Friday, 20th September 2024

ಕಲ್ಬೇಲಿಯಾ ಕುಣಿತದ ಜತೆ ಕೇರ‍್ ಸಾಂಗ್ರಿ..

ಅಲೆಮಾರಿಯ ಡೈರಿ

ಸಂತೋಷಕುಮಾರ‍್ ಮೆಹೆಂದಳೆ

ಒಂದು ಕಾಲದಲ್ಲಿ ಹೆಯ್.. ಆ ಮರಳಲ್ಲಿ ಎಂತಾ ಸುತ್ತಾಡೊದು..? ಆ ನಮನೀ ಬಿಸ್ಲು ಮಾರಾಯ ಎನ್ನುವ ಗೊಣಗಾಟ, ಮರುಭೂಮಿ ಎಂದರೆ ಉರಿವ ಬಿಸಿಲು, ರಣ ರಣ ಸೆಕೆ, ಕುಡಿದ ನೀರು ಎಲ್ಲಿಂದ ಆವಿಯಾಗುತ್ತದೆ ಗೊತ್ತಾಗದ, ಸಿಕ್ಕಷ್ಟೂ ನೆರಳು ಹುಡುಕಿ ವಿಫಲವಾಗುವ ಸ್ಥಿತಿಯಿತ್ತಲ್ಲ ಆಗೆಲ್ಲ ದೇಶದ ಜನ ಬಿಡಿ, ಸ್ವತಃ
ಆಯಾ ರಾಜ್ಯದ ಜನರೇ ಕಾಲಿಡುತ್ತಿದ್ದಿಲ್ಲ. ಏನಿದ್ದರೂ ರಣರಣ ಉರಿ ಜಾಗದಲ್ಲಿ ಮಾಡುತ್ತಿದ್ದ ಒಣಹಣ್ಣುಗಳ ಬೇಸಾಯಕ್ಕಾಗಿ ಮಾತ್ರ ಮನುಷ್ಯ ಬೀದಿ ಗಿಳಿಯುತ್ತಿದ್ದ.

ಅದೂ ಅಷ್ಟಿಷ್ಟು ಕಾಲ ಮಾತ್ರ ನಡೆಯುತ್ತಿದ್ದ ದಗದ. ಉಳಿದಂತೆ ಮರುಭೂಮಿ ಹಡಗು ಒಂಟೆಯ ಲಾಲನೆ ಪಾಲನೆ, ಸಾಗಾಟ ಮತ್ತು ಅದರದೇ ಹಾಲು, ಅದರದ್ದೇ ಅವಲಂಭಿತ ಉದ್ಯೋಗ. ಆದರೆ ಕ್ರಮೇಣ ಕಾಲ ಬದಲಾಯಿತು. ಕೇವಲ ವಿದೇಶಿಯರು ಮಾತ್ರ ಭಾರತದ ಮೂಲೆಗಳನ್ನು ಹುಡುಕುತ್ತಿದ್ದ ಕಾಲಾವಧಿ ಹೋಗಿ, ನಮ್ಮ ಹುಡುಗರೂ ಹೈಕಿಂಗು, ಟ್ರೆಕಿಂಗು ಎಂದೆಲ್ಲಾ ತಿರುಗುತ್ತಾ ವಿವಿಧ ವಿಭಿನ್ನ ಜಾಗಗಳನ್ನು ತಡಕಾಡ ತೊಡಗಿದರಲ್ಲ. ಆಗ ನೋಡಿ ಒಂದೊಂದಾಗಿ ಅದ್ಭುತ ದೃಶ್ಯ ಕಾವ್ಯಗಳು ಬೆಳಕಿಗೆ ಬರತೊಡಗಿದವು. ಅದರಲ್ಲೂ ಮರುಭೂಮಿಯನ್ನು ಇಷ್ಟು ಚೆಂದ ಪ್ರವಾಸಿ ತಾಣವಾಗಿ ಮೆರೆಸಬಹುದು ಎಂಬುವುದನ್ನು ಬೆಳಕಿಗೆ ತಂದ ವಿದೇಶಿಯರ ಕಾರಣ ಇವತ್ತು ರಾಜಸ್ಥಾನದ ಕೋಟೆ ಕೊತ್ತಲಗಳು ಎಷ್ಟು ಹೆಮ್ಮೆಯಿಂದ ತಲೆ ಎತ್ತಿ ನಿಂತು ಬೀಗುತ್ತವೆಯೋ ಅಷ್ಟೆ ಕಿಮ್ಮತ್ತು ಈ ಒಣ ನೆಲದ ಕಾವಿಗೆ ದಕ್ಕತೊಡಗಿದೆ.

ರಾಜಸ್ಥಾನದ ಸ್ವರ್ಣಭೂಮಿ ಎಂದೇ ಖ್ಯಾತಿ ಪಡೆದಿರುವ ಜೈಸಲ್ಮೇರ್ ನಗರದಿಂದ ೪೫ ಕಿ.ಮೀ. ದೂರ ಇರುವ ಈ ರೇಗಿಸ್ತಾನ್, ಸುಸಜ್ಜಿತ ರಸ್ತೆ ಪ್ರವಾಸವನ್ನು ಸುಗಮಗೊಳಿಸುತ್ತದೆ. ಅದರೆ ಸಂಪೂರ್ಣ ದಿನವೊಂದನ್ನು ಬೇಡುವ ಈ ಪ್ರದೇಶಕ್ಕೆ ಸಮಯವಿರಿಸಿಕೊಂಡು ಹೋದಲ್ಲಿ ಅನುಕೂಲ. ಅದರಲ್ಲೂ ತುಂಬ ಚೆಂದದ ಪ್ರವಾಸ ನಿಮ್ಮದಾಗಬೇಕಾದರೆ ಇಲ್ಲಿ ಹುಣ್ಣಿಮೆಯ ರಾತ್ರಿ ಅಥವಾ ಅದರ ಆಸುಪಾಸಿನ ದಿನಗಳನ್ನು ಆಯ್ದುಕೊಂಡಲ್ಲಿ ಅದ್ಭುತ ನೆರಳು ಬೆಳಕಿನ ರಂಗಿನಾಟಕ್ಕೆ ಸಾಕ್ಷಿಯಾಗುವುದರ ಜತೆಗೆ ಸ್ಯಾಮ್ ಸ್ಯಾಂಡ್‌ಡೂನ್ಸ್ ಪ್ರವಾಸ ಅವಿಸ್ಮರಣೀಯವಾಗುತ್ತದೆ. ಸಂಜೆಯ ಸೂರ್ಯಾಸ್ತ ಪ್ರಖರವಾಗಿರುವ ಹೊತ್ತಿನಲ್ಲಿ ನೆರಳು ಬೆಳಕಿನಾಟ, ಪ್ರತಿ ದಿಬ್ಬಕ್ಕೂ ಒಂದು ವಿಶಿಷ್ಠ ಮೆರಗನ್ನು ನೀಡಿದರೆ, ಸಂಜೆಯಾಗಿ ಕತ್ತಲಾಗುವ ಬದಲಾಗಿ ಹುಣ್ಣಿಮೆಯ ರಾತ್ರಿ ತುಂಬು ಬೆಳದಿಂಗಳು ಮರಳು ದಿಬ್ಬಗಳಿಗೆ ಹೊಸ ರಂಗನ್ನು ನೀಡಿ ಮುದಗೊಳಿಸುತ್ತದೆ. ಆಗ ಅದಕ್ಕೆ ಪ್ರತಿಫಲಿಸುವ ಮರಳಿನ ವರ್ಣಗಳ ಸಂಗಮ ವರ್ಣಿಸಲು ಅಸಾಧ್ಯ. ಹೆಚ್ಚಿನ ರೆಸಾಟ್ ಗಳು ಈ ಮರಳಿನ ಅಂಗಳದಲ್ಲಿ ಸ್ಥಳಗಳನ್ನು ಕಾಯ್ದಿರಿಸಿರುತ್ತವೆ ರಾತ್ರಿಯ ವಸತಿಗೆ. ಬಟಾಬಯಲಿನ ಮರುಭೂಮಿಯಲ್ಲಿ ಅಗಸಕ್ಕೆ ಮೈಯೊಡ್ಡಿ ಮಲಗುವ ಮೋದವೇ ಬೇರೆ. ಜತೆಗೆ ಲಭ್ಯವಾಗುವ ಎಕಾಂತತೆ ಹೆಚ್ಚಿನ ಬೋನಸ್.

ಇಲ್ಲಿ ಕಣ್ಣು ಹಾಯಿಸಿದಷ್ಟು ದೂರ ಮರಳೇ ಮರಳು. ಅದಕ್ಕೂ ಆಚೆಗೂ ಇನ್ನಷ್ಟು ಮರಳು. ಹಗಲಿನಲ್ಲಿ ಕಾಲಿಡಲಾಗದ ಬಿಸಿಯ ಬೇಗೆಗೆ ಕಾಯ್ದಷ್ಟೆ ವೇಗವಾಗಿ ಈ
ಬಂಗಾರದ ಮರುಭೂಮಿ ಸಂಜೆಯ ಸುಳಿಗಾಳಿಗೆ ಸಣ್ಣನೆಯ ಹೊಯ್ಗೆಯನ್ನು ತೂರುತ್ತಾ ತಂಪಾಗುತ್ತದೆ. ನೇಸರ ಈ ದಿಬ್ಬಗಳಿಂದ ಮೇಲಿಂದ ಕೆಳಗಿಳಿಯಲು ಇಷ್ಟಪಡದೆ ಸಂಜೆಯ ಹೊತ್ತು ಕಂತಿದ್ದರೂ ಅಂತೂ ರಾತ್ರಿ ಎಂಟಾಗುವ ಹೊತ್ತಿಗೆ ತನ್ನ ಬಣ್ಣ ತಗ್ಗಿಸಿ ಮರೆಯಾಗುತ್ತಾನೆ. ಬದುಕಿನ ಹಗಲು ಇಲ್ಲಿ ದೊಡ್ಡದು. ರಾತ್ರಿ ಗಳಿಗೆ ಬೇರೆಯದ್ದೇ ಬಣ್ಣದ ಬದುಕು ಇಲ್ಲಿ ಬಾಯ್ಬಿಚ್ಚಿಕೊಳ್ಳುತ್ತದೆ. ಮರೂಭೂಮಿಯಲ್ಲೂ ಜೀವನ ಹಸನಾಗುತ್ತದೆ. ಪ್ರವಾಸಿಯ ಕೇಂದ್ರವಾಗಿ ಇದೀಗ ಸ್ಯಾಮ್ ಸ್ಯಾಂಡ್‌ಡೂನ್ಸ್ ಪ್ರಸಿದ್ಧ.

ಭಾರತದ ಮರುಭೂಮಿಯ ತೀರಗಳ ಪ್ರವಾಸಿ ಕೇಂದ್ರವಾಗಿ ಗುರುತಿಸಿಕೊಂಡಿರುವ ಪ್ರದೇಶಗಳಲ್ಲಿ ಸ್ಯಾಮ್ ಸ್ಯಾಂಡ್‌ಡೂನ್ಸ್‌ಗೆ ವಿಶೇಷ ಸ್ಥಾನವಿದೆ. ಕಾರಣ ಇಲ್ಲಿನ ಮರಳು ಬಂಗಾರದ ಬೆಲೆ ಸಮನಾಗಿ ಬಾಳುತ್ತದೆ ಮತ್ತು ಅಷ್ಟೆ ಸ್ವಚ್ಛ ಕೂಡಾ. ಇದೆಲ್ಲಕ್ಕೂ ಮಿಗಿಲು ಈ ಮರುಭೂಮಿಯ ಮರಳು ದಿಬ್ಬಗಳು ಇಂದು ಇದ್ದಂತೆ ನಾಳೆ ಇರುವುದಿಲ್ಲ, ನಾಳೆಗಿದ್ದ ಮರಳಿನ ರಾಶಿ ಇನ್ನೆಲ್ಲೋ ಬೀಡುಬಿಟ್ಟಿರುತ್ತದೆ. ಸ್ಥಳೀಯ ಗುರುತು, ದಿಕ್ಕು, ಯಾವುದೂ ಉಳಿಯದಂತೆ ಬಟಾಬಯಲಿ ನಲ್ಲಿ ಬದಲಾಗುವ ದಿಬ್ಬದ ವೈಚಿತ್ರ್ಯಕ್ಕೆ ಬದಲಾಗಿರುತ್ತವೆ ಪ್ರತಿ ಬೆಳಗಿನ ಹೊತ್ತಿಗೆ. ಸ್ಯಾಮ್ ಬರೀ ಮರಳು ಮರುಭೂಮಿಯಲ್ಲ ಅದೊಂದು ಚಲಿಸುವ ಮರಳು ದಿಬ್ಬಗಳ ನಾಡು. ಮನುಷ್ಯನ ಯಾವ ಹಿಡಿತಕ್ಕೂ ಸಿಗದ ಪ್ರಕೃತಿ ವೈಚಿತ್ರ್ಯದ ನುಣುಪಿನ ಹೊನ್ನ ಹುಡಿಯ ಸ್ವರ್ಣಭೂಮಿ ಇದು.

ಥಾರ್ ಎಂಬ ವಿಶ್ವ ಪ್ರಸಿದ್ಧ ಮರುಭೂಮಿಯ ಪಾದದ ಆರಂಭ ಭಾರತದ ಈ ತುದಿಯಿಂದಲೇ ಆರಂಭವಾಗುತ್ತದೆ. ನಾವು ಥಾರ್ ಎಂದರೆ ಅತಿ ದೊಡ್ಡ ಮತ್ತು ಹೆಸರಾಂತ ಮರುಭೂಮಿ ಎಂದು ಓದುತ್ತಿದ್ದೇವೆ ಹೊರತು ಅದರ ಆರಂಭದ ತುದಿ ಇದ್ದಿದ್ದೇ ನಮ್ಮ ದೇಶದ ಬಗಲಿಗೆ ಎಂದು ಅರಿವಿಗೇ ಬರುವುದಿಲ್ಲ. ಜೈಸಲ್ಮೇರ್ ನಗರದಿಂದ ಆರಂಭವಾಗುವ ಮರೂಭೂಮಿಯ ಭೂ ವೈಪರಿತ್ಯದ ವಿನ್ಯಾಸ ಸ್ಯಾಮ್ ಡೂನ್ಸ್ ಬರುತ್ತಿದ್ದಂತೆ ಬದಲಾಗುತ್ತ ಹೋಗುತ್ತದೆ. ಸ್ಯಾಮ್ ಮರಳು ದಿಬ್ಬದಲ್ಲಿ ಸಾಹಸಮಯ ಜೀಪ್ ಸಾರಿ ಇತ್ತೀಚಿನ ದಿನದ ವಿಶೇಷ ಆಕರ್ಷಣೆ ಎನ್ನಿಸಿದರೆ, ರಭಸದಿಂದ ವೇಗದ ಮಿತಿ ಮೀರಿ ಏರಿಳಿಯುವ ಎಸ್‌ಯುವಿ ವಾಹನ ಗಳು ಮರಳಿನಲ್ಲಿ ಹೊರಳಿ ಹೊರಳಿ ಮೈ ನವಿರೇಳುತ್ತವೆ.

ಸುಲಲಿತವಾಗಿ ಈ ವಾಹನಗಳನ್ನು ಚಲಾಯಿಸುವ ಸ್ಥಳೀಯರಿಗೆ ಇದು ಪ್ರವಾಸೋದ್ಯಮ ಒದಗಿಸುತ್ತಿರುವ ಜೀವನೋಪಾಯವೂ ಹೌದು. ಇದೇ ಮರಳು ಗಾಡಿ ನಲ್ಲಿ ಇಲ್ಲಿನ ಹಡಗು ಎಂದೇ ಖ್ಯಾತಿ ಪಡೆದಿರುವ ಒಂಟೆ ಸವಾರಿ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಆಟವೂ ಕೂಡಾ. ಪ್ರವಾಸಿಗರನ್ನು ಡೋಲು ಬಾರಿಸಿ ಸ್ಥಳೀಯ ವಾದ್ಯಗಳನ್ನು ನುಡಿಸಿ, ಕುಂಕುಮ ಹಣೆಗಿಟ್ಟು ಬರಮಾಡಿಕೊಳ್ಳುವ ಮರಳುಗಾಡಿನ ಆದರಾತಿಥ್ಯ ಪೂರ್ತಿ ದಿವಸ ಕಾಡಿಸದೆ ಇರದು.

ಸಂಜೆಯ ರಂಗಿನಲ್ಲಿ ಎಲ್ಲೆಡೆ ಸ್ಥಳೀಯ ಜನಪದ ನೃತ್ಯ, ತೊಗಲು ಗೊಂಬೆಯಾಟ, ಸಂಗೀತ ಮತ್ತು ಸಾಮೂಹಿಕ ಶಿಬಿರಾಗ್ನಿಯ ಜತೆಯಲ್ಲಿ ನೃತ್ಯದ ಆಮೋದ ಈಗಿನ ಪ್ರವಾಸೋದ್ಯಮದ ಟ್ರೆಂಡಿಗೆ ಹೇಳಿ ಮಾಡಿಸಿದಂತಿದೆ. ಬಹುಶಃ ಪ್ರತಿ ರೆಸಾರ್ಟುಗಳು ಮತ್ತು ಹೋಟೆಲುಗಳು ಈ ಪದ್ಧತಿಯನ್ನು ಪಾರಂಪರಿಕವಾಗಿ ಬಳಸುವ ಯೋಜನೆಯನ್ನು ರೂಪಿಸಿಕೊಂಡೆ ಬಂದಿವೆ. ವಿದೇಶಿಯರ ವಿಶೇಷ ಬೇಡಿಕೆಗನುಗುಣವಾಗಿ ಮರಳು ಗಾಡಿನ ದಿಬ್ಬಗಳ ಮೇಲೆ ರಾತ್ರಿ ವಸತಿಯನ್ನೂ ಕಲ್ಪಿಸಲಾಗುತ್ತದೆ. ವಿಶೇಷವಾಗಿ ಹುಣ್ಣಿಮೆಯ ಆಸುಪಾಸಿನಲ್ಲಿ ಸುತ್ತಮುತ್ತಲಿನ ಹತ್ತಾರು ಕಿ.ಮೀವರೆಗಿನ ದಿಬ್ಬಗಳು ಇಂತಹ ತಾತ್ಪೂರ್ತಿಕ ವಸತಿಗಳಿಂದ
ತುಂಬಿ ಹೋಗಿರುತ್ತದೆ. ಅಲ್ಲಲ್ಲಿ ಉರಿಯುವ ಶಿಬಿರಾಗ್ನಿ ಮತ್ತು ಸಂಗೀತ ಅಲ್ಲೇ ನಡೆಯುವ ರಾಜಸ್ಥಾನಿ ನೃತ್ಯ ಒಂಟೆಯ ಒರಲುವಿಕೆಗಳು ಹೊಸದೊಂದು ಲೋಕ ವನ್ನೆ ಸೃಷ್ಟಿಸುತ್ತವೆ.

ಹಗಲಿನಲ್ಲಿ ಕಾಯ್ದು ಕೆಂಡವಾಗುವ ಈ ಮರುಭೂಮಿ ಇದೇನಾ ಎನ್ನುವಷ್ಟು ತಂಪಾಗಿ ಆತುಕೊಂಡಿರುತ್ತಿದೆ ಮರುದಿನದ ಬೆಳಗಿನವರೆಗೂ ಮಧ್ಯರಾತ್ರಿಯ ನಂತರ ಅಗತ್ಯಕ್ಕಿಂತ ಹೆಚ್ಚು ಅಡರುವ ಚಳಿ ಹೊಸಾನುಭವ. ಹಲವು ಜನಪದೀಯ ಸಂಗೀತ ಪರಿಕರಗಳ ಬಳಕೆ ವಿಭಿನ್ನ ನಶೆ. ಆದರೆ ಆ ಆತಿಥಿ ಸತ್ಕಾರಕ್ಕೆ ರಾತ್ರಿ, ಸಂಜೆ ಮನರಂಜನೆಗಾಗಿ ಸ್ಥಳೀಯರ ‘ಕಲ್ಬೇಲಿಯಾ’ ನೃತ್ಯ ನಡೆಯುತ್ತದಲ್ಲ ಅಲ್ಲಿ ಕೆಲವೊಮ್ಮೆ ಆಯ್ದ ತಂಡ ಕಮರ್ಷಿಯಲ್ ಆಗಿ ಪಾಲ್ಗೊಳ್ಳುತ್ತದೆ. ಅದೆಲ್ಲ ಅಷ್ಟಾಗಿ ನೋಡುವವರಿಗೆ ತಾಕುವುದಿಲ್ಲ. ಕಾರ್ಯಕ್ರಮ ಮುಗಿಸಿ ಹೊರಟು ಬಿಡುತ್ತಾರೆ. ಅದರೆ ಅದರಲ್ಲೆ ಕೆಲವು ಕುಟುಂಬ ಸಮೇತ ಬಂದು ಬೀಡು ಬಿಟ್ಟಿರುತ್ತವಲ್ಲ. ಅದರಲ್ಲೂ ಆಗಷ್ಟೆ ಇನ್ನು ಹಾಲು ಹಸುಳೆಯ ಅಮ್ಮಂದಿರೂ ಅದರಲ್ಲಿ ಇರುತ್ತಾರೆ.

ನಗುಮೊಗ ಹೊತ್ತು ಪ್ರವಾಸಿಗರನ್ನು ವೇದಿಕೆ ಮಧ್ಯಕ್ಕೆ ಕರೆದೊಯ್ದು ರಂಜಿಸುತ್ತಿರುತ್ತಾರೆ. ದೊಡ್ಡ ದನಿ ಸಂಗೀತ ತಾಳ, ಮೇಳ, ಕೇಕೆ ಎಲ್ಲ ಸಮ್ಮೀಳಿತ. ಮಧ್ಯೆ ನರ್ತಿಸುವ ಹೆಣ್ಣುಮಗಳು ಆ ಸಣ್ಣ ಗ್ಯಾಪ್‌ನಲ್ಲೆ, ನೋಡುಗರಿಗೆ ಕೇಳುಗರಿಗೆ ತೊಂದರೆ ಆಗದಷ್ಟು ದೂರ ಇರಿಸಿದ ತನ್ನ ಮಗುವಿನ ಕಿರುಚುವಿಕೆ, ಅಳು, ಆಟಗಳಿಗೆ ಲಕ್ಷ್ಯವಿಡುತ್ತಾ, ಬೇರೊಬ್ಬರನ್ನು ವೇದಿಕೆ ಮೇಲೆ ಸರಿಸಿ, ಸರಕ್ಕನೆ ಕೆಲವು ನಿಮಿಷಗಳ ಕಾಲ ಹೋಗಿ ಎದೆಯೂಣಿಸಿ ಬರುವದಿದೆಯಲ್ಲ ಅದೊಮ್ಮೆ ಗಮನಕ್ಕೆ ಸೂಕ್ಷ್ಮವಾಗಿ ಅರಿವಿಗೆ ಬಂದು ಬಿಟ್ಟಿದ್ದೇ ಆದರೆ ಮತ್ತೆ ಇದಾವುದೂ ಬೇಡವಾಗುತ್ತದೆ.

ಮನಸ್ಸಿನ ಮುದದ ನಡುವೆ ಸರಕ್ಕನೆ ಮದ ಇಳಿದು ಹೋಗುತ್ತದೆ. ಬದುಕು ಬಣ್ಣಗಳ ಸಂತೆ. ಕಂಡಷ್ಟು ದಕ್ಕಿದಷ್ಟು ಅಲ್ವೇ. ರಾತ್ರಿಯ ವಿಶೇಷ ಭಕ್ಷ್ಯ ಭೋಜನಗಳು ರಾಜಸ್ಥಾನಿ ಎಂದು ಬೇರೆ ಹೇಳಬೇಕಿಲ್ಲವಲ್ಲ. ಅದರಲ್ಲೂ ದಾಲ್ ಭಾಟಿ ಜತೆಗೆ ಭಾರತದಲ್ಲೆ ಅತಿ ಅಪರೂಪದ, ಅತಿ ದುಬಾರಿ ಕಾಯಿಪಲ್ಯೆ ಎನಿಸಿರುವ ‘ಕೇರ್ ಸಾಂಗ್ರಿ’ ಸಿದ್ಧವಾಗಿರುತ್ತದೆ. ಇದು ಕನಿಷ್ಟ ಸಾವಿರ ರುಪಾಯಿ ಬೆಲೆ ಬಾಳುತ್ತದೆ ಕೆ.ಜಿ.ಗೆ ಎಂದಿದ್ದು ಇದೆಯಾದರೂ ನನಗೇನೂ ವಿಶೇಷ ಎನ್ನಿಸಲಿಲ್ಲ. ನಮ್ಮ ಬೀನ್ಸ್‌ನಂತಹ ತರಕಾರಿ. ಅದರೊಂದಿಗೆ ಆಲೂ ಭಾನೊತ್ ಮತ್ತು ಆವರಣದಲ್ಲಿ ಬೀಡು ಬಿಟ್ಟು ರಂಜಿಸಲು ಮಾಡುವ ‘ಕಲ್ಬೇಲಿಯಾ’ ನೃತ್ಯ ಹಸಿರಿಲ್ಲದ,
ಒಣಮರಳುಗಾಡೂ ಕೂಡಾ ಇಷ್ಟು ಆಪ್ತವಾಗಬಲ್ಲದು ಎನ್ನುವುದನ್ನು ಸ್ಯಾಮ್ ಸ್ಯಾಂಡ್‌ಡೂನ್ಸ್ ಮಾತ್ರ ಖಾತರಿ ಮಾಡುತ್ತದೆ.

ಒಮ್ಮೆ ಸಂದರ್ಶಿಸಿ. ರೇಗಿಸ್ತಾನ್ ಎನ್ನುವುದು ಹಸಿರಿನಷ್ಟೆ ಆಪ್ತವಾಗುವ ಒಣ ಸರಕು ಹೌದು. ಕಾರಣ ಇಲ್ಲಿ ಮರಳು ಕಾಯುತ್ತದೆ ಮತ್ತು ಕಾಯಿಸುತ್ತದೆ ಕೂಡಾ.