ಬೆಂಗಳೂರು: ಜರ್ಮನಿ ತಂಡದ ವಿರುದ್ಧ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡವು ಐತಿಹಾಸಿಕ ಗೆಲುವು ದಾಖಲಿಸಿದೆ. 41 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಕಂಚು ಲಭಿಸಿದ್ದು, ದೇಶದೆಲ್ಲೆಡೆ ಸಂಭ್ರಮ ವ್ಯಕ್ತವಾಗಿದೆ.
ಕಂಚಿನ ಗೆಲುವನ್ನು ದೇಶದಾದ್ಯಂತ ಜನತೆ ಸಂಭ್ರಮಿಸಿದ್ದು, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹಿತ ವಿವಿಧ ಪಕ್ಷಗಳ ನಾಯಕರು ಪುರುಷರ ಹಾಕಿ ತಂಡವನ್ನು ಅಭಿನಂದಿಸಿದ್ದಾರೆ. ಭಾರತ ಪುರುಷರ ಹಾಕಿ ತಂಡ ಜರ್ಮನಿ ವಿರುದ್ಧ 5-4 ಗೋಲುಗಳ ಅಂತರದ ಭರ್ಜರಿ ಗೆಲುವು ದಾಖಲಿಸುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ.
ಹಾಕಿ ಕಂಚು ಗೆಲುವನ್ನು ಐತಿಹಾಸಿಕ ಎಂದು ಬಣ್ಣಿಸಲಾಗಿದ್ದು, ಜನಸಾಮಾನ್ಯರು ಕೂಡ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ ಮತ್ತು ವಾಟ್ಸ್‌ಆಯಪ್ ಸ್ಟೇಟಸ್ ಗಳ ಮೂಲಕ ಟೀಂ ಇಂಡಿಯಾಗೆ ಶುಭ ಕೋರಿದ್ದಾರೆ.
ನವದೆಹಲಿ, ಆ.5- ಟೋಕಿಯೋ ಒಲಂಪಿಕ್ಸ್‍ನಲ್ಲಿ ಕಂಚಿನ ಪದಕ ಗೆದ್ದ ಭಾರತ ಹಾಕಿ ತಂಡದ ಆಟಗಾರರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ದೇಶದ ಗಣ್ಯಾತಿಗಣ್ಯರು ಶುಭ ಹಾರೈಸಿದ್ದಾರೆ.
ಎಲ್ಲ ಭಾರತೀಯರಿಗೆ ಇಂದು ಅವಿಸ್ಮರಣೀಯ ದಿನವಾಗಿದ್ದು, ಸದಾಕಾಲ ನೆನೆಯುವಂತೆ ನಮ್ಮ ಭಾರತೀಯ ಹಾಕಿ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದಾರೆ.
40 ವರ್ಷಗಳ ನಂತರ ಪದಕ ಗೆದ್ದು ಕೀರ್ತಿ ಗಳಿಸಿರುವ ಪ್ರತಿಯೊಬ್ಬ ಆಟಗಾರನಿಗೂ, ತರಬೇತುದಾರರು, ಇಡೀ ತಂಡಕ್ಕೆ ಅಭಿನಂದನೆಗಳು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ, ರಕ್ಷಣಾ ಸಚಿವ ರಾಜನಾಥ್‍ಸಿಂಗ್, ಕ್ರೀಡಾ ಸಚಿವ ರಿಜು ಸೇರಿದಂತೆ ಹಲವಾರು ಕ್ರೀಡಾಪಟುಗಳು, ಗಣ್ಯರು ಭಾರತದ ಪುರುಷರ ಹಾಕಿ ತಂಡಕ್ಕೆ ಶುಭಾಶಯ ಕೋರಿದ್ದಾರೆ.