Sunday, 5th January 2025

ಅಯೋಗ್ಯರೊಂದಿಗೆ ಸಂಭ್ರಮ: ಪೊಲೀಸ್ ಇಲಾಖೆಯಿಂದ ದಿಟ್ಟ ಕ್ರಮ !

ಹಂಪಿ ಎಕ್ಸ್’ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡು

1336hampiexpress1509@gmail.com

ಕಳೆದ ಫೆಬ್ರವರಿಯಲ್ಲಿ ವಂಚನೆ ಪ್ರಕರಣದಲ್ಲಿ ಬಂಧನಗೊಂಡ ಯುವರಾಜ್ ಎಂಬ ವ್ಯಕ್ತಿಯನ್ನು ಜನ ಮರೆತಿದ್ದಾರೆ. ಆತ ಕೋಟ್ಯಂತರ ರುಪಾಯಿಗಳ ವಂಚನೆ ಗಳ ಆರೋಪ ಎದುರಿಸುತ್ತಿದ್ದಾನೆ. ಆ ವಂಚನೆಗಳಿ ಗಿಂತಲೂ ಗಾಬರಿ ಹುಟ್ಟಿಸಿದ್ದು ಆತ ದೊಡ್ಡ ವ್ಯಕ್ತಿಗಳನ್ನು ತಲುಪಿ ಅವರೊಂದಿಗೆ ಆತ್ಮೀಯತೆ ಸಾಧಿಸಿ ಅವರೊಂದಿಗೆ ಫೋಟೋ ತಗೆಸಿಕೊಂಡು ಅದನ್ನು ತಾನು ಇಷ್ಟು ದೊಡ್ಡ ಮನುಷ್ಯ ಎಂಬಂತೆ ತೋರಿಸಿಕೊಂಡು ಅನೇಕರಿಗೆ ಕೋಟ್ಯಂತರ ರುಪಾಯಿ ವಂಚಿಸಿದ್ದಾನೆ.

ಅಲ್ಲದೇ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಅನೇಕ ರಾಜಕೀಯ ನಾಯಕರೊಂದಿಗೆ ತಾನು ಆತ್ಮೀಯನಾಗಿ ದ್ದೇನೆ ಎಂದು ಆರ್‌ಎಸ್‌ಎಸ್ ಹಾಗೂ ಬಿಜೆಪಿ ಮುಖಂಡನ ಸೋಗಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಮಂತ್ರಿಗಳು ಮತ್ತು ಶಾಸಕರು ಗೊತ್ತು ಎಂದು ನಂಬಿಸಿ ಅನೇಕರಿಗೆ ಸರಕಾರಿ ಉದ್ಯೋಗ, ನಿಗಮ-ಮಂಡಳಿ ಅಧ್ಯಕ್ಷ ಪದವಿ ಹಾಗೂ ಗುತ್ತಿಗೆ ಸೇರಿದಂತೆ ಸರಕಾರದ ಮಟ್ಟದಲ್ಲಿ ಕೆಲಸ ಮಾಡಿಕೊಡುವುದಾಗಿ ಹೇಳಿ ಹಲವು ಜನರಿಗೆ ವಂಚಿಸಿದ್ದಾನೆ.

ಅದ್ಭುತವೆಂದರೆ ಮಂತ್ರಿ ಪದವಿಯನ್ನೂ ದಯ ಪಾಲಿಸುತ್ತೇನೆ ಎಂದು ಡೀಲ್ ಗಿಳಿದಿದ್ದಾನೆಂದು ತಿಳಿದು ಬಂದಿದೆ. ನರಸಿಂಹ ಎಂಬುವವರ ಮಗನಿಗೆ ಇಲಾಖೆ ಯೊಂದರಲ್ಲಿ ಎಇಇ ಹುದ್ದೆ ಕೊಡಿಸುತ್ತೇನೆಂದು 75 ಲಕ್ಷ ಬೇಡಿಕೆ ಇಟ್ಟು ಮುಂಗಡವಾಗಿ 30 ಲಕ್ಷ ರು. ಪೀಕಿದ್ದ. ಮತ್ತೊಂದು ಬಹುಕೋಟಿ ಐಎಂಎ ಹಗರಣದಲ್ಲಿ ಬಂಧಿತನಾದ ಆರೋಪಿ ಮನ್ಸೂರ್‌ನ ಸಂಪರ್ಕ ಮತ್ತು ವಿಶ್ವಾಸದ ಬಲೆಯೊಳಗಿದ್ದ ರಾಜಕಾರಣಿ ಗಳು, ಸರಕಾರಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು,

ಸಾಕ್ಷಾತ್ ಬೆಂಗಳೂರಿನ ಜಿಲ್ಲಾಧಿಕಾರಿಯೇ ಇದ್ದದ್ದು ಕಳವಳಕಾರಿ. ಇಂಥದಕ್ಕೆಲ್ಲಾ ಕಾರಣ ಕಳ್ಳನೊಬ್ಬನಿಗೆ ದೊಡ್ಡ ವ್ಯಕ್ತಿ ಗಳೊಂದಿಗೆ ಒಂದು ಭೇಟಿ ಒಂದು ಫೋಟೋ ಇದ್ದರೆ ಸಾಕು ಮನೆಹಾಳು ಕೆಲಸಕ್ಕೆ ಒಳ್ಳೆಯ ಅವಕಾಶ ಲಭಿಸಿ ಸಲೀಸಾಗಿ ನಡೆದುಬಿಡುತ್ತದೆ. ಒಬ್ಬ ಪುಡಿ ರೌಡಿಗೆ ಸ್ಥಳೀಯ ಪಾಲಿಕೆ ಸದಸ್ಯ ನೊಂದಿಗಿನ ಒಂದು ಸಲುಗೆ ಒಂದು ಸೆಲ್ಫಿ ಸಾಕು, ಒಬ್ಬ ವಂಚಕ ನಿಗೆ ಒಬ್ಬ ಶಾಸಕನ ವಿಶ್ವಾಸ ಸಾಕು. ಒಬ್ಬ ರಾಷ್ಟ್ರ್ರಮಟ್ಟದ ಅವ್ಯವಹಾರಕಾರನಿಗೆ ಅಕ್ರಮ ಹಣ ಮಾಡುವವನಿಗೆ ಮಂತ್ರಿಗಳ ಮಮಕಾರ ಮುಲಾಜು ಸಾಕು.

ಹೀಗೆ ಇದುವರೆಗೂ ವಂಚನೆ ಕಳ್ಳತನ ಕೊಲೆ ಸುಲಿಗೆ ಇನ್ನಿತರ ಆರೋಪಗಳಲ್ಲಿ ಬಂಧಿತರಾದ ಅನೇಕ ಅಯೋಗ್ಯರ ಜತೆ ರಾಜಕಾರಣಿಗಳ ಪುಢಾರಿಗಳ ಸಂಪರ್ಕಗಳಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಇಂಥವರಿಗೆ ಪಾಲಿಕೆ ಸದಸ್ಯನಿಂದ ಹಿಡಿದು ಪ್ರಧಾನ ಮಂತ್ರಿಗಳೂ ಹೊರತಲ್ಲ. ಇಂಥ ಎಡವಟ್ಟು ಗಳಿಂದ ಮೊದಲು ಎಚ್ಚೆತ್ತು ಕೊಂಡಿರುವುದು ನಮ್ಮ ಪೊಲೀಸ್ ಇಲಾಖೆ. ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಸೂದ್ ಅವರು ಪೊಲೀಸ್ ಇಲಾಖೆಗೆ

ಸಂಬಂಽಸಿದಂತೆ ಮೊನ್ನೆ ಒಂದು ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ. ಅದೇನೆಂದರೆ ಯಾವುದೇ ಪೊಲೀಸ್ ಠಾಣೆಯೂ ಸೇರಿ ಯಾವುದೇ ಪೊಲೀಸ್ ಕಚೇರಿಗಳಲ್ಲಿ ಸ್ವಾಗತ, ಬೀಳ್ಕೊಡುಗೆ, ಜನ್ಮದಿನ, ಇನ್ನಾವುದೇ ಸಂಭ್ರಮ ಸಮಾರಂಭವನ್ನು ಆಚರಿಸಿ ಕೊಳ್ಳುವಂತಿಲ್ಲ ಎಂದು ಕಟ್ಟುಪಾಡು ವಿಧಿಸಿದ್ದಾರೆ.

ಇದಕ್ಕೆ ಕಾರಣ ಸ್ಪಷ್ಟ. ವಂಚಕರು ಖದೀಮರು ರೌಡಿ ಶೀಟರ್‌ಗಳು ರಾಜಕಾರಣಿಗಳನ್ನು ಓಲೈಸಿಕೊಳ್ಳುವಂತೆ ಪೊಲೀಸರನ್ನು ಓಲೈಸಿಕೊಂಡು ಅವರಿಗೆ ಖುಷಿಪಡಿಸುವ ಮೂಲಕ ತಮ್ಮ ಅಡ್ಡದಾರಿಗಳಿಗೆ ಸ್ವಾರ್ಥ ಕೆಲಸಗಳಿಗೆ ದೌರ್ಜನ್ಯ ದಬ್ಬಾಳಿಕೆ ದಂಧೆಗಳಿಗೆ ಅನುಕೂಲವಾಗುವಂತೆ ಮಾಡಿಕೊಳ್ಳುವುದು ಇವರ ಮೂಲ ಉದ್ದೇಶವಾಗಿರುತ್ತದೆ. ಪೊಲೀಸ್ ಅವರೊಂದಿಗೆ ಕ್ಲೋಸ್’ ಆಗಿ ಇದ್ದೇನೆಂದು ಪ್ರಚಾರ ಸಿಕ್ಕರಷ್ಟೇ ಸಾಕು ಬೇಜಾನು ಆಟವಾಡಬಹುದೆಂದು ಕಳ್ಳರು ಅಂದುಕೊಂಡಿರುತ್ತಾರೆ. ಪೊಲೀಸ್ ಅಧಿಕಾರಿ ವರ್ಗಾವಣೆಯಾಗಿ ಠಾಣೆಗೆ ಬಂದಾಗ ಅವರಿಗೆ ಅದ್ಧೂರಿ ಸ್ವಾಗತವೆಂಬಂತೆ ಸಮಾರಂಭ ಏರ್ಪಡಿಸಿ ಖುಷಿ ಪಡಿಸುವುದು. ಅವರ ಜನ್ಮದಿನಾಚರಣೆಗಳನ್ನು ಬೀಳ್ಕೊಡುಗೆ ಸಮಾರಂಭವನ್ನು ಆಚರಿಸುವುದು,

ಇನ್ನಿತರ ಖಾಸಗಿ ಸಂಭ್ರಮಗಳನ್ನು ಠಾಣೆಗಳಲ್ಲಿ ವಿವಿಧ ವೇದಿಕೆಗಳಲ್ಲಿ ಆಚರಿಸಿ ನಾನಾ ರೀತಿಯ ‘ಉಡುಗೊರೆ’ ನೀಡಿ ಪೊಲೀಸರಿಗೆ ‘ಹತ್ತಿರ’ ಆಗುವುದು ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿದೆ. ಯಾವ ಠಾಣೆಯಲ್ಲಿ ಒಬ್ಬ ಖದೀಮನ ಹೆಸರು ನೋಂದಣಿಯಾಗಿರುತ್ತದೆಯೋ ಅದೇ ಖದೀಮರು ಆತನ ಸಹಚರರು ಪೊಲೀಸ್ ಅಧಿಕಾರಿಯ ಕೈಯಲ್ಲಿ ಕೇಕ್ ಕತ್ತರಿಸಿ ಬಾಯಿಗೆ ತುರುಕಿ ತಾನೂ ತುರುಕಿಸಿಕೊಂಡು ಅದೇ ಫೋಟೋವನ್ನು ತನ್ನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಪ್ರದರ್ಶಿಸಿ ತನ್ನ ಇಮೇಜನ್ನು ತೋರ್ಪಡಿಸಿಕೊಂಡು ಮೆರೆಯುತ್ತಾರೆ.

ಈತನ ಯೋಗ್ಯತೆಯನ್ನು ಬಲ್ಲ ಅನೇಕರು ಅದೇ ಫೋಟೋವನ್ನು ಮತ್ತೊಂದು ಖಾತೆಯಲ್ಲಿ ಹಾಕಿ ‘ಕಳ್ಳ ಪೊಲೀಸ್ ಸಂಭ್ರಮಾ ಚರಣೆ’ ಎಂಬಂತೆ ಬರೆದಾಗ ಆ ಅಧಿಕಾರಿಯ ಗತಿ ಏನಾಗಬಹುದು ಊಹಿಸಿ.ಇತ್ತೀಚೆಗೆ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟ್ವಿಟ್ಟರ್ ಗಳಲ್ಲಿ ಕೆಲ ಮೈಗಳ್ಳರು ಏನೂ ಕಡಿದು ಗುಡ್ಡೆ ಹಾಕದಿದ್ದರೂ ‘ದೊಡ್ಡ’ ವ್ಯಕ್ತಿ(!) ಎಂದು ಬಿಂಬಿತರಾಗಿರುವ ಆಕೃತಿಗಳೊಂದಿಗೆ ಜನ್ಮದಿನಾಚರಣೆ, ವಿವಾಹ ವಾರ್ಷಿಕೋತ್ಸವ ಇತ್ಯಾದಿ ಆಚರಣೆ ಮಾಡಿ ಪೇಟ ಶಾಲು ಹೊದಿಸಿ ಕೇಕ್ ತಿನ್ನಿಸುತ್ತಿರುವ ಫೋಟೋ ಗಳನ್ನು ಹಾಕಿ ಪ್ರದರ್ಶಿಸುವುದೇ ದೊಡ್ಡ ಸಾಧನೆ ಎಂಬಂತ್ತೆ ತೋರಿಸಿಕೊಳ್ಳುವ ತೆವಲು ಹೆಚ್ಚಾಗುತ್ತಿದೆ. ಇಂಥವುಗಳು ಕೇವಲ ಬೀದಿ ರೌಡಿಗಳು ಅಪರಾಧ ಹಿನ್ನಲೆಯುಳ್ಳವರಿಗಷ್ಟೇ ಸೀಮಿತವಲ್ಲ. ಅಕ್ರಮವಾಗಿ ಹಣ ಸಂಪಾದಿಸುವ ಉದ್ಯಮಿಗಳು, ಐಷಾರಾಮಿ ಅಡ್ಡ ಕಸುಬಿಗಳು, ಹೊಟ್ಟೆ ಪಾಡಿನ ಹೋರಾಟಗಾರು, ಕೆಲಸಕ್ಕೆ ಬಾರದ ಸಂಘಟನೆಗಳು, ಪತ್ರಕರ್ತರ ಸೋಗಿನಲ್ಲಿನ ರೋಲ್‌ಕಾಲ್ ಗಿರಾಕಿಗಳು, ವೈಟ್ ಅಂಡ್ ವೈಟ್ ದಿರಿಸಿನಲ್ಲಿರುವ ದಂಡ ಪಿಂಡಗಳು, ಮಾನವಹಕ್ಕು,

ಭ್ರಷ್ಟಾ ಚಾರ ನಿರ್ಮೂಲನೆ ಎಂಬ ದೊಡ್ಡ ಪದಗಳನ್ನು ಬಳಸಿಕೊಳ್ಳುವ ಸಂಸ್ಥೆಗಳ ವಸೂಲಿ ಗಿರಾಕಿಗಳು, ದೇಹ ದಂಡಿಸಿ ದುಡಿಯಲಾರದೆ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಫ್ಯಾಷನ್ ಶೋ, ಇವೆಂಟ್ ಶೋ, ಟ್ಯಾಲೆಂಟ್ ಶೋಗಳ ಮೂಲಕ ಹಣ ಮಾಡುವ ಸೋಂಬೇರಿಗಳು, ಪೊಲೀಸರಿಗೆ, ಅಧಿಕಾರಿಗಳಿಗೆ, ದೊಡ್ಡ ಸಂಸ್ಥೆಗಳ ಮಾಲೀಕರಿಗೆ, ಉದ್ಯಮಿಗಳಿಗೆ, ಸಿನಿಮಾ ನಟ ನಟಿಯರಿಗೆ ಸನ್ಮಾನ ಮಾಡಿಯೇ ದುಡ್ಡು ಮತ್ತು ಹೆಸರನ್ನು ಗಿಟ್ಟಿಸುವ ಅನೇಕ ತಲೆಮಾಸಿದ ಕ್ಲಬ್‌ಗಳು, ಸಮಾಜ ಸೇವಕರೆಂಬ ದುಷ್ಟರು, ಕೊನೆಗೆ ಕಾವಿತೊಟ್ಟ ತೀಟೆ ಸ್ವಾಮೀಜಿ ಗಳು. ಹೀಗೆ ಸಮಾಜದಲ್ಲಿನ ದೊಡ್ಡ ಕ್ಷೇತ್ರದ ವ್ಯಕ್ತಿಗಳಿಗೆ, ನಾಯಕರು ಗಳಿಗೆ ಎಡತಾಕಿ ಓಲೈಸಿ ಕೊಂಡು ಬದುಕುವ ಒಂದು ದೊಡ್ಡ ದಂಧೆಯೇ ನಡೆಯುತ್ತಿದೆ. ಕಳೆದ ವರ್ಷದಿಂದ ಕರೋನಾ ವಾರಿಯರ್ಸ್‌ಗಳಿಗೆ ಸನ್ಮಾನ ಎಂಬ ನೆಪದಲ್ಲಿ ಸ್ಟಾರ್ ಹೊಟೆಲ್‌ಗಳಲ್ಲಿ ಸಮಾರಂಭವನ್ನೇರ್ಪಡಿಸಿ ದೊಡ್ಡ ಮಟ್ಟದ ಪೊಲೀಸ್ ಅಧಿಕಾರಿಗಳನ್ನು ಆಹ್ವಾನಿಸಿ ಸನ್ಮಾನಿಸಿ ‘ಪುಳಕ’ಗೊಳಿಸಿರುವುದು ನಡೆದಿದೆ. ಇಂಥ ಗೌರವ ವೇದಿಕೆಗಳು ಪ್ರಾಮಾಣಿಕ ಅಧಿಕಾರಿ ಗಳಿಗೆ ಖಂಡಿತ ಬೇಕು. ಆದರೆ ಅದನ್ನು ಆಯೋಜಿಸುವ ಮಂದಿ ಎಷ್ಟು ಯೋಗ್ಯರು ಎಂಬುದು ಇಲ್ಲಿ ಮೊದಲ ಪ್ರಶ್ನೆ.

ಹೀಗೆಲ್ಲಾ ದುರುದ್ದೇಶ, ತಂತ್ರವಿರಿಸಿಕೊಂಡು ಸಮಾಜದಲ್ಲಿ ತಾವು ಪ್ರಭಾವಶಾಲಿಗಳು ಎಂದು ಬಿಂಬಿಸಿಕೊಂಡು ಪೊಲೀಸರನ್ನೇ ನಿಯಂತ್ರಿಸಲು ಪ್ರಯತ್ನಿಸುವ ಅಯೋಗ್ಯರುಗಳು ನಮ್ಮ ಸಮಾಜದಲ್ಲಿದ್ದಾರೆ. ಪೊಲೀಸರು ಇಂಥವರನ್ನು ಗುರುತಿಸಿ ದೂರವಿಟ್ಟು ಅಥವಾ ತಮಗಿರುವ ಕಾನೂನು ಚೌಕಟ್ಟಿನಲ್ಲಿ ಕ್ರಮ ತೆಗೆದು ಕೊಂಡು ಎಚ್ಚರಿಸಿ ನಿಯಂತ್ರಿಸಬೇಕಾದ ಅವಶ್ಯಕತೆಯಿದೆ.

ಅನೇಕ ಸಂದರ್ಭಗಳಲ್ಲಿ ಇಂಥ ಅಪರಾಧದ ಹಿನ್ನಲೆಯುಳ್ಳ ಮುಖಗಳು ಹೊಸದಾಗಿ ಬಂದ ಅಧಿಕಾರಿಗಳಿಗೆ ಪರಿಚಯವಿರು ವುದಿಲ್ಲ. ಹೀಗಾಗಿ ಇಂಥ ವ್ಯಕ್ತಿ ಗಳೊಂದಿಗೆ ಗುರುತಿಸಿಕೊಂಡಾಗ ಅಧಿಕಾರಿಗಳಿಗೇ ಕಂಳಕ ತಗಲಿಕೊಳ್ಳುತ್ತದೆ. ಜತೆಗೆ ಸಾರ್ವ ಜನಿಕರ ದೃಷ್ಠಿಯಲ್ಲಿ ಪೊಲೀಸರ ನೈತಿಕತೆಯನ್ನು ಪ್ರಶ್ನಿಸುವಂತೆ ಮಾಡುತ್ತದೆ. ಪೊಲೀಸರು ಮೇಲೆ ಹೇಳಲಾದ ಅಯೋಗ್ಯರು ಗಳೊಂದಿಗೆ ಸಂಭ್ರಮವನ್ನು ಆಚರಿಸಿಕೊಂಡಾಗ ಅಥವಾ ವೇದಿಕೆ ಹಂಚಿಕೊಂಡಾಗ ಪೊಲೀಸರ ಕುರಿತು ಸಾರ್ವಜನಿಕರಿಗಿರುವ ಭಯಕ್ಕಿಂತ ಅಸಹ್ಯ ಮೂಡುತ್ತದೆ.

ಜತೆಗೆ ಸಮಾಜಗೇಡಿಗಳು ಇಂಥ ಪೊಲೀಸರೊಂದಿಗೆ ಅನ್ಯೋನ್ಯವಾಗಿರುವುದನ್ನು ನೋಡಿದರೆ ಅವರುಗಳ ಮೇಲಿನ ಭಯ ಹೆಚ್ಚುವುದಲ್ಲದೇ, ಪೊಲೀಸರ ಮೇಲಿನ ನಂಬಿಕೆ ವಿಶ್ವಾಸಕ್ಕೆ ಧಕ್ಕೆಯಾಗುತ್ತದೆ. ಹಾಗಂತ ಪೊಲೀಸರು ಸಾರ್ವಜನಿಕ ಸ್ನೇಹಿಯಾಗಿ ಇರಬಾರದು ಎಂದಲ್ಲ. ಪೊಲೀಸರು ಖಂಡಿತಾ ಸಾರ್ವಜನಿಕ ರೊಂದಿಗೆ ಅನ್ಯೋನ್ಯತೆ ಯಿಂದ ಇರಲೇಬೇಕು. ಹಾಗಿದ್ದರೇನೇ ಸಾರ್ವಜನಿಕರಲ್ಲಿ ಒಂದು ವಿಶ್ವಾಸ ನಂಬಿಕೆ ಧೈರ್ಯ ಹುಟ್ಟುವುದು. ಮತ್ತು ಸಮಾಜದಲ್ಲಿ ಅನ್ಯಾಯವನ್ನು ಎದುರಿಸಿದಾಗ ಅಥವಾ ಕಂಡಾಗ ಪೊಲೀಸರೊಂದಿಗೆ ಹಂಚಿಕೊಂಡು ದೂರು ನೀಡುವ ಹೊಣೆಗಾರಿಕೆಗೆ ಸಹಾಯಕವಾಗುತ್ತದೆ.

ಜನಪ್ರತಿನಿಧಿಗಳು, ಪೊಲೀಸರು ಎಂದಿಗೂ ಸಾರ್ವಜನಿಕ ಸ್ನೇಹಿಯಾಗಿರಬೇಕು. ಹಾಗೆಯೇ ಸಾರ್ವಜನಿಕರು ಪ್ರಾಮಾಣಿಕ ಪೊಲೀಸರಿಗೆ ಸ್ಥೈರ್ಯ ವಾಗಿ ನಿಲ್ಲಬೇಕು. ಆಗ ಸಮಾಜ ಆರೋಗ್ಯಕರವಾಗಿರುತ್ತದೆ. ಮುಖ್ಯವಾಗಿ ಪೊಲೀಸರು ಎಂದಿಗೂ ಪೊಲೀಸರಂತೆಯೇ ಕಾಣಬೇಕಿದೆ. ಕಳ್ಳರು ಕಳ್ಳರಾಗಿಯೇ, ವಂಚಕರು ವಂಚಕರಾಗಿಯೇ, ಅಪರಾಧಿಗಳು ಅಪರಾಧಿಗಳಾಗಿಯೇ ಕಾಣಬೇಕು. ಒಂದೊಮ್ಮೆ ಅವರುಗಳು ಒಂದೇ ದೃಶ್ಯದಲ್ಲಿ ಅನ್ಯೋನ್ಯ ವಾಗಿ ಕಂಡರೆ ಅದು ಅಸಹಜ ದೃಶ್ಯವಾಗಿ ಕಾಣುತ್ತದೆ.

ಅದೇ ರೀತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶತ್ರು ದೇಶದವರೊಂದಿಗೆ ಬಾಲಿವುಡ್ ಖಾನ್‌ಗಳು, ವೈರಿ ರಾಷ್ಟ್ರ್ರ ಚೀನಾ ದೇಶ ದೊಂದಿಗೆ ಕೈ ಜೋಡಿಸಿ ತಮ್ಮ ವೈಯಕ್ತಿಕ ನಿಽಗಳಿಗೆ ಸಾವಿರಾರು ಕೋಟಿ ದೇಣಿಗೆ ಪಡೆಯುವ ನೀಚ ಮತ್ತು ದರಿದ್ರ ಪಿತೃ ಪಕ್ಷದ ನಾಯಕರುಗಳಂತೆ, ನಮ್ಮ ಯೋಧರ ಪರಾಕ್ರಮಕ್ಕೆ ಸಂಭ್ರಮಿಸಿದರೆ ಇಲ್ಲಿನ ಅಲ್ಪಸಂಖ್ಯಾತರಿಗೆ ನೋವಾಗುತ್ತದೆ ಎನ್ನುವ ಪುಟಗೋಸಿಗಳಂತೆ, ನಮ್ಮ ಯೋಧರನ್ನು ಅವಹೇಳನ ಮಾಡುವ ದೇಶದ್ರೋಹ ಪರ ಹೇಳಿಕೆ ನೀಡಲು ಸಿದ್ಧರಾಗುವ ತಲೆಕೆಟ್ಟ ರಾಜಕಾರಣಿಗಳಂತೆ ಸಮಾಜದಲ್ಲಿ ಕೆಟ್ಟ ಸಂದೇಶಕ್ಕೆ ಅವಕಾಶ ಮಾಡಿಕೊಡುತ್ತದೆ.

ಹೀಗಾಗಿ ಸಮಾಜದಲ್ಲಿ ಕಳ್ಳರು ದುಷ್ಟರು ವಂಚಕರು ಹೇಗಾದರು ಗುರುತಿಸಿಕೊಳ್ಳಲಿ, ಆದರೆ ಸಮಾಜವನ್ನು ಕಾಯುವ ವ್ಯವಸ್ಥೆ ಯನ್ನು ರಕ್ಷಿಸುವ ಪೊಲೀಸರು ಮಾತ್ರ ಎಂದಿಗೂ ಪೊಲೀಸರಂತೆಯೇ ಕಾಣಬೇಕೇ ವಿನ: ಕಳ್ಳರೊಂದಿಗಿನ ಪೊಲೀಸರಂತೆ ಕಾಣವುದು ಅವಲಕ್ಷಣವೇ ಸರಿ. ಪೊಲೀಸ್ ಇಲಾಖೆಯ ಇಂಥ ಹೊಸ ಆದೇಶವನ್ನು ಸಮಾಜದಲ್ಲಿನ ಜನಪ್ರತಿನಿಽಗಳು, ಶಾಸಕರು, ಮಂತ್ರಿಗಳು, ಅಽಕಾರಸ್ಥರೂ ಪಾಲಿಸಬೇಕಾದ ಅಗತ್ಯವಿದೆ. ಏಕೆಂದರೆ ಪಾಲಿಕೆ ಸದಸ್ಯರಿಂದ ಹಿಡಿದು ಮುಖ್ಯ ಮಂತ್ರಿಯವರೆಗೂ ಅವರನ್ನು ಭೇಟಿ ಮಾಡುವ ಅಥವಾ ಸಂಪರ್ಕದಲ್ಲಿರುವ ಮತ್ತು ಅವರೊಂದಿಗೆ ಸಾರ್ವಜನಿಕವಾಗಿ ಗುರುತಿಸಿಕೊಳ್ಳುವ ಮಂದಿ ಸಜ್ಜನರು ಸಂಭಾವಿತರಿಗಿಂತ ಕಳ್ಳರು,

ನೀಚರು, ಸಮಾಜ ದ್ರೋಹಿಗಳು, ವಂಚನೆ ಸುಲಿಗೆ ಅತ್ಯಾಚಾರ ಇನ್ನಿತರ ಅಪರಾಧ ಹಿನ್ನಲೆಯುಳ್ಳವರೇ ಹೆಚ್ಚಾಗಿ ಕಂಗೊಳಿಸುತ್ತಾರೆ. ಆದ್ದರಿಂದ ಇಂಥ ಅಸಹ್ಯವನ್ನು ಮೊದಲು ದೂರವಿಟ್ಟರೆ ರಾಜಕಾರಣ ಮತ್ತು ಆಡಳಿತವೂ ಸ್ವಚ್ಚವಾಗಿರುತ್ತದೆ. ಹೀಗಾಗಿ ಸಮಾಜದಲ್ಲಿ ಪತ್ರಕರ್ತರು ಮತ್ತು ಪೊಲೀಸರು ಯಾವಾಗಲೂ ಗನ್ ಟ್ರಿಗರ್‌ನ ಮೇಲೆ ಬೆರಳಿಟ್ಟಿರುವಂತೆ ಇರಬೇಕು. ಹಾಗಿದ್ದಾಗಲೇ ಅವರ ಕರ್ತವ್ಯಕ್ಕೆ ಒಂದು ಗಂಭೀರತೆ ಬರಲು ಸಾಧ್ಯ. ಮತ್ತು ಅಷ್ಟೇ ಪ್ರಾಮಾಣಿಕತೆಯಿಂದ ದಿಟ್ಟತನದಿಂದ ನಡೆಯಲು ಸಾಧ್ಯ. ಹಗಲಿರುಳು ತಮ್ಮ ಸಂಸಾರ ಕುಟುಂಬವನ್ನು ಮರೆತು ಸಮಾಜಕ್ಕಾಗಿ ಶ್ರಮಿಸುವ ಪೊಲೀಸರಿಗೆ ಸಾರ್ವಜನಿಕರಿಂದ ಒಂದು ಸೂರ್ತಿ ಪ್ರೇರಣೆ ಒಂದು ಮೆಚ್ಚುಗೆ ಇರಲೇಬೇಕು. ಆದರೆ ಅಂಥ ಮನಸ್ಸುಳ್ಳ ಸಜ್ಜನರು ಸಂಭಾವಿತರು ಪೊಲೀಸರಿಂದ ದೂರವೇ ಉಳಿಯುತ್ತಾರೆ. ದುರಂತವೆಂದರೆ ಕಳ್ಳರೇ ಹೆಚ್ಚಾಗಿ ಪೊಲೀಸರ ಜತೆಯಲ್ಲಿ ಒಡನಾಟವಿರಿಸಿಕೊಳ್ಳುವುದು ಇಲಾಖೆಯ ವೃತ್ತಿ ಸಹಜತೆಯೋ ಅಥವಾ ದೌರ್ಭಾಗ್ಯವೋ ಎಂದೆನಿಸುತ್ತದೆ.

Leave a Reply

Your email address will not be published. Required fields are marked *