ಕಿಂತ ಹಲವು ಪಟ್ಟು ಶಕ್ತಿಶಾಲಿ. ನಮ್ಮ ಪೂರ್ವಜನ ಮನಸ್ಸನ್ನು ಎರಡು ವಿಷಯಗಳು ಕಂಗೆಡಿಸಿದವು.

ಮೊದಲನೆಯದು ಪ್ರಾಕೃತಿಕ ಶಕ್ತಿಗಳು ಹಾಗೂ ಎರಡನೆಯದು ಸಾವು. ಇವೆರಡು ಕ್ರಮವಾಗಿ ದೈವ ಹಾಗೂ ದೆವ್ವಗಳಿಗೆ ಜನ್ಮ ನೀಡಿದವು. ಪ್ರಾಕೃತಿಕ ಶಕ್ತಿಗಳ
ವಿಸ್ಮಯವನ್ನು ದೈವಶಕ್ತಿ ಎಂದು ನಂಬಿತು. ಪ್ರತಿಯೊಬ್ಬರ ಶರೀರದಲ್ಲಿ ಆತ್ಮವಿರುತ್ತದೆ. ಅರ್ಧ ಆಯಸ್ಸಿನಲ್ಲಿ ಸತ್ತವರು ದೆವ್ವಗಳಾಗುತ್ತಾರೆ ಹಾಗೂ ಪೂರ್ಣ ಆಯಸ್ಸಾಗಿ ಸತ್ತವರು ಪಿತೃಗಳಾಗುತ್ತಾರೆ. ದೆವ್ವಗಳಲ್ಲಿ ಒಳ್ಳೆಯವು ಇರುತ್ತವೆ ಹಾಗೂ ಕೆಟ್ಟವು ಇರುತ್ತವೆ. ದುಷ್ಟ/ಶಿಷ್ಟ ದೆವ್ವಗಳನ್ನು ಒಲಿಸಿಕೊಂಡರೆ ತಮಗೆ ವಿಶೇಷ ಶಕ್ತಿ ದೊರೆಯುತ್ತದೆ ಇತ್ಯಾದಿ ಪರಿಕಲ್ಪನೆಗಳು ಬೆಳೆದು ಬಂದವು. ಹೀಗೆ ಸದಾಚಾರದ ಜತೆಯಲ್ಲಿ ಅಭಿಚಾರವೂ ಆರಂಭವಾಯಿತು.

ಕೆಲವು ಅಭಿಚಾರಿಗಳು ಆತ್ಮವನ್ನು ಆವಾಹಿಸಿ, ಭೂತ ಭವಿಷ್ಯಗಳನ್ನು ತಿಳಿದುಕೊಳ್ಳಬಹುದು ಎಂದರು. ಕುಂಡಲಿಯನ್ನು ನೋಡುವುದು, ಕವಡೆಯನ್ನು ಹಾಕುವುದು, ಅಂಜನವನ್ನು ಹಾಕುವುದು, ಕ್ರಿಸ್ಟಲ್ ಬಾಲ್ ನೋಡುವುದು, ಟಾರೋ ಕಾರ್ಡುಗಳನ್ನು ಓದುವುದು-ಹೀಗ  ಹಲವು ಮಾರ್ಗಗಳು ಬೆಳೆದವು. ಮನುಷ್ಯನ ಈ ಎಲ್ಲ ಆಚರಣೆಗಳ ಹಿಂದೆ ಇದ್ದದ್ದು ಭೀತಿ ಮತ್ತು ಹತಾಶ ಭಾವ. ಕರೋನಾಕ್ಕೆ ಸಮರ್ಥ ಚಿಕಿತ್ಸೆಯನ್ನು ನೀಡಲಾಗದ ನಾವು ಕರೋನಾ ಅಮ್ಮನನ್ನು ಸೃಷ್ಟಿಸಿ ಆಕೆಗೊಂದು ದೇವಾಲಯವನ್ನು ಕಟ್ಟಿದೆವು. ಜನರ ಹತಾಶ ಸ್ಥಿತಿಯನ್ನು ದುರುಪಯೋಗಪಡಿಸಿಕೊಂಡ ಹಲವರು ಜನಸಾಮಾನ್ಯರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ದೈಹಿಕವಾಗಿ ಶೋಷಿಸಿದರು. ಇವರನ್ನು ನಿಯಂತ್ರಿಸಲು ಕರ್ನಾಟಕ ಸರಕಾರವು ಮೌಢ್ಯತೆಯನ್ನು ನಿವಾರಿಸುವ ಕಾನೂನನ್ನು ಜಾರಿಗೆ ತಂದಿತು. ಆದರೆ ಮೌಢ್ಯತೆಯು ಎಳ್ಳಷ್ಟು ನಿವಾರಣೆಯಾಗಲಿಲ್ಲ.

ಇದರಿಂದ ನಮ್ಮ ಸಮಾಜದಲ್ಲಿ ಮೌಢ್ಯತೆಯ ಬೇರುಗಳು ಎಷ್ಟು ಆಳವಾಗಿ ಬೇರುಬಿಟ್ಟಿವೆ ಎನ್ನುವುದು ಮನದಟ್ಟಾಗುತ್ತದೆ. ಅಭಿಚಾರಿಗಳು ಮಾಡುವ ಎಲ್ಲ ಅಭಿಚಾರ ಪ್ರಯೋಗಗಳು ಅವೈಜ್ಞಾನಿಕವೇ? ಅಪಾಯಕಾರಿಯಾದವೆ? ಸಮಾಜಕ್ಕೆ ಮಾರಕವಾಗಿರುವಂತಹವೆ? ಎನ್ನುವ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವ ಮೊದಲು ಪ್ಲಾಸಿಬೊ ಪರಿಣಾಮದ ಬಗ್ಗೆ ತಿಳಿದುಕೊಳ್ಳಬೇಕು. ಪ್ಲಾಸಿ ಬೋ ಎಂದರೆ, ಔಷಧವೇ ಅಲ್ಲದ ಸ್ಟಾರ್ಚ್ ಗುಳಿಗೆಗಳು. ವೈದ್ಯರು ಈ ಔಷಧವನ್ನು ತೆಗೆದುಕೊ, ನಿನ್ನ ಜ್ವರ ನಿವಾರಣೆಗೆ ಇದು ರಾಮಬಾಣ ಎಂದು ಆಶ್ವಾಸನೆಯನ್ನು ನೀಡಿ ಸ್ಟಾರ್ಚ್ ಗುಳಿಗೆಯನ್ನು ನುಂಗಲು ಕೊಟ್ಟರೆ, ಅದನ್ನು ಸೇವಿಸುವ ರೋಗಿಯ ಜ್ವರವು ಕಡಿಮೆಯಾಗುತ್ತದೆ.

ಇಲ್ಲಿ ಸ್ಟಾರ್ಚ್ ಗುಳಿಗೆಯು ಜ್ವರನ್ನುವ ಕಡಿಮೆ ಮಾಡಲಿಲ್ಲ; ಆದರೆ ವೈದ್ಯರಲ್ಲಿರುವ ವ್ಯಕ್ತಿಯ ಅಚಲ ನಂಬಿಕೆಯು ಜ್ವರವಿಳಿಯಲು ಪ್ರಧಾನವಾಗಿ ಕಾರಣ
ವಾಗಿರುತ್ತದೆ. ಇಂತಹ ಪ್ರಕ್ರಿಯೆಯನ್ನು ಪ್ಲಾಸಿಬೋ ಪರಿಣಾಮ ಅಥವ ನಂಬಿಕೆಯ ಪರಿಣಾಮ ಎನ್ನಬಹುದು. ನಂಬಿಕೆಯ ಪರಿಣಾಮಗಳನ್ನು ಒಪ್ಪಿದ ಸರಕಾರವು ಮೌಢ್ಯ ನಿವಾರಣಾ ಕಾನೂನನ್ನು ತಂದಾಗ, ಅದರಲ್ಲಿ ಅವರವರ ಮನೆಯ ಒಳಗೆ ಮಾಡುವ ದೇವರ ಪೂಜೆ-ಪುನಸ್ಕಾರ, ಮಂತ್ರಪಠನ-ಭಜನೆ, ದೇವಾಲಯ ಗಳ ದರ್ಶನ ಇತ್ಯಾದಿಗಳನ್ನು ಮೌಢ್ಯಗಳಲ್ಲ ಎಂದು ಪರಿಗಣಿಸಿ, ಅವನ್ನು ಮುಕ್ತವಾಗಿ ನಡೆಸಲು ಅವಕಾಶವನ್ನು ಮಾಡಿಕೊಟ್ಟಿದೆ.

ಶ್ರೀಧರ ಸ್ವಾಮಿಗಳಂತಹವರು ಯಾರಿಂದಲೂ ಒಂದು ಪೈಸೆಯನ್ನೂ ತೆಗೆದುಕೊಳ್ಳದೇ ಅನೇಕ ಜನರ ಅನಾರೋಗ್ಯವನ್ನು ಗುಣಪಡಿಸಿದ ವಿಚಾರಗಳನ್ನು ಹಾಗೂ ನೀಡಿದ ಪರಿಣಾಮಕಾರಿ ಸಲಹೆಗಳನ್ನು ಇಂದಿಗೂ ವಿವರಿಸುವ ಮಲೆನಾಡಿನ ಜನರು ಅಪಾರ. ಶ್ರೀಧರ ಸ್ವಾಮಿಗಳಿಗೆ ಅತೀತ ಶಕ್ತಿ ಇತ್ತೋ ಅಥವ ಇಲ್ಲವೋ ಎನ್ನುವುದು ನಮ್ಮ ವೈಜ್ಞಾನಿಕ ತರ್ಕಕ್ಕೆ ನಿಲುಕದ ವಿಚಾರ. ಆದರೆ ಅವರು ನೀಡಿದ ಆಶೀರ್ವಾದ ಹಾಗೂ ಅಭಯಗಳು ಪ್ಲಾಸಿಬೋ ಪರಿಣಾಮವನ್ನು ಬೀರಿರಬಹುದು ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ಆದರೆ ತರ್ಕರಹಿತ ವಿಧಾನಗಳ ಮೂಲಕ ಶಾರೀರಿಕ ಹಾಗೂ ಮಾನಸಿಕ ಹಿಂಸೆಯನ್ನು ನೀಡಿ, ಲೈಂಗಿಕವಾಗಿ ಶೊಷಿಸಿ, ಅಪಾರ ಹಣವನ್ನು ಲೂಟಿ ಹೊಡೆಯುವ ಢೋಂಗಿ ಬಾಬಾಗಳ ಚಟುವಟಿಕೆಗಳೆಲ್ಲ ಅಪರಾಧಗಳ ವ್ಯಾಪ್ತಿಗೆ ಬರುತ್ತವೆ. ಆಧುನಿಕ ಮನೋವೈದ್ಯಕೀಯ ಚಿಕಿತ್ಸೆಯಲ್ಲಿ ಆಪ್ತಸಲಹೆಯು ಪ್ರಧಾನವಾದದ್ದು. ಆಪ್ತ ಸಲಹೆಯು ಅನೇಕ ಮಾನಸಿಕ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿಗ್ರಹಿಸಬಲ್ಲವು. ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನಿಗೆ ಕೃಷ್ಣನು ಆಪ್ತಸಲಹೆಯನ್ನು ನೀಡಿ, ಅವನ ಕ್ಲೇಶವನ್ನು ಪರಿಹರಿಸಿ, ಯುದ್ಧಕ್ಕೆಅಣಿಗೊಳಿಸಿದ ಉದಾಹರಣೆಯು ನಮ್ಮ ಮುಂದಿದೆ.

ಹಾಗಾಗಿ ಗುರು ಹಿರಿಯರು, ಗೆಳೆಯರು, ಮನೋವೈದ್ಯರು ನೀಡುವ ಆಪ್ತಸಲಹೆಗಳು ನಿಜಕ್ಕೂ ಪರಿಣಾಮವನ್ನು ಬೀರುತ್ತವೆ. ಜ್ಯೋತಿಷ್ಯ, ಪೂಜೆ, ಮಂತ್ರ, ಧ್ಯಾನ, ತಾಯಿತ ಇತ್ಯಾದಿಗಳೆಲ್ಲ ಮೂಲತಃ ಪ್ಲಾಸಿಬೋ ಪರಿಣಾಮವನ್ನು ಬೀರಬಲ್ಲವು. ಆದರೆ ಅಭಿಚಾರಿಗಳು ಯಾವುದೇ ಸ್ವಾರ್ಥವಿಲ್ಲದೆ, ಅಂತಃಕರಣ ಪೂರ್ವಕವಾಗಿ ಆಪ್ತಸಲಹೆಯ ಧಾಟಿಯಲ್ಲಿ ತಮ್ಮ ಸಲಹೆಗಳನ್ನು ನೀಡಿದರೆ, ಕೆಲವರಲ್ಲಾ ದರೂ ಅವು ಪ್ಲಾಸಿಬೋ ಪರಿಣಾಮವನ್ನು ಬೀರಬಲ್ಲವು. ಹಾಗಾಗಿ ನಾನಾ ಅಭಿಚಾರ ಪ್ರಯೋಗಗಳು ಸಾವಿರಾರು ವರ್ಷಗಳಿಂದ ಉಳಿದು ಬಂದಿವೆ. ಆದರೆ ನಿಸ್ವಾರ್ಥ ಅಭಿಚಾರಿಗಳು ತೀರಾ ಅಪರೂಪ ಎನ್ನುವುದು ಒಂದು
ದೊಡ್ಡ ವಿಪರ್ಯಾಸವಾಗಿದೆ.