Monday, 25th November 2024

ವಾಸ್ತು ನಿಷ್ಠ ಮನೆಯನ್ನು ಹುಡುಕುತ್ತಿರುವ ಸಚಿವರು

ಅನ್‌ಲಕ್ಕಿ ಮನೆ ಬೇಡ ಎನ್ನುತ್ತಿರುವ ಸಚಿವರು 

ಅರ್ಧಕ್ಕೆ ಅಧಿಕಾರ ಕಳೆದುಕೊಳ್ಳುವ ಆತಂಕ

ವಿಶೇಷ ವರದಿ: ರಂಜಿತ್ ಎಚ್. ಅಶ್ವತ್ಥ ಬೆಂಗಳೂರು

ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅವರ ಸರಕಾರ ಅಧಿಕಾರಕ್ಕೆ ಬಂದು, ಖಾತೆ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೀಗ ಸಚಿವರಿಗೆ ಸರಕಾರದಿಂದ ಅಧಿಕೃತ ನಿವಾಸದ ವಿಷಯದಲ್ಲಿ ಕೆಲ ಗೊಂದಲಗಳು ಶುರುವಾಗಿದ್ದು, ಕೆಲ ನಿವಾಸಗಳು ತಮಗೆ ಬೇಡ ಎನ್ನುವ ಮಾತುಗಳನ್ನು ಸಚಿವರು ಆಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಸಚಿವರಿಗೆ ಅಧಿಕೃತ ನಿವಾಸಗಳನ್ನು ನೀಡಲಾಗುತ್ತದೆ. ಆದರೆ ಕೆಲ ಬಂಗಲೆಗಳಿಗೆ ಹೋದರೆ ಅವಧಿ ಪೂರ್ಣಗೊಳಿಸುವುದಿಲ್ಲ. ಈ ಬಂಗಲೆಗಳು ’ಅನ್‌ಲಕ್ಕಿ’ ಎನ್ನುವ ಮಾತುಗಳು ಆಗಾಗ ಕೇಳಿ ಬರುವು ದರಿಂದ, ಈ ಬಂಗಲೆಗಳ ಸಹವಾಸವೇ ಬೇಡ ಎನ್ನುವ ಮಾತನ್ನು ಹಲವು ಸಚಿವರು ಹೇಳಿದ್ದಾರೆ. ಇದರಿಂದ ಮನೆಗಳನ್ನು ಹಂಚುವುದು ಅಧಿಕಾರಿಗಳಿಗೆ ತಲೆನೋವಾಗಿದೆ ಎನ್ನಲಾಗಿದೆ.

ಪ್ರಮುಖವಾಗಿ ಲಕ್ಷ್ಮಣ ಸವದಿ, ರೇಣುಕಾಚಾರ್ಯ, ಸಿ.ಟಿ.ರವಿ, ಸಿ.ಪಿ.ಯೋಗೀಶ್ವರ್, ಜಗದೀಶ್ ಶೆಟ್ಟರ್ ಅವರಿದ್ದ ಮನೆಗಳಿಗೆ ಹಾಗೂ ಅನುಗ್ರಹ ನಿವಾಸಕ್ಕೆ ತೆರಳಲು ಸಚಿವರು ಹಿಂದೇಟು ಹಾಕಿದ್ದಾರೆ. ಸಿ.ಟಿ.ರವಿ ಅವರು ಸಚಿವರಾಗಿದ್ದಾಗ ೭ ಮಿನಿಸ್ಟರ‍್ಸ್ ಕ್ವಾರ್ಟಸ್‌ನಲ್ಲಿದ್ದರು. ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಹೋದರೂ, ಇಲ್ಲಿ ಸಚಿವ ಸ್ಥಾನ ಕಳೆದುಕೊಂಡರು.

ಇನ್ನು ಗಾಂಧಿ ಭವನದ ಪಕ್ಕದಲ್ಲಿರುವ ನಿವಾಸದಲ್ಲಿ ಸಿ.ಪಿ.ಯೋಗೇಶ್ವರ್, ಈ ಹಿಂದೆ ಡಿ.ಕೆ.ಶಿವಕುಮಾರ್ ಅವರಿದ್ದ ನಿವಾಸದಲ್ಲಿ ಜಗದೀಶ್ ಶೆಟ್ಟರ್ ಅವರು ಇದ್ದರು. ಇದೇ ರೀತಿ ಜಯಮಹಲ್ ಬಳಿ ಲಕ್ಷ್ಮಣ ಸವದಿ, ರೇಣುಕಾಚಾರ್ಯ ಇದ್ದರು. ಇವೆರೆಲ್ಲರೂ ಅರ್ಧಕ್ಕೆ ತಮ್ಮ ಅಧಿಕಾರವನ್ನು ಕಳೆದುಕೊಂಡಿದ್ದಾರೆ. ಆದ್ದರಿಂದ ಈ ನಿವಾಸಗಳಿಗೆ ತೆರಳಲು ನಾಯಕರು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.

ಗುತ್ತಿಗೆದಾರರ ಕಿತಾಪತಿ: ಕೆಲ ಅಧಿಕೃತ ನಿವಾಸಗಳು ವಾಸ್ತು ಪ್ರಕಾರವೇ ಇದ್ದರೂ ಕೆಲ ಗುತ್ತಿಗೆದಾರರು ಈ ರೀತಿ ಸುದ್ದಿ ಹಬ್ಬಿಸುತ್ತಿದ್ದಾರೆ. ಈ ರೀತಿ ಸುದ್ದಿ
ಹಬ್ಬಿಸಿದಾಗ ಸಚಿವರು ತಮಗೆ ಮನೆ ಸಿಗುತ್ತಿದ್ದಂತೆ ವಾಸ್ತು ಪ್ರಕಾರ ರಿಪೇರಿಗೆ ಮುಂದಾಗುತ್ತಾರೆ. ಇದರಿಂದ ತಮಗೆ ಕೆಲಸ ಸಿಗುತ್ತದೆ ಎಂಬುದು ಗುತ್ತಿಗೆದಾರರ ಲೆಕ್ಕಾಚಾರ ಎನ್ನುವುದು ಇನ್ನೊಂದು ವಾದ. ಈ ಎಲ್ಲದರ ನಡುವೆ ಸಚಿವರಿಗಾಗಿ ಮೀಸಲಿರುವ ಕೆಲ ಬಂಗಲೆಗಳಿಗೆ ಹೋಗಲು ಹಲವು ಸಚಿವರು ಹಿಂದೇಟು ಹಾಕುತ್ತಿರುವುದಂತೂ ಸತ್ಯ ಎನ್ನುವ ಮಾತನ್ನು ಅಧಿಕಾರಿಗಳು ಹೇಳಿದ್ದಾರೆ.

ಕಾರಜೋಳ ನಿವಾಸದಲ್ಲಿ ಇಂದು ವಾಸ್ತು ಪೂಜೆ?
ಕೆಲ ದಿನಗಳ ಹಿಂದೆ ಗೋವಿಂದ ಕಾರಜೋಳ ಅವರು ತಮ್ಮ ನಿವಾಸದ ಮುಂದಿದ್ದ ಕೆಲ ಮರಗಳನ್ನು ಕಡಿದು ವಿವಾದಕ್ಕೆ ಗುರಿಯಾಗಿದ್ದರು. ಆದರೀಗ ಉಪ ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡರೂ ಜಲಸಂಪನ್ಮೂಲ ಇಲಾಖೆಯಂತಹ ಪ್ರಮುಖ ಸ್ಥಾನ ಪಡೆಯಲು ವಾಸ್ತುಪ್ರಕಾರ ಕೆಲ ಮರಗಳನ್ನು ಕಡಿಸಿದ್ದೇ ಕಾರಣ ಎನ್ನುವ ಕಾರಣಕ್ಕೆ, ಬುಧವಾರ ತಮ್ಮ ಅಧಿಕೃತ ನಿವಾಸದಲ್ಲಿ ಹೋಮ ಹಮ್ಮಿಕೊಂಡಿದ್ದಾರೆ.

? ಖಾತೆ ಹಂಚಿಕೆ ಬೆನ್ನಲ್ಲೇ ನಿವಾಸ ಹಂಚಿಕೆ ಕಿರಿಕ್ಕು
? ಸವದಿ, ರೇಣುಕಾಚಾರ್ಯ, ಸಿ.ಟಿ.ರವಿ, ಯೋಗೀಶ್ವರ್, ಜಗದೀಶ್ ಶೆಟ್ಟರ್ ವಾಸವಿದ್ದ ಮನೆಗಳಿಗೆ ತೆರಳಲು ಹಿಂದೇಟು.
? ಸಚಿವರಿಗೆ ಮನೆಗಳನ್ನು ಹಂಚಿಕೆ ಮಾಡುವುದೇ ಅಧಿಕಾರಿಗಳಿಗೆ ತಲೆನೋವು
? ಮರ ಕಡಿದಿದ್ದೇ ಡಿಸಿಎಂ ಸ್ಥಾನ ಹೋಗಲು ಕಾರಣವಾಯ್ತು ಎಂದು ನಂಬಿದ ಕಾರಜೋಳ