Thursday, 12th December 2024

ಇದ್ದುದ್ದರಲ್ಲೇ ಆನಂದ

ತ್ವರಿತ ಪ್ರಗತಿಗಾಗಿ, ಅಲ್ಪ ಅಭಿವೃದ್ಧಿಗಾಗಿ ಕೆಟ್ಟ ದಾರಿಯನ್ನು ಅನುಸರಿಸಿ ಹೋಗುವುದು ಬೇಡ. ಬದಲಿಗೆ, ಕಠಿಣ ಎನಿಸಿದರೂ ಪರವಾಗಿಲ್ಲ, ಉತ್ತಮ ಎನಿಸುವ
ಹೊಸ ದಾರಿಯನ್ನು ನಿರ್ಮಿಸಿ ಅನುಸರಿಸಿ ಮತ್ತು ಅದನ್ನು ನಿಮ್ಮ ಹಿಂದೆ ಬರುವವರಿಗೆ ಬಿಡಿ. 

ಜಯಶ್ರೀ.ಜೆ.ಅಬ್ಬಿಗೇರಿ

ಸೃಷ್ಟಿಯ ಮಡಿಲಲ್ಲಿ ಸೌಂದರ್ಯ ಹಾಸು ಹೊಕ್ಕಿದೆ. ಅದರ ಹೃದಯದಲ್ಲಿರುವ ಆನಂದವನ್ನು ಪರಿಪೋಷಿಸಿ ಅದನ್ನು ಅಸ್ತಿತ್ವದಲ್ಲಿರುವ ಎಲ್ಲ ಮಾರ್ಗಗಳಲ್ಲಿ ಅಭಿವ್ಯಕ್ತಗೊಳಿಸುವುದೇ ಸೃಜನಶೀಲತೆ. ಇತರ ಪ್ರಾಣಿಗಳಿಗೂ ನಮಗೂ ಇರುವ ದೊಡ್ಡ ಭಿನ್ನತೆಯಲ್ಲಿ ಅದೂ ಒಂದು. ಇದು ದೇವರು ನಮಗಿತ್ತ ದೊಡ್ಡ ಕಾಣಿಕೆ.
ಸೃಜನಶೀಲತೆಯ ಹೆಸರಿನಲ್ಲಿ ವೈಜ್ಞಾನಿಕ ಸಂಶೋಧನೆಗಳ ಸಹಾಯದಿಂದ ತಂತ್ರಜ್ಞಾನದ ಸಿರಿಯನ್ನು ಹೆಚ್ಚಿಸಿದ್ದೇವೆ.

ಆದರೆ ಈ ವೇಗದ ಪ್ರಗತಿಯ ನಡುವೆ, ಜೀವನದ ಮೌಲ್ಯಗಳನ್ನು ಮರೆಯುತ್ತಿದ್ದೇವೆ. ದೇವ ನಿರ್ಮಾಣದ ಜಗದ ಸೊಬಗನ್ನು ಸಿರಿಯನ್ನು ಆನಂದಿಸುವುದರಲ್ಲಿಯ ಹಿತಾನುಭವ ಸುಖಾನುಭವ ಮತ್ತಾವುದರಲ್ಲೂ ಇಲ್ಲ. ಆದರೆ ನಾವೆಲ್ಲ ಆ ಸಿರಿಯ ಸವಿ ಸವಿಯುವುದನ್ನು ಬಿಟ್ಟು ಸಂಗ್ರಹಿಸಲು ಮುಂದಾಗುತ್ತಿದ್ದೇವೆ. ಹೀಗಾಗಿಯೇ ಬದುಕಿನಲ್ಲಿ ದುಃಖ ಮೇಲಿಂದ ಮೇಲೆ ನುಸುಳುತ್ತಿದೆ ಜೀವ ತಿನ್ನುತ್ತಿದೆ. ನಮ್ಮ ಈ ವಿಶಾಲವಾದ ಜಗತ್ತು ಸಂಪದ್ಭರಿತವಾಗಿದೆ. ಒಂದರ ರೂಪ ಮತ್ತೊಂದರಂತೆ ಇಲ್ಲ. ರೂಪ ರಸ ಗಂಧ ಎಲ್ಲವೂ ಭಿನ್ನ ಭಿನ್ನ. ವೈವಿಧ್ಯಮಯವಾಗಿದ್ದರೂ ಆಹ್ಲಾದತೆ ಯಲ್ಲಿ ಒಂದಕ್ಕಿಂತ ಒಂದು ಮಿಗಿಲು.

ವೈಭವಪೂರ್ಣವಾದ ಜಗವನ್ನು ಕೊನೆಯುಸಿರು ಇರುವವರೆಗೆ ಸವಿದರೂ ಮುಗಿಯದು. ಜೀವನದ ತುಂಬ ಅನುಭವಿಸಿದರೂ ಸಾಲದು. ಮಾನವನ ಅಗತ್ಯತೆಗೆ ಇಲ್ಲಿ ಕೊರತೆ ಇಲ್ಲವೇ ಇಲ್ಲ. ಅಷ್ಟೊಂದು ದಿವ್ಯ ಭವ್ಯವಾದ ನಿಸರ್ಗಸಿರಿಯಲ್ಲಿ ಮೈ ಮರೆಯುವುದನ್ನು ಬಿಟ್ಟು, ಅದನ್ನು ಬೇಗಬೇಗನೆ ಅಗೆಯುವುದರಲ್ಲಿ, ಅಗತ್ಯಕ್ಕಿಂತ ಹೆಚ್ಚು ಶೇಖರಿಸಿಡುವಲ್ಲಿ ಮಗ್ನರಾಗಿದ್ದೇವೆ. ಕ್ಷಣಿಕ ಮಾನದಂಡದಲ್ಲಿ ನೊಡಿದಾಗ ಅದುವೇ ಪ್ರಗತಿ ಎಂಬ ಭ್ರಮೆಯಲ್ಲಿದ್ದೇವೆ, ಹೆಚ್ಚು ಹಣ, ಹೆಚ್ಚು ಸಂಪನ್ಮೂಲಗಳ ಸಂಗ್ರಹದಿಂದ ಭದ್ರತೆಯ ಹುಸಿ ಭಾವವನ್ನು ಪಡೆಯುತ್ತಿದ್ದೇವೆ, ಅದೇ ಸಂತಸ ಎಂಬ ಕಲ್ಪನೆಯಲ್ಲಿದ್ದೇವೆ.

ಆದರೆ ಅದರ ಫಲ ಶೃತಿಯಂತೆ ಜೀವನದಲ್ಲಿ ಇಂದು ಸಣ್ಣನೆಯ ಒಂದು ಅಸಮಾಧಾನ ಹಾಸು ಹೊಕ್ಕಾಗಿದೆ. ದುರಾಸೆಗಳು ದುಷ್ಟ ಶಕ್ತಿಯನ್ನು ಉತ್ಪಾದಿಸುತ್ತವೆ. ದುರಾಸೆ ಮತ್ತು ದುಷ್ಟ ಶಕ್ತಿ ಜತೆ ಜತೆಗೇ ಇರುತ್ತವೆ. ಒಂದೇ ನಾಣ್ಯದ ಎರಡು ಮುಖಗಳ ಹಾಗೆ! ಜಾಣ್ಮೆ ವಿವೇಚನೆ ಒಂದರ ಹಿಂದೆ ಒಂದರಂತೆ ಕೈ ಹಿಡಿದಾಗ ಸೃಷ್ಟಿಯನ್ನು ಸಂಭ್ರಮಿಸುವ ಸುಮಧುರ ಕ್ಷಣಗಳು ಹಿರಿ ಹಿರಿ ಹಿಗ್ಗುವ ಸಮಯ ಬರದೇ ಇರುವುದಿಲ್ಲ. ದುರಾಸೆಯನ್ನು ಬಗ್ಗು ಬಡಿದರೆ ದುಃಖ ಮುದುಡಿ ಹೋಗು ತ್ತದೆ. ದುರಾಸೆಯ ಮಡಿಲಲ್ಲಿ ಬಿದ್ದವರಿಗೆ ಅತಿಯಾಸೆ ಗತಿಗೇಡು ಎಂದು ಬುದ್ಧಿ ಹೇಳಲು ಹೋದರೆ ಅವರು ಅದಕ್ಕೆ ಏನೋ ಒಂದು ತಮ್ಮದೇ ಆದ ಸಮಜಾಯಿಷಿ ನೀಡುತ್ತಾರೆ. ನನ್ನ ದಾರಿ ನನಗೆ ಬಿಡಿ ಎಂದು ಮುಖ ತಿರುವಿ ನಡೆಯುತ್ತಾರೆ.

ಇರುವುದೆಲ್ಲವೂ ನನಗೆ ಬೇಕು. ಜಗತ್ತಿನ ಅತ್ಯುತ್ತಮ ಶ್ರೇಷ್ಠ ವಸ್ತುಗಳು ನನ್ನ ಬಳಿಯಲ್ಲೇ ಇರಬೇಕೆಂಬ ಮಿತಿಮೀರಿದ ಹುಚ್ಚು ಆಸೆ ಬದುಕಿನ ದಾರಿಯನ್ನೇ ತಪ್ಪಿಸುತ್ತದೆ. ತ್ವರಿತ ಪ್ರಗತಿಗಾಗಿ, ಅಲ್ಪ ಅಭಿವೃದ್ಧಿಗಾಗಿ ಕೆಟ್ಟ ದಾರಿಯನ್ನು ಅನುಸರಿಸಿ ಹೋಗುವುದು ಬೇಡ. ಬದಲಿಗೆ, ಕಠಿಣ ಎನಿಸಿದರೂ ಪರವಾಗಿಲ್ಲ, ಉತ್ತಮ ಎನಿಸುವ ಹೊಸ ದಾರಿಯನ್ನು ನಿರ್ಮಿಸಿ ಮತ್ತು ಅದನ್ನು ನಿಮ್ಮ ಹಿಂದೆ ಬರುವವರಿಗೆ ದಾರಿಯನ್ನು ಬಿಡಿ. ಈ ಜಗತ್ತು ನಮಗೆ ಮಾತ್ರವಲ್ಲ, ನಮ್ಮ ಪೀಳಿಗೆಗೆ ನಮ್ಮ ಮೊಮ್ಮಕ್ಕಳ ಮೊಮ್ಮಕ್ಕಳಿಗೂ ಸೇರಿದ್ದು ಎಂಬ ನೆನಪು ಹೃದಯದಲ್ಲಿ ಇರಲಿ.

ಆತ್ಮ ವಿಶ್ಲೇಷಣೆ

ಇಂದಿನ ವೇಗದ ದಿನಚರಿಯಲ್ಲಿ, ಪ್ರತಿದಿನ ಆತ್ಮವಿಶ್ಲೇಷಣೆ ಮಾಡಿಕೊಳ್ಳುವುದು ಒಳ್ಳೆಯದು. ಇದರಿಂದ ನಮ್ಮ ಸಹಜೀವಿಗಳಿಗೆ ಮುಂಬರುವ ಪೀಳಿಗೆಗೆ ನಾವು ಮಾಡುತ್ತಿರುವ ಅನ್ಯಾಯ ತಿಳಿಯುತ್ತದೆ. ತಪ್ಪು ಮತ್ತು ದೌರ್ಬಲ್ಯದ ಅರಿವಾಗುತ್ತದೆ. ಜಗವನ್ನು ಅರಿಯುವ ಸಾಮರ್ಥ್ಯ ಹೆಚ್ಚುತ್ತದೆ. ಭದ್ರವಾಗಿ ನಿಲ್ಲಬೇಕಿರುವ ಬದುಕಿನ ಕಟ್ಟಡ ಗಾಳಿ ಗೋಪುರವಾಗುವ ಸಾಧ್ಯತೆ ಹೆಚ್ಚಿದೆ. ಹಾಗಾಗುವ ಮುನ್ನ ಎಚ್ಚೆತ್ತು ಕೊಳ್ಳುವುದು ಜಾಣತನ.

ನಮ್ಮ ನಾಡಿನಲ್ಲಿ, ನಮ್ಮ ದೇಶದಲ್ಲಿ, ಈ ಜಗತ್ತಿನಲ್ಲಿ ಹಲವು ಚಿಂತಕರು, ಜ್ಞಾನಿಗಳು, ಸಾಧಕರು, ಹಿರಿಯರು, ಗುರುಗಳು, ತರಬೇತುದಾರರು, ಪ್ರಾಜ್ಞರು ಆಗಿಹೋಗಿದ್ದಾರೆ. ಹಳೆಯ ತಲೆಮಾರಿನ ಚಿಂತಕರ ಜತೆಯಲ್ಲೇ, ಈಚಿನ ತಲೆಮಾರಿನ ವಿಜ್ಞಾನಿಗಳು ಹಲವು ಸಾಧನೆ ಮಾಡಿದ್ದಾರೆ. ಸುಜ್ಞಾನಿಗಳ, ಸಾಧು ಸಂತರ ಶರಣರ ಮಾಗಿದ ಅನುಭವದ, ಅನುಭಾವದ ಮಾತುಗಳಂತೆ ಜಗತ್ತಿನ ವಸ್ತುಗಳ ಮೇಲೆ ಒಡೆತನ ಸಾಽಸುವುದನ್ನು ಬಿಡಬೇಕು. ಇಲ್ಲಿರುವ ವಸ್ತುಗಳೆಲ್ಲ ನಮ್ಮ ವ್ಯವಹಾರಕ್ಕಾಗಿ ಮಾತ್ರ.

ನಾವು ಬರುವ ಮೊದಲೂ ಜಗತ್ತು ಇತ್ತು ಹೋದ ಮೇಲೂ ಇರುತ್ತದೆ. ನಮ್ಮದಾಗಿದ್ದರೆ ನಮ್ಮೊಂದಿಗೆ ಬರಬೇಕಿತ್ತು ಆದರೆ ಹಾಗಾಗದು. ಇಲ್ಲಿರುವುದೆಲ್ಲ ಜಗತ್ತಿಗೆ
ಸೇರಿದ್ದು. ನಾವಿರುವವರೆಗೆ ಆನಂದಿಸಿ ಅನುಭವಿಸಬೇಕಾದದ್ದು ಎಂಬುದನ್ನು ತಿಳಿದು ನಡೆದರೆ ಜೀವನ ವೀಣೆಯ ಮಧುರ ಸ್ವರಗಳು ಹೊರಹೊಮ್ಮುವವು.