Friday, 20th September 2024

ಸದನದ ಪಾವಿತ್ರ‍್ಯ ಕಾಪಾಡಬೇಕಿದೆ

ಇತ್ತೀಚಿನ ದಿನದಲ್ಲಿ ಸದನ ಕಲಾಪಗಳು ಕಾಯಿದೆ, ತಿದ್ದುಪಡಿ ಸೇರಿದಂತೆ ಸಾರ್ವಜನಿಕ ಹಿತಾಸಕ್ತಿಯಿರುವ ವಿಷಯದ ಬಗ್ಗೆ ಆರೋಗ್ಯಕರ ಚರ್ಚೆ ನಡೆಯದೇ, ವಾಕ್ಸಮರ, ಕಿರುಚಾಟ ಹಾಗೂ ಆರೋಪ ಪ್ರತ್ಯಾರೋಪಗಳಿಗೆ ವೇದಿಕೆಯಾಗುತ್ತಿದೆ. ಇದು ಕೇವಲ ಯಾವುದೋ ಒಂದು ರಾಜ್ಯದ ಕಲಾಪವಲ್ಲ, ಬಹುತೇಕ ರಾಜ್ಯಗಳಲ್ಲಿ ಇದೇ ರೀತಿಯ ವರ್ತನೆ ನಡೆಯುತ್ತಿದೆ.

ಇದೇ ರೀತಿಯ ವರ್ತನೆ ಸಂಸತ್ ಕಲಾಪದಲ್ಲಿಯೂ ನಡೆಯುತ್ತಿರುವುದು ಗಮನಿಸಿದ್ದೇವೆ. ಆದರೆ ಮಂಗಳ ವಾರ ಹಾಗೂ ಬುಧವಾರದಂದು ರಾಜ್ಯ ಸಭೆಯಲ್ಲಿ ನಡೆದ ಗದ್ದಲ ಗಲಾಟೆ ಇದೀಗ ಭಾರಿ ಚರ್ಚೆಗೆ ಗ್ರಾಸ ವಾಗಿದೆ. ಮೇಲ್ಮನೆ, ಹಿರಿಯ ಚಾವಡಿ, ಚಿಂತಕರಿರುವ ಸ್ಥಳ ಎನ್ನುವ ರಾಜ್ಯಸಭೆಯಲ್ಲಿ ಪ್ರತಿಪಕ್ಷದ ಸದಸ್ಯರು ಮೇಜಿನ ಮೇಲೆ ನಿಂತು ಗದ್ದಲ ಎಬ್ಬಿಸುವುದು, ಆಡಳಿತ-ಪ್ರತಿಪಕ್ಷಗಳ ಸದಸ್ಯರು ಬಾಯಿಗೆ ಬಂದಂತೆ ಮಾತ ನಾಡಿ ಕೊಳ್ಳುವುದು ಸರಿಯಲ್ಲ. ಸಾಮಾನ್ಯವಾಗಿ ಮೇಲ್ಮನೆಯಲ್ಲಿ ಪಕ್ಷಭೇದ ಮರೆತು, ಜನಪರ ಚರ್ಚೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.

ಅದಕ್ಕಾಗಿಯೇ ರಾಜ್ಯಸಭೆಯ ಸಭಾಧ್ಯಕ್ಷರಾಗಿ ಉಪರಾಷ್ಟ್ರಪತಿಗಳೇ ಕಾರ್ಯನಿರ್ವಹಿಸುತ್ತಾರೆ. ಇಂತಹ ಪಾವಿತ್ರ್ಯವಿರುವ ಸ್ಥಳದಲ್ಲಿ ಕಳೆದ ಎರಡು ದಿನಗಳಿಂದ ಪ್ರತಿಪಕ್ಷದ ಸದಸ್ಯರು ಸಾಂವಿಧಾನಿಕ ಶಿಸ್ತನ್ನು ಮೀರಿ ವರ್ತಿಸಿದ್ದಾರೆ. ಈ ವರ್ತನೆಯನ್ನು ಕಂಡ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು, ಬುಧವಾರ ರಾಜ್ಯ ಸಭೆಯಲ್ಲಿ ಮಾತನಾಡುವಾಗ ಗದ್ಗರಿತರಾಗಿ ‘ಸದಸ್ಯರು ವರ್ತಿಸಿದ ರೀತಿಗೆ ಕೋಪ ವ್ಯಕ್ತಪಡಿಸಲು ಪದಗಳು ಸಿಗುತ್ತಿಲ್ಲ’ ಎನ್ನುವ ಮಾತನ್ನು ಹೇಳಿದ್ದಾರೆ.

ಮೇಲ್ಮನೆಯ ಸದಸ್ಯರಾಗಿ ಇತರ ಜನಪ್ರತಿನಿಧಿಗಳಿಗೆ ಮಾದರಿಯಾಗಬೇಕಾದವರು, ಮೇಜಿನ ಮೇಲೆ ನಿಂತು ಕಾಗದ ಪತ್ರಗಳನ್ನು ಹರಿದು ಹಾಕಿ ದುವರ್ತನೆ ತೋರುವುದು ಸರಿಯಲ್ಲ. ಪ್ರಭಾಪ್ರಭುತ್ವ ವ್ಯವಸ್ಥೆಯಲ್ಲಿ ಕಲಾಪಕ್ಕೆ, ರಾಜ್ಯಸಭಾ ಸದಸ್ಯರಿಗೆ ಇರುವ ಗೌರವ, ಘನತೆಯನ್ನು ಗಮನದಲ್ಲಿರಿಸಿಕೊಂಡು ನಡೆದುಕೊಳ್ಳಬೇಕಾಗುತ್ತದೆ.