Saturday, 23rd November 2024

ರಾಹುಲ್‌ ಗಾಂಧಿ ವಿರುದ್ಧ ಎಫ್‌ಐಆರ್‌: ಸೆಪ್ಟೆಂಬರ್‌ 27ರಂದು ಅರ್ಜಿ ವಿಚಾರಣೆ

ನವದೆಹಲಿ: ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಿದ ಆರೋಪದಡಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಸೆಪ್ಟೆಂಬರ್‌ 27ರಂದು ನಡೆಸುವುದಾಗಿ ದೆಹಲಿ ಹೈಕೋರ್ಟ್‌ ಬುಧವಾರ ಹೇಳಿದೆ.

ಆಗಸ್ಟ್‌ 1 ರಂದು ದೆಹಲಿಯ ಓಲ್ಡ್‌ ನಂಗಲ್‌ ಪ್ರದೇಶದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಬಾಲಕಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಳು. ಬಾಲಕಿಯ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ಕುಟುಂಬದವರು ದೂರಿದ್ದರು. ಈ ಸಂಬಂಧ ರಾಹುಲ್‌ ಅವರು ಸಂತ್ರಸ್ತೆಯ ಕುಟುಂಬಸ್ಥರ ಜೊತೆಗಿನ ಫೋಟೊವನ್ನು ಟ್ವೀಟ್‌ ಮಾಡಿದ್ದರು. ಇದರ ಬೆನ್ನಲ್ಲೇ ಮಕರಂದ್ ಸುರೇಶ್ ಮಡ್ಲೇಕರ್ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದಾರೆ.

ಸಂತ್ರಸ್ತೆಯ ಕುಟುಂಬಸ್ಥರ ಜೊತೆಗಿನ ಫೋಟೊವನ್ನು ಹಂಚಿಕೊಳ್ಳುವ ಮೂಲಕ ರಾಹುಲ್‌ ಕಾನೂನು ಉಲ್ಲಂಘಿಸಿ ದ್ದಾರೆ. ಪ್ರಕರಣದಿಂದ ರಾಜಕೀಯ ಲಾಭ ಪಡೆಯಲು ಯತ್ನಿಸಿದ್ದಾರೆ. ಹಾಗಾಗಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗವು ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎನ್‌ ಪಟೇಲ್‌ ಅವರ ಪೀಠವು,’ಈ ಹಂತದಲ್ಲಿ ನೋಟಿಸ್‌ ಜಾರಿ ಮಾಡಲು ಸಾಧ್ಯವಿಲ್ಲ. ಮುಂದಿನ ವಿಚಾರಣೆ ವೇಳೆ ಎರಡೂ ಕಡೆಯವರು 1-2ರ ಪುಟಗಳ ವರದಿ ಸಲ್ಲಿಸುವಂತೆ ಸೂಚಿಸಿದೆ.