Saturday, 23rd November 2024

ಕರ್ನಲ್ ಶ್ರೇಣಿಗೆ ಬಡ್ತಿ ಪಡೆದ ಐದು ಮಹಿಳಾ ಅಧಿಕಾರಿಗಳು

ನವದೆಹಲಿ: 26 ವರ್ಷಗಳ ಗಣನೀಯ ಸೇವೆಯನ್ನು ಪೂರ್ಣಗೊಳಿಸಿದ ಐದು ಮಹಿಳಾ ಅಧಿಕಾರಿಗಳನ್ನು ಭಾರತೀಯ ಸೇನೆಯ ಆಯ್ಕೆ ಮಂಡಳಿಯು ಕರ್ನಲ್  ಶ್ರೇಣಿಗೆ ಬಡ್ತಿ ನೀಡಲು ಅವಕಾಶ ಮಾಡಿಕೊಟ್ಟಿದೆ ಎಂದು ರಕ್ಷಣಾ ಸಚಿವಾಲಯ ಸೋಮವಾರ ಹೇಳಿದೆ.

ಕಾರ್ಪ್ಸ್ ಆಫ್ ಸಿಗ್ನಲ್‌ನಿಂದ ಲೆಫ್ಟಿನೆಂಟ್ ಕರ್ನಲ್ ಸಂಗೀತಾ ಸರ್ದನ, ಇಎಮ್‌ಇ ಕಾರ್ಪ್ಸ್‌ನಿಂದ ಲೆಫ್ಟಿನೆಂಟ್ ಕರ್ನಲ್ ಸೋನಿಯಾ ಆನಂದ್ , ಲೆಫ್ಟಿನೆಂಟ್ ಕರ್ನಲ್ ನವನೀತ್ ದುಗ್ಗಲ್ ಮತ್ತು ಕಾರ್ಪ್‌ ನಿಂದ ಲೆಫ್ಟಿನೆಂಟ್ ಕರ್ನಲ್ ರೀನು ಖನ್ನಾ ಹಾಗೂ ಲೆಫ್ಟಿನೆಂಟ್ ಕರ್ನಲ್ ರಿಚ್ಚ ಸಾಗರ್ ಮುಂತಾದವರು ಕರ್ನಲ್ ಶ್ರೇಣಿಗೆ ಆಯ್ಕೆಯಾದ ಐದು ಮಹಿಳಾ ಅಧಿಕಾರಿಗಳು.

ಕಾರ್ಪ್ಸ್ ಆಫ್ ಸಿಗ್ನಲ್, ಕಾರ್ಪ್ಸ್ ಆಫ್ ಎಲೆಕ್ಟ್ರಾನಿಕ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ಸ್ ಮತ್ತು ಕಾರ್ಪ್ ಆಫ್ ಇಂಜಿನಿಯರ್‌ಗಳೊಂದಿಗೆ ಸೇವೆ ಸಲ್ಲಿಸುತ್ತಿರುವ ಮಹಿಳಾ ಅಧಿಕಾರಿಗಳು ಕರ್ನಲ್ ಹುದ್ದೆಗೆ ಅನುಮೋದನೆ ಪಡೆಯುತ್ತಿರುವುದು ಇದೇ ಮೊದಲು.

ಈ ಮೊದಲು ಕರ್ನಲ್ ಹುದ್ದೆಗೆ ಬಡ್ತಿ ಕೇವಲ ಸೇನಾ ವೈದ್ಯಕೀಯ ದಳ , ನ್ಯಾಯಾಧೀಶ ಅಡ್ವೋಕೇಟ್ ಜನರಲ್ ಮತ್ತು ಸೇನಾ ಶಿಕ್ಷಣ ದಳದ ಮಹಿಳಾ ಅಧಿಕಾರಿಗಳಿಗೆ ಮಾತ್ರ ಅನ್ವಯವಾಗುತ್ತಿತ್ತು.